ಮಾಡಿ ಸವಿಯಿರಿ ಶಾವಿಗೆ ಪಾಯಸ

– ಮಾರಿಸನ್ ಮನೋಹರ್.

ಶಾವಿಗೆ ಪಾಯಸ, ಹುಗ್ಗಿ, shyavige payasa

 

ಶಾವಿಗೆಯ ಪಾಯಸ/ಶಾವಿಗೆಯ ಹುಗ್ಗಿಯನ್ನು ಕೆಲವರು ತೆಳುವಾಗಿಯೂ, ಕೆಲವರು ಗಟ್ಟಿಯಾಗಿಯೂ ಮಾಡುತ್ತಾರೆ. ಇದು ತೆಳುವಾಗಿ ಮಾಡುವ ಬಗೆ.

ಬೇಕಾಗುವ ಸರಕುಗಳು

    • ಶಾವಿಗೆ – 2 ಕಪ್
    • ತುಪ್ಪ/ಎಣ್ಣೆ
    • ಸಕ್ಕರೆ – 1 ಕಪ್
    • ಒಣದ್ರಾಕ್ಶಿ
    • ಒಣಕೊಬ್ಬರಿ
    • ಏಲಕ್ಕಿ
    • ಬಾದಾಮಿ
    • ಗೋಡಂಬಿ
    • ಕರ‍್ಬೂಜ ಬೀಜ (ಬೇಕಾದರೆ)
    • ಹಾಲು – 1/2 ಲೀಟರ್

ಮಾಡುವ ಬಗೆ

ಚೆನ್ನಾಗಿ ಕಾದ ಹೆಂಚಿನ ಮೇಲೆ ಇಲ್ಲವೇ ಪಾತ್ರೆಯಲ್ಲಿ ಮೊದಲು ತುಪ್ಪ ಹಾಕಿ ಕಾಯಿಸಿ, ಅದರಲ್ಲಿ ಶಾವಿಗೆಯನ್ನು ಚೆನ್ನಾಗಿ ಕಂದು-ಬಂಗಾರ ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ಹುರಿದ ಶಾವಿಗೆಯನ್ನು ಒಲೆಯಿಂದ ಕೆಳಗಿಳಿಸಿ ಇಟ್ಟುಕೊಳ್ಳಿ.

ಒಂದು ಸ್ಟೀಲ್ ಬೋಗುಣಿಯಲ್ಲಿ ಎಣ್ಣೆ ಇಲ್ಲವೇ ತುಪ್ಪ ಕಾಯಲು ಇಟ್ಟು, ಅದರಲ್ಲಿ ಒಣದ್ರಾಕ್ಶಿ, ಒಣಕೊಬ್ಬರಿ ತುಣುಕುಗಳು, ಬಾದಾಮಿ, ಗೋಡಂಬಿಯನ್ನು ಬಂಗಾರದ ಬಣ್ಣ ಬರುವವರೆಗೆ ಹುರಿದು ಕೊಳ್ಳಬೇಕು. ಅದಕ್ಕೆ ಬಿಸಿಮಾಡಿದ ಹಾಲು ಹಾಕಬೇಕು. ತುಂಬಾ ಜನ ತಣ್ಣನೆಯ ಹಾಲು ಹಾಕುತ್ತಾರೆ. ಆದರೆ ಹಾಲನ್ನು ಬಿಸಿಮಾಡಿಯೇ ಹಾಕಿ. ಹಾಲಿಗೆ ಉಕ್ಕು ಬಂದಾಗ ಹುರಿದಿಟ್ಟುಕೊಂಡ ಶಾವಿಗೆ ಹಾಕಿ 5-6 ನಿಮಿಶ ಕುದಿಸಿ. ಈಗ ಗ್ಯಾಸ್‌ಅನ್ನು ಬಂದ್ ಮಾಡಿ, ಶಾವಿಗೆ ಹಾಲನ್ನು‌ ಹೀರಿಕೊಳ್ಳಲು 5 ನಿಮಿಶ ಬಿಡಿ.

5 ನಿಮಿಶ ಆದ ಮೇಲೆ ಶಾವಿಗೆ ಹಾಲನ್ನು ಹೀರಿ ಕೊಂಡಿರುತ್ತದೆ. ಆಗ ಒಂದು ಗ್ಲಾಸು ನೀರು ಹಾಕಿ ಮತ್ತೆ ಗ್ಯಾಸಿನ ಮೇಲಿಟ್ಟು ಕುದಿಸಬೇಕು. ಹೀಗೆ ಮಾಡಿದರೆ ಶಾವಿಗೆ ಮುದ್ದೆಯಾಗದೆ, ಅಂಟು-ಅಂಟಾಗದೆ ದಾರದ ಹಾಗೆ ಚೆನ್ನಾಗಿ ಪಾಯಸದಲ್ಲಿ ಕಾಣಿಸುತ್ತದೆ. 2 ಕಪ್ ಶಾವಿಗೆ ತೆಗೆದುಕೊಂಡರೆ ಅದಕ್ಕೆ 2 ಕಪ್ ಸಕ್ಕರೆ ಸರಿಯಾಗುತ್ತದೆ. ಇನ್ನೂ ಸಿಹಿ ಬೇಕು ಅನ್ನಿಸಿದರೆ ಅರ‍್ದ ಕಪ್ ಹೆಚ್ಚಿಗೆ ಸಕ್ಕರೆ ಹಾಕಿಕೊಳ್ಳಬಹುದು.

(ವಿ.ಸೂ.: ಶಾವಿಗೆಗೆ ಹಾಲು ಹಾಕುತ್ತಿದ್ದರೆ ಬೆಲ್ಲ ಹಾಕಬಾರದು. ಇದರಿಂದ ಹಾಲು ಒಡೆದು ಹೋಗುತ್ತದೆ.)

(ಚಿತ್ರ ಸೆಲೆ: ಮಾರಿಸನ್ ಮನೋಹರ್)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *