ಮಿಂಗಿ – ಮೈನಡುಕ ಹುಟ್ಟಿಸುವ ಬುಡಕಟ್ಟಿನ ಸಂಪ್ರದಾಯ
– ಕೆ.ವಿ.ಶಶಿದರ.
ನೈರುತ್ಯ ಇತಿಯೋಪಿಯಾದ ಓಮೋ ಕಣಿವೆ ಹಲವಾರು ಬುಡಕಟ್ಟು ಜನಾಂಗಗಳ ನೆಲೆ. ಹಾಮರ್, ಕಾರಾ, ಬನ ಎಂಬ ಹಲವು ಬುಡಕಟ್ಟು ಜನಾಂಗದ ಮಂದಿಗೆ ಮೂಲ ಇದು. ಇಲ್ಲಿನ ಒಟ್ಟು ಜನಸಂಕ್ಯೆ ಎರಡೂವರೆ ಲಕ್ಶ ಮೀರುವುದಿಲ್ಲ. ಕಣಿವೆಯ ಉದ್ದಗಲಕ್ಕೂ ಹರಡಿರುವ ಇವರು ಗ್ರಾಮೀಣ ಶೈಲಿಯ ಜೀವನವನ್ನು ಅನುಸರಿಸಿಕೊಂಡು ಬದುಕಲ್ಲಿ ನೆಮ್ಮದಿಯನ್ನು ಕಂಡುಕೊಂಡಿದ್ದಾರೆ. ಇದರೊಂದಿಗೆ ತಮ್ಮದೇ ಆದ ಸಂಪ್ರದಾಯದ ಕಟ್ಟುಪಾಡಿಗೆ ಬದ್ದರಾಗಿದ್ದಾರೆ.
ಹಲವು ಬುಡಕಟ್ಟು ಜನಾಂಗಗಳಲ್ಲಿ ಇರುವಂತೆ ಇವರಲ್ಲೂ ಸಹ ಮೂಡನಂಬಿಕೆ ಹಾಗೂ ಮೌಡ್ಯದ ಅಂಜಿಕೆ ಇದೆ. ದುಶ್ಟ ಶಕ್ತಿಗಳು ಜನಾಂಗದ ಒಳಿತಿಗೆ ಹಾಗೂ ಜೀವಕ್ಕೆ ಕೇಡು ಬಗೆಯುತ್ತವೆ ಎಂದು ಇವರು ನಂಬಿದ್ದಾರೆ. ತಮ್ಮ ಜನಾಂಗದಲ್ಲಿ ಜನಿಸಿದ ‘ಮಿಂಗಿ‘ ಮಕ್ಕಳು ಜನಾಂಗಕ್ಕೆ ಶಾಪವಿದ್ದಂತೆ. ಅವರಿದ್ದಲ್ಲಿ ಬರ, ರೋಗ ಮತ್ತು ಸಾವುಗಳನ್ನು ಆಹ್ವಾನಿಸಿದಂತೆ ಎಂದು ಅವರು ಬಲವಾಗಿ ನಂಬಿದ್ದಾರೆ. ಇವುಗಳಿಂದ ಬಚಾವಾಗಲು ಹಾಗೂ ಜನಾಂಗದ ಒಳಿತಿಗಾಗಿ ‘ಮಿಂಗಿ‘ ಮಕ್ಕಳನ್ನು ಕೊಲ್ಲುವ ಅಮಾನುಶವಾದ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದಾರೆ.
ಏನಿದು ಮಿಂಗಿ?
ದೈಹಿಕ ಅಸಹಜತೆ ಹೊಂದಿರುವ ಮಕ್ಕಳು ಮತ್ತು ವಯಸ್ಕರು ದಾರ್ಮಿಕವಾಗಿ ಅಶುದ್ದರು ಎಂಬುದು ಈ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ನಂಬಿಕೆ. ದೈಹಿಕ ಅಸಹಜತೆ ಹೊಂದಿರುವವರನ್ನು ಮಿಂಗಿ ಎನ್ನುತ್ತಾರೆ. ಮಿಂಗಿಗಳು ಶಾಪಗ್ರಸ್ತರು, ಜನಾಂಗದ ಇತರರ ಮೇಲೆ ದುಶ್ಟ ಪ್ರಬಾವ ಬೀರುವ ಕಾರಣ ಜೀವಿಸಲು ಅನರ್ಹರು. ಸಾವೇ ಅವರಿಗೆ ಕಟ್ಟಿಟ್ಟ ಬುತ್ತಿ.
ಹುಟ್ಟಿದ ಶಿಶುವನ್ನು ಮಿಂಗಿ ಎಂದು ಗೋಶಿಸಲು ಕಾರಣಗಳು ಹಲವು. ಟೀತ್ ಮಿಂಗಿ, ಗರ್ಲ್ ಮಿಂಗಿ, ವುಮೆನ್ ಮಿಂಗಿ ಎಂದು ವಿಬಜಿಸಬಹುದು. ಒಮ್ಮೆ ಮಗುವನ್ನು ಈ ಯಾವುದಾದರೂ ಗುಂಪಿನ ಮಿಂಗಿ ಎಂದು ಗೋಶಿಸಿದಲ್ಲಿ ಅಂದೇ ಮಗುವಿನ ಸಾವಿನ ಕ್ಶಣಗಣನೆ ಶುರು ಎಂದೇ ಅರ್ತ. ಅದಕ್ಕೆ ಉಳಿಗಾಲವೇ ಇಲ್ಲ. ಬುಡಕಟ್ಟು ಜನಾಂಗದ ಹಿರಿಯರೇ ಮಿಂಗಿಯ ಸಾವಿನ ರೀತಿ ನೀತಿಗಳನ್ನು ಗೋಶಿಸುತ್ತಾರೆ.
ಅಸಹಜ ಹಲ್ಲಿದ್ದರೆ ‘ಟೀತ್ ಮಿಂಗಿ’
ಹುಟ್ಟಿದ ಮಕ್ಕಳಲ್ಲಿ ಮೇಲಿನ ಹಲ್ಲು ಕೆಳಗಿನ ಹಲ್ಲಿಗಿಂತ ಮೊದಲು ಕಾಣಿಸಿಕೊಂಡಲ್ಲಿ ಅವು ಟೀತ್ ಮಿಂಗಿಗಳಾಗುತ್ತವೆ. ಹಾಲು ಹಲ್ಲನ್ನು ಮುರಿದರೆ ಅತವಾ ಯಾವುದೇ ಕಾರಣದಿಂದ, ಅಂದರೆ ಜಾರಿ ಬಿದ್ದಾಗಲೋ ಅತವಾ ಗುಂಪು ಗರ್ಶಣೆಯ ಸಮಯದಲ್ಲೋ ಹಲ್ಲು ಮುರಿದರೆ ಬುಡಕಟ್ಟಿನ ಹಿರಿಯರು ಅಂತಹವರನ್ನೂ ಸಹ ಮಿಂಗಿ ಎಂದು ಗುರುತಿಸಬಹುದು.
ಮದುವೆಯ ಹೊರಗಡೆ ಹುಟ್ಟಿದ ಮಕ್ಕಳು ಗರ್ಲ್ ಮಿಂಗಿಗಳು
ಇತಿಯೋಪಿಯಾದ ಈ ಕಣಿವೆಯ ಬುಡಕಟ್ಟು ಜನಾಂಗದಲ್ಲಿ ದುಬಾರಿ ವದುದಕ್ಶಿಣೆ ಚಾಲ್ತಿಯಲ್ಲಿದೆ. ವದುದಕ್ಶಿಣೆಯಾಗಿ ಹತ್ತಾರು ಹಸು, ಹತ್ತಾರು ಮೇಕೆ, ಬಂದೂಕು ಮುಂತಾದ ಇತರೆ ವಸ್ತುಗಳನ್ನು ವದುವಿನ ಕಡೆಯವರಿಗೆ ನೀಡಬೇಕು. ಬಹಳಶ್ಟು ಪಾಲಕರಿಗೆ ದುಬಾರಿ ವದುದಕ್ಶಿಣೆ ಕೊಡಲಾಗದ ಕಾರಣ ಹೆಣ್ಣುಮಕ್ಕಳ ಮದುವೆ ಮರೀಚಿಕೆ. ಇಂತಹ ಹೆಣ್ಣು ಮಕ್ಕಳಿಗೆ ವಿವಾಹದ ಹೊರಗಡೆ ಹುಟ್ಟಿದ ಮಕ್ಕಳೇ ಗರ್ಲ್ಮಿಂಗಿಗಳು.
ಇಲ್ಲಿ ಗರ್ಬದಾರಣೆಗೂ ಜನಾಂಗದ ಹಿರಿಯರ ಅನುಮತಿ ಬೇಕು
ಶಾಸ್ತ್ರೋಕ್ತವಾಗಿ ಆದ ಮದುವೆಯ ನಂತರ ಗರ್ಬದಾರಣೆಗೆ ಜನಾಂಗದ ಹಿರಿಯರ ಅನುಮತಿ ಇಲ್ಲಿನ ಬುಡಕಟ್ಟು ಜನಾಂಗದಲ್ಲಿ ಕಡ್ಡಾಯ. ಅನುಮತಿಗೂ ಮುನ್ನ ಗರ್ಬದಾರಣೆಯಾಗಿ ಶಿಶು ಜನಿಸಿದರೆ ಅದು ವುಮನ್ ಮಿಂಗಿಯಾಗುತ್ತದೆ. ವಿವಾಹವಾದರೂ ಜನಾಂಗದ ಹಲವು ರೀತಿ ರಿವಾಜು, ಕಟ್ಟು ಪಾಡುಗಳನ್ನು ದಂಪತಿಗಳು ಪಾಲಿಸಿರಬೇಕಿರುವುದು ಇವರಲ್ಲಿ ಅನಿವಾರ್ಯ.
ಅವಳಿ ಮಕ್ಕಳು ಹುಟ್ಟಿದರೆ ಶಾಪ
ಇಲ್ಲಿ ಅವಳಿ ಮಕ್ಕಳು ಹುಟ್ಟಿದರೆ ಅದು ಶಾಪವಂತೆ. ಹಾಗೆಂದು ಪರಿಗಣಿಸುವ ಜನಾಂಗದ ಹಿರಿಯರು ಎರಡೂ ಶಿಶುಗಳನ್ನು ಮಿಂಗಿ ಎಂದು ಗುರುತಿಸಬಹುದು. ಅವಳಿ ಮಕ್ಕಳನ್ನು ಮಿಂಗಿ ಎಂದು ಗುರುತಿಸಲು ಜನಾಂಗೀಯ ಕಾನೂನಿನ ಬೆಂಬಲ ಇದೆ. ಕೆಲವು ಸಂದರ್ಬಗಳಲ್ಲಿ ಮಿಂಗಿ ಎಂದು ಗೋಶಿಸಲು ಜನಾಂಗದ ಹಿರಿಯರು ಅವಕಾಶವನ್ನು ಕಾಯ್ದಿರಿಸಿಕೊಂಡಿದ್ದಾರೆ.
ಬುಡಕಟ್ಟಿನ ಸಂಪ್ರದಾಯಗಳಿಗೆ ಸಹಕರಿಸದ ವಯಸ್ಕರನ್ನೂ ಸಹ ಮಿಂಗಿ ಎಂದು ಗುರುತಿಸಿ ಜನಾಂಗದಿಂದ ಹೊರಹಾಕಬಹುದು. ಹಿರಿಯರ ತೀರ್ಮಾನವೇ ಇಲ್ಲಿ ಅಂತಿಮ. ಯಾವುದೇ ಮೇಲ್ಮನವಿಗೆ ಅವಕಾಶವಿಲ್ಲ. ಜನಾಂಗದ ಹಿರಿಯರು ಮಿಂಗಿ ಎಂದು ಗೋಶಿಸುವಾಗ ಹುಟ್ಟಿರುವ ಶಿಶುವಿನಲ್ಲಿ ಲಿಂಗ ತಾರತಮ್ಯ ಮಾಡುವುದಿಲ್ಲ.
ಮಿಂಗಿಗಳಿಗೆ ಸಮಾದಿಯೂ ನಿಶಿದ್ದ
ಸಹಜ ಸಾವು ಹೊಂದಿದ ಇತರರಿಗೆ ಅನುಸರಿಸುವಂತೆ ಶಾಸ್ತ್ರಬದ್ದವಾದ ಶವ ಸಂಸ್ಕಾರವಾಗಲೀ, ಸಂಪ್ರದಾಯ ಬದ್ದ ಸಮಾದಿಯಾಗಲಿ ಮಿಂಗಿಗಳಿಗೆ ಇರುವುದಿಲ್ಲ. ಮಿಂಗಿ ಎಂದು ಗುರ್ತಿಸಲ್ಪಟ್ಟ ಹಸುಗೂಸುಗಳನ್ನು ತಾಯಿಯ ಮಡಿಲಿನಿಂದ ಬಲವಂತವಾಗಿ ಕಸಿದುಕೊಂಡು ಹೋಗಿ ಕೊಲ್ಲುವುದು ರೂಡಿ.
ಮಿಂಗಿಗಳನ್ನು ಕೊಲ್ಲುವ ಬಗೆ ಅಮಾನವೀಯ
ಹಾಲುಗೆನ್ನೆಯ ಹಸುಗೂಸುಗಳನ್ನು ಕೊಲ್ಲಲು ಇವರುಗಳು ಅನುಸರಿಸುವ ಮಾರ್ಗವೇ ವಿಬಿನ್ನ, ಅಮಾನವೀಯ ಹಾಗೂ ಅತ್ಯಂತ ಬಯಾನಕ. ಕಣಿವೆಯ ದಟ್ಟ ಕಾಡಿನ ಜನಸಂಚಾರವಿಲ್ಲದ ಸ್ತಳದಲ್ಲಿ ದಟ್ಟ ಪೊದೆಯಲ್ಲಿ ಮಗುವನ್ನು ಎಸೆಯುವುದು ಒಂದು ವಿದಾನ. ಶಿಶುವು ಕ್ರಿಮಿ ಕೀಟ ಇರುವೆ ಹಾವು ಚೇಳುಗಳಿಂದ ಕಚ್ಚಿಸಿಕೊಂಡು ಹಿಸಿವು ನೀರಡಿಕೆಗೆ ಗೋಳಿಟ್ಟು ಅತ್ತೂ ಅತ್ತು ಬಳಲಿ ದಾರುಣ ಸಾವನ್ನಪ್ಪಿ ಕಾಡು ಪ್ರಾಣಿಗಳಿಗೆ ಆಹಾರವಾಗುತ್ತದೆ, ಇಲ್ಲವೆ ಜೀವಂತ ಕಾಡು ಪ್ರಾಣಿಗಳಿಗೆ ಬಲಿಯಾಗುತ್ತದೆ.
ಕಣಿವೆಯಿಂದ ಬೆಟ್ಟದ ಮೇಲಕ್ಕೆ ಕಂದಮ್ಮನನ್ನು ಕೊಂಡೊಯ್ದು ಅಲ್ಲಿಂದ ಬಂಡೆ ಕಲ್ಲುಗಳನ್ನು ಎಸೆಯುವಂತೆ ಪ್ರಪಾತಕ್ಕೆ ಎಸೆಯುವುದು ಮತ್ತೊಂದು ಬಗೆ. ಪ್ರಪಾತಕ್ಕೆ ಎಸೆದ ಬಿರುಸಿಗೆ ಹಾದಿಯಲ್ಲಿ ಅಡ್ಡಬಂದ ಕಲ್ಲು ಬಂಡೆಗಳಿಗೆ ಅಪ್ಪಳಿಸಿ ರುಂಡ ಮುಂಡ ಕೈ ಕಾಲುಗಳು ಮುರಿದು, ಮೂಳೆಗಳೆಲ್ಲಾ ಪುಡಿಪುಡಿಯಾಗಿ ಶಿಶು ಸಾವಿಗೆ ಶರಣಾಗುವುದು ಶತಸಿದ್ದ. ಇಲ್ಲೂ ಸಹ ಶಿಶುವಿನ ಮ್ರುತ ದೇಹ ಕಾಡು ಪ್ರಾಣಿಗಳಿಗೆ ಆಹಾರ.
ಶಿಶುವನ್ನು ಹರಿಯುವ ನದಿಯ ನೀರಿನಲ್ಲಿ ಮುಳುಗಿಸಿ ಸಾಯಿಸುವುದು ಅವರುಗಳು ಅನುಸರಿಸುವ ಮತ್ತೊಂದು ಮಾರ್ಗ. ಈಜು ಬರದ ಮಗು ನದಿಯಲ್ಲಿ ಮುಳುಗಿ ನೀರು ಕುಡಿದು ಉಸಿರು ಕಟ್ಟಿ ಪ್ರಜ್ನೆ ತಪ್ಪಿ ಸತ್ತು ಜಲಚರಗಳಿಗೆ ಪುಶ್ಕಳ ಬೋಜನವಾಗುತ್ತದೆ.
ಮಗುವಿನ ಪ್ರಾಣ ತೆಗೆಯಲು ಅವರು ಬಳಸುವ ಮಗದೊಂದು ಮಾರ್ಗ ಮಗುವಿನ ಬಾಯಿ ತುಂಬಾ ಮಣ್ಣನ್ನು ಬಲವಂತವಾಗಿ ತುರುಕುವುದು. ಸಣ್ಣ ವಸ್ತುಗಳನ್ನೂ ನುಂಗಲಾರದ ಮಗು ಮಣ್ಣನ್ನು ನುಂಗಲು ಸಾದ್ಯವಾಗದೆ ಉಸಿರು ಕಟ್ಟಿ ವಿಲವಿಲನೆ ಒದ್ದಾಡಿ ಸಾವನ್ನಪ್ಪುತ್ತದೆ. ಸತ್ತ ನಂತರ ಅದನ್ನು ಕಾಡಿನಲ್ಲಿ ಎಸೆಯುವುದು.
ಅಮಾನವೀಯ ಸಂಪ್ರದಾಯಕ್ಕೆ ವಿರೋದ
ಇಂತಹ ಅಮಾನವೀಯ ಸಂಪ್ರದಾಯ ವರ್ಶಕ್ಕೆ ಕನಿಶ್ಟ 200 ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತದೆ. ನಾಗರೀಕತೆಯ ಸೋಂಕು ತಗುಲಿದೆಂತೆಲ್ಲಾ ಮಿಂಗಿ ಒಂದು ಅನಾಗರೀಕ, ಅಮಾನವೀಯ ಸಂಪ್ರದಾಯ ಎಂದು ಅರಿತ ಕಾರಾ ಬುಡಕಟ್ಟು ಜನಾಂಗದವರು ಜುಲೈ 2012ರಿಂದ ಈ ಪದ್ದತಿಗೆ ತಿಲಾಂಜಿಲಿ ನೀಡಿದ್ದಾರೆ. ಕಣಿವೆಯ ಮತ್ತೊಂದು ಬುಡಕಟ್ಟು ಜನಾಂಗ ಬನ ಸಹ ಕಾರಾ ಜನಾಂಗವನ್ನು ಅನುಸರಿಸುವ ಹಾದಿಯಲ್ಲಿದ್ದಾರೆ. 50,000ಕ್ಕೂ ಹೆಚ್ಚು ಜನಸಂಕ್ಯೆಯುಳ್ಳ ಹಾಮಾರ್ ಪಂಗಡದ ಹಿರಿಯರಲ್ಲಿನ ಮತಬೇದದ ಕಾರಣ ಮಿಂಗಿ ಸಂಪ್ರದಾಯವನ್ನು ಪೂರ್ಣವಾಗಿ ನಿಶೇದಿಸಲು ಸಾದ್ಯವಾಗಿಲ್ಲ. ಹಾಗಾಗಿ ಅವರಲ್ಲಿ ಮಾತ್ರ ಈ ಪದ್ದತಿ ಇನ್ನೂ ಆಚರಣೆಯಲ್ಲಿದೆ, ಅದೂ ರಹಸ್ಯವಾಗಿ.
(ಮಾಹಿತಿ ಮತ್ತು ಚಿತ್ರ ಸೆಲೆ: adonis49.wordpress.com, cnn.com, dailymail.co.uk)
ಬರಹವನ್ನು ಓದಿ ಮುಗಿಸಿದಾಗ ಉಸಿರು ಕಟ್ಟಿದಂತಾಗಿತ್ತು . ಆಚರಣೆಯ ಹೆಸರಿನಲ್ಲಿ ಬಲಿಯಾಗುತ್ತಿರುವ ಮಕ್ಕಳು ಅಸಹಾಯಕರಾಗಿದ್ದರೆ , ಬಲಿ ತೆಗೆದುಕೊಳ್ಳುವ ಹಿರಿಯರು ಕ್ರೂರಿಗಳಾಗಿದ್ದಾರೆ.
ಅನಂತ ಧನ್ಯವಾದಗಳು