ಯಾರು ಇವರಾರು

– ಚಂದ್ರಗೌಡ ಕುಲಕರ‍್ಣಿ.

ಕೇಳ್ವಿ, ಪ್ರಶ್ನೆ. ಯಾರು, Who, question

ನವಿಲಿಗೆ ಸುಂದರ ನಾಟ್ಯವ ಕಲಿಸಿ
ಕುಣಿಯಲು ಹಚ್ಚಿದರಾರು?
ಹಾಲ ಹಸುಳೆಯು ಮನಸಿನ ಬಿಂಬದಿ
ತಣಿಯಲು ಬಿಟ್ಟವರಾರು?

ಕೆಂಪು ಕೊಕ್ಕಿನ ಗಿಣಿರಾಜನಿಗೆ
ಮಾತನು ಕಲಿಸಿದರಾರು?
ತುಂಟ ಬಾಲರ ತೊದಲಿನ ನುಡಿಗೆ
ಅರ‍್ತವ ಕೊಟ್ಟವರಾರು?

ಮೀನಿಗೆ ಮಿಂಚಿನ ಟಿಕಳಿ ಅಂಟಿಸಿ
ನೀರಲಿ ನೂಕಿದರಾರು?
ಹೊಳೆ ಹಳ್ಳದಲಿ ಈಜುವ ಹುಚ್ಚನು
ಕಂದಗೆ ಹಾಕಿದರಾರು?

ಹಕ್ಕಿಗೆ ಹಗುರ ಗರಿಗಳ ಹಚ್ಚಿ
ಹಾರಲು ಬಿಟ್ಟವರಾರು?
ಕಂದನ ಮನಸನು ಆಗಸ ಲೋಕಕೆ
ಏರಲು ಬಿಟ್ಟವರಾರು?

ಚಂಚಲ ಕಣ್ಣಿನ ಚಿಗರೆಯ ಮರಿಗೆ
ಓಡಲು ಬಿಟ್ಟವರಾರು?
ತುಂಟನ ಕನಸಿಗೆ ಗರಿಗಳ ಚುಚ್ಚಿ
ಆಡಲು ಬಿಟ್ಟವರಾರು?

(ಚಿತ್ರ ಸೆಲೆ: freegreatpicture.com)

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: