PUBG – ಒಂದು ಇಣುಕುನೋಟ

– ಪ್ರಶಾಂತ. ಆರ್. ಮುಜಗೊಂಡ.

‘PUBG’ – ಬಹುಶಹ ಈ ಹೆಸರನ್ನು ಕೇಳದವರೇ ಇಲ್ಲವೇನೋ! PlayerUnknown’s BattleGrounds ಅತವಾ ಚುಟುಕಾಗಿ PUBG ಇತ್ತೀಚೆಗೆ ತುಂಬಾ ಹೆಸರುವಾಸಿಯಾಗಿರುವ ಮತ್ತು ಮಂದಿಮೆಚ್ಚುಗೆ ಗಳಿಸಿರುವ ಆನ್‌ಲೈನ್ ಆಟಗಳಲ್ಲೊಂದು. ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ತಲೆ ಕೆಡಿಸಿರುವ ಈ ಆಟ ಎಶ್ಟರ ಮಟ್ಟಿಗೆ ಮಂದಿಯ ತಲೆಯೊಳಗೆ ಹೊಕ್ಕಿದೆ ಎಂದರೆ, ರಾತ್ರಿ ಕನಸಿನಲ್ಲಿಯೂ ಈ ಆಟವನ್ನು ಆಡುತ್ತಿರುವಂತೆ ಗೊಣಗುವವರಿದ್ದಾರೆ.

ಕಿವಿಯುಲಿ (Headphone) ಹಾಕಿಕೊಂಡು ಒಬ್ಬರಿಗೊಬ್ಬರು ಸಲಹೆ ನೀಡುತ್ತಾ, ಅಲ್ಲಿ ಹೋಗೋ, ಇಲ್ಲಿ ಬಾರೋ, ಅಲ್ಲಿ ಬಾಂಬು ಎಸೆಯೋ, ಗುರು ನಂಗೆ ಗನ್ ಸಿಕ್ತೋ, ನಿನ್ನ ಹತ್ರ ಸ್ಕೋಪ್ ಇದೆಯಾ, ಅಲ್ಲಿ ಎನಿಮೀಸ್ ಇದಾರೋ ಬನ್ರೋ, ಎನಿಮಿ ಬಂದ ಗುಂಡು ಹಾರಿಸ್ರೋ… ಇಂತಹ ಅದೆಶ್ಟೋ ಮಾತುಗಳು ಆಟದ ಸಂದರ‍್ಬಕ್ಕೆ ತಕ್ಕಂತೆ ಹೊರಬರುತ್ತಿರುತ್ತವೆ. ಆಟದ ಬಗ್ಗೆ ಏನು ಗೊತ್ತಿರದವರಿಗಂತೂ ಇವರಿಗೇನು ಹುಚ್ಚು ಹಿಡಿದಿದೆಯಾ ಅತವಾ ಇವರೇನು ಸೈನಿಕರೋ, ಟೆರರಿಸ್ಟ್‌ಗಳೋ ಎಂಬ ಗೊಂದಲ ಮೂಡುತ್ತದೆ.

ಏನಿದು PUBG ಆಟ, ಆಡುವುದು ಹೇಗೆ?

100 ಮಂದಿ ಆಟಗಾರರನ್ನು ಒಂದು ವಿಮಾನದಲ್ಲಿ ಕರೆದುಕೊಂಡು ಹೋಗಿ ಅವರೆಲ್ಲರನ್ನು ಇಳಿಕೊಡೆಯ (Parachute) ನೆರವಿನಿಂದ ಒಂದು ನಡುಗುಡ್ಡೆಯ (Island) ಮೇಲೆ ಬರಿಗೈಯಲ್ಲಿ ಇಳಿಸಲಾಗುತ್ತದೆ. ನಡುಗುಡ್ಡೆಯ ಯಾವ ಜಾಗದಲ್ಲಿ ಇಳಿಯಬೇಕು ಎಂಬುದನ್ನು ಆಟಗಾರರೇ ಗೊತ್ತು ಮಾಡಿಕೊಳ್ಳುತ್ತಾರೆ.

ನೆಲದ ಮೇಲೆ ಕಾಲು ತಾಕಿದ ಕೂಡಲೇ, ಆಟಗಾರರೆಲ್ಲರೂ ತಮ್ಮ ಜೀವ ಉಳಿಸಿಕೊಳ್ಳಲು ಓಡುತ್ತಾ ಅಲ್ಲಿನ ಮನೆಗಳಲ್ಲಿರುವ ಕೋವಿ, ಗುಂಡು, ಬಾಂಬುಗಳ ಜೊತೆಗೆ ಗಾಯವಾದಾಗ ಗುಣಪಡಿಸಿಕೊಳ್ಳಲು ನೋವಳಿಕ (Painkiller), ಗಾಯಪಟ್ಟಿ (Bandage) ಮತ್ತು ಹುರುಪು ನೀಡುವ ಕುಡಿಗೆಗಳನ್ನು (Energy Drinks) ಹುಡುಕಿ ತಮ್ಮ ಚೀಲದಲ್ಲಿ ಕೂಡಿಡುತ್ತಾರೆ. ತಮ್ಮ ಎದುರಿಗೆ ಸಿಗುವ ವೈರಿಗಳನ್ನು ಕೊಲ್ಲುವ ಮೂಲಕ ಅವರಲ್ಲಿರುವ ವಸ್ತುಗಳನ್ನು ಕೂಡ ದೋಚುತ್ತಾರೆ. ಹೊತ್ತು ಕಳೆದಂತೆ ನಡುಗಡ್ಡೆಯಲ್ಲಿ ಆಟವಾಡುವ ಜಾಗವು ಕಡಿಮೆಯಾಗುತ್ತಾ ಬರುತ್ತದೆ. ಬದುಕಿರುವ ಎಲ್ಲಾ ಆಟಗಾರರು ಸುರಕ್ಶಿತ ವಲಯ (Safe Zone) ಎಂಬ ಬಿಳಿ ಬಣ್ಣದ ವ್ರುತ್ತದ ಒಳಗೆ ನಿರ‍್ದಿಶ್ಟ ಸಮಯದಲ್ಲಿ ಬಂದು ಸೇರಬೇಕು. ಇಲ್ಲದಿದ್ದರೆ ಹಿಂದೆಯೇ ಬರುವ ನೀಲಿ ಬಣ್ಣದ ರೇಡಿಯೇಶನ್ ವಲಯದಲ್ಲಿ ಸಿಕ್ಕು ಸಾಯಬೇಕಾಗುತ್ತದೆ.

ಬಿಳಿ ಬಣ್ಣದ ವ್ರುತ್ತದ ಅಳತೆಯು ಕೂಡ ಹೊತ್ತು ಕಳೆದಂತೆ ಕಡಿಮೆಯಾಗುತ್ತಾ ಬರುತ್ತದೆ. ಆಟಗಾರೆಲ್ಲರೂ ವ್ರುತ್ತದ ಒಳಗಡೆಯೇ ಇರಲು ಬಯಸಿ ಮುಂದೆ ಸಾಗುತ್ತಾರೆ. ವ್ರುತ್ತದ ಹರವು ಕಡಿಮೆಯಾದಂತೆ ಆಟಗಾರರು ಒಬ್ಬರಿಗೊಬ್ಬರು ಎದುರಾಗುವಂತಹ ಅವಕಾಶ ಹೆಚ್ಚುತ್ತಾ ಹೋಗುತ್ತದೆ. ಒಬ್ಬರಿಗೊಬ್ಬರು ಎದುರಾದಾಗ ಎದುರಾಳಿಗಳನ್ನು ಕೊಲ್ಲಲೇಬೇಕು. ಇಲ್ಲವಾದರೆ ಎದುರಾಳಿಗಳ ಗುಂಡೇಟಿಗೆ ಬಲಿಯಾಗಬೇಕಾಗುತ್ತದೆ.

ನಡುಗುಡ್ಡೆಯ ಮೇಲೆ ಇಳಿದ ನೂರು ಮಂದಿಯಲ್ಲಿ ಎದುರಾಳಿಗಳನ್ನು ಕೊಂದು ಕೊನೆಯವರಾಗಿ ಉಳಿದ ಆಟಗಾರ ಇಲ್ಲವೇ ಆಟಗಾರರ ತಂಡವು Winner Winner Chicken Dinner ಎಂಬ ಗೆಲುವಿನ ತೀರ‍್ಪನ್ನು ಪಡೆಯುವ ಮೂಲಕ ಆಟವನ್ನು ಗೆಲ್ಲುತ್ತಾರೆ.

ಏನಿದು Winner Winner Chicken Dinner?

Winner Winner Chicken Dinner ಒಂದು ಹುರಿದುಂಬಿಸುವ ಸಾಲು. ಈ ಸಾಲು ಎಲ್ಲಿಂದ ಬಂತು ಎನ್ನುವುದಕ್ಕೆ ಹಲವು ಕಾರಣಗಳು ಕಂಡರೂ ಈ ಒಂದು ವಿಶಯ ತುಂಬಾ ತಮಾಶೆಯಾದುದು. ಕೆಲವು ವರುಶಗಳ ಹಿಂದೆ ಲಾಸ್ ವೆಗಾಸ್‌ನ ಎಲ್ಲಾ ಜೂಜು ಕೇಂದ್ರಗಳಲ್ಲಿ (Casino) 1.79 ಡಾಲರ್ ಗೆ 3 ಚಿಕನ್ ತುಂಡುಗಳಿರುವ ಒಂದು ಚಿಕನ್ ಡಿನ್ನರ್ ಸಿಗುತ್ತಿತ್ತು. ಜೂಜಿನಲ್ಲಿ ಗೆದ್ದವರಿಗೆ 2 ಡಾಲರು ದೊರೆಯುತ್ತಿತ್ತು. ಗೆದ್ದವರ ಹತ್ತಿರ ಚಿಕನ್ ಡಿನ್ನರ್‌ಗೆ ಬೇಕಾಗುವ ಹಣಕ್ಕಿಂತ ಹೆಚ್ಚಿನ ದುಡ್ಡಿರುವುದರಿಂದ ಅದನ್ನು ಅದ್ಬುತವಾದ ಗೆಲವು ಎಂದುಕೊಂಡು ಆ ಗೆಲುವನ್ನೂ Winner Winner Chicken Dinner ಎಂದು ಕರೆಯುತ್ತಿದ್ದರು. ಅದೇ ಸಾಲನ್ನು PUBG ಆಟದಲ್ಲಿ ಗೆದ್ದವರಿಗೆ ಹುರುದುಂಬಿಸಲು ಬಳಸಲಾಗುತ್ತಿದೆ.

ಸಾಕಶ್ಟು ಮಂದಿಮೆಚ್ಚುಗೆ ಗಳಿಸಿರುವ PUBG ಆಟದ ಹಿನ್ನೆಲೆ, ಆಟದ ಕುರಿತ ಇನ್ನಶ್ಟು ವಿಶಯಗಳು ಮುಂದಿನ ಬರಹದಲ್ಲಿ.

(ಚಿತ್ರ ಮತ್ತು ಮಾಹಿತಿ ಸೆಲೆ: wikipedia.org, quora.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: