ಸಿನೆಮಾ ವಿಮರ‍್ಶೆ: ‘ಕವಚ’
ಕವಚ ಚಿತ್ರ ಹಲವು ವಿಶಯಗಳಿಂದಾಗಿ ಸ್ಯಾಂಡಲ್‌ವುಡ್‌ನಲ್ಲಿ ವಿಶೇಶ ಗಮನ ಸೆಳೆದಿದೆ. ಶಿವರಾಜ್ ಕುಮಾರ್ ಕಣ್ಣು ಕಾಣಿಸದವನ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಒಂದು ಸುದ್ದಿಯಾದರೆ, ಇನ್ನೊಂದು ಕಡೆ ಹದಿನೈದು ವರುಶಗಳ ನಂತರ ಶಿವರಾಜ್ ಕುಮಾರ್ ರೀಮೇಕ್ ಚಿತ್ರವನ್ನು ಒಪ್ಪಿಕೊಂಡಿದ್ದು ಹಲವರ ಹುಬ್ಬೇರಿಸಿತ್ತು. ಕವಚ ಮಲೆಯಾಳಂನ ‘ಒಪ್ಪಂ’ ಚಿತ್ರದ ರೀಮೇಕ್.
ಕವಚ ಮಲಯಾಳಂನ ‘ಒಪ್ಪಂ’ಗಿಂತ ವೇಗವಾಗಿದೆ. ಕನ್ನಡದ ನೋಡುಗರ ರುಚಿಗೆ ತಕ್ಕಂತೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಕವಚ ಚಿತ್ರದ ಕತೆ ಸರಳ. ಕಣ್ಣು ಕಾಣದವನೊಬ್ಬ ಪುಟ್ಟ ಹುಡುಗಿಯನ್ನು ಪ್ರಾಣಾಪಾಯದಿಂದ ಕಾಪಾಡಬೇಕಾಗುತ್ತದೆ. ಪುಟ್ಟ ಹುಡುಗಿಗೆ ಯಾರಿಂದ ಪ್ರಾಣಾಪಾಯ ಇರುತ್ತದೆ? ಇದಕ್ಕಾಗಿ ಹೀರೋ ಯಾರನ್ನೆಲ್ಲ ಎದುರು ಹಾಕಿಕೊಳ್ಳಬೇಕಾಗುತ್ತದೆ? ಅವನು ಹುಡುಗಿಯನ್ನು ಕಾಪಾಡುತ್ತಾನಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀವು ಚಿತ್ರಮಂದಿರದಲ್ಲೇ ಪಡೆದುಕೊಳ್ಳಬೇಕು.
ಈ ಚಿತ್ರದ ನಿಜವಾದ ಶಕ್ತಿ ಶಿವರಾಜ್ ಕುಮಾರ್. ಸಾಮಾನ್ಯವಾಗಿ ತಮ್ಮ ಕಣ್ಣಿನ ಮೂಲಕ ಅಬಿನಯ, ಕುಣಿತ ಹಾಗೂ ಸಾಹಸಗಳಿಂದ ಮಿಂಚುವವರು ಶಿವಣ್ಣ. ಆದರೆ ಇಲ್ಲಿ ಕಣ್ಣು ಕಾಣದವನ ಪಾತ್ರದಲ್ಲಿ ತಾನೊಬ್ಬ ಪ್ರಯೋಗಕ್ಕೆ ತಯಾರಿರುವ ಕಲಾವಿದ ಎಂಬಂತೆ ನಟಿಸಿದ್ದಾರೆ. ‘ಒಪ್ಪಂ’ ನಲ್ಲೂ ಪುಟ್ಟ ಹುಡುಗಿಯ ಪಾತ್ರ ಮಾಡಿದ್ದ ಬೇಬಿ ಮೀನಾಕ್ಶಿ ಇಲ್ಲಿಯೂ ಗಮನ ಸೆಳೆಯುತ್ತಾರೆ. ವಸಿಶ್ಟ ಈ ಚಿತ್ರದಲ್ಲಿ ವಿಲನ್ ಆಗಿ ಗೆದ್ದಿದ್ದಾರೆ. ಅವರ ಎಂದಿನ ಆಳವಾದ ದನಿ, ಅಬಿನಯ ಈ ಚಿತ್ರದ ವಿಶೇಶತೆಗಳಲ್ಲೊಂದು. ಮಿಕ್ಕಂತೆ ರಮೇಶ್ ಬಟ್, ತಬಲಾ ನಾಣಿ, ಕ್ರುತಿಕಾ ಜಯಕುಮಾರ್, ಬಾಲರಾಜ್ ಮುಂತಾದವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಪರನುಡಿಯ ಕಲಾವಿದರಾದ ಇಶಾ ಕೊಪ್ಪಿಕರ್, ರವಿ ಕಾಳೆ, ಜಯಪ್ರಕಾಶ್ ಅವರ ತುಟಿ ಚಲನೆಗೆ ಮಾತುಗಳು ಹೊಂದದೇ ಕೊಂಚ ತಪ್ಪಿದಂತೆ ಕಾಣುತ್ತದೆ.
ಮೊದಲ ಬಾರಿಗೆ ನಿರ‍್ದೇಶಿಸಿರುವ ಜಿ ವಿ ಆರ್ ವಾಸು ಒಂದೊಳ್ಳೆಯ ಅಬಿರುಚಿಯ ಚಿತ್ರ ಆರಿಸಿದ್ದಕ್ಕೆ ಅವರನ್ನು ಅಬಿನಂದಿಸಬೇಕು. ಚಿತ್ರ ವೇಗವಾಗಿ ಮೂಡಿಬರುವಲ್ಲಿ, ನೋಡುಗರನ್ನು ಕೊನೆಯವರೆಗೂ ಹಿಡಿದು ಕೂರಿಸುವಲ್ಲಿ ವಾಸು ಯಶಸ್ವಿಯಾಗಿದ್ದಾರೆ. ಚಾಯಾಗ್ರಾಹಕ ರಾಹುಲ್ ಶ್ರೀವಾಸ್ತವ ಅವರ ಕ್ಯಾಮೆರಾ ಕಣ್ಣಿನಲ್ಲಿ ಊಟಿಯ ಹಸಿರು, ಕ್ಲೈಮ್ಯಾಕ್ಸ್ ನ ಕತ್ತಲೆ, ಕಣ್ಣು ಕಾಣದವನ ಚಲನವಲನಗಳನ್ನು ಸೆರೆ ಹಿಡಿದಿರುವ ರೀತಿ ಚೆನ್ನಾಗಿದೆ. ಕಣ್ಣು ಕಾಣದವನೊಬ್ಬ ಹೇಗೆ ಹೊಡೆದಾಡಬಹುದು ಎಂದು ಯೋಚಿಸಿ ಸಾಹಸವನ್ನು ಮಾಡಿಸಿದ್ದಾರೆ ರವಿ ವರ‍್ಮಾ. ಕೆಲವೊಂದು ಕಡೆ ಹಾಡುಗಳನ್ನು ಸೇರಿಸಿರುವುದು ಪ್ರಶ್ನಾರ‍್ಹ ಅನ್ನಿಸಿದರೂ ಒಟ್ಟಾರೆ ಚಿತ್ರದ ವೇಗದ ಓಟದಲ್ಲಿ ಸಂಕಲನಕಾರ ಜೋನಿ ಹರ‍್ಶ ಅವರ ಪಾಲೂ ಇದೆ. ಅರ‍್ಜುನ್ ಜನ್ಯ ಹಾಗೂ ‘4 ಮ್ಯೂಸಿಕ್ಸ್’ ತಂಡ ನೀಡಿರುವ ಹಾಡುಗಳು ಚಿತ್ರ ನೋಡುವಾಗ ಮುದ ನೀಡುತ್ತವೆ. ಅದರಲ್ಲಿಯೂ ‘ರೆಕ್ಕೆಯ ಕುದುರೆ ಏರಿ’ ಮನಸಿನಲ್ಲಿ ಉಳಿಯುತ್ತದೆ. ಎಂ ಎಸ್ ರಮೇಶ್ ಯಾವುದೇ ಅಬ್ಬರದ ಮಾತುಗಳಿಲ್ಲದ, ತಣ್ಣನೆಯ ಅರ‍್ತಪೂರ‍್ಣ ಮಾತುಗಳಿಂದ ಮುದ ನೀಡುತ್ತಾರೆ.
ಬಾವುಕ ಸನ್ನಿವೇಶಗಳು, ಶಿವಣ್ಣ-ವಸಿಶ್ಟ-ಬೇಬಿ ಮೀನಾಕ್ಶಿ ನಟನೆ, ಚಿತ್ರದ ಓಟ ಈ ಚಿತ್ರದ ಬಲಗಳಾದರೆ, ಪರನುಡಿಯ ಕಲಾವಿದರ ತುಟಿ ಚಲನೆ, ಎರಡನೇ ಅವದಿಯಲ್ಲಿ ಬರುವ ಹಾಡು ಚಿತ್ರಕ್ಕೆ ಹಿನ್ನಡೆ ಎನ್ನಬಹುದು.
ಈ ಚಿತ್ರ ರೀಮೇಕ್ ಆದರೂ ಉತ್ತಮ ಅಬಿರುಚಿಯಿಂದ ಕೂಡಿದ್ದಕ್ಕಾಗಿ, ಕಣ್ಣು ಕಾಣದವರು ದುರ‍್ಬಲರಲ್ಲ, ಗಟ್ಟಿಗರು ಅಂತ ಹೇಳಿರುವ ರೀತಿಗಾಗಿ, ಒಮ್ಮೆ ಕುಟುಂಬ ಸಮೇತರಾಗಿ ನೋಡಬಹುದು.
(ಚಿತ್ರ ಸೆಲೆ: bmscdn.com)
ಇತ್ತೀಚಿನ ಅನಿಸಿಕೆಗಳು