ದೊಡ್ಡ ಕಲ್ಲಿನ ಆನೆ – ಪ್ರಾಕ್ರುತಿಕ ಶಿಲ್ಪಕ್ರುತಿ

– ಕೆ.ವಿ.ಶಶಿದರ.

ದೊಡ್ಡ ಕಲ್ಲಿನ ಆನೆ Big Rock Elephant

ಈ ಬೂಮಿ ಎಶ್ಟೋ ಅದ್ಬುತಗಳ ಆಗರ. ಪ್ರಾಕ್ರುತಿಕ ಹಾಗೂ ಮಾನವ ನಿರ‍್ಮಿತ ವಿಶೇಶಗಳಿಗೆ ಕೊರತೆಯೇ ಇಲ್ಲ. ಇವುಗಳಲ್ಲಿ ಅತ್ಯಂತ ಅದ್ಬುತ ಪ್ರಾಕ್ರುತಿಕ ಶಿಲ್ಪಕ್ರುತಿ ಐಸ್‌ಲ್ಯಾಂಡ್‌ನ ದೊಡ್ಡ ಕಲ್ಲಿನ ಆನೆ. ಐಸ್‌ಲ್ಯಾಂಡ್‌ ಮೂವತ್ತು ದ್ವೀಪಗಳ ಸಮೂಹ. ಹಿಮೇಯ್ (ಅರ‍್ತ – ಹೋಮ್ ಐಲ್ಯಾಂಡ್) ಐಸ್‌ಲ್ಯಾಂಡ್‌ನ ವೆಸ್ಟ್ಮನ್ನೇಜರ್ ದ್ವೀಪ ಸಮೂಹದಲ್ಲಿ ಸಣ್ಣ ದ್ವೀಪ. ಸಮುದ್ರದಲ್ಲಿ ಅರ‍್ದ ದೇಹ ಮುಳುಗಿರುವಂತೆ ಕಾಣುವ ಕಲ್ಲಿನ ಆನೆಯ ಪ್ರಾಕ್ರುತಿಕ ಶಿಲ್ಪಕಲಾಕ್ರುತಿ ಇರುವುದು ಇಲ್ಲೇ. ಐಸ್‌ಲ್ಯಾಂಡ್‌ನಲ್ಲಿನ ಪುಟ್ಟ ಪುಟ್ಟ ದ್ವೀಪಗಳಲ್ಲಿ ಅತಿ ಹೆಚ್ಚು ಜನಸಂಕ್ಯೆಯುಳ್ಳ ದ್ವೀಪ ಹಿಮೇಯ್. ಇದರಲ್ಲಿ 4500 ಜನ ವಾಸಿಸುತ್ತಾರೆ. 5.2 ಚದರ ಮೈಲಿಗಳಶ್ಟು ವಿಸ್ತೀರ‍್ಣವಿರುವ ಇದು ಐಸ್ಲ್ಯಾಂಡಿನ ದಕ್ಶಿಣ ಕರಾವಳಿಯಿಂದ 4 ನಾಟಿಕಲ್ ಮೈಲಿ ಅಂದರೆ 4.6 ಮೈಲಿ ದೂರದಲ್ಲಿ ದ್ವೀಪವಿದೆ. ವಿಮಾನ ನಿಲ್ದಾಣ ಮತ್ತು ಗಾಲ್ಪ್ ಅಂಗಣ ಈ ದ್ವೀಪದ ಬಹಳಶ್ಟು ಪ್ರದೇಶವನ್ನು ಆಕ್ರಮಿಸಿಕೊಂಡಿದೆ.

ಹಿಮೇಯ್ ದ್ವೀಪ ಎಲ್ಡ್ಪೆಲ್ ಜ್ವಾಲಾಮುಕಿಯ ಆವಾಸ ಸ್ತಾನ. 660ಅಡಿ ಎತ್ತರದ ಈ ಜ್ವಾಲಾಮುಕಿ ಹಲವಾರು ಬಾರಿ ಲಾವಾರಸವನ್ನು ಹೊರಹಾಕಿದೆ. ಈ ಕಲ್ಲಿನ ಆನೆಯ ಬ್ರುಹತ್ ಕ್ರುತಿ ಲಾವಾರಸದಿಂದ ಉದ್ಬವ ಆಗಿರಬಹುದೆಂದು ಬಹಳಶ್ಟು ಜನರ ನಂಬಿಕೆ. ಇದಕ್ಕೆ ಯಾವುದೇ ರೀತಿಯ ಪುರಾವೆ ಸಿಗುವುದಿಲ್ಲ. ಈ ಬ್ರುಹತ್ ಕಲ್ಲಿನ ಆನೆ ತನ್ನ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಹಿಮೇಯ್ ದ್ವೀಪದ ಕಡಲಿಗೆ ಬಂದು ನೀರನ್ನು ಹೀರಲು ಸೊಂಡಿಲನ್ನು ಸಮುದ್ರದಲ್ಲಿ ಮುಳುಗಿಸಿದ ಚಿತ್ರದಂತಿದೆ. ನಿಜವಾದ ಆನೆ ದೇಹದ ದಪ್ಪ ಚರ‍್ಮ ಸುಕ್ಕು ಸುಕ್ಕಾಗಿರುವಂತೆ ಕಾಣುತ್ತದೆ. ಇಲ್ಲೂ ಸಹ ಕಂದುಬಣ್ಣದ ಅಗ್ನಿಶಿಲೆಯಿಂದಾದ ಈ ಕಲ್ಲಿನ ಆನೆಯ ದೇಹದ ಚರ‍್ಮ ಸಹ ಸುಕ್ಕಾಗಿರುವಂತೆ ಕಾಣುತ್ತದೆ. ಆನೆಯ ಕಣ್ಣುಗಳೂ ಸ್ಪುಟವಾಗಿವೆ. ಕಿವಿಯು ಹರಡಿದ್ದು ದೇಹಕ್ಕೆ ಮೆತ್ತಿಕೊಂಡಂತಿದೆ.

ಹಿಮೇಯ್ ದ್ವೀಪದ ಸಕ್ರಿಯ ಜ್ವಾಲಾಮುಕಿ ಎಲ್ಡ್ಪೆಲ್ 23ನೇ ಜನವರಿ 1973ರಂದು ಸ್ಪೋಟಗೊಂಡಿತು. ಬೂಕಂಪ ಇದರ ಮೊದಲ ಸೂಚನೆ. ಹಿಮೇಯ್ ದ್ವೀಪ ಬೂಕಂಪದ ಕಂಪನಕ್ಕೆ ನಡುಗಿ ಹೋಯಿತು, ಬೂ ಪ್ರದೇಶದಲ್ಲಿ 1600 ಮೀಟರಿಗೂ ಹೆಚ್ಚು ಉದ್ದದ ಬಿರುಕುಗಳು ರೂಪುಗೊಂಡವು. ಇದರೊಂದಿಗೆ ಅಂದಾಜು ಅರ‍್ದ ಮಿಲಿಯನ್ ಕ್ಯೂಬಿಕ್ ಮೀಟರ‍್‌ನಶ್ಟು ಕೆಂಡ ಮತ್ತು ಬೂದಿ ಗಾಳಿಯಲ್ಲಿ ಹಾರಿ ಅರ‍್ದಕ್ಕರ‍್ದ ನಗರ ಸುಟ್ಟು ಬೂದಿಯಾಯಿತು. ಆರು ತಿಂಗಳ ಕಾಲ ಎಡಬಿಡದೆ ಮುಂದುವರೆದ ಜ್ವಾಲಾಮುಕಿಯ ಆರ‍್ಬಟ ಜುಲೈ 3ಕ್ಕೆ ತಣ್ಣಗಾಯಿತು. ಈ ಅವದಿಯಲ್ಲಿ ನಗರದ ನಾಗರೀಕರೆಲ್ಲಾ ಬಂದರಿನಲ್ಲಿದ್ದ ಮೀನುಗಾರಿಕೆ ದೋಣಿಗಳಲ್ಲಿ ಆಶ್ರಯ ಪಡೆದು ತಮ್ಮನ್ನು ತಾವು ಜೀವಾಪಾಯದಿಂದ ಕಾಪಾಡಿಕೊಂಡರು. ಈ ಸಮಯದಲ್ಲಿ ಪ್ರವಾಸಿಗರಾರೂ ಇತ್ತ ಸುಳಿಯಲಿಲ್ಲ.

ಜ್ವಾಲಾಮುಕಿಯಿಂದ ಹೊರ ಹೊಮ್ಮಿದ ಲಾವಾ ಬಯಂಕರ ಅನಾಹುತವನ್ನು ಮಾಡಿದರೂ ಹಿಮೇಯ್ ದ್ವೀಪ ಮಾತ್ರ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಿತು! ಜ್ವಾಲಾಮುಕಿಯ ಆಸ್ಪೋಟನೆಗಿಂತ ಮುನ್ನ 11.2 ಚದರ ಕಿಲೋಮೀಟರ‍್ನಶ್ಟು ವಿಸ್ತಾರವಾಗಿದ್ದ ಈ ದ್ವೀಪ ನಂತರ 13.44 ಚದರ ಕಿಲೋಮೀಟರ‍್‌ಗೆ ಹಿಗ್ಗಿತು. ವಾರ‍್ಶಿಕ ಲಕ್ಶಾಂತರ ಪ್ರವಾಸಿಗರು ಈ ಬ್ರುಹತ್ ಆನೆಯನ್ನು ನೋಡಿ ಕಣ್ಣು ತುಂಬಿಸಿಕೊಳ್ಳಲು ಇಲ್ಲಿಗೆ ಎಡತಾಕುವುದುಂಟು. ಪವರ್ ಬೋಟ್‌ಗಳಲ್ಲಿ ಪ್ರವಾಸಿಗರನ್ನು ಆನೆಯ ಸನಿಹಕ್ಕೆ ಕರೆದೊಯ್ಯಲು ಇಲ್ಲಿ ವ್ಯವಸ್ತೆಯಿದೆ. ಆನೆಯ ದೇಹದ ಸುತ್ತಲೂ ಬೋಟನ್ನು ಹರಿದಾಡಿಸುತ್ತಾರೆ.

ಪ್ರವಾಸಿಗರ ಮನರಂಜನೆಗೆ ಈ ದ್ವೀಪದಲ್ಲಿ ಪಪಿನ್ನುಗಳೂ ಇವೆ. ಗುಂಡಗಿನ, ಪುಟ್ಟ ರೆಕ್ಕೆಯ, ಪುಟ್ಟ ಬಾಲದ, ದೊಡ್ಡ ಕೊಕ್ಕಿನ ಪಕ್ಶಿ ಪಪಿನ್. ಪ್ರಮುಕವಾಗಿ ಕಪ್ಪು ಅತವಾ ಕಪ್ಪು ಮಿಶ್ರಿತ ಬಿಳುಪಿನಿಂದ ಕೂಡಿದ ಮೇಲ್ಬಾಗ ಮತ್ತು ಬಿಳಿ ಅತವಾ ಕಂದು ಬಣ್ಣದ ತಳಬಾಗವನ್ನು ಹೊಂದಿರುವ ಪುಟ್ಟ ಪಪಿನ್ ಪಕ್ಶಿ ನೋಡಲು ಬಲು ಮುದ್ದು.

(ಮಾಹಿತಿ ಸೆಲೆ: mnn.com, unusualplaces.org, extremeiceland.is)
(ಚಿತ್ರ ಸೆಲೆ: wiki )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: