ಬಿಸಿಲ ಬೇಗೆ, ಪಾರಾಗಿ ಹೀಗೆ

ಮಾರಿಸನ್ ಮನೋಹರ್.

ಬೇಸಿಗೆ, Summer

ಬೇಸಿಗೆಯಲ್ಲಿ ಎಲ್ಲರಿಗೂ ಒಂದು ಸಲವಾದರೂ ಬಿಸಿಲಿನ ತಾಪದ ಕೂಸಾದ ‘ಜಳ’ ಬಡಿದೇ ಇರುತ್ತದೆ (sunstroke or heatstroke). ಇದಕ್ಕೆ ಮುಕ್ಯ ಕಾರಣ: ಸುತ್ತುಮುತ್ತಲಲ್ಲಿ ಬಿಸಿ ಏರುವುದು ಹಾಗೂ ನಮ್ಮ ಮೈಯಲ್ಲಿ ನೀರಿನ ಮಟ್ಟ ಕಡಿಮೆಯಾಗುವುದು. ಮೈಯಲ್ಲಿ ನೀರಿನ ಮಟ್ಟ ಕಡಿಮೆಯಾಗುವಾಗ ನಮ್ಮ ಮೈಯ ಏರ‍್ಪಾಡು, ನೆತ್ತರ ಹರಿವಿನಲ್ಲಿರುವ (blood circulation) ನೀರನ್ನು ಎಳೆದು ತನ್ನ ನೀರಿನ ಬೇಡಿಕೆ ಪೂರೈಸಿಕೊಳ್ಳುತ್ತದೆ. ಬೇಸಿಗೆಯ ಬಿರುಬಿಸಿಲಿನಲ್ಲಿ ಬೈಕಿನ ಮೇಲೆ ಮುಂಜಾನೆಯಿಂದ ಹೊತ್ತು ಮುಣುಗುವವರೆಗೆ ಸುತ್ತಿದ ನನಗೆ ಸಂಜೆ ಮೈಬಿಸಿಯಾದಾಗಲೇ ಜಳದ ಪಾಡು ಗೊತ್ತಾಗಿದ್ದು! ಬಿರು ಬೇಸಿಗೆಯ ತಾಪದಿಂದ ಪಾರಾಗಲು ಹೀಗೆ ಮಾಡಬಹುದು:

  • ಬೇಸಿಗೆ ಬಿಸಿಯೊಂದಿಗೆ ಹೋರಾಡಲು ಹೇಳಿಮಾಡಿಸಿದಂತಹ ಸರಕೆಂದರೆ ತಾಜಾ ಮಜ್ಜಿಗೆ, ಎಳನೀರು, ಕಲ್ಲಂಗಡಿ ಹಣ್ಣು, ಸೌತೆಕಾಯಿ, ಕಬ್ಬಿನ ಹಾಲು, ಅನಾನಸ್ ಜ್ಯೂಸ್, ಕಿತ್ತಳೆ ಹಣ್ಣು, ಮೋಸಂಬಿ ಹಣ್ಣು. ಇವುಗಳನ್ನು ಹೆಚ್ಚಾಗಿ ಬಳಸಬೇಕು. ಹಳ್ಳಿಕಡೆ ಒಂದು ಲೋಟ ನೀರಿನೊಂದಿಗೆ ಒಂಚೂರು ಬೆಲ್ಲ ಕೊಡುತ್ತಾರೆ. ಇದು ಕೂಡ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಚೆನ್ನಾಗಿ ಕೆಲಸ ಮಾಡುತ್ತದೆ.
  • ಬೇಸಿಗೆಯಲ್ಲಿ ಮೊದಲು ಮಾಡಬೇಕಾದ ಕೆಲಸ ಎಂದರೆ ಊಟದಲ್ಲಿ ಉಪ್ಪಿನ ಮಟ್ಟವನ್ನು ತುಸು ತಗ್ಗಿಸುವುದು. ಬಿಸಿಲಿನಿಂದ ಮೈಯ ನೀರು ಆರಿ ಹೋಗುವುದರಿಂದ ಮೈಯ್ಯಲ್ಲಿನ ನೆತ್ತರು ಗಟ್ಟಿಯಾಗುತ್ತದೆ. ಉಪ್ಪಿನ ಮಟ್ಟ ಹೆಚ್ಚಾದರೆ ಕಿಡ್ನಿಗಳ ಮೇಲೆ ಸೋಸುವಿಕೆಯ ಒತ್ತಡ ಹೆಚ್ಚಾಗುತ್ತದೆ.
  • ಬಿಸಿನೀರಿನಲ್ಲಿ ಜಳಕ ಮಾಡುವುದನ್ನು ಹಂತಹಂತವಾಗಿ ಕಡಿಮೆ ಮಾಡಬೇಕು. ಉರಿಬಿಸಿಲಿನಲ್ಲಿ ಆಡಿ ದಣಿವಾಗಿದ್ದರೆ, ನೀರನ್ನು ಗಟಗಟ ಎಂದು ಒಂದೇ ಸಮನೆ ಎಂದಿಗೂ ಕುಡಿಯಬಾರದು. ಅರ‍್ದ ಗಂಟೆಗೊಮ್ಮೆ ನೀರನ್ನು ಕುಡಿಯುತ್ತಿರಬೇಕು. ಹೆಚ್ಚಾಗಿ ಹೊರಗಡೆ ತಿರುಗಾಡುವವರು, ಮೈಮುರಿದು ಕೆಲಸ ಮಾಡುವವರು ನೀರಿನ ಮಟ್ಟವನ್ನು ಸರಿಯಾಗಿ ಕಾಯ್ದುಕೊಳ್ಳಬೇಕು.
  • ಹೊಸ ಬಟ್ಟೆಯಲ್ಲಿ ಗಂಜಿ ಜಿಗುಟು, ಬಿಸಿ ಹೊರಹೋಗಲು ಬಿಡದು. ಆದ್ದರಿಂದ ಹೊಸಬಟ್ಟೆಗಳನ್ನು ನೀರಿನಲ್ಲಿ ಅದ್ದಿ ಅದರ ಗಂಜಿ ಹೋಗಿಸಿ, ಬಟ್ಟೆಯನ್ನು ಒಣಗಿಸಿ ಆಮೇಲೆ ಹಾಕಿಕೊಂಡರೆ ಬಟ್ಟೆಯಲ್ಲಿ ಗಾಳಿಯಾಡಿ ತುಸು ತಂಪೆನಿಸುತ್ತದೆ.
  • ಒಂದು ದಿನ ನಾನು ಕಲ್ಲಂಗಡಿ ಹಣ್ಣು ಕೊಳ್ಳುತ್ತಾ ಇರುವಾಗ, ಗಂಡ ಹೆಂಡತಿ ಜೋಡಿಯೊಂದು ಹಣ್ಣು ಮಾರುವವನೊಂದಿಗೆ ಜೋರು ದನಿಯಲ್ಲಿ ಮಾತಾಡುತ್ತಾ ಇದ್ದರು. ಆಗ ಗಂಡ “ಇವಕ್ಕೆಲ್ಲಾ ಇಂಜೆಶನ್ ಕೊಟ್ಟು ಹಣ್ಣು ಆಗೊ ಹಾಗೆ ಮಾಡ್ತಾರೆ” ಅಂತ ನನ್ನ ಕಡೆ ನೋಡಿ ಅಂದ. ಈಗ ಬಿರು ಬಿಸಿಲಿನೊಂದಿಗೆ ಪೌಡರ್ ಹಾಗೂ ಕೆಮಿಕಲ್ ನಲ್ಲಿ ಅದ್ದಿ ಹಣ್ಣು ಮಾಡಿದ ಮಾವಿನಹಣ್ಣುಗಳು ಬರುತ್ತವೆ. ಹೊರಗೆ ನೋಡಿದರೆ ಹೊಳೆಯುವ ಅರಿಶಿನ ಕೆಂಪು ಬಣ್ಣ. ಒಳಗೆ ಇನ್ನೂ ಹಸಿಬಿಳಿ ಬಣ್ಣ. ತಿಂದರೆ ಕೆಟ್ಟಹುಳಿ, ಬಾಯಿಯ ರುಚಿಯೂ ಕೆಡುವುದು. ಅಂತದ್ದು ಆಗಬಾರದೆಂದು 5 ವರುಶಗಳಿಂದ ಮಾವಿನತೋಪು ಹೊಂದಿರುವವರ  ಕಡೆಯಿಂದ ನೇರವಾಗಿ ಹಣ್ಣನ್ನು ಕರೀದಿ ಮಾಡುತ್ತಾ ಇದ್ದೇವೆ. ಮನಸಿಗೆ ನಮ್ಮದಿ ಇದೆ, ಹಣ್ಣುಗಳಲ್ಲಿ ರುಚಿಯೂ ಇದೆ. ಮಾವಿನ ಹಣ್ಣು ಕರೀದಿಸುವವರು ತಮಗೆ ಗೊತ್ತಿರುವವರಿಂದ ನೇರ ಕರೀದಿ ಮಾಡಿದಶ್ಟೂ ಪೌಡರ್ ಕೆಮಿಕಲ್ ಹಾಕದ ಹಣ್ಣು ಸಿಗುವ ಅವಕಾಶ ಹೆಚ್ಚು.
  • ಬೇಸಿಗೆಯಲ್ಲಿ ಹತ್ತಿಬಟ್ಟೆ, ಬಿಳಿ ಬಣ್ಣದ ಉಡುಪುಗಳನ್ನು ತೊಡಬೇಕು. ಸ್ಪೇನಿನಲ್ಲಿ ಮನೆಯ ಬಿಸಿ ಕಡಿಮೆ ಮಾಡಲು ಮನೆಗಳಿಗೆ ಬಿಳಿ ಬಣ್ಣ ಹೊಡೆಯುತ್ತಾರೆ. ಇದರಿಂದ ಹೊರಗಿನ ಬಿಸಿಗಿಂತ ಮನೆ ಒಳಗಿನ ಬಿಸಿ ಎರಡು ಡಿಗ್ರಿಗಳಶ್ಟು ಕಡಿಮೆಯಾಗುತ್ತದೆ.
  • ಬೇಸಿಗೆಯಲ್ಲಿ, ಕಾರಿನ ಒಳಗಡೆ ಬಿಸಿ ತುಂಬಾ ಬೇಗನೆ ಏರುತ್ತದೆ. ಹೊರಗಡೆ ಬಿಸಿ 21 ಡಿಗ್ರಿಯಿದ್ದರೆ ಕಾರಿನ ಒಳಗೆ ಅದು 49 ಡಿಗ್ರಿ ಇರುತ್ತದೆ. ದೂರ ಪ್ರಯಾಣಕ್ಕೆ ಹೋಗುವವರು ಕಾರಿನಲ್ಲಿ ಬೇಕಾದಶ್ಟು ನೀರು ಇಟ್ಟುಕೊಳ್ಳುವುದನ್ನು ಮರೆಯುವಂತಿಲ್ಲ. ಏ ಸಿ ಯಿದ್ದರೆ ಹಾಕುವುದು, ಏ ಸಿ ಇಲ್ಲದಿದ್ದರೆ ಬಿಸಿ ಹೊರಹೋಗಲು ಕಾರಿನ ಕಿಟಕಿಗಳನ್ನು ತೆರೆದಿಡಬೇಕು.
  • ಹಳ್ಳಿಗಳಲ್ಲಿ ಟಿನ್ ಶೀಟುಗಳ ಮನೆಗಳಲ್ಲಿ ಇರುವವರು, ಟಿನ್ ಶೀಟುಗಳ ಮೇಲೆ ಹಳ್ಳಿಗಳಲ್ಲಿ ತುಂಬ ಸುಲಬವಾಗಿ ಸಿಗುವ ಜೋಳದ ದಂಟು, ಕಳವೆಯ ಹುಲ್ಲನ್ನು (ಬತ್ತದ ಹುಲ್ಲು) ಹರವಿ ಮನೆಯೊಳಗಿನ ಬಿಸಿಯನ್ನು ತಗ್ಗಿಸಬಹುದು.
  • ಚಿಕ್ಕವರಿದ್ದಾಗ ಬೇಸಿಗೆ ರಜದಲ್ಲಿ ಮದ್ಯಾನದವರೆಗೂ ಕ್ರಿಕೆಟ್ ಆಡುತ್ತಿದ್ದಾಗ ಕೆಲವರಿಗೆ ಮೂಗಿನಿಂದ ನೆತ್ತರು ಬರುತ್ತಿದ್ದದ್ದು ಉಂಟು. ಮೂಗು ಒಣಗಾಳಿಯನ್ನು ಉಸಿರಾಡಿದಾಗ ಒಣಗಿ ಹೋಗುತ್ತದೆ. ಆಗ ಮೂಗಿನ ಹೊಳ್ಳೆಯ ಒಳಗಿನ ಪದರ ಹರಿಯುತ್ತದೆ. ಆಗ ಮೂಗಿನಿಂದ ನೆತ್ತರು ಹರಿಯಲು ಶುರುವಾಗುತ್ತದೆ. ಇದಕ್ಕೆ ಮೊದಲ ಮದ್ದೆಂದರೆ, ನೆರಳಿಗೆ ಹೋಗಿ ಮೂಗಿನ ಮೇಲೆ ತುಸು ಹಸಿಮಾಡಿದ ತೆಳ್ಳನೆಯ ಟವೆಲ್ ಇಲ್ಲವೇ ಕರ‍್ಚಿಪ್ ಹಾಕಬೇಕು (ಮೂಗನ್ನು ಪೂರಾ ಮುಚ್ಚಬಾರದು), ಮೂಗನ್ನು ಮೇಲೆ ಮಾಡಿ ಮಲಗಬೇಕು ಮತ್ತು ನೀರು ಕುಡಿಯುತ್ತಾ ಮೈಯ ನೀರಿನ ಮಟ್ಟವನ್ನು ಏರಿಸಬೇಕು.
  • ಗೆದ್ದಲುಗಳ ಹುತ್ತಗಳನ್ನು ಎಲ್ಲರೂ ನೋಡಿರುತ್ತಾರೆ. ಈ ಗೆದ್ದಲುಗಳು ತಮ್ಮ ಮನೆ ಕಟ್ಟಿಕೊಳ್ಳುವುದು ಇಂಜಿನಿಯರುಗಳಿಗೆ ಮಾದರಿಯಾಗಬಲ್ಲದು. ಬಾರತದಂತಹ ಬಿಸಿ ಹೆಚ್ಚಾಗಿರುವ ಜಾಗದಲ್ಲಿ ಗೆದ್ದಲಿನ ಹುತ್ತದಿಂದ ಒಂದು ಸುಳಿವು ಪಡೆಯಬಹುದು. ಗೆದ್ದಲುಗಳು ತಮ್ಮ ಮನೆಗಳಿಂದ ಬಿಸಿ ಹೊರಹಾಕಲು ಉದ್ದನೆಯ ಚಿಮಣಿಗಳಂತಹ ಕೊಳವೆಯಾಕಾರದ ತೂತುಗಳನ್ನು ಮಾಡಿಕೊಳ್ಳುತ್ತವೆ. ಇದರಿಂದ ನೆಲದೊಳಗೆ ಉಂಟಾದ ಬಿಸಿ ಆ ಕೊಳವೆಗಳಿಂದ ಏರುತ್ತಾ ಹೊರಗೆ ಹೋಗುತ್ತದೆ. ಏಕೆಂದರೆ ಬಿಸಿ ಗಾಳಿಯ ತೂಕ ತಂಗಾಳಿಯ ತೂಕಕ್ಕಿಂತ ಕಡಿಮೆಯಾಗಿರುತ್ತದೆ. ಬಿಸಿಗಾಳಿ ಹಗುರ, ತಂಗಾಳಿ ಬಾರ.

( ಚಿತ್ರ ಸೆಲೆ : food.ndtv.com

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: