ನಮ್ಮಯ ನುಡಿಯು ಹೆಮ್ಮೆಯ ನುಡಿಯು

– ಚಂದ್ರಗೌಡ ಕುಲಕರ‍್ಣಿ.

ನಮ್ಮಯ ನುಡಿಯು ಹೆಮ್ಮೆಯ ನುಡಿಯು
ಇರಲಿ ಹೀಗೆ ಇರಲಿ

ಕನ್ನಡತನವನು ಮೆರೆಯುತಲಿರಲಿ
ಹಲ್ಮಿಡಿ ಶಿಲೆಯಲಿ ಕೂತು
ಬದಾಮಿ ಬಂಡೆಯು ಮೇಣವಾಗಲಿ
ತ್ರಿಪದಿಯ ಕಂಪಿಗೆ ಸೋತು

ಕುರಿತು ಓದದೆ ಕಾವ್ಯವ ರಚಿಸಲಿ
ವಿಜಯನ ಪದವನು ಅರಿತು
ಬನವಸೆ ದುಂಬಿ ಕೋಗಿಲೆ ಹಾಡಲಿ
ಪಂಪನ ಕಾವ್ಯದಿ ಬೆರೆತು

ಮುತ್ತು ಮಾಣಿಕವಾಗಲಿ ನುಡಿಯು
ಶರಣರ ವಚನವ ಸೇರಿ
ಬಳಪವ ಹಿಡಿಯದೆ ಕವಿತೆ ಕಟ್ಟಲಿ
ಕುಮಾರವ್ಯಾಸನ ಮೀರಿ

ಜನಪದರೆದೆಯಲಿ ಕೀರ‍್ತನಗೊಳ್ಳಲಿ
ಕನಕ ಪುರಂದರ ಹಾಡು
ನಿತ್ಯ ನಿರಂತರ ಮನದಲಿ ನೆಲೆಸಲಿ
ಮಡಿವಳ ಶರೀಪರ ಬೀಡು

ನಾಡಿನ ತುಂಬ ಗರಿ ಗರಿಗೆದರಲಿ
ಬೇಂದ್ರೆಯ ಪಾತರಗಿತ್ತಿ
ಕನ್ನಡ ಡಿಂಡಿಮ ನುಡಿಸಲಿ ಕಿಂದರ
ಮಕ್ಕಳ ಲೋಕವ ಸುತ್ತಿ

ಬಾರ‍್ಗವ ಕಡಲಲಿ ತೇಲುತಲಿರಲಿ
ಬಾಲರ ವನದ ಹಡಗು
ಪರಿಸರ ಕತೆಯು ವಿಸ್ಮಯಗೊಳಿಸಲಿ
ಪೂರ‍್ಣ ಚಂದ್ರನ ಬೆಡಗು

(ಚಿತ್ರ ಸೆಲೆtotalkannada.comthehindu.comcdn3.discoverwildlife.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.