ಬೆನ್ನ ಮೇಲೇರಿತ್ತು ಬೂತ

ಪವಮಾನ ಅತಣಿ.

( ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ ಪಡೆದ ಕವಿತೆ )

ವರ‍್ತಮಾನದೊಡನೆ ಸೆಣೆಸಬಹುದು
ಅದು ಹೊರಗಿನ ವೈರಿ
ಮಾಡಬಹುದು ಮಲ್ಲಯುದ್ದ,
ಬೂತವನು ಮಣಿಸಬಹುದೆ?
ಅದು ಒಳಗಣ ಹಂತಕ,
ನಡೆಸುತ್ತಲೇ ಇರುವುದು ಸತತ
ಗೆರಿಲ್ಲಾ ಯುದ್ದ

ಅಂದು ಸರಪಳಿಯ ತೆಗೆದೊಗೆದು
ಓಡಿದೆವು ಬಯಲೆಲ್ಲ, ಕುಣಿದೆವು,
ಕುಪ್ಪಳಿಸಿದೆವು.
ತಿಳಿಯದೆ ಬೆನ್ನ ಮೇಲೇರಿತ್ತು ಮೆಲ್ಲಗೆ
ಬೂತ! ನಿದಾನ ದೇಹವ ಕೊರೆಯುತ್ತ,
ಅಂದೇ ತಿಳಿದಿದ್ದರೆ ಕೊಡವಬಹುದಿತ್ತು,
ಇಂದು ಹೊರದೂಡಬಹುದೆ
ಅದು ಹೊಕ್ಕಮೇಲೆ ಅಂಗಾಂಗಗಳ,
ನರನಾಡಿಗಳ, ಮಿದುಳೊಳಗಿನ
ಜೀವಕೋಶಗಳ?

ಬೂತವನ್ನು ಬೂತದಲ್ಲೇ
ಕೊಲ್ಲಬೇಕು ಪೂರ‍್ತಿ!
ಅರೆವಿಜಯಕೆ ಮೈಮರೆತಿರೋ
ಅಸುರ ಬೀಜವೆ ಮೊಳೆತು
ವರ‍್ತಮಾನವ ಚುಚ್ಚುತ್ತ ಮೇಲೆದ್ದು
ವಿಶವ್ರುಕ್ಶವಾಗಿ ಬೆಳೆದು ಚಾಚುವುದು
ರಾಕ್ಶಸ ಕೊಂಬೆಗಳ ಬವಿಶ್ಯದುದ್ದಕ್ಕೂ

ಬೂತ ಹಿಡಿದ ಊರಿನಲಿ
ಬೂತ ದರಿಸುವುದು
ಬಹುಕ್ರುತ ವೇಶಗಳ,
ಒಮ್ಮೊಮ್ಮೆ ಸುಂದರ ಬವಿಶ್ಯದ
ಮುಕವಾಡದ ಹಿಂದೆಯೂ ಇರುವುದು ಬೂತ!

ಬೂತನಗರಿಯ ಮಾಯಾಬಜಾರು
ಕಣ್ಣನ್ನು ಕೋರೈಸುತ್ತದೆ,
ಕಟ್ಟಿರುವುದು ಬವಿಶ್ಯದ ಗೋರಿಯ ಮೇಲೆ

ಬೂತ ಬಿಡಿಸಲು ಬೇಕೀಗ ಬೂತೋಚ್ಚಾಟಕ,
ವಿಮೋಚನಾ ಮಂತ್ರೋಚ್ಚಾರಕ
ಇದ್ದವನು ಒಬ್ಬನೆ ಉದ್ದಾರಕ
ಅವನೂ ಬಲಿಯಾದ ಬೂತ ತಂತ್ರಕ್ಕೆ
ನೆಲಕ್ಕುರುಳಿದ ರಾಮಮಂತ್ರವ ಜಪಿಸುತ್ತ

ಅವನೊಬ್ಬನೆ ದ್ರುಶ್ಟಾರ! ಸ್ವಲ್ಪವಾದರೂ
ಕಂಡಿದ್ದ ಬವಿಶ್ಯದ ಬೂತದಾಟ,
ಉಪ್ಪನ್ನೇ ತಿಂದಿದ್ದರೂ ದೈವಾಂಶ ಸಂಬೂತ
ಅವನ ಒಂದಂಶ ಬೆಳಕಿನಲ್ಲಿ
ಕಾಣಬಹುದಿತ್ತು ನಾವು ಬೂತದ ನಿಜ ಮುಕ,
ಬೂತ ನಮ್ಮನ್ನು ಪೂರ‍್ತಿ ಕುರುಡಾಗಿಸುವ ಮುನ್ನ,

ಇನ್ನು ಬೂತ ನಿವಾರಣೆಗೆ ಬೇಕು
ಕ್ರಾಂತಿಯಲ್ಲ, ಪ್ರಳಯ.
ಆಮೇಲೊಂದು ಶೀತಲ ಯುಗ…
ಆಮೇಲೆ ಉದಯಿಸಬಹುದು ಹೊಸ ಸೂರ‍್ಯ,
ಆಡಬಹುದು ಒಂದು ಹೊಸ ಆಟ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Geeta says:

    “ಬೆನ್ನ ಮೇಲೇರಿತ್ತು ಭೂತ” ತುಂಬಾ ಅರ್ಥಗರ್ಭಿತವಾಗಿದೆ!!

  2. Sandeep A says:

    ತುಂಬಾ ಚೆನ್ನಾಗಿದೆ

ಅನಿಸಿಕೆ ಬರೆಯಿರಿ: