ನಗೆಬರಹ: ಟಿ ವಿ ದಾರಾವಾಹಿ ತಸ್ಮೈ ನಮಹ

–  ಅಶೋಕ ಪ. ಹೊನಕೇರಿ.

ದಾರಾವಾಹಿ, Serial

‘ಮನೆಗೊಂದು ಮಗು ಚೆನ್ನ’ ಹಾಗೆ ‘ಮನೆಯಾದ ಮೇಲೆ ಒಂದು ಟಿ.ವಿ ಇರಲೇಬೇಕು ನನ್ನ ರನ್ನ’ ಎಂಬ ರಸಮಯ ಸಾಲಿಗೆ ಟಿ ವಿ ಎಂಬುದು ಒಂದು ಪ್ರತಿಶ್ಟೆಯಾಗಿ ಸೇರಿಕೊಳ್ಳುತ್ತದೆ. ಈ ಟಿ.ವಿ ಮದ್ಯಮ ವರ‍್ಗದವರ ಪ್ರತಿಶ್ಟೆಯ ಪ್ರಶ್ನೆ ಆಗಿ ಹೋಗಿಬಿಟ್ಟಿರುವ ಈ ಕಾಲದಲ್ಲಿ ಟಿ ವಿ – ಹೆಣ್ಣು, ಗಂಡು, ಮಕ್ಕಳು, ಮರಿ ಎಂಬ ಬೇದವಿಲ್ಲದೆ ಎಲ್ಲರಿಗೂ ಬೇಕು. ಅದರಲ್ಲೂ ಮಹಿಳಾಮಣಿಗಳಂತು ತಮ್ಮ ನೆಚ್ಚಿನ ದಾರಾವಾಹಿಗಳನ್ನು ನೋಡಲು ಈ ಟಿ.ವಿ ಎಂಬ ದೇವರ ಪೆಟ್ಟಿಗೆ ಬೇಕೇ ಬೇಕು.

ಇತ್ತೀಚಿನ ಕೆಲವೊಂದು ದಾರಾವಾಹಿಗಳ ಕಂತುಗಳು ವರ‍್ಶಾನುಗಟ್ಟಲೆ ಉದ್ದವಾಗಿ ಪ್ರವಹಿಸುತ್ತವೆ. ಅದನ್ನು ನೋಡುವ ತಾಳ್ಮೆ ಹೆಣ್ಮಕ್ಕಳಿಗಿದೆ. ಈಗಾಗಲೆ ‘ಪುಟ್ಟಗೌರಿ ಮದುವೆ’, ‘ಅಗ್ನಿ ಸಾಕ್ಶಿ’ ವರ‍್ಶಗಟ್ಟಲೆಯಾದರೂ ಇನ್ನೂ ಈ ದಾರಾವಾಹಿಗಳು ಮುಗಿದಿಲ್ಲ ಅಂದ ಮೇಲೆ ಈ ದಾರಾವಾಹಿಯನ್ನು ನೋಡುವ ಮಹಿಳಾಮಣಿಗಳ ತಾಳ್ಮೆಯ ಬಗ್ಗೆ ನಮಗೆ ಕೊಂಚವೂ ಅನುಮಾನ ಬೇಡ. ಮತ್ತು ನೋಡುಗರ ಮಹಿಳೆಯರ ಎಣಿಕೆಯು ಕಿಂಚಿತ್ತೂ ಕಡಿಮೆಯಾಗಿಲ್ಲ. ಇತ್ತೀಚಿನ ಕೆಲವು ದಾರಾವಾಹಿಗಳಾದ ‘ಪಾರೂ’, ‘ರಾದಾ ರಮಣ’, ‘ಅರಮನೆ’ ಮುಂತಾದವನ್ನು ಬಹಳ ಶ್ರೀಮಂತವಾಗಿ ಚಿತ್ರೀಕರಣಗೊಳಿಸಲಾಗಿದೆ ಎನ್ನುವ ಮಾತೂ ಮಹಿಳಾಮಣಿಗಳಿಂದ ಕೇಳಿ ಬರುತ್ತಿದೆ. ಅಂದರೆ ದಾರಾವಾಹಿಗೆ ಕೇವಲ ಕತೆ ಇದ್ದರೆ ಸಾಲದೂ ಅದು ಬಹಳ ಶ್ರೀಮಂತವಾಗಿರಬೇಕು ಎಂಬುದು ಮಹಿಳಾ ವೀಕ್ಶಕರ ಅಹವಾಲು ಎಂಬುದು ಸಾಬೀತಾದಂತಾಯ್ತು!

ನನಗೆ ಬಹಳ ಸೋಜಿಗ ಎನಿಸುವುದೇನೆಂದರೆ, ಅಕಸ್ಮಾತ್ ಕತಾ ನಾಯಕಿ ಕೈಯಿಂದ ಜಾರಿ ಬಿದ್ದ ಲೋಟ ಅತವಾ ತಟ್ಟೆಯನ್ನು ಎತ್ತಿಕೊಳ್ಳುವುದನ್ನು ಕನಿಶ್ಟ ಪಕ್ಶ  5 ನಿಮಿಶ ತೋರಿಸುವ ಈ ದಾರಾವಾಹಿಗಳಲ್ಲಿ, ಮತ್ತೆ ಅದೇ ಅದೇ ದ್ರುಶ್ಯವನ್ನು ಪದೇ ಪದೇ ತೋರಿಸಿ, ಹೇಳಬೇಕಾದ ಕತೆಯನ್ನು ಒಂದು ಚುಟುಕಿನಲ್ಲಿ ಮುಗಿಸಿ ಬಿಡುವ ನಿರ‍್ದೇಶಕರು, ನೋಡುವ ಮಹಿಳಾಮಣಿಗಳನ್ನು ಅಲ್ಪತ್ರುಪ್ತರ‌ನ್ನಾಗಿಸಿ ಚಡಪಡಿಸುವಂತೆ ಮಾಡುವರು. ಜೊತೆಗೆ, ತಮ್ಮ ಚಾಣಾಕ್ಶತನದಿಂದ ದಾರಾವಾಹಿಯನ್ನು ಜನಪ್ರಿಯಗೊಳಿಸಿ ಟಿ ವಿ ಯವರ ಟಿ. ಆರ್. ಪಿ ರೇಟ್ ಏರುವಂತೆ ಮಾಡಿ ವೀಕ್ಶಕ ಮಹಿಳಾಮಣಿಗಳ ಬಿ.ಪಿ ಏರುಪೇರು ಮಾಡಿ ಬಿಡುತ್ತಾರೆ. ಈ ದಾರಾವಾಹಿಗಳಲ್ಲಿ ವೈಬವೋಪೇತ ಚಿತ್ರೀಕರಣಕ್ಕಾಗಿ ಒತ್ತುಕೊಟ್ಟು, ಎಪಿಸೋಡ್ ನಲ್ಲಿ ಹೇಳಬೇಕಾದ ಕತೆ ಚುಟುಕಾದರೆ, ಆಗ ನೋಡಿ ಮಹಿಳಾಮಣಿಗಳು ಸೇರಿಕೊಂಡು ತಮ್ಮ ಕಲ್ಪನೆಯಲ್ಲಿ ಕತೆಗೆ ಎಂತೆಂತಹ  ತಿರುವು ಕೊಡುತ್ತಿರುತ್ತಾರೆ ಎಂದು. ಕೆಲ ಮಹಿಳೆಯರಂತು ಆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಆ ದಾರಾವಾಹಿಯೇ ಅವರಾಗಿಬಿಟ್ಟಿರುತ್ತಾರೆ!

ಹಾಗಂತ ದಾರಾವಾಹಿ ಪ್ರಿಯರು ಬರೀ ಮಹಿಳೆಯರು ಮಾತ್ರ, ಪುರುಶರೆಲ್ಲ ದಾರಾವಾಹಿ ವಿರೋದಿಗಳು ಎಂದು ಹೇಳಲಾರೆ. ಕೆಲವೊಂದು ದಾರಾವಾಹಿಗಳು ಪುರುಶರಿಗೂ ಇಶ್ಟವಾಗುವುದುಂಟು. ಆ ಕತೆಯಲ್ಲಿ ಕಟ್ಟಿಕೊಂಡ ಹೆಂಡತಿ ಮೊದ್ದುಮಣಿಯಾಗಿ, ಆಪೀಸ್ ಮಹಿಳಾ ಸೆಕ್ರೆಟರಿ ಸುಂದರವಾಗಿ ಚೂಟಿಯಾಗಿದ್ದು ಅವಳೊಡನೆ ಪತಿರಾಯ ಅಪೇರ‍್ ಇಟ್ಟುಕೊಂಡಿರುವ ಚಬ್ಬಿ ಚಬ್ಬಿ ದಾರಾವಾಹಿಗಳು ಇವರಿಗೆ ಇಶ್ಟ ಆಗುತ್ತೆ. ಮತ್ತು ಆ ದಾರಾವಾಹಿಯನ್ನು ಪತ್ನಿಗೆ ತೋರಿಸಿ ಕೆಲವು ಬಾರಿ ಮೂದಲಿಸಬಹುದಲ್ಲ, “ನೋಡೆ ಈ ದಾರಾವಾಹಿಯ ಹೀರೋ ತರ ನಿನ್ನ ಗಂಡ ಇರ‍್ಬೇಕಿತ್ತು ಅಲ್ವ”  ಎಂದು, ಆಕೆಯ ಮುಂದೆ  ತಾನೆಶ್ಟು ಸಾಚಾ ಎಂದು ತೋರಿಸಲು. ಮತ್ತೆ ಕೆಲವೊಮ್ಮೆ, ತಾನು ಇಂತಹ ವಿಚಾರದಲ್ಲಿ ಎಡವಿದರೂ ಕ್ಶಮೆ ಇರಲಿ ಎಂಬ ರಕ್ಶಾ ಗುರಾಣಿಯಾಗಿ ಮಾಡಿಕೊಳ್ಳಲು ಇಂತಹ ದಾರಾವಾಹಿಗಳು ನೆರವಾಗಬಹುದು ಎಂಬ ಯೋಚನೆಯೂ ಇರಬಹುದು!

ಇತ್ತೀಚಿನ ದಿನಗಳಲ್ಲಿ ಟಿ ವಿ ಅಗತ್ಯವೇನೋ ನಿಜ. ಆದರೆ ಮದ್ಯಮ ವರ‍್ಗದ ಆದಾಯಕ್ಕೆ ಒಂದು ಕಲರ್ ಟಿ ವಿ ಕರೀದಿ ಮಾಡಲು ಸಾದ್ಯ. ಹಾಗಂತ ಮನೆಯ ಹಾಲಿಗೊಂದು, ಬೆಡ್ ರೂಂಗೊಂದು ಟಿ ವಿ ಕರೀದಿ ಮಾಡಲು ಸಾದ್ಯವಿರದ ಕಾರಣ, ಒಂದೇ ಟಿ ವಿ ಯಲ್ಲಿ ಮನೆಯ ಯಜಮಾನ, ಯಜಮಾನತಿ, ತಂದೆ, ತಾಯಿ, ಮಕ್ಕಳು ಇತರರೂ ತಮಗಿಶ್ಟವಾದದ್ದನ್ನು ನೋಡಲು ಗುದ್ದಾಡಬೇಕು. ಅವರಿಗೆ ಇಶ್ಟವಾದ ಕಾರ‍್ಯಕ್ರಮ ಇವರಿಗೆ ಇಶ್ಟವಿರುವುದಿಲ್ಲ ಇವರಿಗೆ ಇಶ್ಟವಾದ ಕಾರ‍್ಯಕ್ರಮ ಅವರಿಗೆ ಇಶ್ಟವಿರುವುದಿಲ್ಲ. ಈ ಇಶ್ಟ ಅನಿಶ್ಟಗಳ ವಿಚಾರ ಕೆಲವು ಮನೆಯಲ್ಲಿ ತಾರಕಕ್ಕೆ ಹೋಗಿ ಟಿ ವಿ ರಿಮೋಟ್ ಮುರಿದ, ಬಿರಿದ ಸನ್ನಿವೇಶಗಳು ಸ್ರುಶ್ಟಿಯಾಗಿವೆ. ಕೆಲವು ಮನೆಗಳಲ್ಲಿ ಟಿ ವಿಗಳನ್ನ ಒಡೆದು ಹಾಕಿರುವ ಉದಾಹರಣೆಗಳು ಇವೆ.

ಇನ್ನು ಐ ಪಿ ಎಲ್, ಟಿ20, ಒನ್ ಡೇ ಮ್ಯಾಚ್ ಸೀರಿಸ್ ಪ್ರಾರಂಬವಾಗಿ ಬಿಟ್ಟರೆ ಒಂದೇ ಟಿವಿ ಇರುವ ಮನೆ ರಣಾಂಗಣವಾಗಿ ಬಿಡುತ್ತದೆ. ದಾರಾವಾಹಿ ಮತ್ತು ಕ್ರಿಕೆಟ್ ನೋಡುವ ತಾಯಿ ಮಕ್ಕಳ ಗಲಾಟೆಯಲಿ ಪಾಪ ಯಜಮಾನ ಕಿಕ್ ಔಟ್ ಆಗಿ ಬೀದಿ ಕಟ್ಟೆಯ ಹತ್ತಿರ ಬಿದ್ದಿರುವ ಪ್ರಸಂಗಗಳು ಇಲ್ಲದಿಲ್ಲ. ಹಾಗಾಗಿ ಪುರುಶರು ಕೇವಲ ದಾರಾವಾಹಿ ವಿರೋದಿಯಶ್ಟೆ ಆಗಲಾರ, ಅವನು ಒಟ್ಟಾರೆ ಈ ಟಿ ವಿ ವಿರೋದಿಯಾದರೂ ಅಚ್ಚರಿಯಿಲ್ಲ. ಏಕೆಂದರೆ ಈ ಪುರುಶ ದಾರಾವಾಹಿ ನೋಡಲಿ ಬಿಡಲಿ, ಕ್ರಿಕೆಟ್‌ ಮ್ಯಾಚ್ ಲೈವ್ ನೋಡಲಿ ಬಿಡಲಿ, ಟಿ ವಿ ಯಲ್ಲಿ ಪ್ರಸಾರವಾಗುವ ಸಿನಿಮಾ, ವಾರ‍್ತೆ, ಸಂಗೀತ, ನ್ರುತ್ಯ ಕಾರ‍್ಯಕ್ರಮ ನೋಡಲಿ ಬಿಡಲಿ ಇತರೆ ಮನೆಮಂದಿಯೆಲ್ಲ ರಾತ್ರಿ ಹಗಲು ಒಂದೇ ಸಮನೆ ಉರಿಸುವ ಟಿ ವಿ ಗೆ ವಿದ್ಯುತ್ ಬಿಲ್ ಮತ್ತು ಕೇಬಲ್ ಬಿಲ್ ಅನ್ನು ಮನೆ ಯಜಮಾನನಾಗಿ ಕಟ್ಟಲೇಬೇಕು. ಈ ಯಜಮಾನನೆಂಬ ಪುರುಶ ಜೀವಿಯನ್ನು ಆ ದೇವರೇ ಕಾಪಾಡಬೇಕು!!

ಟಿ.ವಿ, ಟಿ ವಿ ದಾರಾವಾಹಿ ತಸ್ಮೈ ನಮಹ

( ಚಿತ್ರ ಸೆಲೆ : thehindu.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: