ಬಸವಣ್ಣನ ವಚನಗಳ ಓದು – 4ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ಕಲ್ಲ ನಾಗರ ಕಂಡಡೆ
ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ
ಕೊಲ್ಲೆಂಬರಯ್ಯ

ಉಂಬ ಜಂಗಮ ಬಂದಡೆ
ನಡೆಯೆಂಬರು
ಉಣ್ಣದ ಲಿಂಗಕ್ಕೆ
ಬೋನವ ಹಿಡಿಯೆಂಬರಯ್ಯ

ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದಡೆ
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ

ಜನರು ತಮ್ಮ ನಿತ್ಯ ಜೀವನದಲ್ಲಿ ನಂಬಿಕೆ ಮತ್ತು ವಾಸ್ತವದ ನಡುವೆ ತೊಳಲಾಡುವಾಗ, ಅವರಲ್ಲಿ ಕಂಡು ಬರುವ ಇಬ್ಬಗೆಯ ನಡೆನುಡಿಗಳನ್ನು ಈ ವಚನದಲ್ಲಿ ಹೇಳಲಾಗಿದೆ.

“ನಂಬಿಕೆ“ ಎಂದರೆ ಜನರು ಕಲ್ಪಿಸಿಕೊಂಡಿರುವ ಸಂಗತಿಗಳು ಮತ್ತು ಮಾಡುತ್ತಿರುವ ಆಚರಣೆಗಳು.

“ವಾಸ್ತವ” ಎಂದರೆ ನಿಸರ‍್ಗದಲ್ಲಿರುವ ಎಲ್ಲಾ ಬಗೆಯ ವಸ್ತುಗಳು ಮತ್ತು ಜೀವರಾಶಿಗಳು.

( ಕಲ್ಲು=ಬಂಡೆ/ಅರೆ/ಶಿಲೆ; ನಾಗರು=ನಾಗರ ಹಾವು/ನಾಗಸರ‍್ಪ; ಕಲ್ಲ ನಾಗರ=ಕಲ್ಲಿನಿಂದ ಮಾಡಿರುವ ನಾಗರ ಹಾವಿನ ವಿಗ್ರಹ/ಪ್ರತಿಮೆ/ಮೂರ‍್ತಿಯನ್ನು; ಕಾಣ್=ನೋಡು; ಕಂಡಡೆ=ನೋಡಿದರೆ; ಹಾಲ್+ಅನ್+ಎರೆ+ಎಂಬರು; ಹಾಲ್=ಹಾಲು; ಅನ್=ಅನ್ನು; ಎರೆ=ಸುರಿ/ಹೊಯ್ಯು/ಹಾಕು; ಎನ್=ಹೇಳು/ನುಡಿ; ಎಂಬರು=ಎನ್ನುವರು/ಎಂದು ಹೇಳುವರು; ದಿಟ=ನಿಜ/ಸತ್ಯ/ವಾಸ್ತವ; ದಿಟದ ನಾಗರ=ಜೀವಂತವಾಗಿರುವ ನಾಗರಹಾವನ್ನು; ಕೊಲ್+ಎಂಬರ್+ಅಯ್ಯ; ಕೊಲ್=ಜೀವ ತೆಗೆ/ಪ್ರಾಣ ತೆಗೆ/ಸಾಯಿಸು; ಅಯ್ಯ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯ=ನಾಗರಹಾವು ಜನಸಮುದಾಯದ ಮನದ ಕಲ್ಪನೆಯಲ್ಲಿ ನಾಗದೇವತೆಯಾಗಿ ನೆಲೆಗೊಂಡಿದೆ. ಜೀವಂತವಾಗಿರುವ ನಾಗರಹಾವನ್ನು ಹೊಡೆದು ಕೊಂದರೆ ಇಲ್ಲವೇ ಅದಕ್ಕೆ ಪೆಟ್ಟನ್ನು ಮಾಡಿ ನೋಯಿಸಿದರೆ, ಹಾಗೆ ಮಾಡಿದ ವ್ಯಕ್ತಿ ಇಲ್ಲವೇ ಅವನ ಕುಟುಂಬದವರು ಜೀವನದಲ್ಲಿ ತೊಗಲಿನ/ಚರ‍್ಮದ ರೋಗಗಳಿಂದ ಮತ್ತು ಹೆಂಗಸರು ಬಂಜೆತನದಿಂದ ನರಳಬೇಕಾಗುತ್ತದೆ ಎಂಬ ಹೆದರಿಕೆಯು ಜನಮನದಲ್ಲಿದೆ. ಆದುದರಿಂದ ನಾಗದೇವತೆಯ ಪ್ರತಿರೂಪದಂತಿರುವ ಕಲ್ಲ ನಾಗರಕ್ಕೆ ಹಾಲನ್ನು ಎರೆದು ಪೂಜಿಸುತ್ತಾರೆ. ಈ ಬಗೆಯ ಆಚರಣೆಯಿಂದ ತೊಗಲಿನ ಕಾಯಿಲೆಗಳು ಗುಣವಾಗುವುದೆಂಬ/ಬಂಜೆತನ ನಿವಾರಣೆಯಾಗುವುದೆಂಬ/ವ್ಯಕ್ತಿಯ ಜೀವನದಲ್ಲಿ ಎಲ್ಲಾ ರೀತಿಯಿಂದಲೂ ಒಳಿತು ಉಂಟಾಗುವುದೆಂಬ ನಂಬಿಕೆಯು ಜನಮನದಲ್ಲಿದೆ. ಈ ನೆಲೆಯಲ್ಲಿ ಕಲ್ಲ ನಾಗರದ ಪೂಜೆಯು ಜನಸಮುದಾಯದ “ನಂಬಿಕೆಯ ಜಗತ್ತನ್ನು” ಸೂಚಿಸುತ್ತದೆ.

ಜೀವಂತವಾಗಿರುವ ನಾಗರ ಹಾವು ಜನರ ಮುಂದೆ ಕಾಣಿಸಿಕೊಂಡಾಗ, ಅದು ಒಂದು ವೇಳೆ ಕಚ್ಚಿದರೆ , ಅದರ ನಂಜಿನಿಂದ ಸಾವು ಉಂಟಾಗುವುದೆಂಬ ಹೆದರಿಕೆಯಿಂದ ತತ್ತರಿಸುತ್ತ/ನಡುಗುತ್ತ ನಾಗರಹಾವನ್ನು “ಕೊಲ್ಲಿ/ಹೊಡಿಯಿರಿ/ಹೊಡೆದು ಸಾಯಿಸಿ” ಎಂದು ಜನರು ಅರಚುತ್ತಾರೆ. ಈ ನೆಲೆಯಲ್ಲಿ ಜನರ ಅರಚುವಿಕೆಯು “ವಾಸ್ತವ ಜಗತ್ತನ್ನು” ಸೂಚಿಸುತ್ತದೆ. ಏಕೆಂದರೆ ನಾಗರ ನಂಜಿನಿಂದ ಸಾವು ನಿಶ್ಚಿತ.

ನಿಸರ‍್ಗದ ವಸ್ತು ಮತ್ತು ಜೀವಿಗಳಿಂದ ತುಂಬಿರುವ “ವಾಸ್ತವ ಜಗತ್ತು“ ಮತ್ತು ಜನರು ತಾವಾಗಿಯೇ ಕಲ್ಪಿಸಿಕೊಂಡು ಆಚರಿಸುತ್ತಿರುವ “ನಂಬಿಕೆಯ ಜಗತ್ತು“- ಇವೆರಡರ ನಡುವೆ ಬಾಳುತ್ತಿರುವುದರಿಂದ, ಇಂತಹ ಇಬ್ಬಗೆಯ ನಡೆನುಡಿಗಳು ಜನರ ಬದುಕಿನಲ್ಲಿ ಸಹಜವಾಗಿ ಕಂಡುಬರುತ್ತವೆ.

ಉಣ್=ತಿನ್ನು/ಮೆಲ್ಲು/ಸೇವಿಸು; ಉಂಬ=ಊಟ ಮಾಡುವ; ಜಂಗಮ=ವ್ಯಕ್ತಿಗೆ/ಸಹಮಾನವರಿಗೆ/ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಹ ನಡೆನುಡಿಗಳನ್ನು ಜನರಿಗೆ ತಿಳಿಯ ಹೇಳುತ್ತಾ, ಒಂದೆಡೆಯಿಂದ ಮತ್ತೊಂದೆಡೆಗೆ ನಿರಂತರವಾಗಿ ಸಂಚರಿಸುತ್ತಿರುವ ಶಿವಶರಣ; ಬಂದಡೆ=ಬಂದರೆ; ನಡೆ+ಎಂಬರು; ನಡೆ=ಮುಂದಕ್ಕೆ ಹೋಗು; ಉಣ್ಣದ=ತಿನ್ನದ/ಮೆಲ್ಲದ/ಸೇವಿಸಿದ; ಲಿಂಗ=ಶಿವ/ಈಶ್ವರನ ಸಂಕೇತವಾದ ವಿಗ್ರಹ/ಪ್ರತಿಮೆ/ಮೂರ‍್ತಿ; ಬೋನ=ಅನ್ನ/ಆಹಾರ/ತಿನಸು/ಉಣಿಸು; ಹಿಡಿ+ಎಂಬರ್+ಅಯ್ಯಾ; ಹಿಡಿ=ಮುಂದೆ ಇಡು/ನೀಡು;

ಉಂಬ ಜಂಗಮ ಬಂದಡೆ ನಡೆಯೆಂಬರಯ್ಯ ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯ=ಉಣಿಸು ತಿನಸುಗಳನ್ನು ಪಡೆದು ಹಸಿವನ್ನು ನೀಗಿಸಿಕೊಳ್ಳಲೆಂದು ತಮ್ಮ ಮನೆಯ ಬಳಿಗೆ ಬರುವ ಜಂಗಮನಿಗೆ ಉಣಲಿಕ್ಕದೆ, ಜನರು ಅವನನ್ನು ಹೊರಹಾಕುವರು/ “ಮುಂದಕ್ಕೆ ಹೋಗು” ಎಂದು ಹೇಳಿ ಸಾಗಹಾಕುವರು. ಆದರೆ ಕಲ್ಲು/ಮಣ್ಣು/ಮರ/ಲೋಹದಿಂದ ಮಾಡಿರುವ ವಿಗ್ರಹರೂಪದ ಲಿಂಗದ ಮುಂದೆ ಉಣಿಸು ತಿನಸುಗಳನ್ನು ಜನರು ಎಡೆಯಾಗಿ ನೀಡುವರು/ಇಡುವರು. ಏಕೆಂದರೆ ಜೀವಂತ ಜಂಗಮನಿಗಿಂತ ಜಡರೂಪಿಯಾದ ದೇವರೇ ಜನರ ಪಾಲಿಗೆ ದೊಡ್ಡವನಾಗಿರುತ್ತಾನೆ. ಸಹಮಾನವರ ಹಸಿವು/ಬಡತನ/ಸಂಕಟವನ್ನು ಕಡೆಗಣಿಸಿ ದೇವರನ್ನು ದೊಡ್ಡದಾಗಿ ಮೆರೆಸುವ ಜನರ ನಿಲುವನ್ನು ವಚನಕಾರನು ಈ ಬಗೆಯ ನಡೆನುಡಿಗಳಲ್ಲಿ ಗುರುತಿಸಿದ್ದಾನೆ.

ಕೂಡಲಸಂಗ=ಶಿವ/ಈಶ್ವರ/ಬಸವಣ್ಣನ ಮೆಚ್ಚಿನ ದೇವರು; ಶರಣ=ಒಳ್ಳೆಯ ನಡೆನುಡಿಗಳಿಂದ ಶಿವನನ್ನು ಪೂಜಿಸುವವನು; ಉದಾಸೀನ=ಅಸಡ್ಡೆ/ತಿರಸ್ಕಾರ/ಕಡೆಗಣಿಸುವಿಕೆ; ಮಾಡಿದಡೆ=ಮಾಡಿದರೆ; ಕಲ್ಲ=ಕಲ್ಲನ್ನು/ಬಂಡೆಯನ್ನು/ಶಿಲೆಯನ್ನು; ತಾಗು=ಅಪ್ಪಳಿಸು/ಡಿಕ್ಕಿ ಹೊಡೆ/ಮೇಲೆ ಬೀಳು; ಮಿಟ್ಟೆ+ಅಂತೆ+ಅಪ್ಪರ್+ಅಯ್ಯ; ಮಿಟ್ಟೆ=ಮಣ್ಣಿನ ಉಂಡೆ/ಹೆಂಟೆ; ಕಲ್ಲ ತಾಗಿದ ಮಿಟ್ಟೆ=ಕಲ್ಲಿಗೆ ಬಡಿದ ಮಣ್ಣಿನ ಉಂಡೆಯು ಪುಡಿಪುಡಿಯಾಗುತ್ತದೆ; ಅಂತೆ=ಹಾಗೆ/ಆ ರೀತಿ; ಅಪ್ಪರ್=ಆಗುವರು/ಆಗುತ್ತಾರೆ;

ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ=ಒಳ್ಳೆಯ ನಡೆನುಡಿಗಳನ್ನೇ ದೇವರೆಂದು ತಿಳಿದು, ಸಹಮಾನವರ ಮತ್ತು ಸಮಾಜದ ಒಳಿತಿಗಾಗಿ ಬಾಳುತ್ತಿರುವ ಶಿವಶರಣರನ್ನು ಕಡೆಗಣಿಸುವ/ಅಲ್ಲಗಳೆಯುವ/ತಿರಸ್ಕರಿಸುವ/ಅಪಮಾನಿಸುವ ವ್ಯಕ್ತಿಗಳು ನೋವಿಗೆ/ಸಂಕಟಕ್ಕೆ ಗುರಿಯಾಗುತ್ತಾರೆ ಎಂಬ ಎಚ್ಚರಿಕೆಯ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ.)

ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯ ಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

ನಿಜ ಜೀವನದಲ್ಲಿ/ನಿತ್ಯದ ಬದುಕಿನಲ್ಲಿ ಮಾನವ ಸಮುದಾಯವು ಒಲವು ನಲಿವು ನೆಮ್ಮದಿಯಿಂದ ಬಾಳಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇರಬೇಕಾದ ಒಳ್ಳೆಯ ನಡೆನುಡಿಗಳನ್ನು ಈ ವಚನದಲ್ಲಿ ಹೇಳಲಾಗಿದೆ.

(ಕಳ್=ಎಗರಿಸು/ದೋಚು/ಅಪಹರಿಸು/ಲಪಟಾಯಿಸು; ಬೇಡ=ಬೇಕಾಗಿಲ್ಲ/ಸಲ್ಲದು; ಕಳಬೇಡ=ಕಳ್ಳತನವನ್ನು ಮಾಡಬೇಡ/ಇತರರ ಒಡವೆ ವಸ್ತು/ಆಸ್ತಿಪಾಸ್ತಿ/ಹಣಕಾಸನ್ನು ಕದಿಯಬೇಡ; ಕೊಲ್=ಜೀವ ತೆಗೆ/ಸಾಯಿಸು/ಪ್ರಾಣ ತೆಗೆ; ಕೊಲಬೇಡ=ಜೀವಿಗಳನ್ನು ಕೊಲ್ಲಬೇಡ/ಹಿಂಸಿಸಬೇಡ; ಹುಸಿ=ಸುಳ್ಳು/ಸಟೆ/ಇಲ್ಲದ್ದನ್ನು ಇದೆಯೆಂದು ಹೇಳುವುದು – ಇರುವುದನ್ನು ಇಲ್ಲವೆಂದು ಹೇಳುವುದು; ನುಡಿ=ಮಾತು/ಸೊಲ್ಲು; ಹುಸಿಯ ನುಡಿಯಲು ಬೇಡ=ಸುಳ್ಳನ್ನು ಆಡಬೇಡ;

ಮುನಿ=ಸಿಟ್ಟಾಗು/ಕೋಪಗೊಳ್ಳು/ಆಕ್ರೋಶಪಡು; ಮುನಿಯ ಬೇಡ=ಕೋಪದಿಂದ ಕೆರಳಬೇಡ; ಅನ್ಯ=ಬೇರೆಯ/ಮತ್ತೊಂದು/ಮತ್ತೊಬ್ಬ; ಅನ್ಯರು=ಇತರರು/ಬೇರೆಯವರು; ಅಸಹ್ಯ+ಪಡಬೇಡ; ಅಸಹ್ಯ=ತಿರಸ್ಕಾರ/ಕಡೆಗಣನೆ/ಕೀಳಾಗಿ ಕಾಣುವುದು; ಪಡು=ಹೊಂದು/ತಾಳು/ತಳೆ; ಪಡಬೇಡ=ತಳೆಯ ಬೇಡ/ಹೊಂದಬೇಡ; ಅನ್ಯರಿಗೆ ಅಸಹ್ಯ ಪಡಬೇಡ=ಇತರರನ್ನು/ಬೇರೆಯವರನ್ನು ಕೀಳಾಗಿ ಕಾಣಬೇಡ ಮತ್ತು ನಡೆಸಿಕೊಳ್ಳಬೇಡ; ತನ್ನ=ನಿನ್ನನ್ನು ನೀನು; ಬಣ್ಣನೆ=ಹೊಗಳಿಕೆ/ಸ್ತುತಿ; ತನ್ನ ಬಣ್ಣಿಸಬೇಡ=ನಿನ್ನ ನಡೆನುಡಿಗಳನ್ನೇ ದೊಡ್ಡದಾಗಿ ಹೇಳಿಕೊಂಡು, ಎಲ್ಲರಿಗಿಂತ ನೀನೇ ಮೇಲು ಎಂದು ಹೊಗಳಿಕೊಳ್ಳಬೇಡ;

ಇದಿರ=ನಿನ್ನ ಮುಂದಿರುವವರನ್ನು/ನಿನ್ನ ಜತೆ ಒಡನಾಡುವವರನ್ನು/ವ್ಯವಹರಿಸುವವರನ್ನು; ಹಳಿ=ನಿಂದಿಸು/ತೆಗಳು/ಬಯ್ಯುವುದು; ಇದಿರ ಹಳಿಯಲು ಬೇಡ=ನಿನ್ನ ಜತೆ ಒಡನಾಡುವವರನ್ನು/ ವ್ಯವಹರಿಸುವವರನ್ನು ಕಡೆಗಣಿಸಿ ನಿಂದಿಸಬೇಡ/ಬಯ್ಯಬೇಡ; ಇದೇ=ಈ ಬಗೆಯ ನಡೆನುಡಿಗಳೇ/ಈ ರೀತಿಯ ನಡವಳಿಕೆಯೇ; ಅಂತರಂಗ=ಮನಸ್ಸು;

ಶುದ್ಧಿ=ಚೊಕ್ಕಟವಾಗಿರುವುದು/ಶುಚಿಯಾಗಿರುವುದು; ಅಂತರಂಗ ಶುದ್ಧಿ=ಮನಸ್ಸನ್ನು ಚೊಕ್ಕಟವಾಗಿ ಇಟ್ಟುಕೊಂಡಿರುವುದು ಎಂದರೆ ಮನದಲ್ಲಿ ಮೂಡುವ ಕೆಟ್ಟ ಸಂಗತಿ/ವಿಚಾರಗಳನ್ನು ನಿವಾರಿಸಿಕೊಂಡು, ಒಳ್ಳೆಯ ಸಂಗತಿ/ವಿಚಾರಗಳನ್ನು ಎಚ್ಚರದಿಂದ ಕಾಪಾಡಿಕೊಳ್ಳುವುದು/ಮನದಲ್ಲಿ ಒಳ್ಳೆಯ ಅರಿವನ್ನು ಹೊಂದಿರುವುದು;

ಬಹಿರಂಗ=ಹೊರಗಡೆ/ಹೊರಗಿನದು; ಬಹಿರಂಗ ಶುದ್ಧಿ=ವ್ಯಕ್ತಿಯು ಸಾಮಾಜಿಕವಾಗಿ ಇತರರೊಡನೆ ವ್ಯವಹರಿಸುವಾಗ/ಒಡನಾಡುವಾಗ ಒಳ್ಳೆಯ ನಡೆನುಡಿಗಳಿಂದ ವರ‍್ತಿಸುವುದು/ತನಗೆ ಒಳಿತನ್ನು ಬಯಸುವಂತೆಯೇ ಇತರರ ಒಳಿತಿಗಾಗಿಯೂ ದುಡಿಯುವುದು; ಕೂಡಲಸಂಗಮದೇವರ್+ಅನ್+ಒಲಿಸುವ; ಕೂಡಲಸಂಗಮದೇವ=ಶಿವ/ಈಶ್ವರ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತ ನಾಮ; ಅನ್=ಅನ್ನು; ಒಲಿ=ಮೆಚ್ಚು/ಒಪ್ಪು/ಪ್ರೀತಿಸು; ಒಲಿಸುವ=ಮೆಚ್ಚುಗೆಯನ್ನು ಪಡೆಯುವ/ಒಪ್ಪುವಂತೆ ಮಾಡುವ; ಪರಿ=ರೀತಿ/ಕ್ರಮ/ಬಗೆ;

ನಮ್ಮ ಕೂಡಲಸಂಗಮದೇವರನೊಲಿಸುವ ಪರಿ= ಕೂಡಲಸಂಗಮದೇವನನ್ನು ಒಲಿಸಿಕೊಳ್ಳಬೇಕಾದರೆ, ವ್ಯಕ್ತಿಯ ಮಯ್ ಮನದಲ್ಲಿ ಮೂಡುವ ಚಿಂತನೆಗಳು/ವಿಚಾರಗಳು ಮತ್ತು ದಿನನಿತ್ಯದ ವ್ಯವಹಾರಗಳಲ್ಲಿ ಮಾಡುವ ಕೆಲಸಗಳೆಲ್ಲವೂ ತನಗೆ ಒಳಿತನ್ನುಂಟು ಮಾಡುವಂತೆಯೇ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಿರಬೇಕು. ಸಾಮಾಜಿಕವಾಗಿ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರುವುದೇ ದೇವರನ್ನು ಒಲಿಸಿಕೊಳ್ಳಲು/ಮೆಚ್ಚಿಸಲು/ಪೂಜಿಸಲು ಇರುವ ದಾರಿ/ಹಾದಿ ಎಂಬುದನ್ನು ವಚನಕಾರನು ಈ ನುಡಿಗಳಲ್ಲಿ ಸೂಚಿಸಿದ್ದಾನೆ.)

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: