ನಲುಮೆಯ ಬೆಳ್ಳಿ ಬೆಳಕಿನ ‘ದೀಪ್ತಿ’

– ಸಚಿನ್ ಎಚ್‌. ಜೆ.

ಹಣತೆ

ಬೇಕುಗಳ ಜೀವನದ ಮದ್ಯೆ
ಜೀಕುವ ಈ ಸಾದನೆಗಳ ಬೆನ್ನಟ್ಟಿ
ಸಾಗುತಿದೆ ಬದುಕು
ದುಡಿಯುತಿದೆ ತನುವು
ಓಡುತಿದೆ ಮನಸು

ಗುರಿಯತ್ತಲೋ ಗಡಿಯತ್ತಲೋ
ಗಳಿಕೆಯ ಗೆರೆಯತ್ತಲೋ
ಸೋತುಬಿಟ್ಟೇನೆಂಬ ಬಯದಿಂದಲೋ
ಗೆಲುವು ಬಂತೆಂಬ ಬರದಿಂದಲೋ
ಚಲದಿಂದಲೋ

ದಿಶೆಯಿಲ್ಲದೆ ಓಡಿದೆ, ನಶೆಯೇರಿದ ಪರಿವೆಯಿಲ್ಲದೆ
ಆಸೆಗಳ ಬೆನ್ನತ್ತಿದ ಈ ಮನದ ಕುದುರೆ
ಬಿಸಿಲುಕುದುರೆಯ ಜಾಡನ್ನು ಹಿಡಿದಿದೆ.
ಕಳೆದುಹೋಗಿದೆ ಎಂದೋ, ಕಳೆದುಕೊಂಡಿದೆ ಇಂದು
ಮನೆಯ ದಾರಿ, ಮನದ ದಾರಿ
ಕುಂಟಾಗಿದೆ ಇಂದು ಕಾಲು ಜಾರಿ

ಗಳಿಸಿದಶ್ಟೂ ಸಾಲದು ಜೀವನದಿ ಆಸ್ತಿ
ಹಬ್ಬಿದಶ್ಟೂ ಹರಡಲು ಹಪಹಪಿಸುವುದು ಈ ಕೀರ‍್ತಿ
ಸಾದನೆಗೆ ಇಲ್ಲ ಎಲ್ಲೆ
ಆಕಾಂಕ್ಶೆಗೆ ಇಲ್ಲ ಪರಿದಿ, ಪರಿಮಿತಿ
ಹುಚ್ಚುಕುದುರೆಯ ಓಟಕೆ ಅಳವಡಿಸಲಾದೀತೆ ವೇಗದಮಿತಿ??

ಓಟ ನಿಲ್ಲದಿದ್ದರೂ ಗೆರೆಯ ದಾಟದಿದ್ದರೂ
ಹೊತ್ತು ಮುಳುಗಿದ್ದು ಗೊತ್ತಾಗದೇ ಹೋಯಿತು
ಕತ್ತಲೆಯು ಕವಿದು ಕಣ್ಣಿಗೆ ಮಂಕುಬಳಿಯಿತು
ಕೊನೆಗೂ ನಿಂತ ಓಟದಲ್ಲಿ, ಕೆಳಗೆ ಕೂತ ಕುದುರೆಗೆ
ಸಿಕ್ಕಿದೆ ಶಾಂತಿ, ಕತ್ತಲೆಯ ಕಪ್ಪಿನಲಿ ಕಣ್ಣಿಗೆ ತಂಪಿನ ವಿಶ್ರಾಂತಿ

ಕತ್ತಲು ತಂದಿದ್ದು ತಂಪು, ಶಾಂತಿ, ವಿಶ್ರಾಂತಿ
ಆದರೂ ಸಹ ಅಂದಕಾರದಲ್ಲಿ
ಕಾಣದ ಕತ್ತಲೆಯಲ್ಲಿ, ಅಡಗಿ ಕುಳಿತಿತ್ತು
ಮತ್ತೆ ಹೊತ್ತು ಮೂಡುವ ತನಕ ಬಯ ಬೀತಿ
ಮತ್ತದೇ ಹುಚ್ಚು ಓಟದ ಮರುಬೂಮಿಯ ಬ್ರಾಂತಿ

ಕಣ್ಣು ಮುಚ್ಚಿದೆಯೋ ತೆರೆದಿದೆಯೋ?
ಅರಿಯಲಾರದಶ್ಟು ಕಪ್ಪು ಈ ಕತ್ತಲು
ಬೆಳಕು ಬೇಕು ಮನಕೆ, ಆದರೆ ಬಿಸಿಲು ಬವಣೆಯಲ್ಲ
ತಂಪು ಬೇಕು ಕಣ್ಣಿಗೆ, ಗಾಡಾಂದಕಾರ ಬೇಡ
ಶಾಂತಿ ಬೇಕು ಮನಕೆ, ಸ್ತಬ್ದವಾಗುವಶ್ಟು ಅಲ್ಲ

ಹಚ್ಚಲು ಇಂದು ಹಣತೆಯ ಮೊಂಬತ್ತಿ
ಮರೆಯಾಯಿತು ಬೀತಿ
ಪರಿಪರಿ ಹಬ್ಬಿದೆ ಈ ಕಾಂತಿ
ಕದಡಲಿಲ್ಲ ಶಾಂತಿ
ತಂಪಿನ ಕಪ್ಪು ಮನಬೆಳಗಿಸುವ ಬಿಳುಪು

ಕಪ್ಪು ಕತ್ತಲೆಯ ಹೂರಣ
ಬೆಳಕಿನ ಬೆಚ್ಚನೆಯ ಕಿರಣ
ಎರಡೂ ಇರಲು
ದೀಪಾವಳಿಯಾಯ್ತು ಈ ಇರುಳು
ತಿಳಿಯಾಯ್ತು ದಾರಿಗಳ ಕವಲು

ದ್ರುಶ್ಟಿಯಂಚಲಿದ್ದರೂ ಕತ್ತಲೆಯ ಬಿಂಬ
ಒಲುಮೆಯ ಹಣತೆ ಬೆಳಗಿರಲು
ಎದೆಯ ತುಂಬ
ಹಬ್ಬಿರಲು ಹೊದೆದಿರಲು
ಈ ಮನದ ಅಂಗಳದ ತುಂಬ

ಒಂದೊಂದೇ ಕ್ಶಣ, ಒಂದೊಂದೇ ಗಳಿಗೆ
ತಾನಾಗಿಯೇ ಕಳೆದೇ ಹೋಯಿತು ರಾತ್ರಿ
ಬಳಿಯೇ ಬೆಳಗಿರಲು
ಒಲುಮೆಯ ದೀಪದ ಹಬ್ಬುಗೆಯಲಿ
ಸಾಂತ್ವನದ ದೀವಿಗೆಯ ತಬ್ಬುಗೆಯಲಿ

ನಲುಮೆಯ ಬೆಳ್ಳಿ ಬೆಳಕಿನ ಈ *ದೀಪ್ತಿ*

(ಚಿತ್ರ ಸೆಲೆ: hdnicewallpapers.com )

4 ಅನಿಸಿಕೆಗಳು

  1. ಡಾಕ್ಟರ್ ರಲ್ಲೊಬ್ಬ ಕವಿ?ಅದರಲ್ಲೂ ತಾಯಿಭಾಷೆಯ ಮಡಿಲಿನಲಿ ಭಾವನೆಗಳ ಬೆನ್ನತ್ತಿದ ಬರವಣಿಗೆ ???

  2. ಧನ್ಯವಾದಗಳು ಸರ್. ? ಆದರೆ ಸಾಲ್ಮಿಂಚು ಅಂದರೆ ಏನು??

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.