ಕವಿತೆ: ನಮ್ಮ ಸರಕಾರಿ ಶಾಲೆ
– ವೆಂಕಟೇಶ ಚಾಗಿ.
ನಾಡಿನ ಜನರೇ
ಕೇಳಿರಿ ನೀವು
ಹೇಳುವೆ ನಿಮಗೆ ಮಾತೊಂದು
ಸರಕಾರಿ ಶಾಲೆ
ಬಗೆಗೆ ಅಪನಂಬಿಕೆ
ಬೇಡವೇ ಬೇಡ ನಿಮಗೆಂದು
ಹಳ್ಳಿ ಹಳ್ಳಿಯಲೂ
ನಗರ ಗಲ್ಲಿಯಲೂ
ಶಾಲೆಯ ತಾಕತ್ತು ನೋಡಿರಿ
ಕನ್ನಡ ಉಳಿಸುವ
ಕನ್ನಡ ಬೆಳೆಸುವ
ಶಾಲೆಯ ಗಮ್ಮತ್ತು ಅರಿಯಿರಿ
ನಾಡಿನ ಗಣ್ಯರು
ಪ್ರತಿಬಾ ಶೂರರು
ಕನ್ನಡದಲ್ಲಿಯೇ ಕಲಿತಿಹರು
ಸಾದನೆಗೈದು
ಲೋಕವ ಬೆಳಗಿ
ಹೆಮ್ಮೆಯ ಶಾಲೆಯ ನೆನೆದಿಹರು
ಉಚಿತ ಶಿಕ್ಶಣ
ಉಚಿತ ಸೌಲಬ್ಯ
ಕನ್ನಡ ಶಾಲೆಯು ನೀಡುವುದು
ವಿದ ವಿದ ತರಬೇತಿ
ಪಡೆದ ಗುರುಗಳು
ಉತ್ತಮ ಶಿಕ್ಶಣ ನೀಡುವರು
ನಲಿಯುತ ಕಲಿಯಲು
ಕಲಿಯುತ ನಲಿಯಲು
ನಲಿಕಲಿ ಕಲಿನಲಿ ಇಲ್ಲಿಹುದು
ಕ್ರೀಡಾ ಕೂಟಗಳು
ಪ್ರತಿಬಾ ಕಾರಂಜಿ
ಮಕ್ಕಳ ಪ್ರತಿಬೆಯ ಬೆಳಗಿಹವು
ತಪ್ಪು ತಿಳುವಳಿಕೆಯಲಿ
ಅಂದಕಾರದಲಿ
ಸರಕಾರಿ ಶಾಲೆಯ ಮರೆಯದಿರಿ
ಮಕ್ಕಳ ಸೇರಿಸಿ
ಶಾಲೆಯ ಬೆಳೆಸಿ
ನಮ್ಮದೇ ಶಾಲೆಯು ಇದು ಎನ್ನಿ
( ಚಿತ್ರ ಸೆಲೆ: klp )
ಕವನ ಚನ್ನಾಗಿದೆ ಸರ್… ನಿಮ್ಮ ಕವನ ಓದೋದು ಅಂದರೆ ನಮಗೆ ಬಹಳ ಖುಷಿ.