ಪೂರ‍್ವ ಟಿಮೋರ‍್ ನ ಪವಿತ್ರ ಸರ‍್ವ ಸಜೀವತ್ವದ ಮನೆಗಳು

ಕೆ.ವಿ.ಶಶಿದರ.

ಯುಮಾ ಲುಲಿಕ್, Uma lulik

ಯುಮಾ ಲುಲಿಕ್ ಪ್ರಕ್ರುತಿಯಲ್ಲಿ ಲಬ್ಯವಿರುವ ವಸ್ತುಗಳಿಂದ ನಿರ‍್ಮಿಸಲಾದ ವಿಶಿಶ್ಟ ಪವಿತ್ರ ಮನೆ. ಇದು ಪೂರ‍್ವ ಟಿಮೋರ್ ಬುಡಕಟ್ಟು ಜನಾಂಗದವರ ಚಿಹ್ನೆಯೂ ಹೌದು. ಇವರ ಮನೆಯನ್ನು ಸರ‍್ವ ಸಜೀವತ್ವದ ಮನೆಯೆಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ ಅದರ ನಿರ‍್ಮಾಣದಲ್ಲಿ ಬಳಸಿರುವ ನೈಸರ‍್ಗಿಕ ವಸ್ತುಗಳು. ಮರ, ಬಿದಿರು, ಮರದ ಹಲಗೆಗಳು, ಸ್ತಳೀಯ ಆರೆಂಗಾ ಪಿನ್ನಾಟಾ ಎಂಬ ಪ್ರಬೇದದ ಪಾಮ್ ಮರದಿಂದ ತಯಾರಿಸಿದ ನಾರಿನ ಹುರಿ ಇವೇ ಮುಂತಾದವುಗಳನ್ನು ಮನೆ ಕಟ್ಟುವಲ್ಲಿ ಬಳಸಲಾಗಿದೆ.

ಯುಮಾ ಲುಲಿಕ್‍ನ ಪರಿಕಲ್ಪನೆ ದಾರ‍್ಮಿಕ ಕ್ರಿಯೆಗಳ, ಸಮಾರಂಬಗಳ ಮತ್ತು ನಂಬಿಕೆಗಳ ಸಂಗಮ. ಈ ಮನೆಗಳಲ್ಲಿ ವಾಸಿಸುವವರು ತಮ್ಮ ಪೂರ‍್ವಜರೊಂದಿಗೆ ಸಂವಹನ ನಡೆಸಬಹುದು ಎಂಬ ನಂಬಿಕೆ ಅವರಲ್ಲಿ ಬಲವಾಗಿದೆ. ಲುಲಿಕ್ ಎಂದರೆ ಆದ್ಯಾತ್ಮಿಕ ಬ್ರಹ್ಮಾಂಡ, ಜೀವನದ ಮೂಲ ಬೇರು ಮತ್ತು ಪವಿತ್ರ ನಿಯಮಗಳ ಮೂಲಕ ಪ್ರಕ್ರುತಿ-ಮನುಜರ ಸಂಬಂದಕ್ಕೆ ಕೊಂಡಿ ಎಂಬರ‍್ತವಿದೆ.

ಯುಮಾ ಲುಲಿಕ್‍ನ ನಿರ‍್ಮಾಣದ ಹಿಂದೆ ಸಾಂಪ್ರದಾಯಿಕ ವಾಸ್ತು ಶಿಲ್ಪಿಗಳ ಚಳಕವಿದೆ. ಈ ಮನೆಗಳನ್ನು ಕಟ್ಟುವ ಸಮಯದಲ್ಲಿ ಅನುಸರಿಸಬೇಕಾದುದರ ಗ್ನಾನವನ್ನು ಅವರು ಸಂಪೂರ‍್ಣವಾಗಿ ಅರಿತಿದ್ದು, ಕಟ್ಟಡದ ನಿರ‍್ಮಾಣದಲ್ಲಿ ಬಳಸುವ ಪ್ರತಿಯೊಂದು ವಸ್ತುವಿನ ಪೂರ‍್ತಿ ವಿವರವನ್ನು ತಿಳಿದಿರುತ್ತಾರೆ. ಮನೆಯ ಮೇಲ್ಚಾವಣಿಗೆ ಯಾವ ಹುಲ್ಲನ್ನು ಬಳಸಬೇಕು, ಕಂಬಗಳಿಗೆ ಯಾವ ಮರ ಉಪಯೋಗಿಸಬೇಕು, ಯಾವ ಮರದ ಹಲಗೆಗಳನ್ನು ಎಲ್ಲೆಲ್ಲಿ ಬಳಸಬಹುದು, ಅವುಗಳನ್ನು ಒಂದಕ್ಕೊಂದು ಬಂದೋಬಸ್ತ್ ಮಾಡಲು ಏನನ್ನು ಬಳಸಬೇಕು ಎಂಬೆಲ್ಲವನ್ನು ಅವರು ತಿಳಿಸುತ್ತಾರೆ. ಪ್ರಕ್ರುತಿಯ ಅಮೂರ‍್ತ ಶಕ್ತಿಯ ಜೊತೆಗೆ ಸಂಬಂದ ಬೆಸೆಯಲು ಮನೆಯ ನಿರ‍್ಮಾಣದಲ್ಲಿ ಬಳಸುವ ಪ್ರತಿಯೊಂದು ವಸ್ತುವೂ ಸಹಜವಾಗಿರಬೇಕು ಎಂಬುದು ಅವರ ಪರಿಕಲ್ಪನೆ. ಯುಮಾ ಲುಲಿಕ್, Uma lulik

ಇವರು ಪ್ರತೀ ಮನೆಯನ್ನು ಪೂರ‍್ವ ಟಿಮೊರ‍್ ನ ದಂತ ಕತೆಗೆ ಮತ್ತು ಪುರಾಣಕ್ಕೆ ಸಂಬಂದಿಸಿದಂತೆ ತಳುಕು ಹಾಕುವರು. ಮನೆಯ ಪ್ರಮುಕ ಪಾಲಕರನ್ನು ಅವರದೇ ಆದ ವಿಶೇಶ ಹೆಸರಿನಿಂದ ಗುರುತಿಸುತ್ತಾರೆ – ಲಿಯಾ-ನಾಯಿನ್ ಮತ್ತು  ಲುಲಿಕ್-ನಾಯಿನ್ ಅತವಾ ಮಕೋನ್ ಎಂದು.  ಪ್ರತಿ ಮನೆಯೂ ತನ್ನದೇ ಆದ ಅರ‍್ತವನ್ನು ಹೊಂದಿದೆ. ಯುಮಾ ಬಿರೂ – ಯೋದರು ತಮ್ಮ ರಕ್ಶಣಾತ್ಮಕ ತಾಯಿತಗಳನ್ನು ಪಡೆಯುವ ಮನೆ. ಯುಮಾ ಅಡೋರಾ – ಪೂಜಾ ಸ್ತಳ, ಹೀಗೆ. ಲುಲಿಕ್‍ನ ಸಂಕೇತ ಬಹಳ ವಿಸ್ತಾರವಾಗಿದ್ದು, ಹೆಚ್ಚಿನ ಮಟ್ಟಿಗೆ ಅದು ಲುಲಿಕ್, ಸ್ತ್ರೀಲಿಂಗ, ಪುಲ್ಲಿಂಗ ಎಂಬ ಮೂರು ಅಂಶಗಳನ್ನು ಒಳಗೊಂಡಿದೆ. ಇದರ ಅನುಸಾರ ಲುಲಿಕ್ ಮನೆಗಳನ್ನು ಕಟ್ಟಿದ್ದು, ಅದರಂತೆಯೇ ಅಲಂಕಾರ ಮಾಡಲಾಗುತ್ತದೆ.

ಟಿಮೋರ್ ಲೆಸ್ಟೆ ಸುತ್ತಮುತ್ತಲಿನ ಮನೆಯ ಮೇಲ್ಚಾವಣಿಗಳಲ್ಲಿ ಲುಲಿಕ್ಕಿನ ಅಂಶವಾದ ಎಮ್ಮೆ ಕೊಂಬುಗಳು, ಪಾರಿವಾಳಗಳು ಮತ್ತು ನಕ್ಶತ್ರಗಳನ್ನು ಕಪ್ಪು, ಹಸಿರು ಮತ್ತು ಬಿಳಿ ಬಣ್ಣಗಳಲ್ಲಿ ಕಾಣಬಹುದು. ನಕ್ಶತ್ರ ಮತ್ತು ಬಿಳಿ ಬಣ್ಣ ಲುಲಿಕ್ಕನ್ನು ಪ್ರತಿನಿದಿಸುತ್ತವೆ ಎಂದು ಬಾವಿಸಲಾಗಿದೆ. ಇದನ್ನು ಅವರುಗಳು ದೈವಿಕ ಅಸ್ತಿತ್ವ ಎಂದು ನಂಬಿದ್ದಾರೆ. ಪಾರಿವಾಳ ಮತ್ತು ಹಸಿರು ಬಣ್ಣ ಡಟೋವನ್ನು ಪ್ರತಿನಿದಿಸುತ್ತದೆ. ಅದು ಸ್ತ್ರೀತ್ವದ ಪಲವತ್ತತೆ, ಅದಿಕಾರ, ಶಾಂತಿ ಮತ್ತು ಸಮ್ರುದ್ದಿಯನ್ನು ಪ್ರತಿನಿದಿಸುತ್ತದೆ. ಕೊನೆಯದಾಗಿ ಎಮ್ಮೆಯ ಕೊಂಬು ಮತ್ತು ಕಪ್ಪು ಬಣ್ಣ ಲಿರುಯ್, ಪುರುಶತ್ವದ ಶಕ್ತಿಯ, ಬದ್ರತೆ ಮತ್ತು ಸುರಕ್ಶತೆಯನ್ನು ಪ್ರತಿನಿದಿಸುತ್ತದೆ.

ಯುಮಾ ಲುಲಿಕ್ ಮನೆಯ ನಿರ‍್ಮಾಣದ ಹಿಂದಿರುವ ಗ್ನಾನವು ಸಾಮಾನ್ಯ ಜನರಿಗೆ ಅಶ್ಟಾಗಿ ತಿಳಿಯದೇ ಇರುವುದು ಕಂಡುಬರುತ್ತದೆ. ಐತಿಹಾಸಿಕ ಗಟನೆಗಳು ಮತ್ತು ಸಾಮಾಜಿಕ ಬದಲಾವಣೆಗಳು ಈ ಸಾಂಪ್ರದಾಯಿಕ ಗ್ನಾನವನ್ನು ಹರಡದಂತೆ ತಡೆದವು. ಇದರ ಬಗ್ಗೆ ಯಾರನ್ನಾದರೂ ವಿಚಾರಿಸಿದಲ್ಲಿ ಪೂರ‍್ಣ ವಿವರ ನೀಡುವುದಿಲ್ಲ. ಸ್ತಳೀಯರು ಇದರ ಬಗ್ಗೆ ಚರ‍್ಚಿಸಲೂ ಸಹ ಹಿಂದೇಟು ಹಾಕುತ್ತಾರೆ. ಇದನ್ನು ಅವರುಗಳು ನಕಾರಾತ್ಮಕ ಸರ‍್ವ ಸಜೀವತ್ಬದ ಯಕ್ಶಿಣಿ ವಿದ್ಯೆ ಎನ್ನುತ್ತಾರೆ. ಇದನ್ನು ಗೌಪ್ಯವಾಗಿ ಇಟ್ಟಿರುವ ಕಾರಣ ಯುಮಾ-ಲುಲಿಕ್‍ಗೆ ಸಂಬಂದಿಸಿದಂತೆ ಯಾವ ಅನ್ವೇಶಣೆಯೂ ಆಗಿಲ್ಲ. ಪೂರ‍್ವ ಟಿಮೊರ್ ನಲ್ಲಿ ವಾಸಿಸುವ ಗ್ರಾಮೀಣ ನಿವಾಸಿಗಳ ಜೀವನವನ್ನು ಲುಲಿಕ್ ನಿರ‍್ದೇಶಿಸುತ್ತಾನೆ ಎಂದು ಅವರು ನಂಬಿರುವಂತೆ ತೋರುತ್ತದೆ.  ಲುಲಿಕ್ಕಿನ ನಿಯಮಗಳನ್ನು ಅವರುಗಳು ಚಾಚೂ ತಪ್ಪದೆ ಪಾಲಿಸುತ್ತಾರೆ. ಅದನ್ನು ಮುರಿದರೆ, ಮುರಿದಾತ ಈ ಜನುಮದಲ್ಲೇ ಶಿಕ್ಶೆಗೆ ಗುರಿಯಾಗುತ್ತಾನೆ ಎಂಬ ಬಲವಾದ ನಂಬಿಕೆ ಅವರದು.

ಈಸ್ಟ್ ಟಿಮೋರ‍್ ನ ಸ್ವಾತಂತ್ರ್ಯಾನಂತರ ದೇಶಾದ್ಯಂತ ಹಲವು ಯುಮಾ ಲುಲಿಕ್‍ಗಳನ್ನು ಪುನರ್ ನಿರ‍್ಮಾಣ ಮಾಡಲಾಗುತ್ತಿದೆ. ಇದು ಸಾಂಪ್ರದಾಯಿಕ ಕಲೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಟಿಮೋರೀಸ್‍ನ ಈ ಮಸಕಾದ ದರ‍್ಮದ ಬಗ್ಗೆ ಹೆಚ್ಚು ಮಂದಿಗೆ ತಿಳಿಸುವ ಸಲುವಾಗಿ ಎನ್ನುತ್ತಾರೆ ಸಂಬಂದಿಸಿದವರು.

( ಮಾಹಿತಿ ಮತ್ತು ಚಿತ್ರ ಸೆಲೆ : tripfreakz.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: