ಕವಿತೆ: ನನ್ನವ್ವ ಹಡೆದಾಕಿ

– ವೆಂಕಟೇಶ ಚಾಗಿ.

ತಾಯಿ, Mother

ನವಮಾಸ ನೋವುಂಡು
ಜೀವ ಕೊಟ್ಟಾಕಿ

ಹೊತ್ತೊತ್ತು ಮುತ್ತಿಕ್ಕಿ
ಎದಿಹಾಲ ಕೊಟ್ಟಾಕಿ
ಮೂರ‍್ಕಾಲ ಮಡಿಲಾಗ
ಬೆಚ್ಚಗ ಇಟ್ಟಾಕಿ

ತೊದಲ್ನುಡಿಯ ತಿದ್ದಿ
ಮಾತುಗುಳ ಕಲಿಸ್ದಾಕಿ
ಜೋಗುಳದ ಹಾಡೇಳಿ
ಸುಕನಿದ್ದಿ ತಂದಾಕಿ

ಅಂದಚಂದ ಮಾಡಿ
ನಸುನಗಿಯ ನಕ್ಕಾಕಿ
ಹೊತ್ತೊತ್ತಿಗೆ ಶುದ್ದಿಡಲು
ಕಸವನ್ನ ತೆಗೆದಾಕಿ

ಮನಿಮಂದಿ ಮನಸೊಳಗ
ನನ ಹೆಸರ ಇಟ್ಟಾಕಿ
ಜಗತ್ತನ್ನ ಬದಿಗೊತ್ತಿ
ಪುಲ್ ಪ್ರೀತಿ ಕೊಟ್ಟಾಕಿ

ಪ್ರತಿದಿನವೂ ನನ ಮ್ಯಾಲ
ಕನಸನ್ನ ಕಂಡಾಕಿ
ಸುಕವಾಗಿ ಇರ‍್ಲೆಂತ
ದೇವ್ರತ್ರ ಕೇಳ್ದಾಕಿ

ನೂರ‍್ಕಾಲ ಬಾಳ್ಬೇಕು
ನನ್ನವ್ವ ಹಡೆದಾಕಿ

( ಚಿತ್ರ ಸೆಲೆ: penciljammers.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: