ಡಕ್ಕೆಯ ಬೊಮ್ಮಣ್ಣನ ವಚನದ ಓದು – 2ನೆಯ ಕಂತು

– ಸಿ.ಪಿ.ನಾಗರಾಜ.

ವಚನಗಳು, Vachanas

ಸತಿಯ ಗುಣವ
ಪತಿ ನೋಡಬೇಕಲ್ಲದೆ
ಪತಿಯ ಗುಣವ
ಸತಿ ನೋಡಬಹುದೆ ಎಂಬರು

ಸತಿಯಿಂದ ಬಂದ ಸೋಂಕು
ಪತಿಗೆ ಕೇಡಲ್ಲವೆ
ಪತಿಯಿಂದ ಬಂದ ಸೋಂಕು
ಸತಿಯ ಕೇಡಲ್ಲವೆ

ಒಂದಂಗದ ಕಣ್ಣು
ಉಭಯದಲ್ಲಿ ಒಂದು ಹಿಂಗಲಿಕ್ಕೆ
ಭಂಗವಾರಿಗೆಂಬುದ ತಿಳಿದಲ್ಲಿಯೆ
ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು.

ಕುಟುಂಬದ ಆಗುಹೋಗುಗಳಿಗೆ ಗಂಡ-ಹೆಂಡತಿ ಇಬ್ಬರೂ ಸಮಾನ ಹೊಣೆಗಾರರು ಮತ್ತು ಪಾಲುದಾರರು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

( ಸತಿ=ಹೆಂಡತಿ/ಮಡದಿ/ಪತ್ನಿ; ಗುಣ=ನಡತೆ/ಸಜ್ಜನಿಕೆ/ನಡೆನುಡಿ; ಸತಿಯ ಗುಣ=ಹೆಂಡತಿಯ ನಡೆನುಡಿ; ಪತಿ=ಗಂಡ/ಯಜಮಾನ; ನೋಡಬೇಕು+ಅಲ್ಲದೆ; ; ನೋಡು=ಕಾಣು/ವಿಚಾರ ಮಾಡು/ಗಮನಿಸು/ಎಣಿಸು; ಬೇಕು=ಅಗತ್ಯ/ಅವಶ್ಯ; ನೋಡಬೇಕು=ನೋಡುವುದು ಅಗತ್ಯ/ಕಡ್ಡಾಯವಾಗಿ ಗಮನಿಸಬೇಕು; ಅಲ್ಲದೆ=ಹಾಗೆ ಮಾಡದೆ/ಆ ರೀತಿಯಲ್ಲಿ ಮಾಡದೆ; ಪತಿಯ ಗುಣ=ಗಂಡನ ನಡೆನುಡಿ; ನೋಡಬಹುದೆ=ನೋಡುವುದು ಸರಿಯೇ; ಎಂಬರು=ಎನ್ನುತ್ತಾರೆ/ಎನ್ನುವರು;

ಸತಿಯ ಗುಣವ ಪತಿ ನೋಡಬೇಕಲ್ಲದೆ ಪತಿಯ ಗುಣವ ಸತಿ ನೋಡಬಹುದೆ ಎಂಬರು=ಕುಟುಂಬದ ಆಗುಹೋಗುಗಳಲ್ಲಿ ಹೆಂಡತಿಯು ಹೇಗೆ ನಡೆದುಕೊಳ್ಳುತ್ತಿದ್ದಾಳೆ?…ಅಂದರೆ ಮನೆಮಂದಿಯ ಜತೆಯಲ್ಲಿ ಯಾವ ರೀತಿಯಲ್ಲಿ ಹೊಂದಿಕೊಂಡು ಬಾಳುತ್ತಿದ್ದಾಳೆ?…ಕುಟುಂಬದ ಒಳಿತು ಕೆಡುಕುಗಳಲ್ಲಿ/ಏರಿಳಿತಗಳಲ್ಲಿ ಹೇಗೆ ಒಂದಾಗಿದ್ದಾಳೆ?…ಅವಳ ನಡೆನುಡಿಗಳಿಂದ ಕುಟುಂಬದಲ್ಲಿ ನೆಮ್ಮದಿ ನೆಲೆಸಿದೆಯೆ?…ಇವೇ ಮುಂತಾದ ಸಂಗತಿಗಳೆಲ್ಲವನ್ನೂ ಒರೆಹಚ್ಚಿ ನೋಡಿ ತಿಳಿದುಕೊಳ್ಳುವುದು ಗಂಡನ ಪಾಲಿಗೆ ಅತ್ಯಗತ್ಯವಾಗಿರುತ್ತದೆ. ಆದರೆ ಹೆಂಡತಿಯು ತನ್ನ ಗಂಡನ ಬಗ್ಗೆ ಈ ರೀತಿಯಲ್ಲಿ ಆಲೋಚಿಸುವುದು/ಪ್ರಶ್ನೆಗಳನ್ನು ಕೇಳುವುದು/ಗಂಡನ ಗುಣಾವಗುಣಗಳನ್ನು ಒರೆಹಚ್ಚಿ ನೋಡುವುದು ಸರಿಯಲ್ಲವೆಂದು ಜನರು ಹೇಳುತ್ತಾರೆ. ಏಕೆಂದರೆ ಮನೆಗೆ ಸೊಸೆಯಾಗಿ ಬಂದ ಹೆಣ್ಣಿನ ನಡೆನುಡಿಗಳಿಂದ ಒಂದು ಕುಟುಂಬ ಉಳಿಯುತ್ತದೆ ಇಲ್ಲವೇ ಅಳಿಯುತ್ತದೆ ಎಂಬ ಒಳಮಿಡಿತವು ಜನಸಮುದಾಯದ ಮನದಲ್ಲಿ ನೆಲೆಗೊಂಡಿದೆ.

ಈ ಬಗೆಯ ನಿಲುವನ್ನು ಜಗತ್ತಿನಲ್ಲಿರುವ ಎಲ್ಲಾ ಬಗೆಯ ಜಾತಿ/ಮತ/ಜನಾಂಗದ ಜನಸಮುದಾಯಗಳು ಹೊಂದಿವೆ. ಇಂತಹ ನಿಲುವನ್ನು ತಳೆಯುವುದಕ್ಕೆ ಕಾರಣವಾದ ಸಂಗತಿಯನ್ನು ತಿಳಿದಾಗ ಮಾತ್ರ ಹೆಣ್ಣಿನ ಜೀವನದ ಇತಿಮಿತಿಗಳು ಗೋಚರಿಸುತ್ತವೆ.

ಮಾನವ ಸಮುದಾಯದಲ್ಲಿ ಹುಟ್ಟುವ ಮಕ್ಕಳನ್ನು ಜೀವದ ನೆಲೆಯಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಬಗೆಗಳಲ್ಲಿ ಗುರುತಿಸಲಾಗುತ್ತದೆ. ಮನುಕುಲದ ಮುಂದುವರಿಕೆಗೆ ಈ ಎರಡು ಜೀವಿಗಳ ಕೂಡುವಿಕೆಯು ಅಗತ್ಯವಾಗಿದೆ. ಜೀವದ ನೆಲೆಯಲ್ಲಿ ಗಂಡು ಮತ್ತು ಹೆಣ್ಣಿಗೆ ಸಮಾನತೆಯಿದೆ. ಆದರೆ ಸಾಮಾಜಿಕ ನೆಲೆಯಲ್ಲಿ ‘ಗಂಡು ಮೇಲು – ಹೆಣ್ಣು ಕೀಳು’ ಎಂಬ ತಾರತಮ್ಯವನ್ನು ಎತ್ತಿಹಿಡಿಯಲಾಗಿದೆ. ಈ ರೀತಿಯ ಮೇಲು-ಕೀಳಿನ ತರತಮವನ್ನು ಮಾನವ ಸಮಾಜವೇ ರೂಪಿಸಿದೆ/ಕಟ್ಟಿಕೊಂಡಿದೆ/ನಿರ‍್ಮಿಸಿದೆ.

ಮಾನವ ಚರಿತ್ರೆಯ ಮೊದಲ ಹಂತದಲ್ಲಿ ಅಲೆಮಾರಿಯಾಗಿದ್ದ ಮಾನವ ಗುಂಪುಗಳು ಒಂದೆಡೆ ನಿಂತು ಬೇಸಾಯವನ್ನು ಮಾಡತೊಡಗಿದಾಗ ಕುಟುಂಬಗಳು ರಚನೆಗೊಂಡವು. ಈ ಕುಟುಂಬಗಳಲ್ಲಿ ತಾಯಿಯೇ ಮೇಟಿಯಾಗಿದ್ದಳು. ಹುಟ್ಟುವ ಮಕ್ಕಳು ಮತ್ತು ಉಳುಮೆ ಮಾಡುವ ಬೂಮಿಯು ಸಮುದಾಯದ ಒಟ್ಟು ಆಸ್ತಿಯಾಗಿದ್ದವು. ಮಕ್ಕಳು ತಾಯಿಯ ಹೆಸರಿನ ಕುಲಕ್ಕೆ ಸೇರಿದವರಾಗಿದ್ದು, ಆ ಕುಲದ ಹೆಸರನ್ನು ಪಡೆಯುತ್ತಿದ್ದರು. ಮಕ್ಕಳು ಹುಟ್ಟುವಲ್ಲಿ ತಂದೆಯು ಯಾರು ಎಂಬುದು ಗುರುತರವಾದ ಸಂಗತಿಯಾಗಿರಲಿಲ್ಲ. ಹೆಣ್ಣಿನ ಕಾಮದ ನಂಟಿಗೆ ಆಗ ಯಾವುದೇ ಬಗೆಯ ಕಟ್ಟುಪಾಡುಗಳು ಇರಲಿಲ್ಲ.

ಅನಂತರದ ವರುಶಗಳಲ್ಲಿ ಮಾನವ ಸಮುದಾಯದ ಸಾಮಾಜಿಕ ಜೀವನದಲ್ಲಿ ಅನೇಕ ಪಲ್ಲಟಗಳು ಉಂಟಾಗಿ ಉಳುವ ಬೂಮಿಯ ಒಡೆತನವು ಒಟ್ಟು ಸಮುದಾಯದಿಂದ ಕಯ್ ತಪ್ಪಿಹೋಗಿ, ಕೇವಲ ಕೆಲವೇ ಗಂಡಸರ ಹಿಡಿತಕ್ಕೆ ಸಿಲುಕಿದಾಗ, ಆಸ್ತಿಯ ಮೇಲೆ ಗಂಡಸಿನ ಒಡೆತನ ಉಂಟಾಯಿತು. ಗಂಡು ತನ್ನ ಬೀಜದಿಂದ ಹುಟ್ಟುವ ಮಕ್ಕಳಿಗೆ ಆಸ್ತಿಯ ಒಡೆತನದ ಹಕ್ಕು ದೊರೆಯಬೇಕೆಂಬ ಉದ್ದೇಶಕ್ಕೆ ಒಳಗಾಗಿ, ಹೆಣ್ಣಿನ ಮಯ್ ಮನಕ್ಕೆ ಶೀಲದ ಹೆಸರಿನಲ್ಲಿ ಸಂಕೋಲೆ/ಸರಪಳಿ/ಬೇಡಿಯನ್ನು ತೊಡಿಸಿ, ಅವಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ. ಹೆಣ್ಣಿನ ಕಾಮದ ನಂಟಿಗೆ ನೀತಿಯ ಕಟ್ಟುಪಾಡುಗಳನ್ನು ಹಾಕಿ, ಅವಳ ಚಲನವಲನಗಳನ್ನು ನಿಯಂತ್ರಿಸಿ, ಹೆಣ್ಣಿಗೆ ಯಾವುದೇ ಬಗೆಯ ‘ಮಾತಿನ ಸ್ವಾತಂತ್ರ್ಯ-ಚಲನ ಸ್ವಾತಂತ್ರ್ಯ ಇಚ್ಚೆಯ ಸ್ವಾತಂತ್ರ್ಯ’ ಇಲ್ಲದಂತೆ ಮಾಡಿ, ಅವಳನ್ನು ತನ್ನ ಗುಲಾಮಳನ್ನಾಗಿಸಿಕೊಂಡ. ಈ ರೀತಿ ಆಸ್ತಿ ಹಾಗೂ ಹೆಣ್ಣಿನ ಮೇಲಿನ ವ್ಯಕ್ತಿಗತ ಒಡೆತನ ಮತ್ತು ಗಂಡು ಮೇಲುಗಯ್ಯಾಗಿರುವ ಕುಟುಂಬದ ರಚನೆಯ ಕಾರಣದಿಂದಾಗಿ, ಸಾಮಾಜಿಕ ನೆಲೆಯಲ್ಲಿ ಗಂಡು-ಹೆಣ್ಣಿನಲ್ಲಿ ಲಿಂಗ ತಾರತಮ್ಯವುಂಟಾಯಿತು.

ಮನೆಯ ಹೊರಗೆ ದುಡಿಯುವ ಗಂಡಸಿಗೆ ಆಡಳಿತದ ಗದ್ದುಗೆ, ಹಣ ಮತ್ತು ಸಾಮಾಜಿಕ ಅಂತಸ್ತು ದೊರೆತರೆ, ಮನೆಯ ಒಳಗೆ ದುಡಿಯುವ ಹೆಣ್ಣು ಇವೆಲ್ಲದರಿಂದ ವಂಚಿತಳಾದಳು. ಅವಳ ದೇಹವು ನಿಸರ‍್ಗ ನಿಯಮದಂತೆ ಮುಟ್ಟು, ಬಸಿರು, ಹೆರಿಗೆ ಮತ್ತು ಮಕ್ಕಳನ್ನು ಸಾಕಿ ಸಲಹಿ ಬೆಳೆಸುವುದರಲ್ಲಿ ಜರ್ಜರಿತವಾಯಿತು. ಹೆಣ್ಣು ತನ್ನ ಮಯ್ ಮನಗಳ ಅಗತ್ಯ ಮತ್ತು ಬಯಕೆಗಳನ್ನು ಈಡೇರಿಸಿಕೊಳ್ಳಲು ಗಂಡಸಿನ ಮುಂದೆ ಕಯ್ ಒಡ್ಡಿ ಬಾಳುವಂತಾಯಿತು. ಮನೆಯೊಳಗೆ ಅಡುಗೆಯ ವಸ್ತುಗಳನ್ನು ಬೇಯಿಸಿ ತಿನಸು ಉಣಿಸುಗಳನ್ನು ತಯಾರಿಸುವ, ಮನೆಯವರೆಲ್ಲರಿಗೂ ಅದನ್ನು ಉಣಬಡಿಸುವ, ಅವರು ಚೆಲ್ಲಿದ ಎಂಜಲನ್ನು ಎತ್ತುವ, ಪಾತ್ರೆಗಳ ಮುಸುರೆಯನ್ನು ತೊಳೆಯುವ, ಮನೆಯೊಳಗೆ ಬೀಳುವ ಕಸಕೊಳೆಯನ್ನು ಗುಡಿಸಿ ತೆಗೆಯುವ ಮತ್ತು ಮಕ್ಕಳನ್ನು ಹೆರುವ ಯಂತ್ರವಾದಳು.

ಜಗತ್ತಿನ ಎಲ್ಲಾ ನುಡಿ ಸಮುದಾಯಗಳಲ್ಲಿಯೂ ಹೆಣ್ಣಿನ ಸಾಮಾಜಿಕ ಅಂತಸ್ತು ಗಂಡಿಗಿಂತ ಕಡಿಮೆ ಮಟ್ಟದಲ್ಲಿದೆ. ಈ ಎಲ್ಲಾ ಕಾರಣಗಳಿಂದಾಗಿ ಹೆಣ್ಣನ್ನು ‘ಸೆಕೆಂಡ್ ಸೆಕ್ಸ್’ ಎಂದು ಗುರುತಿಸುತ್ತಾರೆ. ಅಂದರೆ, ಮಾನವ ಸಮಾಜದಲ್ಲಿ ಗಂಡಸು ಮೊದಲ ದರ‍್ಜೆಯ ಪ್ರಜೆಯಾದರೆ, ಹೆಂಗಸು ಎರಡನೆ ದರ‍್ಜೆಯ ಪ್ರಜೆಯಾಗಿದ್ದಾಳೆ. ಇತ್ತೀಚಿನ ವರುಶಗಳಲ್ಲಿ ಹೆಣ್ಣು ವಿದ್ಯಾವಂತೆಯಾಗಿ, ಉದ್ಯೋಗವನ್ನು ಪಡೆದು, ಹಣಕಾಸಿನಲ್ಲಿ ಸ್ವಾವಲಂಬಿಯಾಗಿದ್ದರೂ, ಕುಟುಂಬದಲ್ಲಿ ಅವಳ ಅಂತಸ್ತು ಗಂಡನಿಗಿಂತ ಕಡಿಮೆಯಾಗಿರುತ್ತದೆ. ಆದುದರಿಂದಲೇ ಕುಟುಂಬದಲ್ಲಿ ನಡೆಯುವ ಯಾವುದೇ ಬಗೆಯ ಆಚರಣೆಗಳಲ್ಲಿ ಮತ್ತು ಹಣಕಾಸಿನ ವ್ಯವಹಾರಗಳಲ್ಲಿ ಗಂಡಸರ ಮಾತಿಗೆ ಇರುವಶ್ಟು ಬೆಲೆಯು ಹೆಂಗಸರ ಮಾತಿಗೆ ಇರುವುದಿಲ್ಲ. ಎಲ್ಲ ಬಗೆಯ ಮಾತುಕತೆಗಳಲ್ಲಿಯೂ ಕೊನೆಯ ಮಾತು ಗಂಡಸರದೇ ಆಗಿರುತ್ತದೆ.

ಈ ರೀತಿ ಗಂಡನ ಅಡಿಯಾಳಾಗಿ ಬಾಳುತ್ತಿರುವ ಹೆಂಡತಿಯ ಒಳಿತು ಕೆಡುಕಿನ ನಡೆನುಡಿಗಳನ್ನು ಒರೆಹಚ್ಚಿ ನೋಡುವ ಹಕ್ಕು ಗಂಡನಿಗೆ ಇದೆಯೇ ಹೊರತು , ತನ್ನ ಒಡೆಯ/ಯಜಮಾನನಾಗಿರುವ ಗಂಡನ ನಡೆನುಡಿಯಲ್ಲಿ ಕಂಡುಬರುವ ಯಾವುದೇ ಬಗೆಯ ತಪ್ಪುಗಳನ್ನು ಹೆಂಡತಿಯು ಬೆರಳು ಮಾಡಿ ತೋರಿಸುವಂತಿಲ್ಲ, ಕಟು ನುಡಿಗಳಿಂದ ಎತ್ತಿ ಆಡುವಂತಿಲ್ಲ ಎಂಬ ನಿಲುವನ್ನು ಬಹುತೇಕ ಮಂದಿ ಹೊಂದಿದ್ದಾರೆ;

ಸತಿ+ಇಂದ; ಬಂದ=ಉಂಟಾದ/ದೊರಕಿದ/ಒದಗಿದ/ಕೂಡಿದ/ಸೇರಿದ; ಸೋಂಕು=ಅಂಟು ಜಾಡ್ಯ/ಅಂಟು ಬೇನೆ/ಸಾಂಕ್ರಾಮಿಕ ರೋಗ/ಒಬ್ಬರಿಂದ ಮತ್ತೊಬ್ಬರಿಗೆ ತಗಲುವ/ಹರಡುವ ಕಾಯಿಲೆ; ಕೇಡು+ಅಲ್ಲವೆ; ಕೇಡು=ಅಪಾಯ/ಆಪತ್ತು/ಹಾನಿ/ನಾಶ; ಅಲ್ಲವೆ=ತಟ್ಟುವುದಿಲ್ಲವೆ/ತಗಲುವುದಿಲ್ಲವೇ/ಹರಡುವುದಿಲ್ಲವೆ; ಪತಿ+ಇಂದ;

ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ=ಮಯ್ ಮನಗಳ ನಂಟನ್ನು/ಒಡನಾಟವನ್ನು ಹೊಂದಿರುವ ಗಂಡ ಹೆಂಡತಿಯಲ್ಲಿ ಒಬ್ಬರಿಗೆ ಕಾಯಿಲೆ/ಬೇನೆ/ಜಾಡ್ಯ/ರೋಗ ಬಂದರೂ ಅದು ಮತ್ತೊಬ್ಬರಿಗೆ ಬಹುಬೇಗ ಅಂಟಿಕೊಂಡು , ಇಬ್ಬರಿಗೂ ಕೇಡು ಉಂಟಾಗುತ್ತದೆ/ತಟ್ಟುತ್ತದೆ; ಇದೇ ಬಗೆಯಲ್ಲಿ ಗಂಡ-ಹೆಂಡತಿಯಲ್ಲಿ ಯಾರೊಬ್ಬರು ಕೆಟ್ಟ ನಡೆನುಡಿಗಳನ್ನು ಹೊಂದಿದ್ದರೂ, ಅದು ಕುಟುಂಬದ ಮೇಲೆ ಕೆಟ್ಟ ಪರಿಣಾಮವನ್ನು ಬೀರಿ, ಇಬ್ಬರ ಜೀವನಕ್ಕೂ ಹಾನಿಯನ್ನುಂಟು ಮಾಡುವುದಲ್ಲದೇ, ಇಡೀ ಕುಟುಂಬದ ನಾಶಕ್ಕೆ/ಪತನಕ್ಕೆ ಕಾರಣವಾಗುತ್ತದೆ. ವಚನಕಾರ ಡಕ್ಕೆ ಬೊಮ್ಮಣ್ಣನು ಈ ಪ್ರಸಂಗವನ್ನು ಒಂದು ರೂಪಕವಾಗಿ ಚಿತ್ರಿಸುತ್ತಾ, ಹೆಣ್ಣಿನ ಗುಣವನ್ನು ಮಾತ್ರ ಒರೆಹಚ್ಚಿ ನೋಡುತ್ತಿರುವ/ಕುಟುಂಬದ ಅಳಿವು ಉಳಿವಿಗೆ ಹೆಣ್ಣೊಬ್ಬಳನ್ನೇ ಹೊಣೆಗಾತಿಯನ್ನಾಗಿ ಮಾಡಿ ನಿಂದಿಸುತ್ತಿರುವ/ಕಡೆಗಣಿಸುತ್ತಿರುವ/ಅಲ್ಲಗಳೆಯುತ್ತಿರುವ ಸಾಮಾಜಿಕ ನಿಲುವನ್ನು ಕಟುವಾಗಿ ವಿಡಂಬಿಸುತ್ತ, ಕುಟುಂಬವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವಂತಹ ಜವಾಬ್ದಾರಿಯು/ಹೊಣೆಗಾರಿಕೆಯು ಗಂಡ-ಹೆಂಡತಿಯಲ್ಲಿ ಸಮಾನವಾಗಿ ಇರಬೇಕು ಎಂಬುದನ್ನು ಹೇಳುತ್ತಿದ್ದಾನೆ;

ಒಂದು+ಅಂಗದ; ಅಂಗ=ಮಯ್/ದೇಹ/ಶರೀರ; ಕಣ್ಣು=ನೋಡಿ ತಿಳಿಯಲು ನೆರವಾಗುವ ಇಂದ್ರಿಯ/ನೇತ್ರ/ನಯನ; ಉಭಯ+ಅಲ್ಲಿ; ಉಭಯ=ಎರಡು; ಉಭಯದಲ್ಲಿ=ಎರಡರಲ್ಲಿ/ಎರಡು ಕಣ್ಣುಗಳಲ್ಲಿ; ಹಿಂಗಲು+ಇಕ್ಕೆ; ಹಿಂಗು=ಸೊರಗು/ನಾಶವಾಗು/ಕಾಣದಂತಾಗು; ಹಿಂಗಲಿಕ್ಕೆ=ಕಾಣದಂತಾದರೆ/ನೋಟದ ಕಸುವನ್ನು ಕಳೆದುಕೊಂಡರೆ/ಕಣ್ಣಿನ ಗುಡ್ಡೆಯು ಹಾಳಾದರೆ; ಭಂಗ+ಆರಿಗೆ+ಎಂಬುದ; ಭಂಗ=ತೊಂದರೆ/ಕುಂದು/ಸಂಕಟ/ನೋವು/ಹಾನಿ; ಆರು=ಯಾರು; ಆರಿಗೆ=ಯಾರಿಗೆ/ಯಾವ ವ್ಯಕ್ತಿಗೆ; ಎಂಬುದ=ಎನ್ನುವುದನ್ನು/ಎಂಬುದನ್ನು; ತಿಳಿ+ಅಲ್ಲಿಯೆ; ತಿಳಿ=ಅರಿ/ಗೊತ್ತುಮಾಡಿಕೊಳ್ಳುವುದು; ತಿಳಿದಲ್ಲಿಯೆ=ಅರಿತುಕೊಂಡಾಗ/ಗೊತ್ತುಮಾಡಿಕೊಂಡಾಗ/ಮನದಟ್ಟು ಮಾಡಿಕೊಂಡಾಗ;

ಕಾಲ+ಅಂತಕ; ಕಾಲ=ಸಮಯ/ವೇಳೆ; ಅಂತಕ=ಯಮ/ಸಾವಿನ ದೇವತೆ; ಕಾಲಾಂತಕ=ಹುಟ್ಟಿದ ಸಕಲಜೀವಿಗಳ ಪ್ರಾಣವನ್ನು/ಉಸಿರನ್ನು ಒಂದಲ್ಲ ಒಂದು ದಿನ ಕೊಂಡೊಯ್ಯುವ ದೇವತೆಯಾದ ಯಮ; ನೀರು-ಬೆಂಕಿ-ನೆಲ-ಮರಗಿಡ-ಹಣ-ವಿದ್ಯೆ ಎಲ್ಲಕ್ಕೂ ಒಬ್ಬೊಬ್ಬ ದೇವತೆಯನ್ನು ಕನ್ನಡ ಜನಸಮುದಾಯವು ಕಲ್ಪಿಸಿಕೊಂಡಿರುವಂತೆಯೇ ಸಾವಿಗೂ ಯಮನೆಂಬ ಹೆಸರಿನ ದೇವತೆಯನ್ನು ಕಲ್ಪಿಸಿಕೊಂಡಿದೆ; ಭೀಮೇಶ್ವರಲಿಂಗ=ಈಶ್ವರ/ಶಿವ/ದೇವರು; ಕಾಲಾಂತಕ ಭೀಮೇಶ್ವರಲಿಂಗ=ಡಕ್ಕೆಯ ಬೊಮ್ಮಣ್ಣನ ವಚನಗಳ ಅಂಕಿತನಾಮ;

ಸಲೆ=ನಿಜವಾಗಿ/ನಿಶ್ಚಯವಾಗಿ/ಸಂಪೂರ‍್ಣವಾಗಿ ; ಸಂದು+ಇತ್ತು; ಸಂದು=ಉಂಟಾಗು/ಒದಗು/ಕೂಡು/ಒಟ್ಟಾಗು/ಸೇರು; ಸಂದಿತ್ತು=ಸೇರಿರುವುದು/ಒದಗಿರುವುದು/ಕೂಡಿರುವುದು ;

ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆ ಭಂಗವಾರಿಗೆಂಬುದ ತಿಳಿದಲ್ಲಿಯೆ ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು=ಒಬ್ಬ ವ್ಯಕ್ತಿಯ ಮಯ್ಯಲ್ಲಿರುವ ಎರಡು ಕಣ್ಣುಗಳಲ್ಲಿ ಯಾವುದೇ ಒಂದು ಕಣ್ಣು ಹಾಳಾದರೂ, ಆ ವ್ಯಕ್ತಿಯ ನೋಟದ ಕಸುವು ಕುಗ್ಗುವಂತೆ ಒಂದು ಕುಟುಂಬದಲ್ಲಿ ಗಂಡ ಇಲ್ಲವೇ ಹೆಂಡತಿ ಈ ಇಬ್ಬರಲ್ಲಿ ಒಬ್ಬರು ಕೆಟ್ಟ ನಡೆನುಡಿಯುಳ್ಳವರಾದರೂ, ಕುಟುಂಬದ ಬೆಳವಣಿಗೆಗೆ/ಮುನ್ನಡೆಗೆ ಹಾನಿಯುಂಟಾಗುತ್ತದೆ ಎಂಬ ಸತ್ಯ/ದಿಟ/ವಾಸ್ತವವನ್ನು ಅರಿತುಕೊಂಡು ಗಂಡ ಹೆಂಡತಿಯು ಬಾಳುವಂತಾದಾಗ ಮಾತ್ರ ಕುಟುಂಬ ಉಳಿದು ಬೆಳೆದು ಬಾಳುತ್ತದೆ. ಗಂಡ ಹೆಂಡತಿಯು ಪರಸ್ಪರ ಒಬ್ಬರನ್ನು ಮತ್ತೊಬ್ಬರು ಅರಿತುಕೊಂಡು ಒಳ್ಳೆಯ ನಡೆನುಡಿಗಳಿಂದ ಕೂಡಿ ಹೊಣೆಗಾರಿಕೆಯಿಂದ ಬಾಳುವ ರೀತಿಯು ದೇವರ ಮೆಚ್ಚುಗೆಗೆ ಪಾತ್ರವಾಗುತ್ತದೆ/ದೇವರಿಗೆ ಸಲ್ಲುತ್ತದೆ ಎನ್ನುವ ತಿರುಳನ್ನು ಈ ರೂಪಕದ ನುಡಿಗಳು ಸೂಚಿಸುತ್ತಿವೆ.)

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Chaya Pattanshetty says:

    Very nice

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *