ಆಚರಣೆಗಳು ಅನುಸರಣೆಯಾಗುವುದು ಯಾವಾಗ?
– ಮದುಶೇಕರ್. ಸಿ.
‘ಬೆಳಗೆದ್ದು ಯಾರ ಮುಕವ ನಾನು ನೋಡಿದೆ, ವಾಟ್ಸಪ್ ಪೇಸ್ಬುಕ್ ಸ್ಟೇಟಸ್ ನ ದರ‍್ಶನ ಮಾಡಿದೆ’ ಇದು ಇಂದಿನ ನಮ್ಮ ನಿಮ್ಮೆಲ್ಲರ, ಹೆಚ್ಚಿನವರ ಬೆಳಗಿನ ಕರ‍್ತವ್ಯ. ನಮ್ಮ ಇಶ್ಟದ-ಕಶ್ಟದ ಗೆಳೆಯರ/ಸಂಬಂದಿಕರ ಪೋಸ್ಟ್ ಗಳನ್ನು ಲೈಕ್ ಮಾಡುತ್ತಲೋ, ಕಾಮೆಂಟ್ ಮಾಡುತ್ತಲೋ ಕಣ್ಣು ಹಾಗೂ ಬೆರಳುಗಳಿಗೆ ಕೆಲಸ ಹಚ್ಚಿರುತ್ತೇವೆ. ಕರಾಗ್ರೇ ವಸತೇ ಲಕ್ಶ್ಮಿ, ಕರ ಮದ್ಯೆ ಸರಸ್ವತಿ, ಕರಮೂಲೇ ಸ್ತಿತೇ ಗೌರಿ ಪ್ರಬಾತೇ ಕರದರ‍್ಶನಂ ಎಂದು ಪಟಿಸುತ್ತಿದ್ದ ನಾಲಿಗೆಗಳಿಗೆ ಪ್ರತಿದಿನವೂ ರಜೆ ಕೊಟ್ಟಿದ್ದೇವೆ. ನಾಲಿಗೆಗೇನು ಸಂಬಳ ಕೊಡಬೇಕೇ? ಬಿಡಿ!
ಈಗಾಗಲೇ ಕೈ ಕಣ್ಣುಗಳು ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾವಲ್ಲ ಸಾಕು! ಈಗಂತೂ ನಮ್ಮ ಬೆರಳುಗಳಿಗೆ ವ್ಯಾಯಾಮದ ಅವಶ್ಯಕತೆಯೇ ಇರುವುದಿಲ್ಲ ಏಕೆಂದರೆ ಅವುಗಳದ್ದು 20/7 ಕೆಲಸದ ಒತ್ತಡ. ಈ ಸಂತೋಶದ ಒತ್ತಡದಲ್ಲಿ ಶುರುವಾಗುವ ನಮ್ಮ ದಿನವು, ಆ ದಿನದ ವಿಶೇಶತೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿಳಿದು ಮತ್ತೊಮ್ಮೆ ಅದನ್ನು ನಮ್ಮ ಕಾತೆಯಲ್ಲೂ ಹಂಚಿ, ಎಶ್ಟು ಮಂದಿ ಲೈಕ್ ಮಾಡಿದ್ದಾರೆ/ನೋಡಿದ್ದಾರೆ ಎಂದು ಪದೇ ಪದೇ ನೋಡಿಕೊಳ್ಳುವ ಗೀಳು ನಮ್ಮದು. ವಿಶೇಶ ದಿನಗಳ ವಿಶೇಶತೆಯನ್ನು ವಿಶೇಶವಾಗಿ ವಿಶೇಶವಾದವರಿಗೆ ಹಂಚುವ ನಾವು ಅದರ ಆಚರಣೆ ಮತ್ತು ಅನುಸರಣೆ ಹೇಗೆ ಮಾಡುತ್ತಿದ್ದೇವೆ ಎಂಬುದು ನಮಗೂ ನಿಮಗೂ ತಿಳಿದಿರುವ ವಾಸ್ತವವೇ!
ಈ ಆಚರಣೆ ಹಾಗು ಅನುಸರಣೆಯ ನಡುವಿನ ಬದುಕು ಹೇಗಿದೆ ಎಂದರೆ… ಒಂದೊಮ್ಮೆ ನನ್ನ ಸ್ನೇಹಿತನೊಬ್ಬ ತನ್ನ ವಾಟ್ಸಾಪ್ ಕಾತೆಯಲ್ಲಿ “ಎಲ್ಲರಿಗು ವಿಶ್ವ ಆಹಾರ ದಿನಾಚರಣೆಯ ಶುಬಾಶಯಗಳು. ಆಹಾರ ಎಸೆಯದಿರಿ ಬಾಳು ಕಸಿಯದಿರಿ” ಎಂಬ ತಲೆಬರಹವುಳ್ಳ ಒಂದು ಅದ್ಬುತ ಸಂದೇಶವನ್ನ ಎಲ್ಲರ ಜೊತೆ ಹಂಚಿಕೊಂಡಿದ್ದ. ಅದನ್ನು ನೋಡಿದ ಹಲವರು ಪ್ರೇರಿತರಾಗಿ ಶುಬಾಶಯಗಳ ವಿಶಿಶ್ಟ ಸಂದೇಶಗಳನ್ನು ತಾವೂ ಹಂಚಿ ಆಚರಿಸಿದರು. ಎಲ್ಲರಿಗು ಇದು ಸಂತೋಶ ತರುವ ವಿಶಯವೇ. ಆದರೆ ವಾಸ್ತವವೇ ಬೇರೆಯಾಗಿತ್ತು. ಅದೇ ರಾತ್ರಿ, ಅಂದರೆ ಶುಬಾಶಯ ಕೋರಿದ ದಿನವೇ, ಶುಬಾಶಯ ಕೋರಿದ ಮಹಾಪುರುಶನೇ ತನ್ನ ತಟ್ಟೆಯಲ್ಲಿದ್ದ ಅಂಗೈಯಗಲ ಚಪಾತಿಯ ಜೊತೆ ಒಂದಿಶ್ಟು ಮೊಸರಲ್ಲಿ ಚೆನ್ನಾಗಿ ಕಲಸಿದ್ದ ಅನ್ನವನ್ನು ಬಿಟ್ಟು ಎದ್ದಿದ್ದ.
ನಾನು ಕೇಳಿಯೇ ಬಿಟ್ಟೆ ಯಾಕೋ ಊಟ ಬಿಟ್ ಬರ‍್ತಾ ಇದ್ದೀಯಲ್ಲ ಎಂದು. ಆತ ಕೊಟ್ಟ ಉತ್ತರ ಇಶ್ಟೇ ‘ಏನ್ bro, ಊಟ ಚೆನ್ನಾಗಿಲ್ಲ, ನಂಗ್ ಇಶ್ಟಾನು ಆಗ್ಲಿಲ್ಲ, ಸಾಕಾಯ್ತು ಅದಕ್ಕೆ ಬಿಟ್ಟೆ. ಏನಾಗುತ್ತೆ ಬಿಡು ಸ್ವಲ್ಪ ತಾನೇ ಬಿಟ್ಟಿರೋದು.’ ಆಗ ನೆನಪಾಗಿದ್ದು, ಬೆಳಿಗ್ಗೆ ಆತನೇ ಕಳಿಸಿದ್ದ ಸಂದೇಶಕ್ಕೂ, ಈ ಸಂದರ‍್ಬಕ್ಕೂ ಎತ್ತಣಿಂದೆತ್ತ ಸಂಬಂದ ಎಂದು!
ಇದು ಕೇವಲ ಒಬ್ಬರ ಅತವಾ ಇಬ್ಬರ ಮನಸ್ತಿತಿಯಲ್ಲ, ಹಲವರ ನಿಜವಾದ ವಿಶ್ವ ಆಹಾರ ದಿನದ ಆಚರಣೆ. ಹೇಳಿಕೊಳ್ಳಲು ಹಣೆಯ ಮೇಲೆ ಒಂದು ಸಾಲದೆಂದು ಎರಡೆರಡು ಪದವಿಗಳ ಸಾರ‍್ತಕ ಸಾದನೆಯ ಪಟ್ಟ! ಇದೇನಾ ವಿದ್ಯಾವಂತರು ಎಂದು ಎನಿಸಿಕೊಳ್ಳುವ ನಮ್ಮ ವಿದ್ವತ್ತು? ಒಂದು ಅತವಾ ಎರಡು ದಿನ ಏನೋ ಕಾರಣಕ್ಕೆ ಊಟ ಬಿಡುವುದು ಸರಿ ಆದರೆ ಪ್ರತಿದಿನವೂ ಹೀಗೆ ಊಟ ಚೆಲ್ಲುವ ಹಲವಾರು ವಿದ್ಯಾವಂತರನ್ನ ಏನೆನ್ನಬೇಕೋ? ಇದು ಕೇವಲ ಒಂದು ದಿನದ, ಒಂದು ಕಾಲೇಜಿನ, ಒಂದು ಮನೆಯ ಮಾತಲ್ಲ, ಅನ್ನದ ಅರಿವಿಲ್ಲದ, ಹಸಿವೆಂಬ ಬರವಿಲ್ಲದ ತುಂಬಿದ ಹೊಟ್ಟೆಗಳ ಅಹಂಕಾರದ ಕುಣಿತ.
ಇದು ಬರಿಯ ಆಹಾರದ ವಿಶಯವಲ್ಲ, ವಿಶ್ವ ಜಲ ಸಂರಕ್ಶಣೆ ದಿನ ಆಚರಿಸುವ ನಾವು, ಪ್ರತಿದಿನ ಸ್ನಾನ ಮಾಡುವಾಗ, ಕೈಕಾಲು ತೊಳೆಯುವಾಗ ಗೊತ್ತಿದ್ದೂ ಪೋಲು ಮಾಡುವ ನೀರೆಶ್ಟೋ? ಮೂಲೆಯ ಕೊಳಾಯಿಯಿಂದ ಅಯ್ಯೋ ಕಾಪಾಡಿ ಎಂದು ಅರಚಿ ಹರಿದು ನೆಲ ಸೇರುವ ಗಂಗಾ ಮಾತೆಯೇ ಇದನ್ನು ಬಲ್ಲಳು. ಹಲ್ಲುಜ್ಜುವಾಗಲು ನಿಲ್ಲದ ನೆಲ್ಲಿಯ ಬಾಯಿಗಳು 4ಜಿ ವೇಗದಲ್ಲಿ ಹರಿದು ಹೋಗುವ ಗಂಗೆಯನ್ನು ನೋಡಿದರೆ, ಬಗೀರತನಿಗೂ ಸಹ ಗಂಗೆ ಒಲಿಸಿದ ಕ್ಶಣವನ್ನು ನೆನೆದು ಕಣ್ಣಾಲಿ ಒದ್ದೆಯಾಗುವುದಂತೂ ಕಂಡಿತ.
ಸ್ವಚ್ಚ ಬಾರತದ ಹೆಸರಿನಲ್ಲಿ ವರುಶಕ್ಕೊಮ್ಮೆ ಪೊರಕೆ ಹಿಡಿದು ಪೋಟೋ ಕ್ಲಿಕ್ಕಿಸಿ ಎಲ್ಲರೊಂದಿಗೆ ಹಂಚಿಕೊಳ್ಳುವ ನಮ್ಮ ಜನರಿಗೋ, ತಿಂದು ಉಳಿದ ತಿಂಡಿ ಪೊಟ್ಟಣವನ್ನು ಬೀದಿಯಲ್ಲಿ ಬಿಸಾಡಬಾರದೆಂಬ ಕನಿಶ್ಟ ಪರಿಜ್ನಾನವು ಇಲ್ಲದಂತಾಗಿದೆ. ಒಂದು ದಿನವಾದರೂ ಸ್ವಇಚ್ಚೆಯಿಂದ ಒಂದು ಗಿಡವನ್ನು ನೆಡದ ಹಲವರು ವಿಶ್ವ ಪರಿಸರ ದಿನದಂದು ತಮ್ಮ ಮೊಬೈಲನ್ನು ಹಸಿರುಮಯಗೊಳಿಸಿ ಸಾದಿಸುವುದಾದರೂ ಏನು?
ಆಚರಣೆಗಳಿಗೆ ಅಡಚಣೆಯಿಲ್ಲ, ಅನುಸರಣೆಗೆ ಅನುವು ಇಲ್ಲ ಎಂಬಂತೆ ಆಡುತ್ತಿರುವ ನಾವು, ಒಣಗಿದ ತಟ್ಟೆಯಂತಾದ ಹೊಟ್ಟೆಗಳನ್ನು ನೋಡಿ, ಬರದ ನಾಡಿನಲ್ಲಿ ನೀರಿಗೆ ಹವಣಿಸುವ ಪ್ರಾಣವ ನೋಡಿ, ನಮ್ಮನ್ನು ಕಾಯುವ ಗಿಡಮರಗಳನ್ನು ನೋಡಿ, ಕಳೆದುಹೋಗುತ್ತಿರುವೆನ್ನೆಲ್ಲ ಎಂದು ಚಡಪಡಿಸುತ್ತಿರುವ ನಮ್ಮ ಬಾಶೆಯನ್ನು ನೋಡಿಯಾದರು ನಿಮ್ಮ ಬೆರಳ ತುದಿಯ ಅಪ್ಪಿಸಿ ಕಳುಹಿಸುವ ವಿಶೇಶ ಸಂದೇಶಗಳ ಆಚರಣೆಗಳನ್ನು ಕಿಂಚಿತ್ತಾದರೂ ನಿಮ್ಮ ಅಂಗೈಗೆ ತಂದು ಅನುಸರಿಸಿ ನೋಡಿ. ಆಗ ನಿಮ್ಮ ಆ ಸುಂದರ ಆಚರಣೆಯು ಸಹ ಅಮೂಲ್ಯವೆನಿಸುವುದು. ಕೊನೆಗೆ ಅದು ಚಿರಂತನವಾಗಿ ಉಳಿಯುವುದು.
ಇತ್ತೀಚಿನ ಅನಿಸಿಕೆಗಳು