ಸುಳ್ಳೋಪಾಯ

– ಅಶೋಕ ಪ. ಹೊನಕೇರಿ.

ಒಡೆದ ಮಡಕೆ Broken Pot

ಹಳ್ಳಿಯ ಹಳೆ ಮನೆಗಳಲ್ಲಿ ನಾವು ಸಣ್ಣವರಿದ್ದಾಗೆಲ್ಲ ಮಣ್ಣಿನ ಮಡಿಕೆಗಳದ್ದೆ ಪಾರುಪತ್ಯ. ಅಮ್ಮನ ಜೊತೆಗೆ ಸಂತೆಯ ದಿವಸ ಹೊದರೆ ಕುಂಬಾರ ಮಾಡಿದ ತರಾವರಿ ಮಡಿಕೆ ಕುಡಿಕೆಗಳು ಮಾರಾಟಕ್ಕೆ ವಿರಾಜಮಾನವಾಗಿರುತಿದ್ದವು. ಆಗೆಲ್ಲ ಮಡಿಕೆಗಳಿಗೆ ನಾಲ್ಕಾಣೆ, ಎಂಟಾಣೆಗಳ ಬಾರಿ ಬೆಲೆ. ಇದು ಕಡಿಮೆ ಮಾಡಲು ಮಡಿಕೆ ಮಾರುವವನ ಜೊತೆಗೆ ಅಮ್ಮನ ಚರ‍್ಚೆ. ಬಹುಶಹ ಅವನು ಎರಡು ಪೈಸೆಯೋ ಮೂರು ಪೈಸೆಯೋ ಕಡಿಮೆ ಮಾಡುತಿದ್ದ ಅಶ್ಟೆ. ನಮಗೆ ಅಶ್ಟು ಹಣ ಉಳಿದರೆ ಸಾಕು ತಿನ್ನಲು ಕಡ್ಲೆ ಮಿಟಾಯಿ ಬರುತಿತ್ತು.

ಆಗೆಲ್ಲ ನಮ್ಮ ಮಲೆನಾಡಿನ ಮಳೆ ಹಿಡಿದರೆ ಜೀ… ಎನ್ನುವ ಜೀರುಂಡೆ ರಾಗನೆ… ಜೊತೆಗೆ ಆಶಾಡದ ಕುಳಿರ್ ಗಾಳಿ ಬೇರೆ. ಈ ಮಳೆಯಲ್ಲಿ ತೊಯ್ಸಿಕೊಂಡು ಮನೆಗೆ ಬಂದರೆ ದೇಹಕ್ಕೆಲ್ಲ ನಡುಕ. ಆಗ ಸ್ನಾನ ಮಾಡಲು ಕೈಕಾಲು ತೊಳೆದುಕೊಳ್ಳಲು ಸದಾ ಬಿಸಿನೀರ ಹಂಡೆ ಕಾಯುತ್ತಲೆ ಇರಬೇಕು. ಆಗೆಲ್ಲ ಉರುವಲಿಗೆ ತೊಂದರೆ ಇಲ್ಲದ್ದರಿಂದ ಕಾಡಿನಿಂದ ತಂದ ದೊಡ್ಡ ದೊಡ್ಡ ಕಟ್ಟಿಗೆಗಳು, ಒಣಗಿದ ಮರದ ಬಡ್ಡೆಗಳಿಂದ ಬೆಳಿಗ್ಗೆ ಒಲೆ ಉರಿ ಮಾಡಿಬಿಟ್ಟರೆ ಸಂಜೆವರೆಗೂ ಬೊಡ್ಡೆ ಸಣ್ಣಗೆ ಉರಿಯುತ್ತಲೆ ಇರುತಿದ್ದವು. ಹಂಡೆಯೊಳಗೆ ಸದಾ ಬಿಸಿ ನೀರು ಇರುತ್ತಿತ್ತು.
ಹಿಂದಿನ ಕಾಲಗಳಲ್ಲೆಲ್ಲ ಹೆಚ್ಚಾಗಿ ದೊಡ್ಡ ಮಣ್ಣಿನ ಹರವಿಗಳನ್ನು ನೀರು ಕಾಯಿಸಲು ಬಳಕೆ ಮಾಡುತಿದ್ದರು. ಎಲ್ಲೊ ದೊಡ್ಡ ಸಿರಿವಂತರ ಮನೆಗಳಲ್ಲಿ ಮಾತ್ರ ತಾಮ್ರದ ಹಂಡೆ ಬಳಸುತಿದ್ದರು.

ಬೆಳಿಗ್ಗೆ ನಮ್ಮವ್ವ ಏಳುವ ಮುಂಚೆ ನಾವೆದ್ದು ಬಾವಿಯಿಂದ ನೀರು ಸೇದಿ ತಂದು ಮನೆಯ ಪಾತ್ರೆ ಪರಡಿಯ ಜೊತೆಗೆ ಸ್ನಾನದ ಮಣ್ಣಿನ ಹರವಿಯು ತುಂಬಿಸಬೇಕಿತ್ತು. ನಾನು ನನ್ನ ತಮ್ಮ ಇಬ್ಬರು ಬೆಳಿಗ್ಗೆ ಬೇಗ ಎದ್ದು ಮನೆಯ ಹಿತ್ತಲ, ಮುಂದಿನ ಅಂಗಳದ ಕಸ ಗುಡಿಸಿ, ಬಾವಿಯಿಂದ ನೀರು ಸೇದಿ ತಂದು ತುಂಬಿಸ ಬೇಕಿತ್ತು. ನನ್ನ ತಮ್ಮ ಏಳುವುದಕ್ಕೆ ಬೇಜಾರು ಮಾಡಿ ಏಳುವವನು, ಕೆಲಸದಲ್ಲೂ ಸೋಮಾರಿತನ ತೋರಿಸುತಿದ್ದ. ದಿನ ನಿತ್ಯದಂತೆ ನಾನು ಸೇದಿಕೊಟ್ಟ ಬಾವಿ ನೀರನ್ನು ನನ್ನ ತಮ್ಮ ಹೊತ್ತು ತಂದು ಸುರಿಯುತಿದ್ದ. ಬಹುಶಹ ಅವನಿಗೆ ನಿದ್ದೆಗಣ್ಣು ಅಂತ ಕಾಣಿಸುತ್ತೆ ಸ್ನಾನದ ಒಲೆಯ ಮಣ್ಣಿನ ಹರವಿಗೆ ನೀರು ಸುರಿಯುವಾಗ ಕೈ ಜಾರಿ ಮಣ್ಣಿನ ಹರವಿಯ ಮೇಲೆ ತುಂಬಿದ ಕೊಡಪಾನ ಬಿದ್ದು ಮಣ್ಣಿನ ಹರವಿ ಪಡಚ. ಹಿತ್ತಲ ಸ್ನಾನದ ಮನೆ ಪೂರ‍್ತಿ ನೀರುಮಯ. ನನ್ನ ತಮ್ಮ ನಡುಗುತ್ತ ಬಂದು ಮಣ್ಣಿನ ಹರವಿ ಒಡೆದದ್ದು ಬಂದು ಹೇಳಿದ. ನನಗೂ ಜಂಗಾ ಬಲವೆ ಉಡುಗಿ ಹೋಯ್ತು. ಅಪ್ಪ ಅವ್ವನಿಗೆ ಏನು ಕಾರಣ ಹೇಳುವುದು, ಅವರಿನ್ನು ಎದ್ದಿಲ್ಲ, ಏನಾದರೂ ಒಂದು ಸುಳ್ಳು ಹೇಳಿ ಬಚಾವ್ ಆಗಬೇಕಿತ್ತು. ಅಶ್ಟರಲ್ಲಿ ನಮ್ಮ ಮನೆಯ ಗಡವ ಬೆಕ್ಕು ‘ಮಿಯಾವ್’ ಎಂದಿತು. ನನ್ನ ತಮ್ಮನಿಗೆ ನಾನೆ ಒಂದು ಸುಳ್ಳೊಪಾಯ ಹೇಳಲು ತರಬೇತಿ ಕೊಟ್ಟೆ. “ನೋಡೊ ಪ್ರಕ್ಕು, ನಮ್ಮ ಮನೆಲಿ ತಿಂದು ತಿಂದು ಕೊಬ್ಬಿರೊ ಈ ಗಡವ ಬೆಕ್ಕು, ಬಿಲದಿಂದ ಹೊರಬಂದು ಸರ ಸರ ಮಾಡಿನ ಆದಾರ ಕಂಬ ಏರಿ ಹೊರಟಿದ್ದ ಇಲಿಯನ್ನು ನೋಡಿ, ಚಂಗನೆ ಹಾರಿ ಕಂಬವೇರಿ, ಬಚ್ಚಲ ಮನೆಯ ಕಟ್ಟಿಗೆ ಒಟ್ಟೋ ಅಟ್ಟಣಿಗೆಯತ್ತ ಜಿಗಿದಾಗ, ತುದಿಯಲ್ಲಿ ಒಟ್ಟಿದ್ದ ಕಟ್ಟಿಗೆ ಜಾರಿ ಮಣ್ಣಿನ ಹರವಿಯ ಮೇಲೆ ಬಿತ್ತು, ಮಣ್ಣಿನ ಹರವಿ ಪಡಚ ಆಯ್ತು ಅಂತಾನೆ ಹೇಳ್ಬೇಕು.” ಅಂತ ಈ ಸುಳ್ಳಿನ ಕಟ್ಟು ಕತೆಯನ್ನು ನನ್ನ ತಮ್ಮನಿಗೆ ಉರು ಹೊಡೆಯಲು ಹೇಳಿದೆ.

ಅಪ್ಪ ಎದ್ದು ಬಚ್ಚಲ ಮನೆಗೆ ಮುಕ ತೊಳೆಯಲು ಬಂದರೆ ನೆಟ್ಟಗಿದ್ದ ಮಣ್ಣಿನ ಹರವಿ ಒಡೆದು ಮಕಾಡೆ ಮಲಗಿದೆ. ಮೊದಲೆ ನಮ್ಮಪ್ಪನ ಬಾಯಿ ಜೋರು “ಲೇ… ಲೇ ಲೇ ಬೆಳಿಗ್ಗೆ ಎದ್ದು ಏನ್ ರಂಪಾ ಮಾಡಿದಿರ‍್ಲೆ, ಈ ಹರವಿ ಯಾರು ಒಡ್ದವರು ಸತ್ಯ ಹೇಳ್ರೊ ಇಲ್ಲಂದ್ರೆ ನಿಮ್ಮ ತಲೆ ಒಡಿತಿನಶ್ಟೆ.” ಎಂದಾಗ ನಮಗೆ ಒಳಗೆ ನಡುಕ. ಆದರೂ ದೈರ‍್ಯ ಮಾಡಿ ನಾವು ಕಟ್ಟಿದ ಸುಳ್ಳಿನ ಕಂತೆಯನ್ನು ನನ್ನ ತಮ್ಮ ಪುಂಕಾನು ಪುಂಕವಾಗಿ ಊದಿದ. ನಾನು ಅವನ ಮಾತಿಗೆ ಮದ್ಯೆ ಮದ್ಯೆ ಪುಶ್ಟಿ ಕೊಡುತಿದ್ದೆ. “ಬಚವಾದ್ರಿ ಇಲ್ಲ ಅಂದಿದ್ರೆ ನಿಮಗಿವತ್ತು ಇತ್ತು ಮಾರಿ ಹಬ್ಬ, ಒಡೆದಿದ್ದು ಮಡಿಕೆ ಚೂರೆಲ್ಲ ಎತ್ತಿ ಹಾಕ್ರೊ, ನೀರು ಬಾಚಿ ಹೊರಗೆ ಚೆಲ್ರೊ” ಎಂದು ಅಪ್ಪಣೆ ಕೊಡಿಸಿ ಬಾವಿಯ ಕಡೆಗೆ ನಡೆದ. ನಮಗೆ ಒಳಗೊಳಗೆ ನಗು ನಾವು ಮಾಡಿದ ತಪ್ಪನ್ನು ನಮ್ಮ ಮನೆಯ ಗಡವ ಬೆಕ್ಕಿನ ಮೇಲೆ ಎತ್ತಿ ಹಾಕಿ ಬಚವಾಗಿದ್ದೆವು. ಆದರೆ ನನಗೆ ಹೀಗೂ ಅನಿಸುತಿತ್ತು ಅಕಸ್ಮಾತ್ ನಮ್ಮ ಮನೆಯ ಬೆಕ್ಕಿಗೆ ಮಾತಾಡಲು ಬಂದಿದ್ರೆ ನಮ್ಮ ಗತಿ ಏನಿತ್ತು?

ಆದ್ದರಿಂದ ಒಮ್ಮೊಮ್ಮೆ ಸಮಯೋಚಿತವಾದ ಸುಳ್ಳು ನಮ್ಮ ತಲೆ ಕಾಯುತ್ತದೆ. ಅಲ್ಲೆ ನನ್ನ ಅಣ್ಣ ಬಿಡಿಸಿ ಗೋಡೆಗಂಟಿಸಿದ್ದ ಗಾಂದಿ ಪೋಟೋ ನನ್ನನ್ನೆ ದುರುಗುಟ್ಟಿ ನೋಡಿದಂತೆ ಬಾಸವಾಗುತಿತ್ತು.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಮಾರಿಸನ್ ಮನೋಹರ್ says:

    ‘ಹರವಿ’ ಪದ ಬಡಗಣ ಕರ್ನಾಟಕದಲ್ಲಿಯೂ ಬಳಕೆಯಲ್ಲಿದೆ

ಅನಿಸಿಕೆ ಬರೆಯಿರಿ: