ದಪ್ಪ ಮೆಣಸಿನಕಾಯಿ ಎಣ್ಣಗಾಯಿ

– ಸವಿತಾ.

ಎಣ್ಣೆಗಾಯಿ Ennegayi

ಬೇಕಾಗುವ ಪದಾರ‍್ತಗಳು

8 ದಪ್ಪ ಮೆಣಸಿನ ಕಾಯಿ (ಜವಾರಿ ಆದರೆ 8, ಹೈಬ್ರಿಡ್ ಆದರೆ 4)
2 ಈರುಳ್ಳಿ
2 ಚಮಚ ಕಡಲೇ ಬೀಜ
2 ಚಮಚ ಎಳ್ಳು
2 ಚಮಚ ಗುರೆಳ್ಳು
2 ಚಮಚ ಒಣಕೊಬ್ಬರಿ ತುರಿ
1/4 ಇಂಚು ಚಕ್ಕೆ ಅತವಾ ದಾಲ್ಚಿನ್ನಿ
2 ಲವಂಗ
1 ಏಲಕ್ಕಿ
2 ಚಮಚ ಹುಣಸೆ ರಸ
2 ಚಮಚ ಬೆಲ್ಲ
ಸ್ವಲ್ಪ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು
ಸ್ವಲ್ಪ ಬೆಳ್ಳುಳ್ಳಿ ಶುಂಟಿ ಪೇಸ್ಟ್
1 ಚಮಚ ಗರಂ ಮಸಾಲ ಪುಡಿ
1/2 ಚಮಚ ಜೀರಿಗೆ
1/2 ಚಮಚ ಸಾಸಿವೆ
ಸ್ವಲ್ಪ ಅರಿಶಿಣ ಮತ್ತು ರುಚಿಗೆ ತಕ್ಕಶ್ಟು ಉಪ್ಪು
ಆರು ಚಮಚ ಎಣ್ಣೆ

ಮಾಡುವ ಬಗೆ
ಕಡಲೇ ಬೀಜ, ಎಳ್ಳು, ಗುರೆಳ್ಳು, ಒಣಕೊಬ್ಬರಿ ತುರಿ, ಲವಂಗ, ಏಲಕ್ಕಿ, ಚಕ್ಕೆ, ಎಲ್ಲಾ ಸೇರಿಸಿ ಹುರಿದು ಮಿಕ್ಸರ‍್‌ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ.

ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ. ನಾಲ್ಕು ಬೆಳ್ಳುಳ್ಳಿ ಎಸಳು, ಕಾಲು ಇಂಚು ಶುಂಟಿಯನ್ನು ಸ್ವಲ್ಪ ಹುರಿದು, ಮಾಡಿಟ್ಟ ಒಣ ಮಸಾಲೆ ಪುಡಿ ಹಾಕಿ ಮತ್ತೆ ಹುರಿಯಿರಿ. ಇದಕ್ಕೆ ಒಂದು ಚಮಚ ಗರಂ ಮಸಾಲ ಪುಡಿ, ಸ್ವಲ್ಪ ಅರಿಶಿಣ ಮತ್ತು ಉಪ್ಪು ಹಾಕಿ ಮಿಕ್ಸರ‍್‌ನಲ್ಲಿ ರುಬ್ಬಿ ಇಟ್ಟುಕೊಳ್ಳಿ. ಈಗ ಎಣ್ಣಗಾಯಿಯಲ್ಲಿ ತುಂಬಲು ಮಸಾಲೆ ತಯಾರಾಯಿತು. ದಪ್ಪ ಮೆಣಸಿನಕಾಯಿ ತೊಳೆದು ತೊಟ್ಟು ಮಾತ್ರ ಕತ್ತರಿಸಿ. ಮಸಾಲೆ ತುಂಬಲು ಅಡ್ಡ ಮತ್ತು ಉದ್ದಕ್ಕೆ ಸ್ವಲ್ಪ ಕತ್ತರಿಸಿ ಇಟ್ಟುಕೊಳ್ಳಿ. ಅದರ ಒಳಗಿರುವ ಕೆಲವು ಬೀಜಗಳನ್ನು ತೆಗೆಯಿರಿ. ಬಳಿಕ ಅದನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದು ತೆಗೆದಿಡಿ. ಅದು ಆರಿದ ನಂತರ ಮಸಾಲೆ ತುಂಬಿ ಇಟ್ಟುಕೊಳ್ಳಿ.

ಒಗ್ಗರಣೆ

ಬಾಣಲೆಯಲ್ಲಿ ಮೂರು ಚಮಚ ಎಣ್ಣೆ ಬಿಸಿ ಮಾಡಿ. ಮೊದಲಿಗೆ ಸಾಸಿವೆ, ಜೀರಿಗೆ, ಕರಿಬೇವು, ಮೆಣಸಿನಕಾಯಿ ಬೀಜ ಹಾಕಿ. ಬಳಿಕ ತುಂಬಿದ ದಪ್ಪ ಮೆಣಸಿನಕಾಯಿ ಇಟ್ಟು ಮುಚ್ಚಳ ಹಾಕಿ ಎಣ್ಣೆಯಲ್ಲಿ ಬೇಯಲು ಎರಡು ನಿಮಿಶ ಬಿಡಬೇಕು. ಆಮೇಲೆ ಉಪ್ಪು, ಅರಿಶಿಣ, ನೀರು ಹಾಕಿ ಒಂದು ಕುದಿ ಕುದಿಸಿ. ಬಳಿಕ ಹುಣಸೆ ರಸ ಮತ್ತು ಬೆಲ್ಲ ಸೇರಿಸಿ ಇನ್ನೊಮ್ಮೆ ಕುದಿಸಿ ಇಳಿಸಿ. ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಅಲಂಕಾರ ಮಾಡಿ.

ಇದನ್ನು ಚಪಾತಿ, ರೊಟ್ಟಿ ಜೊತೆ ತಿನ್ನಲು ಚೆನ್ನಾಗಿ ಇರುತ್ತದೆ. ಕರ‍್ನಾಟಕದ ಉತ್ತರ ಬಾಗದಲ್ಲಿ ಜವಾರಿ ಎಣ್ಣಗಾಯಿ ತುಂಬಾ ಸಿಗುತ್ತದೆ. ಇತ್ತೀಚೆಗೆ ಹೈಬ್ರಿಡ್ ದಪ್ಪ ಮೆಣಸಿನ ಕಾಯಿಯಲ್ಲೂ ಇದನ್ನು ಮಾಡುತ್ತಾ ಇದ್ದೇವೆ.

(ಚಿತ್ರ ಸೆಲೆ:  ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಮಾರಿಸನ್ ಮನೋಹರ್ says:

    ಸಜ್ಜೆ ರೊಟ್ಟಿಯ ಸಂಗಡ ಚೆನ್ನಾಗಿರುತ್ತದೆ

ಅನಿಸಿಕೆ ಬರೆಯಿರಿ:

Enable Notifications OK No thanks