ರುಚಿ ರುಚಿಯಾದ ಕಜ್ಜಾಯ

– ಬವಾನಿ ದೇಸಾಯಿ.

ಕಜ್ಜಾಯ Kajjaya
ಕಜ್ಜಾಯವನ್ನು ಕೆಲವು ಕಡೆ ಅತಿರಸ, ಅತ್ರಾಸ, ಅನಾರಸ ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಇದನ್ನು ಹೇಗೆ ಮಾಡುವುದೆಂದು ತಿಳಿಯೋಣ ಬನ್ನಿ.

ಬೇಕಾಗುವ ಸಾಮಾನು :

ಒಂದು ಲೋಟ ಅಕ್ಕಿ
3/4 ಲೋಟ ಬೆಲ್ಲ
ಗಸಗಸೆ ಸ್ವಲ್ಪ
ಏಲಕ್ಕಿ ಪುಡಿ ಸ್ವಲ್ಪ
ಕರಿಯಲು ಎಣ್ಣೆ

ಮಾಡುವ ಬಗೆ:

ಅಕ್ಕಿಯನ್ನು ತೊಳೆದು, ಎರಡು ದಿನಗಳವರೆಗೆ ಅತವಾ 3 ಹೊತ್ತು ನೆನೆಯಲು ಬಿಡಿ (ಪ್ರತಿ 5-6 ಗಂಟೆಗೊಮ್ಮೆ ನೀರು ಬದಲಾಯಿಸಿ, ಇಲ್ಲದಿದ್ದರೆ ವಾಸನೆ ಬರಬಹುದು). ಹೀಗೆ ಮೂರು ಹೊತ್ತು ನೆನೆಸಿದ ಅಕ್ಕಿಯನ್ನ, ನೀರನ್ನು ಬಸಿದು, ಒಂದು ಕಾಟನ್ ಬಟ್ಟೆ ಮೇಲೆ ತೆಳುವಾಗಿ ಹಾಕಿ, ಸುಮಾರು 45 ನಿಮಿಶದವರೆಗೆ ಒಣಗಿಸಿ (ಅಕ್ಕಿಯಲ್ಲಿ ತೇವಾಂಶ ಇರಲಿ, ಆದರೆ ಹಸಿಯಾಗಿರಕೂಡದು), ನುಣ್ಣಗೆ ಪುಡಿ ಮಾಡಿ, ಜರಡಿ ಹಿಡಿದಿಡಿ.

ಈಗ 3/4 ಲೋಟ ಬೆಲ್ಲಕ್ಕೆ, 1/4 ಲೋಟ ನೀರು ಹಾಕಿ, ಒಂದೆಳೆ ಪಾಕ ಬರುವವರೆಗೆ ಬೇಯಿಸಿಕೊಳ್ಳಿ. ಒಂದೆಳೆ ಪಾಕ ಬಂದ ಬಳಿಕ, ಏಲಕ್ಕಿ ಪುಡಿ, ಗಸಗಸೆ, ಮತ್ತು ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿಕೊಂಡು, ಒಂದು ಹೊತ್ತು ಆರಲು ಬಿಡಿ.

ಹೀಗೆ ತಯಾರಿಸಿದ ಕಜ್ಜಾಯಾದ ಹಿಟ್ಟಿನಿಂದ, ಸಣ್ಣ ಉಂಡೆ ಮಾಡಿ, ಪುರಿ ಆಕಾರದಲ್ಲಿ ತಟ್ಟಿಕೊಂಡು, ಸಣ್ಣ ಉರಿಯಲ್ಲಿ ಕರಿಯಿರಿ.

ಟಿಪ್ಸ್: ಕಜ್ಜಾಯದ ಹಿಟ್ಟು ತೆಳುವಾಯಿತು ಅತವಾ ಗಟ್ಟಿಯಾಯ್ತು ಅಂತ ಗಾಬರಿ ಆಗ್ಬೇಡಿ, ತೆಳುವಾಗಿದ್ರೆ ಸ್ವಲ್ಪ ಮೈದಾ ಸೇರಿಸಿಕೊಳ್ಳಿ, ಹಾಗೆಯೇ ತುಂಬಾ ಗಟ್ಟಿಯಾಗಿದೆ ಅನ್ಸಿದ್ರೆ, ಒಂದು ಬಾಳೆಹಣ್ಣು ಹಾಕಿ ಕಲಸಿ. ಹಾಗೇನೆ, ಎಣ್ಣೆಯಲ್ಲಿ ಕರಿಬೇಕಾದ್ರೆ, ಉರಿ ಸಣ್ಣ ಇರಲಿ.

(ಚಿತ್ರ ಸೆಲೆ:  ಬವಾನಿ ದೇಸಾಯಿ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications