ಸಿನೆಮಾ ವಿಮರ‍್ಶೆ: ಚಂಬಲ್
ಅಜ್ಜಿ ಮೊಮ್ಮಗನಿಗೆ ಬಲಿ ಚಕ್ರವರ‍್ತಿಯ ಕತೆ ಹೇಳುತ್ತಾಳೆ. ಬಲಿ ಚಕ್ರವರ‍್ತಿ ಅಶ್ಟು ಒಳ್ಳೆಯವನಾದರೆ ಅವನನ್ನು ಯಾಕೆ ಸಾಯಿಸಿದರು ಎಂದು ಮೊಮ್ಮಗ ಕೇಳ್ತಾನೆ, ಅಜ್ಜಿಯ ಬಳಿ ಉತ್ತರವಿಲ್ಲ. ಸಿನಿಮಾದ ಮೊದಲು ಬರುವ ಈ ಸನ್ನಿವೇಶವೇ ‘ಚಂಬಲ್’ ಸಿನಿಮಾದ ನಾಯಕ ಸುಬಾಶ್‌ನ ಜೀವನದ ಕತೆಯೂ ಹೌದು. ಅಶ್ಟು ಪ್ರಾಮಾಣಿಕ ಯಾಕೆ ಬಲಿಯಾದ? ಇದೇ ಕತೆಯ ತಿರುಳು.
‘ಚಂಬಲ್’ ಚಿತ್ರದಲ್ಲಿ ನಾಯಕ ಸುಬಾಶ್ ವಿಲನ್‌ಗಳ ಜೊತೆ ಡಿಶುಂ ಡಿಶುಂ ಅಂತ ಹೊಡೆದಾಡಲ್ಲ, ಬದಲಿಗೆ ಬ್ರಶ್ಟ ವ್ಯವಸ್ತೆಯ ಜೊತೆ ಹೋರಾಡುತ್ತಾನೆ. ಒಬ್ಬ ಜಿಲ್ಲಾದಿಕಾರಿ ಹೇಗೆ ವ್ಯವಸ್ತೆ ಬದಲಿಸಲು ಹೋಗುತ್ತಾನೆ, ಆತನಿಗೆ ಅದರಲ್ಲಿ ಬರುವ ಕಶ್ಟಗಳೇನು ಅಂತ ಈ ಚಿತ್ರದಲ್ಲಿ ತೋರಿಸಲಾಗಿದೆ. ಪ್ರಾಮಾಣಿಕವಾಗಿ ದುಡಿಯಲು ಬಯಸುವವರಿಗೆ ಇಂದು ನಮ್ಮ ವ್ಯವಸ್ತೆ ಹೇಗೆ ‘ಚಂಬಲ್ ಕಣಿವೆಯಂತಾಗಿದೆ’ ಅಂತ ತೋರಿಸಲಾಗಿದೆ. ಇದರ ಜೊತೆ ಸರ‍್ಕಾರಿ ಅದಿಕಾರಿಗಳು ಹೇಗಿರಬೇಕು ಎಂಬ ಒಂದು ಮಾದರಿಯನ್ನು ಕಟ್ಟಿಕೊಡುವ ಮೂಲಕ ನಿರ‍್ದೇಶಕ ತನ್ನ ಅಬಿರುಚಿಯ ಪರಿಚಯ ಮಾಡಿಸುತ್ತಾರೆ.
ಜಿಲ್ಲಾದಿಕಾರಿ ಪಾತ್ರದಲ್ಲಿ ಸತೀಶ್ ನೀನಾಸಂ ಅತ್ಯುತ್ತಮ ಅಬಿನಯ ನೀಡಿದ್ದಾರೆ. ಎಂದಿನಂತೆ ಪಾತ್ರದ ಹೊರತಾಗಿ ಕಮ್ಮಿ ಮಾತು, ಹೆಚ್ಚು ಆಂಗಿಕ ಅಬಿನಯ ನೀಡಿ ಮನಗೆಲ್ಲುತ್ತಾರೆ. ಅಲ್ಲಲ್ಲಿ ವೇಗವಾಗಿ ಮಾತನಾಡಿ ಕೆಲವು ಮಾತುಗಳು ಗೊತ್ತಾಗಲ್ಲ ಅನ್ನೋದೊಂದೇ ಸಣ್ಣ ಹುಳುಕು. ಹ್ಯಾಕರ್ ಪಾತ್ರದಲ್ಲಿ ಪವನ್ ಗಮನ ಸೆಳೆಯುತ್ತಾರೆ. ಸರ‍್ದಾರ್ ಸತ್ಯ, ರೋಜರ್ ನಾರಾಯಣ್, ಅಚ್ಯುತ ಕುಮಾರ್, ಕಿಶೋರ್ ಮುಂತಾದವರು ತಮ್ಮ ತಣ್ಣನೆಯ ಅಬಿನಯದಲ್ಲೇ ಕ್ರೌರ‍್ಯ ವನ್ನು ಹೊರಹಾಕುತ್ತಾರೆ.
ಈ ಚಿತ್ರ ಚೆನ್ನಾಗಿ ಮೂಡಿ ಬರುವಲ್ಲಿ ದೊಡ್ಡ ಪಾತ್ರ ಬರವಣಿಗಗೆ ಸಲ್ಲಬೇಕು. ನಂದೀಶ್ ಮತ್ತು ನಿರ‍್ದೇಶಕ ಜೇಕಬ್ ವರ‍್ಗೀಸ್ ಇಬ್ಬರ ಕೈಚಳಕ ಚಿತ್ರಕತೆಯಲ್ಲಿ ಎದ್ದು ಕಾಣುತ್ತದೆ. ಯಾವುದೇ ಪ್ರಯೋಗಗಳನ್ನೇನೂ ಮಾಡದಿದ್ದರೂ, ಚಿತ್ರದ ಗತಿಗೆ ಸರಿಯಾಗಿರುವಂತಹ ಚಾಯಾಗ್ರಹಣ ಮಾಡಿದ್ದಾರೆ ಶಶಿಕುಮಾರ್. ಜ್ಯೂಡಾ ಸ್ಯಾಂಡಿ & ಪೂರ‍್ಣ ಚಂದ್ರ ತೇಜಸ್ವಿಯವರ ಹಾಡುಗಳಲ್ಲಿ ಒಂದು ವಿಶೇಶ ಗಮನ ಸೆಳೆಯುತ್ತದೆ. ಹಿನ್ನಲೆ ಸಂಗೀತ ನೀಡಿರುವ ಕೆ.ಪಿ. ಹೆಚ್ಚು ಅಂಕ ಗಳಿಸುತ್ತಾರೆ. ಬಿ.ಎ. ಮದು ಹಾಗೂ ಶರತ್ ಚಕ್ರವರ‍್ತಿಯವರು ಬರೆದಿರುವ, ನಾಯಕ ಸುಬಾಶ್ ಬಾಯಲ್ಲಿ ಬರುವ ಮಾತುಗಳಲ್ಲಿ ಹಲವು ಸಮಾಜಕ್ಕೆ ಸಂದೇಶ ನೀಡುವಂತಿವೆ. ಮುಕ್ಯವಾಗಿ ಈ ಚಿತ್ರ ಮುಂದೇನಾಗುತ್ತದೆ ಎಂಬ ಕುತೂಹಲದೊಂದಿಗೆ ಕೊನೆಯವರೆಗೂ ನೋಡಿಸಿಕೊಂಡು ಹೋಗೋದಕ್ಕೆ ನಿರ‍್ದೇಶಕ ಜೇಕಬ್ ವರ‍್ಗೀಸ್ ಅವರಿಗೆ ವಂದಿಸಬೇಕು.
ಈ ಚಿತ್ರ ಯಾಕಾಗಿ ನೋಡಬೇಕು ಅಂತ ಕೇಳಿದರೆ, ನಾಯಕನ ಪರಿಚಯವನ್ನು ಅತಿಯಾಗಿರಿಸದೇ ನೈಜವಾಗಿರಿಸಿದ್ದಕ್ಕೆ, ದ್ವಂದಾರ‍್ತ, ಐಟಂ ಸಾಂಗ್ ಇಲ್ಲದೇ ಒಂದು ಸದಬಿರುಚಿಯ ಚಿತ್ರ ಕಟ್ಟಿದ್ದಕ್ಕೆ. ಇವೆಲ್ಲವುಗಳಿಗಿಂತ ಮಿಗಿಲಾಗಿ ನಮ್ಮನ್ನು ಅಗಲಿದ ಪ್ರಾಮಾಣಿಕ ಅದಿಕಾರಿಗಳಿಗೆ ಈ ಚಿತ್ರವನ್ನು ಅರ‍್ಪಿಸಿದ್ದಕ್ಕೆ ಈ ಚಿತ್ರವನ್ನು ಒಮ್ಮೆ ತಪ್ಪದೇ ನೋಡಿ.
(ಚಿತ್ರ ಸೆಲೆ: facebook/SatishNinasam)
ಇತ್ತೀಚಿನ ಅನಿಸಿಕೆಗಳು