ಕವಿತೆ: ನನ್ನ ಅಮ್ಮ

– ಅಜಿತ್ ಕುಲಕರ‍್ಣಿ.

ತಾಯಿ ಮತ್ತು ಮಗು, Mother and Baby

ಗೆದ್ದ ಪದಕಗಳ ಕಂಡು
ಹಿರಿಹಿರಿ ಹಿಗ್ಗಿದವಳು
ಬಿದ್ದಾಗ ಪಾದಗಳ
ದೂಳು ಕೊಡವಿದವಳು
ನನ್ನ ಸದ್ದು ಇಲ್ಲದಾದಾಗ
ಕಳವಳಗೊಂಡವಳು
ಅವಳಿನ್ನಾರು ಹೇಳಿ?
ನನ್ನ ಅಮ್ಮ

ಬೆತ್ತದ ಚೇರಲಿ ಕುಳಿತು
ಮಗ್ಗಿಯ ಕಲಿಸಿದವಳು
ರಾತ್ರಿ ಬೆದರಿಸುವ ಗೊಗ್ಗನ
ಹೊಡೆದು ಓಡಿಸಿದವಳು
ಎಗ್ಗಿಲ್ಲದ ಹಾರಾಟಗಳ
ನಕ್ಕು ಸಹಿಸಿಕೊಂಡವಳು
ಅವಳಿನ್ನಾರು ಹೇಳಿ?
ನನ್ನ ಅಮ್ಮ

ತಪ್ಪು ತೊದಲು ಮಾತಿಗೆ
ಚಪ್ಪಾಳೆ ತಟ್ಟಿದವಳು
ಹೆಪ್ಪುಹಾಕಿದ ಕೆನೆಯ
ಬಾಯಲಿಕ್ಕಿದವಳು
ಬಾನಚುಕ್ಕೆಗಳ ಸೇರಿಸಿ
ರಂಗೋಲಿಯ ಬರೆದವಳು
ಅವಳಿನ್ನಾರು ಹೇಳಿ?
ನನ್ನ ಅಮ್ಮ

ಓದಿದ ಎಶ್ಟೋ ಕತೆಗಳಲ್ಲಿ
ಪಾತ್ರವಾಗಿ ಕಂಡವಳು
ಊರಲಿ ಚಳಿ ಹೆಚ್ಚಾದಾಗ
ಕರೆಮಾಡಿ ಬೆಚ್ಚಗಿರೆಂದವಳು
ಹಬ್ಬದಡುಗೆಯ ಮಾಡಿ
ನಿಟ್ಟುಸಿರ ಬಿಟ್ಟವಳು
ಅವಳಿನ್ನಾರು ಹೇಳಿ?
ನನ್ನ ಅಮ್ಮ

ಯಾರ ಕಾಲಪ್ಪುಗೆಯು
ನನ್ನ ನಲ್ಬೆಳಗು ಆಗಿತ್ತೋ
ಯಾರ ತೋಳಪ್ಪುಗೆಯು
ನನ್ನ ನಲ್ಲಿರುಳು ಆಗಿತ್ತೋ
ಯಾರು ನನ್ನ ಕನಸಲೂ ಕಾವಲಿದ್ದರೋ
ಅವಳಿನ್ನಾರು ಹೇಳಿ?
ನನ್ನ ಅಮ್ಮ

(ಪದಗಳ ಹುರುಳು: ನಲ್ಬೆಳಗು = good morning, ನಲ್ಲಿರುಳು = good night)

(ಚಿತ್ರಸೆಲೆ: sproulegenealogy.blogspot.in)

4 ಅನಿಸಿಕೆಗಳು

  1. Hegae inu thumba kavithae baraeyiri Ajith… Nima e kavanakae nana shubashayagalu

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.