ಚಲವಾದಿ ಶ್ರೀ ತಿರುಮಲೆ ತಾತಾಚಾರ‍್ಯ ಶರ‍್ಮರು

ಗುರು ಕುಲಕರ‍್ಣಿ.

ತಿರುಮಲೆ ತಾತಾಚಾರ‍್ಯ ಶರ‍್ಮ, ತಿ.ತಾ. ಶರ‍್ಮ, Tirumale Tatacharya Sharma, T.T.Sharma

ತಿ.ತಾ. ಶರ‍್ಮರೆಂದೇ ಹೆಸರಾದ ಶ್ರೀ ತಿರುಮಲೆ ತಾತಾಚಾರ‍್ಯ ಶರ‍್ಮರು ದೇಶಬಕ್ತರಾಗಿ, ಸ್ವಾತಂತ್ರ್ಯಸೇನಾನಿಯಾಗಿ , ನಿರ‍್ಬೀತ ಪತ್ರಿಕೋದ್ಯಮಿಯಾಗಿ ನಮಗೆ ಪ್ರಾತಹಸ್ಮರಣೀಯರು. ʼವಿಶ್ವ ಕರ‍್ನಾಟಕʼ  ಪತ್ರಿಕೆಯ ಹುಟ್ಟಿಗೆ ಕಾರಣರಾಗಿ- ಪತ್ರಿಕೆಯನ್ನು ನಡೆಸಿ, ಕನ್ನಡ ಸಾಹಿತ್ಯ ಪರಿಶತ್ತಿನ ಶೈಶವದಲ್ಲಿ ಅದಕ್ಕಾಗಿ ದುಡಿದು, ಕಾಸರಗೋಡು ಸಾಹಿತ್ಯ ಸಮ್ಮೇಳನದ ಅದ್ಯಕ್ಶತೆ ವಹಿಸಿ, ಕರ‍್ನಾಟಕ ಏಕೀಕರಣಕ್ಕೂ ದುಡಿದ ಶ್ರೀ ಶರ‍್ಮರು ಕನ್ನಡಿಗರ ಮೇಲೆ ತೀರಿಸಲಾಗದಶ್ಟು ರುಣ ಬಿಟ್ಟು ಹೋಗಿದ್ದಾರೆ.

ಈ ಬರಹ ಶರ‍್ಮರ ವ್ರುತ್ತಿಜೀವನ ಆರಂಬ ಕಾಲದ ಒಂದು ಗಟನೆ ಬಗ್ಗೆ, ಅದರಿಂದ ಕನ್ನಡಿಗರಾದ ನಾವು ಸ್ಪೂರ‍್ತಿ ಪಡೆಯುವ ಬಗ್ಗೆ. ಇದು ಶರ‍್ಮರು ವಿದ್ಯಾಬ್ಯಾಸ ಮುಗಿಸಿ, ಅಂದಿನ ಬಾರತ ಸರಕಾರದ ಪ್ರಾಚ್ಯಲಿಪಿ ಸಂಶೋದನಾ ಇಲಾಕೆಯಲ್ಲಿ ಕೆಲಸ ಮಾಡುತ್ತಿದ್ದಾಗಿನ ಪ್ರಸಂಗ.

ಶರ‍್ಮರು ಆವಾಗ ʼಶಿಲಾಶಾಸನಗಳಲ್ಲಿ ಕಂಡು ಬರುವ ಕೆಲ ಕನ್ನಡ ಕವಿಗಳುʼ ಎಂಬ ಪ್ರಬಂದವನ್ನು ಬರೆದಿದ್ದರು. ಅದನ್ನು ತಮ್ಮ ಹಿರಿಯ ಅದಿಕಾರಿಗಳಾಗಿದ್ದ ಹೊಸಕೋಟೆ ಕ್ರಿಶ್ಣಶಾಸ್ತ್ರಿಗಳಿಗೆ ತೋರಿಸಿದಾಗ, ಶಾಸ್ತ್ರಿಗಳು ಅದಕ್ಕೊಂದು ಮುನ್ನುಡಿ ಬರೆದು, ಆಗಿನ ಬಾರತ ಸರಕಾರದ ಪ್ರಾಚ್ಯಲಿಪಿ ಇಲಾಕೆ ಪ್ರಕಟಿಸುತ್ತಿದ್ದ ಪುಸ್ತಕಮಾಲೆಗೆ ಪ್ರಕಟನೆಗೆ ಶಿಪಾರಸು ಮಾಡಿದರು. ಆಗ ಇಲಾಕೆಯ ಮುಕ್ಯಸ್ತರಾಗಿದ್ದವರು ಸರ‍್‌ ಜಾನ್‌ ಮಾರ‍್ಶಲ್‌ ಎಂಬುವವರು.

ಶಿಪಾರಸ್ಸಿಗೆ ಸರ‍್‌ ಮಾರ‍್ಶಲ್‌ರು “ನಮ್ಮ ಇಲಾಕೆಯ ಮಾಲೆಯಲ್ಲಿ ಇಂಗ್ಲೀಶಿನ ಪುಸ್ತಕ ಮಾತ್ರ ಪ್ರಕಟಿಸಲಾಗುತ್ತದೆ. ಈ ಕನ್ನಡ ಪ್ರಬಂದವನ್ನು ಇಂಗ್ಲೀಶಿಗೆ ಬಾಶಾಂತರಿಸಿ ಕಳುಹಿಸಲು ದಯವಿಟ್ಟು ನಿಮ್ಮ ಯುವ ಸಂಶೋದಕರಿಗೆ ತಿಳಿಸಿ” ಎಂದು ಉತ್ತರ ಬರೆದರು. ಶಾಸ್ತ್ರಿಗಳು ಶರ‍್ಮರಿಗೆ ಸರ‍್‌ ಮಾರ‍್ಶಲ್‌ರ ಉತ್ತರ ತೋರಿಸಿ, ಪ್ರಬಂದವನ್ನು ಬಾಶಾಂತರಿಸಲು ಕೇಳಿಕೊಂಡರು.

ಶರ‍್ಮರು ಅದಕ್ಕೆ ಒಪ್ಪದೇ “ನನ್ನ ಪ್ರಬಂದವನ್ನು ಇಲಾಕೆಯ ಮಾಲೆಯಲ್ಲಿ ಪ್ರಕಟಿಸಲು ಮುಂದೆ ಬಂದದ್ದಕ್ಕಾಗಿ ಸರ‍್‌ ಮಾರ‍್ಶಲ್‌ರಿಗೂ, ಶಿಪಾರಸು ಮಾಡಿದ ನಿಮಗೂ ದನ್ಯವಾದಗಳು. ಈ ಪ್ರಬಂದದಲ್ಲಿ ಕನ್ನಡ ಶಾಸನಗಳಿಂದ ನೇರವಾಗಿ ಕಂದಪದ್ಯಗಳನ್ನೂ, ವ್ರುತ್ತಗಳನ್ನೂ ಎತ್ತಿಕೊಡಲಾಗಿದೆ. ಆ ಪದ್ಯಗಳನ್ನು ಆಂಗ್ಲೀಕರಿಸಿದರೆ ಏನು ಸ್ವಾರಸ್ಯ ಉಳಿದೀತು? ಇಂಡಿಯಾ ಸರಕಾರ ಇಂತಹ ಪುಸ್ತಕಗಳನ್ನು ಬಾರತೀಯ ಬಾಶೆಗಳಲ್ಲಿ ಪ್ರಕಟಿಸದೇ ಇದ್ದರೆ ಇನ್ನು ಮೇಲಾದರೂ ಪ್ರಕಟಿಸಲಿ. ಸಾದ್ಯವಿಲ್ಲವೆಂದಾದರೆ ನನಗೇನು ಬೇಜಾರಿಲ್ಲ” ಎಂದು ಉತ್ತರಿಸಿದ್ದರು.

ಕಚೇರಿಯಲ್ಲಿದ್ದ ಇತರ ಸಹೋದ್ಯೋಗಿಗಳು ಮತ್ತು ಹಿರಿಯರು ಶರ‍್ಮರಿಗೆ ಇಂತಹ ಒಳ್ಳೆಯ ಅವಕಾಶ ಬಿಟ್ಟುಕೊಡುವುದು ಮೂರ‍್ಕತನ ಎಂದು ಬುದ್ದಿ ಹೇಳುತ್ತಾರೆ. ಆದರೂ ಶರ‍್ಮರು ತಮ್ಮ ನಿಲುವಿಗೆ ದ್ರುಡವಾಗಿ ನಿಂತುಕೊಳ್ಳುತ್ತಾರೆ.

ಕೆಲದಿನಗಳ ನಂತರ ಶಾಸ್ತ್ರಿಗಳಿಗೆ ಸರ‍್‌ ಮಾರ‍್ಶಲ್‌ ಪತ್ರ ಬರೆದು

“There is no reason why we shouldn’t adopt a new policy to publish memoirs in vernacular languages. Ask Mr T T Sharma to send his manuscript written in Canarese. Let his be the first memoir be first memoir in new series.” ಎಂದು ಶರ‍್ಮರ ಪ್ರಬಂದದ ಪ್ರಕಟನೆಯ ನಿರ‍್ದಾರ ತಿಳಿಸುತ್ತಾರೆ. ಅದು 1924ರಲ್ಲಿ ಪ್ರಕಟವೂ ಆಗುತ್ತದೆ.

ಈ ಸುದ್ದಿಯನ್ನು ಕೇಳಿ ಇಲಾಕೆಯಲ್ಲಿನ ಮತ್ತೊಬ್ಬ ಹಿರಿಯ ಅದಿಕಾರಿಯಾಗಿದ್ದ ಶ್ರೀ ಕೆ.ವಿ.ಸುಬ್ರಹ್ಮಣ್ಯ ಅಯ್ಯರ‍್‌ರವರು ಶರ‍್ಮರಿಗೆ ಪತ್ರ ಬರೆದು – “ನಿಮ್ಮ ಕನ್ನಡ ಬಾಶಾಬಕ್ತಿ ಸರ‍್‌ ಮಾರ‍್ಶಲ್‌ರ ಹ್ರುದಯ ಪರಿವರ‍್ತನೆ ಮಾಡಿಬಿಟ್ಟಿತು! ನೀವು ಕನ್ನಡಕ್ಕೆ ಗಳಿಸಿಕೊಟ್ಟ ಮರ‍್ಯಾದೆಯ ಲಾಬವನ್ನು ತಮಿಳರು ನಾವೂ ಪಡೆಯುವಾಂತಾಯಿತು. ಹೆಚ್ಚೇನು ಎಲ್ಲ ದೇಶಬಾಶೆಗಳಾಡುವವರಿಗೂ ರಾಜಮಾರ‍್ಗವೊಂದು ತೆರೆದಂತಾಯಿತು. ನಮ್ಮೆಲ್ಲರಿಗೆ ತಾವು ಮಾಡಿದ ಉಪಕಾರ ಸಾಮಾನ್ಯವಾದುದಲ್ಲ” ಎಂದು ಪ್ರಶಂಸಿದ್ದರು.

ಶ್ರೀ ಅಯ್ಯರ‍್‌ರವರ ಮಾತಿನಲ್ಲಿ ನಮಗೆಲ್ಲಾ ಒಂದು ಪಾಟ ಇದೆಯಲ್ಲವೇ? ಸರಕಾರ ಇಲ್ಲವೇ ಕಾಸಗಿ ಕಂಪನಿಗಳು ನೀಡುವ ಸೇವೆಗಳನ್ನು ನಮ್ಮ ನುಡಿಯಲ್ಲೇ ನೀಡಿ (ServeInMyLanguage) ಎಂದು ಅವಡುಗಚ್ಚಿ ಕೇಳಿದರೆ, ನಾವು ನಮಗಾಗಿ ಅಶ್ಟೇ ಅಲ್ಲ, ಸಕಲ ಕನ್ನಡಿಗರ ಒಳಿತಿಗಾಗಿ ಅಶ್ಟೇ ಅಲ್ಲ, ಇತರ ಬಾಶಾ ಸಮುದಾಯದವರಿಗೂ ಕೂಡ ಉಪಕಾರ ಮಾಡಿದಂತಾಗುತ್ತದೆ. ಅದು ಒಂದು ರೀತಿಯ ದೇಶಸೇವೆಯಲ್ಲವೇ?

( ಮಾಹಿತಿ ಸೆಲೆ: ಶ್ರೀ ತಿ.ತಾ. ಶರ‍್ಮರ “ನನ್ನ ಜೀವನ ಮತ್ತು ದ್ಯೇಯ” ಪುಸ್ತಕ )
( ಚಿತ್ರ ಸೆಲೆ: karnatakahistory.blogspot.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: