ಕಾಣೆಯಾದ ಸೆಪ್ಟಂಬರ್ ನ ಆ 11 ದಿನಗಳು!

– ಕೆ.ವಿ.ಶಶಿದರ.


1752ರ ಸೆಪ್ಟಂಬರ್ ತಿಂಗಳ ಕ್ಯಾಲೆಂಡರನ್ನು ಒಮ್ಮೆ ಅವಲೋಕಿಸಿ. ಇದರಲ್ಲಿ ಕೇವಲ 19 ದಿನಗಳು ಮಾತ್ರ ಇವೆ. ಹೌದಲ್ಲ! ಇನ್ನುಳಿದ 11 ದಿನಗಳು ಎಲ್ಲಿ ಹೋದವು? ಇದು ಕ್ಯಾಲೆಂಡರ್ ಪ್ರಕಾಶಕರ ಅತವಾ ಮುದ್ರಣಕಾರರ ತಪ್ಪೇ? ಅಂದಿನ ದಿನಗಳಲ್ಲಿ ನಿಜವಾಗಿಯೂ ಇದೇ ಕ್ಯಾಲೆಂಡರ್ ಅನ್ನು ಪಾಲಿಸಿದರೆ? ಹಾಗಾದರೆ ಏಕೆ?

ಅಲ್ಲ. ಇದಾವುದೂ ಅಲ್ಲ. ಮುದ್ರಣಕಾರರ ತಪ್ಪೂ ಅಲ್ಲ. ತಪ್ಪಾಗಿ ಮುದ್ರಣವಾದ ಅಪರೂಪದ ಬಿಡಿ ಕ್ಯಾಲೆಂಡರ್‍ನ ಪ್ರತಿಯೂ ಇದಲ್ಲ. ಇಶ್ಟಂತೂ ಸತ್ಯ. 1752ರ ಸೆಪ್ಟಂಬರ್ ತಿಂಗಳಿನಲ್ಲಿ ಇದ್ದುದು ಕೇವಲ 19 ದಿನಗಳು ಮಾತ್ರ. ದಿನಾಂಕ 3 ರಿಂದ 13 ರವರೆಗಿನ ದಿನಗಳಿಗೆ ಅದಿಕ್ರುತವಾಗಿ ಕೊಕ್ ಕೊಡಬೇಕಾಗಿ ಬಂದಿದ್ದು ಈಗ ಇತಿಹಾಸ.

ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ, 1582ರಲ್ಲಿ ಪೋಪ್ ಗ್ರೆಗೋರಿ XIII ಅವರು ದಿನಗಳನ್ನು ತಿಳಿಯಲು ಅಲ್ಲಿಯವರೆಗೂ ಬಳಸುತ್ತಿದ್ದ ಜ್ಯೂಲಿಯನ್ ಕ್ಯಾಲೆಂಡರ್ ಅನ್ನು ಬದಿಗಿಟ್ಟು ಗ್ರೆಗೋರಿಯನ್ ಕ್ಯಾಲೆಂಡರ್‍ನ ಉಪಯೋಗ ಮಾಡುವಂತೆ ಆದೇಶಿಸಿದರು. ಈ ಎರಡೂ ಕ್ಯಾಲೆಂಡರ್‍ಗಳ ನಡುವಿನ ವ್ಯತ್ಯಾಸವನ್ನು ಸರಿದೂಗಿಸಲು 1752ರ ಸೆಪ್ಟಂಬರ್ ತಿಂಗಳಿನಲ್ಲಿ ಹನ್ನೊಂದು ದಿನಗಳನ್ನು ತೆಗೆಯಬೇಕಾಗಿ ಬಂದಿದ್ದು ಮಾತ್ರ ಅನಿವಾರ‍್ಯ.

1582 ಎಲ್ಲಿ 1752 ಎಲ್ಲಿ? ಇಸವಿಗಳು ಒಂದೊಕ್ಕೊಂದು ತಾಳೆಯಾಗುತ್ತಿಲ್ಲ ಅಲ್ಲವೆ? ವಿಶಯ ಗೋಜಲು ಗೋಜಲಾಗಿದೆ ಅನಿಸುತ್ತದಲ್ಲವೆ?

ಕ್ರಿ.ಶ.325ರಲ್ಲಿ ನಿಸನ್ ಕೌನ್ಸಿಲ್ ಅದಿಕ್ರುತವಾಗಿ ಜ್ಯೂಲಿಯನ್ ಕ್ಯಾಲೆಂಡರ್ ಅನ್ನು ಅಳವಡಿಸಿಕೊಂಡಿತು. ಜ್ಯೂಲಿಯನ್ ಕ್ಯಾಲೆಂಡರ್‍ನ ಒಂದು ವರ‍್ಶದ ಅವದಿ 365 ದಿನ ಮತ್ತು 6 ಗಂಟೆ. ಅದರ ಪ್ರಕಾರ ಮಾರ‍್ಚ್ 25 ವರ‍್ಶದ ಮೊದಲ ದಿನ. ಜ್ಯೂಲಿಯನ್ ಕ್ಯಾಲೆಂಡರ್ ಅನ್ನು ಅಳವಡಿಸಿಕೊಂಡು ಶತಮಾನಗಳೇ ಕಳೆದು ಹೋದರೂ ಅದರಲ್ಲಿನ ಕೊರತೆಯ ಬಗ್ಗೆ ಯಾರಿಗೂ ಅನುಮಾನ ಅತವಾ ಅರಿವು ಇರಲಿಲ್ಲ. ಆಗ ಬಳಕೆಯಲ್ಲಿದ್ದ ತಂತ್ರಗ್ನಾನ ಮತ್ತು ತಿಳುವಳಿಕೆಯ ಆದಾರದ ಮೇಲೆ ವರ‍್ಶದ ಅವದಿಯನ್ನು ಲೆಕ್ಕಹಾಕಿ ನಿಗದಿಗೊಳಿಸಿದ್ದು ಇದಕ್ಕೆ ಕಾರಣ.

ತಾಂತ್ರಿಕತೆಯಲ್ಲಿನ ನೈಪುಣ್ಯತೆ ಹೆಚ್ಚಿದಂತೆ ವರ‍್ಶದ ಅವದಿಯಲ್ಲಿನ ತಪ್ಪುಗಳು ಕಂಡುಬಂದವು. ಈ ಕೊರತೆಯಿಂದ ಆಗಬಹುದಾದ ತೊಂದರೆಗಳು ಸ್ಪಶ್ಟವಾಗುತ್ತಾ ಹೋದವು. ಕೊನೆಗೊಮ್ಮೆ ಕಗೋಳ ಶಾಸ್ತ್ರಗ್ನರು ಜ್ಯೂಲಿಯನ್ ಕ್ಯಾಲೆಂಡರಿನಲ್ಲಿರುವ ದೋಶವನ್ನು ಕೂಲಂಕುಶವಾಗಿ ಪರಿಶೀಲಿಸಿ ನಿಕರವಾದ ವರ‍್ಶದ ಅವದಿಯನ್ನು ಕಂಡುಕೊಂಡರು. ಜ್ಯೂಲಿಯನ್ ಕ್ಯಾಲೆಂಡರ್‍ನಲ್ಲಿ ವರ‍್ಶದ ಅವದಿಯು 11 ನಿಮಿಶ ಹೆಚ್ಚಿರುವುದನ್ನು ಮನಗಂಡರು. ಶತಮಾನಗಳ ಕಾಲ ಜ್ಯೂಲಿಯನ್ ಕ್ಯಾಲೆಂಡರ್ ಪಾಲಿಸಿಕೊಂಡು ಬಂದಿದ್ದ ಕಾರಣ ಹೆಚ್ಚಾಗಿರುವ ಅವದಿಯನ್ನು ಸರಿಹೊಂದಿಸಿ ನಿಕರವಾದ ದಿನವನ್ನು ದಾಕಲಿಸುವುದು ತೀರ ಅವಶ್ಯಕವಾಗಿತ್ತು. ಜ್ಯೂಲಿಯನ್ ಕ್ಯಾಲೆಂಡರ್ ಅಳವಡಿಸಿಕೊಂಡ ಕ್ರಿ.ಶ.325ರಿಂದ 1582ರಲ್ಲಿ ಕಗೋಳ ಶಾಸ್ತ್ರಗ್ನರು ಕಂಡುಕೊಂಡ ಹೊಸ ನಿಕರವಾದ ಅವದಿಯವರೆಗಿನ ವ್ಯತ್ಯಾಸವನ್ನು ಲೆಕ್ಕಹಾಕಿದಾಗ ಸರಿಸುಮಾರು 10 ದಿನಗಳ ಕಾಲ ಎಲ್ಲವೂ ಮುಂದೆ ಹೋದಂತೆ ಕಂಡಿತು.

ಈ ವ್ಯತ್ಯಾಸವನ್ನು ಗಮನದಲ್ಲಿರಿಸಿಕೊಂಡು ಪೋಪ್ ಗ್ರೆಗೊರಿ XIII ಜ್ಯೂಲಿಯನ್ ಕ್ಯಾಲೆಂಡರ್ ಅನ್ನು ಬಿಟ್ಟು ಹೊಸ ಕ್ಯಾಲೆಂಡರ್ ಅನ್ನು ಅಳವಡಿಸಿಕೊಳ್ಳುವಂತೆಯೂ ಹಾಗೂ ಅದೇ ವರ‍್ಶದ ಅಕ್ಟೋಬರ್‍ನಲ್ಲಿ 10 ದಿನಗಳನ್ನು ಕಡಿಮೆ ಮಾಡಲು 1582ರ  ಪೆಬ್ರವರಿ ತಿಂಗಳಿನಲ್ಲಿ ಆದೇಶಿಸಿದರು. ಇಟಲಿ, ಪೋಲೆಂಡ್, ಪೋರ‍್ಚುಗಲ್, ಸ್ಪೈನ್ ದೇಶಗಳು ಕೂಡಲೆ ಇದನ್ನು ಅನುಸರಿಸಿದವು. ಉಳಿದ ಕ್ಯಾತೋಲಿಕ್ ದೇಶಗಳೂ ಸಹ ಸ್ವಲ್ಪ ಸಮಯದ ನಂತರ ಅಳವಡಿಸಿಕೊಂಡರು.

ಪೋಪ್ ಗ್ರೆಗೊರಿ XIII ಹೊಸ ಕ್ಯಾಲೆಂಡರ್ ಅನ್ನು ಜಾರಿಗೆ ತಂದಿದ್ದರಿಂದ ಅದನ್ನು ‘ಗ್ರೆಗೋರಿಯನ್ ಕ್ಯಾಲೆಂಡರ‍್’ ಎಂದೇ ಕರೆದರು.

ಸೆಪ್ಟಂಬರ್ 1752ರಲ್ಲಿ ಆಗಿದ್ದಾದರು ಏನು?

ಪೋಪ್‍ರ ನಿಯಂತ್ರಣದಲ್ಲಿದ್ದ ಪ್ರತಿಯೊಂದು ವಸಾಹತುಗಳು 1582ರಲ್ಲಿ 10 ದಿನಗಳನ್ನು ಕಡಿಮೆ ಮಾಡಿದ್ದವು. ಇಂಗ್ಲೀಶ್ ವಸಾಹತುಗಳು ಮತ್ತು ಅಮೇರಿಕಾ ಸಂಯುಕ್ತ ಸಂಸ್ತಾನವು ಇದನ್ನು ಜಾರಿಗೆ ತಂದಿದ್ದು 1752ರಲ್ಲಿ. ಅಂದರೆ 170 ವರ‍್ಶಗಳ ನಂತರ. ಹಾಗಾಗಿ ಹತ್ತು ದಿನಗಳ ಬದಲಾಗಿ ಹನ್ನೊಂದು ದಿನಗಳನ್ನು ಕಡಿತಗೊಳಿಸಬೇಕಾಗಿ ಬಂತು. ಸೆಪ್ಟಂಬರ್ ತಿಂಗಳಿನ 2 ಮತ್ತು 14ರ ನಡುವಿನ ಹನ್ನೊಂದು ದಿನಾಂಕಗಳನ್ನು ಕ್ಯಾಲೆಂಡರ್‍ನಿಂದ ತೆಗೆಯುವಂತೆ ಆದೇಶಿಸಿತು.

ಇಂಗ್ಲೀಶ್ ಮತ್ತು ಅಮೇರಿಕಾ ವಸಾಹತುಗಳಲ್ಲಿನ ಕೆಲಸಗಾರರಲ್ಲಿ ದಿನಗಳ ಕಡಿತದ ಬೀತಿ ಆವರಿಸಲಾರಂಬಿಸಿತು. ಸೆಪ್ಟಂಬರ್ ತಿಂಗಳಿನಲ್ಲಿ ಹನ್ನೊಂದು ದಿನಗಳು ಇಲ್ಲವಾದ ಕಾರಣ 19 ದಿನದ ಸಂಬಳ ಮಾತ್ರ ದೊರೆಯುತ್ತದೆಂಬ ಬಯ ಕಾಡಿತು. ಇದು ಕೆಲಸಗಾರರ ಸಿಟ್ಟಿಗೆ ಕಾರಣವಾಯಿತು. ನಿದಾನಗತಿಯಿಂದ ಪ್ರಾರಂಬವಾದ ಸಿಟ್ಟು ದಿನಗಳೆದಂತೆ ತೀವ್ರ ಸ್ವರೂಪ ಪಡೆದು ಬುಗಿಲೆದ್ದಿತು. ಪರಿಸ್ತಿತಿ ಕೈಮೀರಿ ಹೋಗುವುದನ್ನು ತಡೆಯಲು ತಿಂಗಳ ಪೂರ‍್ಣ ವೇತನ ಪಾವತಿಸುವುದಾಗಿ ಗೋಶಣೆಯಾದ ನಂತರ ಶಾಂತಿ ನೆಲೆಸಿತು.

1752 ಸೆಪ್ಟಂಬರ್ ತಿಂಗಳಿನ 2ರಿಂದ 14ರ ನಡುವಿನ ಹನ್ನೊಂದು ದಿನದ ಕಡಿತದ ಪರಿಣಾಮ ಇದೊಂದಾದರೆ, ಇತಿಹಾಸದ ಪುಟಗಳಲ್ಲಿ ಈ ಅವದಿಯಲ್ಲಿ ಯಾವುದೇ ಗಟನೆಗಳು ನಡೆದ, ಹುಟ್ಟು ಸಾವುಗಳೂ ಸಹ ಸಂಬವಿಸಿದ ದಾಕಲೆಗಳಿಲ್ಲದಂತಾಗಿದ್ದು ಎಂತಹ ವಿಪರ‍್ಯಾಸವಲ್ಲವೇ?

(ಮಾಹಿತಿ ಸೆಲೆ: dawn.com, projectbritain.com, timeanddate.com, walkinthelight.ca )
(ಚಿತ್ರ ಸೆಲೆ: mulakkada.com)

2 ಅನಿಸಿಕೆಗಳು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.