ಬುಸೊಜರಾಸ್ – ಇದು ಜೀವನ ಮತ್ತು ಮರುಜನ್ಮದ ಹಬ್ಬ

– ಕೆ.ವಿ.ಶಶಿದರ.

Busójárás man replica, burning, ಬುಸೊಜರಾಸ್ ಪ್ರತಿಕ್ರುತಿ

ಬುಸೊಜರಾಸ್’ ವರ‍್ಶಕ್ಕೊಮ್ಮೆ ಒಂದು ವಾರದ ಕಾಲ ನಡೆಯುವ ದೀರ‍್ಗ ಉತ್ಸವ. ಹಲವು ಕ್ರಿಶ್ಚಿಯನ್ನರು ಪವಿತ್ರ ದಿನವೆಂದು ನಂಬಿರುವ ಆಶ್ ವೆನ್ಸಡೇ(Ash Wednesday) ಹಿಂದಿನ ದಿನ ಈ ಉತ್ಸವದ ಕೊನೆಯ ದಿನ. ಹಂಗರಿಯ ಸಣ್ಣ ಪಟ್ಟಣ ಮೊಹಾಕ್ಸ್‌ನಲ್ಲಿ ಕ್ರೋಯೇಶಿಯನ್ ನುಡಿಯಾಡುವ ಸೊಕ್ಸಿ ಎಂಬ ಅಲ್ಪಸಂಕ್ಯಾತ ಪಂಗಡದಲ್ಲಿ ಬುಸೊಜರಾಸ್ ಆಚರಣೆಯಿದೆ.

ಏನಿದು ಬುಸೊಜರಾಸ್?

ಬುಸೊಜರಾಸ್ ಆಚರಣೆಯ ದಿನಗಳಂದು Busójárás man replica, burning, ಬುಸೊಜರಾಸ್ ಪ್ರತಿಕ್ರುತಿ ಸುಡುವುದುಮೊಹಾಕ್ಸ್‌ನ ಜನ ಕೊಂಬುಗಳುಳ್ಳ ರಾಕ್ಶಸರಂತೆ ಮುಕವಾಡ, ಬಗೆಬಗೆಯ ಬಣ್ಣಗಳ ಬಟ್ಟೆ ತೊಟ್ಟು ಊರು ಸುತ್ತುತ್ತಾರೆ. ಮಸಾಲೆಯುಕ್ತ ವೈನ್ ಹಾಗೂ ಮನೆಯಲ್ಲೇ ತಯಾರಿಸಿದ ಪ್ಯಾಲಿಂಕಾ ಎನ್ನುವ ಸಾಂಪ್ರದಾಯಿಕ ಬ್ರಾಂದಿಯನ್ನು ಕಂಟ ಪೂರ‍್ತಿ ಕುಡಿಯುತ್ತಾ ರಸ್ತೆಗಳಲ್ಲೆಲ್ಲಾ ತೂರಾಡುತ್ತಾ, ಜೋರಾಗಿ ಗಂಟಲು ಬಿರಿಯುವಂತೆ ಅರಚುತ್ತಾ ಊರೆಲ್ಲಾ ಸುತ್ತುವುದು ಉತ್ಸವದ ಒಂದು ಬಾಗ. ಮುಕವಾಡ ತೊಟ್ಟು ಆಚರಣೆಯಲ್ಲಿ ಪಾಲ್ಗೊಳ್ಳುವವರನ್ನು ಬುಸೊ ಎಂದು ಕರೆಯಲಾಗುತ್ತದೆ.

ಉತ್ಸವದ ಕೊನೆಯ ದಿನದ ಹಿಂದಿನ ದಿನ ಒಣಹುಲ್ಲಿನಿಂದ ತಯಾರಿಸಿದ ಮನುಶ್ಯನ ಪ್ರತಿಕ್ರುತಿಯನ್ನು ಗಾಡಿಯಲ್ಲಿ ಹೊತ್ತು ಊರ ತುಂಬಾ ಅಬ್ಬರದಿಂದ ಮೆರವಣಿಗೆ ಮಾಡುತ್ತಾರೆ. ನಂತರ ಅದನ್ನು ಪಟ್ಟಣದ ನಡುಬಾಗಕ್ಕೆ ತಂದು, ಅಲ್ಲಿ ಅದಕ್ಕೆ ಕೊಳ್ಳಿ ಇಟ್ಟು ಉರಿಸಲಾಗುತ್ತದೆ. ಬೆಂಕಿ ಗೊಂಬೆಯ ಹುಲ್ಲನ್ನು ದಗದಗನೆ ಉರಿಸುತ್ತಾ ಸುಟ್ಟು ಬೂದಿ ಮಾಡುವಾಗ, ಪಟ್ಟಣದ ಮಂದಿ ಕೈಕೈ ಹಿಡಿದುಕೊಂಡು ಅದರ ಸುತ್ತ ಕೋಲೋ ನ್ರುತ್ಯ ಮಾಡಿ ನಲಿಯುತ್ತಾರೆ.

ಈ ಆಚರಣೆಗೆ ಐನೂರು ವರುಶಗಳ ಹಿನ್ನೆಲೆಯಿದೆ

ಬುಸೊಜರಾಸ್ ಚಳಿಗಾಲದ ಅಂತ್ಯದಲ್ಲಿ ಆಚರಿಸುವ ಇತರೆ ಹಲವು ಉತ್ಸವಗಳಿಗಿಂತ ಬೇರೆಯೇನಲ್ಲ. ಆದರೆ ಈ ಆಚರಣೆಗೆ ಇರುವ ಹಿನ್ನೆಲೆ ವಿಶೇಶವಾದುದು. 1526ರಲ್ಲಿ ನಡೆದ ಮೋಹಾಕ್ಸ್ ಕದನದಿಂದ ಈ ಆಚರಣೆ ನಡೆದುಬಂದಿದೆ. ದಂತಕತೆ ಒಂದರಂತೆ, ಆಕ್ರಮಣಕಾರಿಯಾಗಿ ನುಗ್ಗುತ್ತಿದ್ದ ಟರ‍್ಕಿ ಸೈನ್ಯವನ್ನು ಹಿಮ್ಮಟ್ಟಿಸಲು ಅಲ್ಲಿನ ಗ್ರಾಮಸ್ತರು ಅತಿ ಬಯಂಕರ ರಾಕ್ಶಸರಂತೆ ಪೋಶಾಕನ್ನು ದರಿಸಿ ಹೋರಾಡಿದ್ದರು.

ಬುಸೊ ಉಡುಗೆ ತೊಡುಗೆಗಳ ವಿಶೇಶತೆ

Busójárás facemasks, ಮುಕವಾಡ

ಬುಸೊ ಮುಕವಾಡಗಳು

ಪುರುಶ ಬುಸೊಗಳು ಸಾಂಪ್ರದಾಯಿಕ ಕುರಿ ಚರ‍್ಮದ ಉಡುಪನ್ನು ದರಿಸಿದರೆ, ಮಹಿಳಾ ಬುಸೊಗಳು ಗಂಡಸರ ಪ್ಯಾಂಟುಗಳ ಕೆಳಗೆ ಉಣ್ಣೆಯ ಕಾಲುಡುಪುಗಳನ್ನು ಮತ್ತು ದೈತ್ಯಾಕಾರದ ಮುಕವಾಡವನ್ನು ತೊಡುತ್ತಾರೆ.

ಬುಸೊ ಮುಕವಾಡವು ತೊಟ್ಟವರ ಹೊರನೋಟವನ್ನು ಬದಲಿಸುವುದಶ್ಟೇ ಅಲ್ಲ, ಮುಕವಾಡದ ಹಿಂದಿರುವ ಬುಸೊ ವ್ಯಕ್ತಿಯ ವ್ಯಕ್ತಿತ್ವವನ್ನೂ ಬದಲಿಸುತ್ತದೆ ಎನ್ನುತ್ತಾರೆ ಈ ದೈತ್ಯ ಮುಕವಾಡವನ್ನು ತಯಾರಿಸುವ ಎಂಗಲ್ಬರ‍್ಟ್ ಅಂಟಾಲ್‌. ಹಾಗಾಗಿ ಪ್ರತಿಯೊಬ್ಬ ಬುಸೊಗೂ ಪ್ರತ್ಯೇಕ ಹಾಗೂ ನಿರ‍್ದಿಶ್ಟ ಮುಕವಾಡವನ್ನು ಕೆತ್ತಲಾಗುತ್ತದೆ.

ಈ ಉತ್ಸವದಲ್ಲಿ ಇತ್ತೀಚೆಗೆ ಕೆಲವೇ ಹೆಣ್ಣು ಬುಸೊಗಳು ಬಾಗವಹಿಸುತ್ತಿದ್ದು, ಸಾಮಾನ್ಯವಾಗಿ ಹೆಣ್ಣುಮಕ್ಕಳು ಒಟ್ಟೋಮಾನ್ ಟರ‍್ಕ್ ಶೈಲಿಯ ಬಟ್ಟೆಗಳನ್ನು ತೊಡುತ್ತಾರೆ.

ಆಚರಣೆಯ ಹೊತ್ತಿನಲ್ಲಿ ಕಟ್ಟಳೆಗಳಿಗೆ ಕೇಳುವವರಿಲ್ಲ!

ಉತ್ಸವದ ದಿನಗಳಲ್ಲಿ ಎಲ್ಲಾ ರೀತಿಯ ಕಾನೂನು ಕಟ್ಟಳೆಗಳನ್ನು ಕಡೆಗಣಿಸಲಾಗುತ್ತಿದ್ದು ಎಲ್ಲದಕ್ಕೂ ಅವಕಾಶವಿದೆ. ಇದರಿಂದಾಗಿಯೇ ಅಳಿವಿನಂಚಿನಲ್ಲಿರುವ ಸೋಕ್ಸಿ ಪಂಗಡ ಇಂದಿಗೂ ಬದುಕುಳಿದಿದೆ ಎನ್ನುವುದು ಕೆಲವರ ವಾದ. ಬುಸೊಜರಾಸ್ ಉತ್ಸವದ ದಿನಗಳಲ್ಲಿ ಬಸಿರಾಗುವ ಹೆಣ್ಣುಮಕ್ಕಳಿಗೆ ಯಾವುದೇ ಪ್ರಶ್ನೆಗಳನ್ನು ಕೇಳವಂತಿಲ್ಲ!

ವಾರದ ಕಾಲ ನಡೆಯುವ ಉತ್ಸವದ ಸಮಯದಲ್ಲಿ ಹಲವಾರು ಸಾಂಪ್ರದಾಯಿಕ ಸಂಗೀತ ಪ್ರದರ‍್ಶನಗಳು, ವಿವಿದ ಪೋಶಾಕಿನ ಜಾನಪದ ನ್ರುತ್ಯ, ಬುಸೊ ಮೆರವಣಿಗೆ ಅಲ್ಲದೇ ಅಪಾಯಕಾರಿ ಆಟಗಳು ಕೂಡ ನಡೆಯುತ್ತವೆ. ಉತ್ಸವದಲ್ಲಿ ಪಾಲ್ಗೊಳ್ಳುವ ಬುಸೊಗಳು ಸಮ್ರುದ್ದವಾಗಿ ಕುಡಿದು ಬಂದಿರುತ್ತಾರೆ.

ಇಲ್ಲಿಗೆ ಬರುವ ನೋಡುಗರು ಆಚರಣೆಯನ್ನು ದೂರದಿಂದ ನೋಡಿಕೊಂಡು ಹೋಗುವುದು ಅಸಾದ್ಯ

ಬುಸೊಜರಾಸ್ ಉತ್ಸವವನ್ನು ನೋಡಲು ಬರುವ ವೀಕ್ಶಕರು ಅಲ್ಲಿ ನಡೆಯುವುದನ್ನು ದೂರದಿಂದ ನೋಡಿ ಆನಂದಿಸಲು ಸಾದ್ಯವಿಲ್ಲ. ಬುಸೊಗಳು ಎಲ್ಲರನ್ನೂ ಒಂದಿಲ್ಲೊಂದು ರೀತಿಯಲ್ಲಿ ಸೆಳೆದು, ಉತ್ಸವದಲ್ಲಿ ಬಾಗಿಯಾಗುವಂತೆ ಮಾಡುತ್ತಾರೆ. ವೀಕ್ಶಕರ ಮೇಲೆ ಹಿಟ್ಟನ್ನು ಎರಚಿ, ದೊಡ್ಡ ದೊಡ್ಡ ಪ್ಲಾಸ್ಕಿನಲ್ಲಿನ ಮಸಾಲೆಯುಕ್ತ ವೈನ್ ಕುಡಿಸಿ, ಎಳೆದಾಡಿ ಕುಶಿ ಪಡುತ್ತಾರೆ.

ಈ ಹಬ್ಬದಲ್ಲಿ ಪಾಲ್ಗೊಳ್ಳಲು ಉಚಿತ ಪ್ರವೇಶವಿದ್ದು, ಮೊಹಾಕ್ಸ್‌ನಲ್ಲಿ ಉಳಿದುಕೊಳ್ಳಲು ಮೊದಲೇ ವ್ಯವಸ್ಯೆ ಮಾಡಿಕೊಂಡರೆ ಸಾಕು. ಹಂಗರಿಯ ರಾಜದಾನಿ ಬುಡಾಪೆಸ್ಟ್‌ನಿಂದ 2 ಗಂಟೆಗಳ ಪ್ರಯಾಣಿಸಿದರೆ ಮೊಹಾಕ್ಸ್‌ ತಲುಪಬಹುದು.ಇಲ್ಲಿಗೆ ಬರುವ ಹೆಚ್ಚಿನ ಮಂದಿ ವೈನ್‌ಗಾಗಿ ಹೆಸರುವಾಸಿ ಆಗಿರುವ ಪಕ್ಕದ ವಿಲೇನಿ ಪಟ್ಟಣದಲ್ಲಿ ಉಳಿದುಕೊಳ್ಳುತ್ತಾರೆ.

(ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: