ಬನಾರಸಿನ ಮಣಿಕರ‍್ಣಿಕಾ ಗಾಟಿನ ‘ಡೋಮರು’ – ಸ್ವರ‍್ಗದ ಬಾಗಿಲ ಕಾವಲುಗಾರರು

– ಮಾರಿಸನ್ ಮನೋಹರ್.

banaras, kashi, manikarnika, ಬನಾರಸ್, ಮಣಿಕರ‍್ಣಿಕಾ

ಮನೆಯಲ್ಲಿ ಹೆಂಗಸು ಅಡುಗೆ ಮಾಡುತ್ತಾಳೆ, ಚಿತೆಯಿಂದ ಎಳೆದು ತಂದ ಉರಿಯುತ್ತಿದ್ದ ಕಟ್ಟಿಗೆ, ಕೊಳ್ಳಿಯನ್ನು ಬಳಸಿಕೊಂಡು! ಇದು ಬನಾರಸಿನ ಮಣಿಕರ‍್ಣಿಕಾ ಗಾಟಿನ ಡೋಮ್‌ಗಳ ಮನೆಯಲ್ಲಿ ಕಾಣುವ ಒಂದು ನೋಟ. ಡೋಮ್ ಸಮಾಜದ ಮಂದಿ ಮಣಿಕರ‍್ಣಿಕಾ ಗಾಟಿನ ಮೇಲೆ ಕಳೇಬರಗಳ ಕೊನೆ ಸಂಸ್ಕಾರಗಳನ್ನು ನಡೆಸಿ ಕೊಡುತ್ತಾರೆ. ಮುಂಜಾನೆಯಿಂದ ತಡರಾತ್ರಿಯವರೆಗೆ ಕಳೇಬರಗಳ ಕೊನೆ ಸಂಸ್ಕಾರಗಳು ನಡೆಯುತ್ತಾ ಕಳೇಬರಗಳು ಉರಿಯುತ್ತಾ ಬೂದಿಯಾಗುತ್ತಾ ಇರುತ್ತವೆ. ಇದನ್ನು ಮುಂದೆ ನಿಂತು ನೋಡಿಕೊಳ್ಳುವುದೇ ಡೋಮ್‌ಗಳ ದಿನನಿತ್ಯದ ಕೆಲಸ. ಸತ್ತವರ ನೆಂಟರು ಇವರಿಗೆ ಹೆಣ ಸುಡಲು ನೂರರಿಂದ ಇನ್ನೂರು ರೂಪಾಯಿ ಕೊಡುತ್ತಾರೆ. ಸತ್ತವರ ಕಡೆಯವರು ಸ್ವಲ್ಪ ಸಿರಿವಂತರಾಗಿದ್ದರೆ ಹೆಚ್ಚಿಗೆ ಕೂಡ ಕೊಡುತ್ತಾರೆ. ಹೀಗೆ ಸಿಗುವ ಹಣದಿಂದಲೇ ಇವರ ಬದುಕು ಸಾಗುತ್ತದೆ. ಮಂದಿಯ ಬದುಕು ಸಾವಿನಲ್ಲಿ ಮುಗಿದರೆ ಡೋಮಗಳ ಬದುಕು ಮಂದಿಯ ಸಾವಿನಲ್ಲಿ ಶುರುವಾಗುತ್ತದೆ.

ಮಣಿಕರ‍್ಣಿಕಾ ಗಾಟಿನಲ್ಲಿ ಸಾವಿರಾರು ಸಂಸ್ಕಾರಗಳು ನಡೆಯುತ್ತವೆ

ಇಂಡಿಯಾದ ಎಲ್ಲ ಕಡೆಗಳಿಂದ ಮಂದಿ ಬನಾರಸಿಗೆ ಹೋಗುತ್ತಾರೆ, ಅಲ್ಲಿನ ದೊಡ್ಡ ಗುಡಿ ಕಾಶಿ ನರೇಶ್(ಶಿವ) ದೇವರದು. ಬನಾರಸಿನಲ್ಲಿ ಹರಿಯುವ ಗಂಗಾ ನದಿಯ ಒಂದು ತೀರದಲ್ಲಿ ‘ದಶಾಶ್ವಮೇದ ಗಾಟ್’ ಇದೆ. ಇಲ್ಲಿ ಹೊತ್ತು ಮುಳುಗಿದ ಮೇಲೆ 7 ಗಂಟೆಗೆ ಗಂಗಾ ಆರತಿ ನಡೆಯುತ್ತದೆ. ಮತ್ತೊಂದು ತೀರದಲ್ಲಿ ಮಣಿಕರ‍್ಣಿಕಾ ಗಾಟ್ ಇದೆ. ಡೋಮ್ ಸಮಾಜದ ಮಂದಿಯೆಲ್ಲ ಇರುವುದು ಮಣಿಕರ‍್ಣಿಕಾ ಗಾಟ್ ಗಳ ಕಡೆಗೆ. ಕಾಶಿ ಎಂದೂ ಕರೆಸಿಕೊಳ್ಳುವ ಇಲ್ಲಿ ಸತ್ತವರು ನೇರವಾಗಿ ಸ್ವರ‍್ಗಕ್ಕೆ ಹೋಗುತ್ತಾರೆ ಎನ್ನುವ ನಂಬಿಕೆಯಿದೆ. ಇಲ್ಲಿ ಸಾಯುವವರ ಕಳೇಬರಗಳು ಕೊನೆ ಸಂಸ್ಕಾರಕ್ಕಾಗಿ ಮಣಿಕರ‍್ಣಿಕಾ ಗಾಟಿಗೆ ಬರುತ್ತವೆ. ಮಣಿಕರ‍್ಣಿಕಾ ಗಾಟಿನಲ್ಲಿ ಮುಂಜಾನೆಯಿಂದ ರಾತ್ರಿಯವರೆಗೂ 300 ರಿಂದ 350 ರವರಗೆ ಕಳೇಬರಗಳ ಚಿತೆ ಸಂಸ್ಕಾರ ನಡೆಯುತ್ತಲೇ ಇರುತ್ತದೆ. ಅಂದರೆ ಅಂದಾಜು ವರುಶಕ್ಕೆ 40,000 ಕೊನೆ ಸಂಸ್ಕಾರಗಳು!

ಸಾರಾಯಿ ಮತ್ತು ಪಾನ್ ಇಲ್ಲದೇ ಇವರು ಕೆಲಸ ಮಾಡುವುದಿಲ್ಲ

ಡೋಮಗಳು ಹೇಳುವ ಪ್ರಕಾರ ಒಂದು ಕಳೇಬರ ಉರಿದು ಬೂದಿಯಾಗಲು ಮೂರುವರೆ ಗಂಟೆ ಬೇಕಾಗುತ್ತದೆ. ಚಿತೆಯ ಮೇಲೆ ಕಟ್ಟಿಗೆ ಒಟ್ಟುವಾಗ ಮೊದಲ ಆಯ್ದು ಕಟ್ಟಿಗೆಗಳನ್ನು ಡೋಮರೇ ಇಡುತ್ತಾರೆ. ಉರಿಯುತ್ತಿರುವ ಚಿತೆಯ ಮುಂದೆಯೇ ನಿಂತು ಕಳೇಬರ ಪೂರಾ ಬೂದಿಯಾಗುವವರೆಗೆ ನೋಡಿಕೊಳ್ಳುತ್ತಾರೆ. ಕಳೇಬರದ ಮೇಲೆ ಏನಾದರೂ ಬಂಗಾರದ ಮೂಗುತಿ, ಕಿವಿಯೋಲೆ, ಕಾಲಿನ ಚೈನು, ಕಾಲುಂಗುರ ಇದ್ದರೆ ಅದರ ಮೇಲೆ ಇವರ ಹಕ್ಕು. ಅದನ್ನು ಇವರೇ ತೆಗೆದುಕೊಳ್ಳುತ್ತಾರೆ. ಕಳೇಬರಗಳು ಸುಡುವ ದುರ‍್ಗಂದ ಇವರಿಗೆ ಯಾವಾಗಲೂ ಬಡಿಯುತ್ತಲೇ ಇರುವುದರಿಂದ ಡೋಮಗಳು ಪಾನ್ ತಿನ್ನುತ್ತಾ, ಸಾರಾಯಿ ಕುಡಿದಾದ ಮೇಲೆಯೇ ಚಿತೆಯ ಕೆಲಸ ಮಾಡುತ್ತಾರೆ.

ಸತ್ಯ ಹರಿಶ್ಚಂದ್ರನನ್ನು ಜೀತದಾಳಾಗಿ ಇಟ್ಟುಕೊಂಡ ವೀರಬಾಹು ಡೋಮ್

ಹರಿಶ್ಚಂದ್ರ ತನ್ನೆಲ್ಲ ಅರಸೊತ್ತಿಗೆ ಕಳೆದುಕೊಂಡು ಸಾಲ ತೀರಿಸಲು ತನ್ನ ಹೆಂಡತಿ ಹಾಗೂ ತನ್ನ ಮಗನನ್ನು ಕಾಶಿಯಲ್ಲಿ ಮಾರಿಬಿಡುತ್ತಾನೆ. ಆದರೆ ಅವನನ್ನು ಯಾರೂ ಕರೀದಿಸಲು ಮುಂದೆ ಬರುವುದಿಲ್ಲ. ಆಗ ಕಲ್ಲೂ ಡೋಮನೆಂಬ ವೀರಬಾಹುಕ ಮುಂದೆ ಬಂದು ಹರಿಶ್ಚಂದ್ರನನ್ನು ಕರೀದಿಸಿ, ಅವನನ್ನು ಮಸಣದಲ್ಲಿ ಹೆಣ ಸುಡುವ ಹಾಗೂ ಕಾಯುವ ವೀರಬಾಹುಕನ ಕೆಲಸಕ್ಕೆ ಇಟ್ಟುಕೊಳ್ಳುತ್ತಾನೆ. ಇದು ರಾಗವಾಂಕನ “ಹರಿಶ್ಚಂದ್ರನಲ್ಲದಿನ್ನಾರು ಗತಿಮತಿ” ಎಂಬ ಶಟ್ಪದಿಯಲ್ಲಿ ಸೊಗಸಾಗಿ ಮೂಡಿ ಬಂದಿದೆ.

ಡೋಮ್ ರಾಜನ ಮನೆ ಮತ್ತು ಹುಲಿ ಬೊಂಬೆಗಳು

ಡೋಮ್ ರಾಜಾ ಅಂತ ಕರೆಸಿಕೊಳ್ಳುವ ಜಗದೀಶ್ ಚೌದರೀಗೆ 200 ವರುಶ ಹಳೆಯದಾದ ದೊಡ್ಡದೊಂದು ಮನೆಯಿದೆ. ಅದನ್ನು ಅವರ ಹಿರೀಕರು ಕಟ್ಟಿಸಿದ್ದಾರೆ. ಈಗ ಅದರಲ್ಲೇ ಅವನ ಕುಟುಂಬದ ವಾಸ. ಅವನ ಮನೆಯ ಮೇಲೆ ಎರಡು ಕಲ್ಲಿನ ಹುಲಿಗಳ ಬೊಂಬೆಗಳಿವೆ. ಅವನ್ನೂ ಅವರ ಹಿರೀಕರೇ ಮಾಡಿಸಿದ್ದು. ಅದು ಯಾಕೆ ಎಂದು ಕೇಳಿದರೆ, “ಕಲ್ಲೂ ಡೋಮ ಹರಿಶ್ಚಂದ್ರನನ್ನು ಕರೀದಿ ಮಾಡಿದನಾದರೆ ಈ ಹುಲಿ ಬೊಂಬೆ ಮಾಡಿಸಿಕೊಳ್ಳಲು ಏನಡ್ಡಿ? ನಮ್ಮ ಹಿರೀಕರು ತಮ್ಮನ್ನು ತಾವೇ ರಾಜರಂತೆ  ಕಂಡಿದ್ದರು” ಎನ್ನುತ್ತಾರೆ ಜಗದೀಶ್!

ಬಸುರಿ ಹೆಂಗಸರ ಮತ್ತು ಮಕ್ಕಳ ಸಂಸ್ಕಾರ ಇಲ್ಲಿ ನಡೆಯುವುದಿಲ್ಲ

ಮಣಿಕರ‍್ಣಿಕಾ ಗಾಟಿನಲ್ಲಿ ಬಸುರಿ ಹೆಂಗಸರ, ಕೂಸುಗಳ, ಹಾವು ಕಚ್ಚಿ ಸತ್ತವರ ಕಳೇಬರಗಳನ್ನು ಸುಡುವ ಚಿತೆ ಸಂಸ್ಕಾರ ಡೋಮಗಳು ಮಾಡುವುದಿಲ್ಲ. ಬದಲಿಗೆ ಅವರುಗಳ ಕಳೇಬರಗಳನ್ನು ಗಂಗಾ ನದಿಯಲ್ಲಿ ಬಿಡಲಾಗುತ್ತದೆ!

ಮಣಿಕರ‍್ಣಿಕಾ ಗಾಟಿನ ಸುತ್ತಮುತ್ತ ಒಟ್ಟಿರುವ ಕಟ್ಟಿಗೆಗಳು ಬೆಟ್ಟದ ಹಾಗೆ ಕಾಣಿಸುತ್ತವೆ. ಆಂಗ್ಲ ಮಾತಿನಲ್ಲಿ ಗ್ರೇವ್ ಸೈಲೆನ್ಸ್ ಅಂತ, ಕನ್ನಡದಲ್ಲಿ ಮಸಣ ಮೌನ ಅಂತ ಕರೆಯಲಾಗುತ್ತದೆ ಆದರೆ ಮಣಿಕರ‍್ಣಿಕಾ ಗಾಟ್ ಯಾವಾಗಲೂ ಜನರಿಂದ ತುಂಬಿರುತ್ತದೆ.

ದೇಶದ ಎಲ್ಲಾ ಬಾಗಗಳಿಂದ ಬರುವ ಜನ, ಅವರೊಂದಿಗೆ ಬಂದಿದ್ದ ಜೀವಬಿಟ್ಟ ವ್ರುದ್ದರ, ಮ್ರುತರ ಕೊನೆ ಕಳೇಬರಗಳಿಂದ ಅವರನ್ನು ತಂದ ಜನರಿಂದ ತನ್ನ ನಿರಂತರತೆಯಿಂದ ದೊಡ್ಡ ಐರನಿಯ ಹಾಗೆ ಕಾಣಿಸುತ್ತದೆ. ಬಯಲಿನಲ್ಲಿಯೇ, ದೊಡ್ಡವರ ಚಿಕ್ಕವರ, ಎಲ್ಲರ ಕಣ್ಣೆದುರಿಗೇ ನಡೆಯುವ ಚಿತೆ ಸಂಸ್ಕಾರಗಳನ್ನು ನೋಡುವ ವಿದೇಶೀಗರು ಸೋಜಿಗಕ್ಕೆ ಒಳಗಾಗುತ್ತಾರೆ. ವಿದೇಶಿಗರಾದರೇನು ನಮ್ಮ ದೇಶದವರೇ ಆದರೇನು ದಿನವೆಲ್ಲಾ ರಾತ್ರಿಯೆಲ್ಲಾ ಒಂದೇ ಕಡೆ ಹತ್ತಾರು ಚಿತೆಗಳು ಯಾವಾಗಲೂ ಉರಿಯುವುದನ್ನು ನೋಡಿ ಯಾರಿಗೇ ಆಗಲಿ ಅದೊಂದು ಅಚ್ಚರಿ ಅಂತ ಅನ್ನಿಸಿದರೆ ಅದು ಸಹಜ.

ಸಾವು-ಬದುಕಿನ ರುದ್ರ-ರಮಣೀಯತೆ ಅಂದರೆ ಅದನು ಮಣಿಕರ‍್ಣಿಕಾದಿಂದಲೇ ನೋಡಬಹುದು!

(ಮಾಹಿತಿ ಮತ್ತು ಚಿತ್ರ ಸೆಲೆ: youtube, wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *