ಬಸವಣ್ಣನ ವಚನಗಳ ಓದು – 6ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ತನು ಮನ ಧನವ ಹಿಂದಿಕ್ಕಿಕೊಂಡು
ಮಾತಿನ ಬಣಬೆಯ ಮುಂದಿಟ್ಟುಕೊಂಡು
ಒಳಲೊಟ್ಟೆಯ ನುಡಿವವರು
ನೀವೆಲ್ಲರೂ ಕೇಳಿರೆ
ತಲಹಿಲ್ಲದ ಕೋಲು
ಹೊಳ್ಳು ಹಾರುವುದಲ್ಲದೆ
ಗುರಿಯ ತಾಗಬಲ್ಲುದೆ
ಮಾಯಾಪಾಶ ಹಿಂಗಿ
ಮನದ ಗಂಟು ಬಿಡದನ್ನಕ್ಕ
ಕೂಡಲಸಂಗಮದೇವನೆಂತೊಲಿವನಯ್ಯಾ.

ಜನಸಮುದಾಯವು ಉಳಿದು ಬೆಳೆದು ಬಾಳುವುದಕ್ಕೆ ಅಗತ್ಯವಾದ ವಸ್ತುಗಳನ್ನು ತಯಾರಿಸುವ ಕೆಲಸ/ಕಾರ‍್ಯ/ಗೆಯ್ಮೆಯಲ್ಲಿ ತೊಡಗದೆ, ಜಾಣ್ಮೆಯ ನುಡಿಗಳನ್ನಾಡುತ್ತ ಜನರನ್ನು ಮರುಳುಮಾಡುವ ಮಾತಿನ ಮಲ್ಲರಿಂದ ಯಾವುದೇ ಪ್ರಯೋಜನವಿಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

“ಜನಸಮುದಾಯಕ್ಕೆ ಅಗತ್ಯವಾದ ವಸ್ತುಗಳ “ ಎಂದರೆ ಅನ್ನ/ಬಟ್ಟೆ/ವಸತಿ/ವಿದ್ಯೆ/ಕೆಲಸ/ಆರೋಗ್ಯ.

‘ಜನರನ್ನು ಮರುಳುಮಾಡುವುದು‘ ಎಂದರೆ ವ್ಯಕ್ತಿಯು ತನ್ನ ಮಾತಿನ ಮೋಡಿಯಿಂದ/ಮಾತುಗಾರಿಕೆಯಿಂದ ತಾನು ಹೇಳಿದ್ದೆಲ್ಲವನ್ನೂ ಜನರು ನಂಬುವಂತೆ ಮಾಡುವುದು. ಇಂತಹ ಮಾತುಗಾರನ ಮನಸೆಳೆಯುವಂತಹ ನುಡಿಗಳ ಬಣ್ಣನೆಗೆ/ಸೊಗಸಿಗೆ/ಕುಶಲತೆಗೆ ಒಳಗಾದ ಜನರು, ತಾವು ಕೇಳುತ್ತಿರುವ ಸಂಗತಿಗಳಲ್ಲಿ “ಯಾವುದು ಸರಿ-ಯಾವುದು ತಪ್ಪು/ಯಾವುದು ದಿಟ-ಯಾವುದು ಸಟೆ/ಯಾವುದು ಒಳಿತು-ಯಾವುದು ಕೆಟ್ಟದ್ದು“ ಎಂಬುದನ್ನು ಒರೆಹಚ್ಚಿ ನೋಡುವ ಕಸುವನ್ನು/ಶಕ್ತಿಯನ್ನು ಕಳೆದುಕೊಂಡಿರುತ್ತಾರೆ.

( ತನು=ಮಯ್/ದೇಹ/ಶರೀರ; ಮನ=ಮನಸ್ಸು; ಧನ=ಸಂಪತ್ತು/ಒಡವೆ ವಸ್ತು/ಆಸ್ತಿಪಾಸ್ತಿ/ಹಣಕಾಸು; ಧನವ=ಹಣವನ್ನು/ಸಂಪತ್ತನ್ನು; ಹಿಂದೆ+ಇಕ್ಕಿಕೊಂಡು; ಹಿಂದೆ=ಹಿಂಬದಿಯಲ್ಲಿ/ಹಿಂದುಗಡೆ; ಇಕ್ಕು=ಮಡಗು/ಇಡು/ಹಾಕು/ಇರಿಸು; ಅಂತೆ=ಹಾಗೆ/ಆ ರೀತಿಯಲ್ಲಿ/ಆ ಬಗೆಯಲ್ಲಿ; ಹಿಂದಿಕ್ಕಿಕೊಂಡು=ಮರೆಮಾಡಿಕೊಂಡು/ಅಡಗಿಸಿಕೊಂಡು; “ತನು ಮನ ಧನವ ಹಿಂದಿಕ್ಕಿಕೊಂಡು“ ಎಂಬ ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಯಾಗಿವೆ;

ತನುವ ಹಿಂದಿಕ್ಕಿಕೊಂಡು=ಮಯ್ ಮುರಿದು ದುಡಿಮೆಯನ್ನು ಮಾಡದೆ/ತನ್ನ ಪಾಲಿನ ಕೆಲಸವನ್ನು ಒಲವು, ನಲಿವು, ಪ್ರಾಮಾಣಿಕತನದಿಂದ ಮಾಡದೆ/ಸಮಾಜದ ಮತ್ತು ಜನರ ಮುನ್ನಡೆಗೆ ಕಾರಣವಾಗುವ ಯಾವುದೇ ಒಂದು ಕೆಲಸ/ಕಾರ‍್ಯ/ಗೆಯ್ಮೆ/ಎಸಕವನ್ನು ಮಾಡದೆ/ ಮಯ್ಗಳ್ಳನಾಗಿ;

ಮನವ ಹಿಂದಿಕ್ಕಿಕೊಂಡು=ಎಲ್ಲರಿಗೂ ಒಳಿತಾಗಲಿ ಎಂಬ ಒಳ್ಳೆಯ ಚಿಂತನೆ/ಆಲೋಚನೆಗಳನ್ನು ಮಾಡದೆ/ಸಮುದಾಯದ ಜನರೆಲ್ಲರ ಹಿತಕ್ಕೆ ನೆರವಾಗುವಂತಹ ವಿಚಾರಗಳನ್ನು ಮನಸ್ಸಿನಲ್ಲಿ ಎಣಿಸದೆ/ತನ್ನ ಮತ್ತು ತನ್ನವರ ಹಿತವನ್ನು ಮಾತ್ರ ಚಿಂತಿಸುತ್ತ;

ಧನವ ಹಿಂದಿಕ್ಕಿಕೊಂಡು=ಸಮಾಜದ ಮತ್ತು ಜನಸಮುದಾಯದ ಒಳಿತಿಗಾಗಿ ತನ್ನ ಬಳಿಯಿರುವ ಹೆಚ್ಚಿನ ಸಂಪತ್ತನ್ನು ಬಳಸದೆ/ಇತರರ ಒಳಿತಿಗಾಗಿ ಒಂದು ಕಾಸನ್ನು ಬಿಚ್ಚದ ಜಿಪುಣನಾಗಿ;

ತನು ಮನ ಧನವ ಹಿಂದಿಕ್ಕಿಕೊಂಡು=ವ್ಯಕ್ತಿಯ ತನ್ನ ತನುವಿನಿಂದ ಒಳ್ಳೆಯ ದುಡಿಮೆಯನ್ನು ಮಾಡದೆ, ಮನದಿಂದ ಒಳ್ಳೆಯ ಆಲೋಚನೆ ಮಾಡದೆ ಮತ್ತು ಸಂಪತ್ತಿನಿಂದ ಸಮಾಜಕ್ಕೆ ಒಳಿತನ್ನು ಮಾಡದೆ;

ಮಾತು=ನುಡಿ/ಸೊಲ್ಲು; ಬಣಬೆ=ಎಮ್ಮೆ ದನ ಮತ್ತು ಇತರ ಪ್ರಾಣಿಗಳ ಮೇವಿಗೆ ಬಳಕೆಯಾಗುವ ರಾಗಿ/ಬತ್ತ/ಜೋಳದ ಒಣಗಿದ ಕಡ್ಡಿಗಳನ್ನು/ಹುಲ್ಲನ್ನು ಒಂದೆಡೆಯಲ್ಲಿ ಒಟ್ಟಿರುವುದು/ಮೆದೆ/ಹುಲ್ಲಿನ ರಾಶಿ;

ಮಾತಿನ ಬಣಬೆ=ಇದೊಂದು ನುಡಿಗಟ್ಟು. ವ್ಯಕ್ತಿಯು ಇತರರಿಗೆ ಒಳಿತನ್ನು ಉಂಟುಮಾಡುವಂತಹ ಯಾವೊಂದು ಕೆಲಸವನ್ನೂ ಮಾಡದೆ, ಕೇವಲ ಮಾತಿನಲ್ಲೇ ತೊಡಗಿರುವುದು/ನಿಜಜೀವನದಲ್ಲಿ ಆಗದ ಹೋಗದ ಸಂಗತಿಗಳನ್ನು ಸುಮ್ಮನೆ ಹೇಳುತ್ತಿರುವುದು; ಮುಂದೆ+ಇಟ್ಟುಕೊಂಡು; ಮುಂದೆ=ಎದುರಿನಲ್ಲಿ/ಮುಂದುಗಡೆಯಲ್ಲಿ; ಇಟ್ಟುಕೊಂಡು=ಇರಿಸಿಕೊಂಡು/ಮಡಗಿಕೊಂಡು; ಒಳಲೊಟ್ಟೆ=ಕೆಲಸಕ್ಕೆ ಬಾರದ್ದು/ಪ್ರಯೋಜನವಿಲ್ಲದ್ದು/ಹುರುಳಿಲ್ಲದ್ದು; ನುಡಿ=ಮಾತು/ಸೊಲ್ಲು/ಮಾತನ್ನಾಡು/ಹೇಳು; ಒಳಲೊಟ್ಟೆಯ ನುಡಿ=ಪೊಳ್ಳು ಮಾತು/ಕೆಲಸಕ್ಕೆ ಬಾರದ ಮಾತು/ಉಪಯೋಗವಿಲ್ಲದ ಮಾತು;

ಮಾತಿನ ಬಣಬೆಯ ಮುಂದಿಟ್ಟುಕೊಂಡು ಒಳಲೊಟ್ಟೆಯ ನುಡಿವವರು=ಇಲ್ಲಸಲ್ಲದ/ಆಗದ ಹೋಗದ/ಸುಳ್ಳು ಮತ್ತು ಕಲ್ಪಿತ ಸಂಗತಿಗಳಿಂದ ಕೂಡಿದ/ಕಾರ‍್ಯರೂಪಕ್ಕೆ ಬಾರದ ಮಾತುಗಳನ್ನೇ ಸದಾಕಾಲ ಆಡುತ್ತಿರುವವರು/ಜನಸಮುದಾಯಕ್ಕೆ ಬೇಕಾದ ಅನ್ನ/ಬಟ್ಟೆ/ವಸತಿ/ವಿದ್ಯೆ/ಕೆಲಸ/ಆರೋಗ್ಯವೆಲ್ಲವನ್ನೂ ಮಾತಿನ ಮೋಡಿಯಿಂದಲೇ ಉತ್ಪಾದನೆ ಮಾಡಿ ಕೊಡುವವರಂತೆ ನುಡಿಯುವ ಸುಳ್ಳುಗಾರರು/ಕಪಟಿಗಳು/ವಂಚಕರು;

ನೀವ್+ಎಲ್ಲರೂ; ಕೇಳ್=ಆಲಿಸು/ಕಿವಿಗೊಡು/ಗಮನಿಸು; ನೀವೆಲ್ಲರೂ ಕೇಳಿರೆ=ಮಾತನ್ನೇ ದೊಡ್ಡದೆಂದು ತಿಳಿದು, ಜನರನ್ನು ಮಾತಿನಿಂದಲೇ ಮರುಳುಮಾಡಿ, ಅವರನ್ನು ವಂಚಿಸುವ ಕಲೆಯಲ್ಲಿ ಪರಿಣಿತರಾಗಿರುವ ವ್ಯಕ್ತಿಗಳೇ ನೀವೆಲ್ಲರೂ ಮನವಿಟ್ಟು ಕೇಳಿರಿ;

ತಲಹು+ಇಲ್ಲದ; ತಲುಪು/ತಲಪು>ತಲಹು; ತಲಹು=ಮುಟ್ಟು/ಸೇರು; ಕೋಲು=ಬಾಣ/ಅಂಬು/ಸರಳು; ತಲಹಿಲ್ಲದ ಕೋಲು=ಒಂದು ನಿಶ್ಚಿತ ಗುರಿಯನ್ನು ಹೊಂದದೆ ಹೂಡುವ/ತೊಡುವ ಬಾಣ; ಪೊಳ್ಳು>ಹೊಳ್ಳು; ಹೊಳ್ಳು=ಹೊಟ್ಟು/ತವಡು/ಜೊಳ್ಳು/ಹುರುಳಿಲ್ಲದ್ದು; ಹಾರುವುದು+ಅಲ್ಲದೆ; ಹಾರು=ಜಿಗಿತ/ನೆಗೆತ/ಹಾರಿಕೆ; ಹೊಳ್ಳು ಹಾರುವುದು= ಎತ್ತೆತ್ತಲೋ/ಎತ್ತಲೋ/ಎಲ್ಲೋ ಒಂದು ಕಡೆಗೆ ಹಾರಿ ಹೋಗಿ ಬೀಳುವುದು; ಅಲ್ಲದೆ=ಹಾಗೆ ಮಾಡದೆ; ಗುರಿ=ಸೇರಬೇಕಾದ ಎಡೆ/ಜಾಗ/ಎಲ್ಲೆ; ತಾಗ+ಬಲ್ಲುದೆ; ತಾಗು=ಮುಟ್ಟು/ತಗುಲು/ಚುಚ್ಚು/ನಾಟು; ಬಲ್=ತಿಳಿ/ಅರಿ; ಬಲ್ಲುದೆ=ತಿಳಿದಿದೆಯೆ/ಗೊತ್ತಿದೆಯೆ/ಅರಿತಿದೆಯೆ;

ತಲಹಿಲ್ಲದ ಕೋಲು ಹೊಳ್ಳು ಹಾರುವುದಲ್ಲದೆ ಗುರಿಯ ತಾಗಬಲ್ಲುದೆ=ವ್ಯಕ್ತಿಯು ಬಿಲ್ಲಿಗೆ ಬಾಣವನ್ನು ಹೂಡುವಾಗ ಒಂದು ಗೊತ್ತಾದ ಗುರಿಯತ್ತ ತೊಡದೆ, ಸುಮ್ಮನೆ ಬಾಣವನ್ನು ಬಿಟ್ಟಾಗ, ಅದು ಹಾರಿ ಹೋಗಿ ಎಲ್ಲೋ ಒಂದು ಕಡೆ ಬೀಳುತ್ತದೆ. ಗುರಿಯಿಡದೆ ಬಾಣವನ್ನು ಬಿಡುವ ಮತ್ತು ಅದರಿಂದ ಏನನ್ನು ಪಡೆಯದಿರುವುದನ್ನು ತಿಳಿಸುವ ಈ ರೂಪಕ/ಶಬ್ದಚಿತ್ರದ ಮೂಲಕ ಕೇವಲ ತೋರಿಕೆಗಾಗಿ ಆಡುವ ಮಾತುಗಳಿಂದ ಸಮಾಜಕ್ಕಾಗಲಿ/ಸಹಮಾನವರಿಗಾಗಲಿ ಯಾವುದೇ ಪ್ರಯೋಜನವಿಲ್ಲವೆಂಬ ಮತ್ತು ಅಂತಹ ಮಾತುಗಾರಿಕೆಯೆಲ್ಲವೂ ಪೊಳ್ಳುತನದಿಂದ ಕೂಡಿರುತ್ತದೆ ಎಂಬುದನ್ನು ಸೂಚಿಸುತ್ತದೆ;

ಮಾಯಾ=ಮಾಯೆ/ವ್ಯಕ್ತಿಯ ಮಯ್ ಮನದಲ್ಲಿ ಬಯಕೆ/ಆಸೆ/ಹಂಬಲವನ್ನು ಮೂಡಿಸಿ ತನ್ನತ್ತ ಸೆಳೆಯುವ ವಸ್ತು/ಜೀವಿ/ವ್ಯಕ್ತಿ; ಪಾಶ=ಹಗ್ಗ/ಬಲೆ/ಜಾಲ/ನೇಣಿನ ಕುಣಿಕೆ/ಪ್ರಾಣಿಗಳನ್ನು ಮತ್ತು ಹಕ್ಕಿಗಳನ್ನು ಹಿಡಿಯಲು ನೂಲಿನಿಂದ ಹೆಣೆದು ಮಾಡಿರುವ ವಸ್ತು; ಮಾಯಾಪಾಶ=ವ್ಯಕ್ತಿಯು ತಾನು ಪಡೆಯಲು ಹಂಬಲಿಸುತ್ತಿರುವ ವಸ್ತು/ಜೀವಿ/ವ್ಯಕ್ತಿಯನ್ನು ತನ್ನದಾಗಿಸಿಕೊಳ್ಳಲು ಹೆಣಗುತ್ತಿರುವುದು/ಸೆಣೆಸುತ್ತಿರುವುದು; ಪಿಂಗು>ಹಿಂಗು; ಹಿಂಗು=ಕಡಿಮೆಯಾಗು/ತಗ್ಗು/ಕುಗ್ಗು/ತೊರೆ/ತ್ಯಜಿಸು;

ಮಾಯಾಪಾಶ ಹಿಂಗಿ=ಮನದೊಳಗೆ ತುಡಿಯುತ್ತಿರುವ ಕೆಟ್ಟಆಸೆ/ಬಯಕೆಯು ತಗ್ಗಿ/ಕುಗ್ಗಿ; ಗಂಟು=ಹಗ್ಗ/ದಾರದ ಎಳೆಗಳಿಂದ ಕಟ್ಟಿರುವುದು/ಕೂಡಿರುವುದು/ಕಟ್ಟು; ಮನದ ಗಂಟು=ವ್ಯಕ್ತಿಯ ಮನದಲ್ಲಿ ಒಂದರೊಡನೆ ಮತ್ತೊಂದು ಬೆಸೆದುಕೊಂಡಿರುವ ಒಳಿತು ಕೆಡುಕಿನ ಒಳಮಿಡಿತಗಳು/ತುಡಿತಗಳು; ಬಿಡದ+ಅನ್ನಕ್ಕ; ಬಿಡು=ತೊರೆ/ತ್ಯಜಿಸು; ಅನ್ನಕ್ಕ=ವರೆಗೆ/ ಆ ತನಕ/ಅಲ್ಲಿಯವರೆಗೆ; ಮನದ ಗಂಟು ಬಿಡುವುದು=ಮನದಲ್ಲಿ ತುಡಿಯುವ ಕೆಟ್ಟ ಒಳಮಿಡಿತಗಳನ್ನು ಗುರುತಿಸಿ, ಅವನ್ನು ತೊರೆಯುವುದು/ಬಿಡುವುದು/ಹತ್ತಿಕ್ಕಿಕೊಳ್ಳುವುದು;

ಕೂಡಲಸಂಗಮದೇವನ್+ಎಂತು+ಒಲಿ+ಅನ್+ಅಯ್ಯಾ; ಕೂಡಲಸಂಗಮದೇವ=ಶಿವ/ಈಶ್ವರ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ; ಎಂತು=ಯಾವ ರೀತಿಯಲ್ಲಿ/ಯಾವ ಬಗೆಯಲ್ಲಿ; ಒಲಿ=ಮೆಚ್ಚು/ಒಪ್ಪು/ಪ್ರೀತಿಸು/ಸಮ್ಮತಿಸು/ಬಯಸು; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ; ಕೂಡಲಸಂಗಮದೇವನೆಂತೊಲಿವನಯ್ಯಾ=ಕೂಡಲಸಂಗಮದೇವನು ಹೇಗೆ ತಾನೇ ಒಲಿಯುತ್ತಾನೆ/ಮೆಚ್ಚಿಕೊಳ್ಳುತ್ತಾನೆ;

ಮನದಲ್ಲಿ ತುಡಿಯುವ ಕೆಟ್ಟ ಬಯಕೆಗಳನ್ನು ಹತ್ತಿಕ್ಕಿಕೊಂಡು ಜೀವನದಲ್ಲಿ ಒಳ್ಳೆಯ ನಡೆನುಡಿಗಳನ್ನು ಅಳವಡಿಸಿಕೊಂಡು ಬಾಳುವಂತಾದಾಗ ಮಾತ್ರ ಕೂಡಲಸಂಗಮದೇವನು ಒಲಿಯುತ್ತಾನೆ ಎಂಬ ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು ಎಂಬುದನ್ನು ಈ ನುಡಿಗಳು ಸೂಚಿಸುತ್ತಿವೆ;

ತೊರೆಯ ಮೀವ ಅಣ್ಣಗಳಿರಾ
ತೊರೆಯ ಮೀವ ಸ್ವಾಮಿಗಳಿರಾ
ತೊರೆಯಿಂ ಭೋ ತೊರೆಯಿಂ ಭೋ
ಪರನಾರಿಯರ ಸಂಗವ ತೊರೆಯಿಂ ಭೋ
ಪರಧನದಾಮಿಷವ ತೊರೆಯಿಂ ಭೋ
ಇವ ತೊರೆಯದೆ
ಹೋಗಿ ತೊರೆಯ ಮಿಂದಡೆ
ಬರುದೊರೆ ಹೋಹುದು
ಕೂಡಲಸಂಗಮದೇವಾ.

ಸಮಾಜ ಒಪ್ಪಿತವಲ್ಲದ ರೀತಿಯಲ್ಲಿ ಕಾಮದ ನಂಟನ್ನು ಹೊಂದಿರುವ ಮತ್ತು ಜನಸಮುದಾಯದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ವ್ಯಕ್ತಿಗಳು ಮಾಡುವ ದೇವರ ಪೂಜೆ/ಆಚರಣೆಗಳು ಪೊಳ್ಳುತನದಿಂದ ಕೂಡಿವೆ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

“ಸಮಾಜ ಒಪ್ಪಿತವಲ್ಲದ ಕಾಮದ ನಂಟು “ ಎಂದರೆ ಜಗತ್ತಿನಲ್ಲಿರುವ ಪ್ರತಿಯೊಂದು ಮಾನವ ಸಮುದಾಯ/ಸಮಾಜದ ನಡಾವಳಿಯಲ್ಲಿ ಗಂಡಸು ಮತ್ತು ಹೆಂಗಸು ಒಬ್ಬರು ಮತ್ತೊಬ್ಬರೊಡನೆ ದೇಹದ ನಂಟನ್ನು ಹೊಂದುವುದಕ್ಕೆ ಹಲವಾರು ಕಟ್ಟುಪಾಡು/ನಿಯಮ/ಸಂಪ್ರದಾಯಗಳಿವೆ. ಇವಕ್ಕೆ ಹೊರತಾಗಿ ಗಂಡು ಮತ್ತು ಹೆಣ್ಣು ಜತೆಗೂಡಿದರೆ ಅದನ್ನು ಸಮಾಜ ಒಪ್ಪಿತವಲ್ಲದ ಕಾಮದ ನಂಟು ಎಂದು ಕರೆಯುತ್ತಾರೆ. ಜಗತ್ತಿನಲ್ಲಿರುವ ಎಲ್ಲಾ ಸಮುದಾಯ/ಸಮಾಜಗಳು ಕಾಮದ ನಂಟಿನ ಬಗ್ಗೆ ತಮ್ಮ ತಮ್ಮ ಸಂಸ್ಕ್ರುತಿಗೆ ಅನುಗುಣವಾಗಿ ತಮ್ಮದೇ ಆದ ರೀತಿಯ ಕಟ್ಟುಪಾಡುಗಳನ್ನು ಹಾಕಿಕೊಂಡಿರುತ್ತವೆ.

( ತೊರೆ=ನದಿ/ಹೊಳೆ/ಹರಿವು; ಮೀ=ಮಯ್ಯನ್ನು ತೊಳೆ/ಸ್ನಾನ ಮಾಡು/ಜಳಕ ಮಾಡು; ಮೀವ=ಮಯ್ಯನ್ನು ತೊಳೆಯುವ/ಸ್ನಾನ ಮಾಡುವ; ತೊರೆಯಲ್ಲಿ ಮೀಯುವುದು=ದೇಗುಲಗಳ ಬಳಿ ಹರಿಯುವ ನದಿ/ಹೊಳೆ/ತೊರೆಗಳಲ್ಲಿ ಮಿಂದೇಳುವುದರಿಂದ ವ್ಯಕ್ತಿಯು ತನ್ನ ಜೀವನದ ವ್ಯವಹಾರಗಳಲ್ಲಿ ಮಾಡಿರುವ ಪಾಪಗಳು ನಿವಾರಣೆಗೊಂಡು, ಇನ್ನು ಮುಂದೆ ಒಳಿತಾಗುವುದೆಂಬ ನಂಬಿಕೆಯು ಜನಮನದಲ್ಲಿ ನೆಲೆಗೊಂಡಿದೆ;

ಅಣ್ಣ=ಗಂಡಸನ್ನು ಒಲವು ನಲಿವು ಆದರದಿಂದ ಮಾತನಾಡಿಸುವಾಗ ಬಳಸುವ ಪದ/ಆಸ್ತಿಪಾಸ್ತಿ ಒಡವೆ ವಸ್ತು ಮತ್ತು ಗದ್ದುಗೆಯನ್ನು ಹೊಂದಿ ಸಮಾಜದಲ್ಲಿ ಎತ್ತರದ ಅಂತಸ್ತನ್ನು ಹೊಂದಿರುವ ವ್ಯಕ್ತಿಯನ್ನು “ ಅಣ್ಣ “ ಎಂದು ಕರೆಯುತ್ತಾರೆ; ಅಣ್ಣಗಳಿರಾ=ಅಣ್ಣಂದಿರಾ/ಅಣ್ಣಂದಿರೇ; ಸ್ವಾಮಿ=ಒಡೆಯ/ಯಜಮಾನ/ಜಾತಿಮತದ ಒಕ್ಕೂಟಗಳ ಗುರು/ಜನಸಮುದಾಯದ ಮನ್ನಣೆಗೆ ಪಾತ್ರನಾದ ವ್ಯಕ್ತಿ; ಸ್ವಾಮಿಗಳಿರಾ=ಸ್ವಾಮಿಗಳೇ/ದೊಡ್ಡವರೇ/ಹಿರಿಯರೇ;

ತೊರೆ+ಇಂ; ತೊರೆ=ಬಿಡು/ತ್ಯಜಿಸು/ವರ‍್ಜಿಸು; ತೊರೆಯಿಂ=ತೊರೆಯಿರಿ/ಬಿಡಿರಿ/ತ್ಯಜಿಸಿರಿ/ಮಾಡಬೇಡಿ; ಭೋ=ಗುರುತರವಾದ ಸಂಗತಿಯೊಂದನ್ನು ಇತರರಿಗೆ ಹೇಳುವಾಗ ಅವರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳಲೆಂದು ಎತ್ತರದ ದನಿಯಲ್ಲಿ ಹೇಳುವ ಪದ/ಕೇಳುವಂತಹವರಾಗಿ/ಗಮನವಿಟ್ಟು ಆಲಿಸಿ;

ತೊರೆಯಿಂ ಭೋ ತೊರೆಯಿಂ ಭೋ=ಬಿಡ್ರಪ್ಪ ಬಿಡಿ/ಕಡ್ಡಾಯವಾಗಿ ತೊರೆಯಿರಿ/ಎಂದೆಂದಿಗೂ ಮಾಡಬೇಡಿ;

ಪರ=ಇತರ/ಬೇರೆಯ/ಅನ್ಯ; ನಾರಿ=ಹೆಣ್ಣು/ಹೆಂಗಸು; ಪರನಾರಿಯರು=ಬೇರೆಯ ಹೆಣ್ಣುಗಳು/ಇತರ ಹೆಂಗಸರು; ಸಂಗ=ಒಡನಾಟ/ಕೂಡುವಿಕೆ/ಸೇರುವಿಕೆ; ಸಂಗವ=ಸಂಗವನ್ನು;

ಪರನಾರಿಯರ ಸಂಗವ ತೊರೆಯಿಂ ಭೋ=ಕೇಳಿರಿ/ಮನವಿಟ್ಟು ಆಲಿಸಿ/ಇತ್ತ ಗಮನ ಕೊಡಿ. ಇತರ ಹೆಣ್ಣುಗಳ ಜತೆಯಲ್ಲಿ ಕಾಮದ ನಂಟನ್ನು ಹೊಂದಬೇಡಿ/ಸಮಾಜ ಒಪ್ಪಿತವಲ್ಲದ ರೀತಿಯಲ್ಲಿ ಬೇರೆಯ ಹೆಣ್ಣುಗಳ ಜತೆಯಲ್ಲಿ ಕಾಮದ ನಂಟನ್ನು ಪಡೆಯಬೇಡಿ. ಏಕೆಂದರೆ ಇಂತಹ ನಂಟಿನಿಂದ ವ್ಯಕ್ತಿಯ ಮತ್ತು ಹೆಣ್ಣಿನ ಕುಟುಂಬಗಳೆರಡರ ನೆಮ್ಮದಿಯು ಹಾಳಾಗುವುದಲ್ಲದೆ, ಎರಡು ಕುಟುಂಬಗಳಿಗೆ ಸೇರಿದ ವ್ಯಕ್ತಿಗಳ ಬದುಕು ಸಾವು ನೋವುಗಳಿಗೆ ಗುರಿಯಾಗುತ್ತದೆ;

ಧನ=ಸಂಪತ್ತು/ಆಸ್ತಿಪಾಸ್ತಿ/ಒಡವೆ ವಸ್ತು/ಹಣಕಾಸು; ಪರಧನ=ಇತರರಿಗೆ/ಬೇರೆಯವರಿಗೆ ಸೇರಿದ ಸಂಪತ್ತು/ಆಸ್ತಿಪಾಸ್ತಿ; ಆಮಿಷ=ಬಯಕೆ/ಪಡೆಯಬೇಕೆಂಬ ಹಂಬಲ/ತನ್ನದಾಗಿಸಿಕೊಳ್ಳಬೇಕೆಂಬ ತುಡಿತ;

ಪರಧನದಾಮಿಷವ ತೊರೆಯಿಂ ಭೋ=ಮತ್ತೊಬ್ಬರ ಒಡವೆ/ಸಂಪತ್ತು/ಆಸ್ತಿಪಾಸ್ತಿಯನ್ನು ಲಪಟಾಯಿಸಬೇಕೆಂಬ/ದೋಚಬೇಕೆಂಬ ಕೆಟ್ಟ ಆಸೆಯನ್ನು ಬಿಡಿರಿ. ಏಕೆಂದರೆ ಕೆಲವೇ ವ್ಯಕ್ತಿಗಳು ಇತರರಿಗೆ ಮತ್ತು ಸಮಾಜಕ್ಕೆ ಸೇರಿದ ಸಂಪತ್ತನ್ನು ಕೊಳ್ಳೆ ಹೊಡೆದು/ಲೂಟಿ ಮಾಡಿ ಗೋರಿ ಗುಡ್ಡೆ ಹಾಕಿಕೊಳ್ಳತೊಡಗಿದಾಗ, ಜನಸಮುದಾಯದಲ್ಲಿ ಕೋಟಿಗಟ್ಟಲೆ ಮಂದಿ ಜೀವನಕ್ಕೆ ಅಗತ್ಯವಾದ ಅನ್ನ/ಬಟ್ಟೆ/ವಸತಿ/ವಿದ್ಯೆ/ಉದ್ಯೋಗ/ಆರೋಗ್ಯದಿಂದ ವಂಚಿತರಾಗಿ ಹಸಿವು/ಬಡತನ/ಅಪಮಾನದ ಬೇಗೆಯಲ್ಲಿ ಬೆಂದು ಬಸವಳಿಯತೊಡಗುತ್ತಾರೆ. ಸಂಪತ್ತಿನ ಸಂಗ್ರಹದಲ್ಲಿ ತೊಡಗುವ ಕೆಲವೇ ವ್ಯಕ್ತಿಗಳ ದುರಾಶೆಯು ಇಡೀ ಸಮಾಜವನ್ನು ಸಂಕಟಕ್ಕೆ ಗುರಿಮಾಡಿ, ಮಾನವ ಸಮುದಾಯದ ಬದುಕನ್ನೇ ದುರಂತದತ್ತ ತಳ್ಳುತ್ತದೆ;

ಇವ=ಇವನ್ನು/ಇಂತಹ ನಡೆನುಡಿಗಳನ್ನು; ತೊರೆಯದೆ=ಬಿಡದೆ/ತ್ಯಜಿಸದೆ; ಇವ ತೊರೆಯದೆ=ಇಂತಹ ಕೆಟ್ಟ ಚಾಳಿಯನ್ನು/ನೀಚತನವನ್ನು ಬಿಡದೆ; ಹೋಗಿ=ದೇವರ ವಿಗ್ರಹಗಳು ನೆಲೆಗೊಂಡಿರುವ ನೆಲೆ/ಊರು/ಜಾಗದ ದಡದಲ್ಲಿರುವ ನದಿ/ಹೊಳೆಯ ಬಳಿಸಾರಿ; ತೊರೆಯ ಮಿಂದಡೆ=ಅಲ್ಲಿ ಹರಿಯುತ್ತಿರುವ ನದಿ/ಹೊಳೆಯಲ್ಲಿ ಮುಳುಗಿ ಎದ್ದರೆ/ಜಳಕ ಮಾಡಿದರೆ/ಸ್ನಾನ ಮಾಡಿದರೆ; ಬರು+ತೊರೆ; ಬರು=ಬರಿದು/ಏನೂ ಇಲ್ಲದಿರುವುದು; ಬರುದೊರೆ=ಯಾವ ತೊರೆಯಲ್ಲಿ ಮಿಂದರೆ ಪಾಪಗಳು ಪರಿಹಾರಗೊಂಡು, ಒಳಿತಾಗುವುದೆಂಬ ನಂಬಿಕೆಯು ಜನಮನದಲ್ಲಿತ್ತೋ, ಅಂತಹ ನಂಬಿಕೆಯು ಇಂತಹ ನೀಚ ವ್ಯಕ್ತಿಗಳ ಪಾಲಿಗೆ ಅನ್ವಯವಾಗುವುದಿಲ್ಲ;

ಹೋಹುದು=ಹರಿಯುತ್ತಿರುವುದು/ಸಾಗುತ್ತಿರುವುದು; ಬರುದೊರೆ ಹೋಹುದು=ನದಿ/ಹೊಳೆಯಲ್ಲಿ ನೀರು ತನ್ನ ಪಾಡಿಗೆ ತಾನು ಹರಿಯುತ್ತಿರುವುದು; ಕೂಡಲಸಂಗಮದೇವಾ=ಈಶ್ವರ/ಶಿವ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ;

ಇವ ತೊರೆಯದೆ ಹೋಗಿ ತೊರೆಯ ಮಿಂದಡೆ ಬರುದೊರೆ ಹೋಹುದು ಕೂಡಲಸಂಗಮದೇವಾ=ವ್ಯಕ್ತಿಗಳು ತಮ್ಮ ನಿಜಜೀವನದಲ್ಲಿನ ಕೆಟ್ಟ ನಡೆನುಡಿಗಳನ್ನು ತೊರೆಯದೆ ನದಿ/ಹೊಳೆಯಲ್ಲಿ ಮಿಂದ ಮಾತ್ರಕ್ಕೆ, ಅವರ ಬದುಕಿನಲ್ಲಿ ಏನೊಂದು ಬದಲಾವಣೆಯಾಗುವುದಿಲ್ಲ. ಅವರು ಮೊದಲಿನಂತೆಯೇ ಸಮಾಜಕ್ಕೆ ಕೇಡನ್ನು ಬಗೆಯುವ ವ್ಯಕ್ತಿಗಳಾಗಿರುತ್ತಾರೆ. ದೇವರಿಗೆ ಮಾಡುವ ಪೂಜೆ/ಜಾಗರಣೆ/ಉಪವಾಸ/ನದಿಹೊಳೆತೊರೆಗಳಲ್ಲಿ ಮಿಂದೆದ್ದ ಮಾತ್ರಕ್ಕೆ ವ್ಯಕ್ತಿಯಲ್ಲಿರುವ ಕೆಟ್ಟತನ/ನೀಚತನ ಹೋಗುವುದಿಲ್ಲವೆಂಬುದನ್ನು ಈ ನುಡಿಗಳು ಸೂಚಿಸುತ್ತಿವೆ.)

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: