ಸಣ್ಣಕತೆ: ಆ ಮಹತ್ವದ ಕಡತ

– ಕೆ.ವಿ.ಶಶಿದರ.

ಕಡತ File

“ಅಬ್ಬಬ್ಬಾ …. ಸಾಕಪ್ಪ ಸಾಕು ….. ಈ ಬವಣೆ. ಬಿಎಂಟಿಸಿ ಬಸ್ಸು ಹಿಡಿದು ಮನೆ ತಲಪುವ ಹೊತ್ತಿಗೆ ಅರ‍್ದ ಜೀವ ಹೋಗಿರುತ್ತೆ” ಸ್ವಗತದಲ್ಲಿ ಅಂದುಕೊಂಡ ತಮೋಗ್ನ ತುಂಬಿದ ಬಸ್ಸನ್ನು ಹತ್ತಲು ವ್ಯರ‍್ತ ಪ್ರಯತ್ನ ಮಾಡಿದಳು. ಆ ನೂಕು, ನುಗ್ಗಾಟ ಸಹಿಸಲಾರದೆ ಮುಂದಿನ ಬಸ್ಸಿನಲ್ಲಾದರೂ ಪ್ರಯತ್ನಿಸುವ ಎಂದು ಹಿಂದೆ ಸರಿದಳು. ಆಗಲೇ ಅವಳಿಗೆ ಹೊಳೆದಿದ್ದು, ಇದು ‘ಲಾಂಗ್ ವೀಕೆಂಡ್ ರಶ್’ ಎಂದು. ಮುಂದೆ ಬರುವ ಬಸ್ಸುಗಳೂ ಸಹ ತುಂಬಿ ಬರುವುದರಲ್ಲಿ ಸಂದೇಹ ಇರಲಿಲ್ಲ. ಪಡೆದು ಬಂದ ಬಾಗ್ಯ. ಅನುಬವಿಸಿಯೇ ತೀರಬೇಕು. ಈಗ ಬೇಕೆಂದರೂ ಅಟೋ ಸಹ ಸಿಗಲ್ಲ. ಓಲಾ ಅಗಲಿ ಉಬರ್ ಆಗಲಿ ಯಾರೂ ಪ್ರತಿಕ್ರಿಯೆ ಕೂಡ ನೀಡುವುದಿಲ್ಲ. ಬಸ್ಸು ಬರುವ ಹಾದಿಯತ್ತ ಗಮನ ಹರಿಸಿದಳು. ಮತ್ತೊಂದು ಬಸ್ಸಿಗಾಗಿ ಕಾದಳು.

ಬಸ್ಸು ಬಂತು. ತಮೋಗ್ನಳ ಅದ್ರುಶ್ಟಕ್ಕೆ, ಅವಳ ಬಳಿಯೇ ಹೆಂಗಸರು ಹತ್ತಬೇಕಿರುವ ಬಾಗಿಲು ನಿಲ್ಲಬೇಕೆ!!! ಈ ಬಾರಿ ಯಾವುದೇ ತೊಂದರೆಯಾಗಲಿಲ್ಲ. ರಶ್ ಕಡಿಮೆ ಆಗಿತ್ತು ಅಂತಲ್ಲ. ಬದಲಿಗೆ ಹಿಂದಿದ್ದ ಗುಂಪು ನೂಕಿದ ರಬಸಕ್ಕೆ ಅಚಾನಕ್ಕಾಗಿ ತಮೋಗ್ನ ಬಸ್ಸಿನಲ್ಲಿದ್ದಳು. ಸೀಟಂತೂ ಮರೀಚಿಕೆಯೇ. ಒಂದು ಕೈಯಲ್ಲಿ ವ್ಯಾನಿಟಿ ಬ್ಯಾಗ್ ಹಿಡಿದು ಮತ್ತೊಂದರಲ್ಲಿ ಪಕ್ಕದ ಸೀಟ್‌ನ ಬಾರ್ ಹಿಡಿದು ಕಶ್ಟ ಪಟ್ಟು ನಿಂತಳು. ಬಸ್ಸು ಹೊರಟಾಗ ಎಲ್ಲಿಂದಲೋ ಬೀಸಿದ ಬಿಸಿ ಗಾಳಿ ಅಹ್ಲಾದವೆನಿಸಿತು. ಗಾಳಿ ಬೀಸಿದ ದಿಕ್ಕಿಗೆ ಮುಕವೊಡ್ಡಿದಳು. ಮುಂಗುರುಳು ಹಣೆಯ ಮೇಲೆ ಲಾಸ್ಯವಾಡುವಶ್ಟು ಸಣ್ಣಗೆ ಗಾಳಿ ಮುತ್ತಿಕ್ಕಿತ್ತು. ಅಕ್ಕಪಕ್ಕದವರು, ಮೇಲಿನ ಬಾರ್ ಹಿಡಿಯಲು ಕೈ ಎತ್ತಿದ್ದ ಕಾರಣ, ಕಂಕುಳಿನಿಂದ ಹೊಮ್ಮುತ್ತಿದ್ದ ದುರ‍್ವಾಸನೆ ಅಸಹ್ಯ ಹುಟ್ಟಿಸುತ್ತಿತ್ತು. ಮೂಗು ಮುಚ್ಚಲು ಸಹ ಕೈ ಬಿಡುವಾಗಿರಲಿಲ್ಲ. ಸಹಿಸಿಕೊಳ್ಳುವುದು ಅನಿವಾರ‍್ಯವಾಗಿತ್ತು. ಅದಶ್ಟೂ ಬರುತ್ತಿರುವ ಗಾಳಿಯತ್ತ ಮೂಗೊಡ್ಡಿದಳು.

ಬಸ್ಸು ಚಲಿಸುತ್ತಿತ್ತು. ಜೀವ ಬಂದಂತಾಯಿತು. ತಮೋಗ್ನಳ ಮನದಲ್ಲಿ ಯೋಚನೆಗಳ ಮಹಾಪೂರವೇ ತಾಂಡವವಾಡತೊಡಗಿತ್ತು. ಎಂದೂ ಇಲ್ಲದ ಬಾಸ್ “ಈ ಪೈಲ್ ತುಂಬಾನೇ ಮಹತ್ವದ್ದು. ಬದ್ರವಾಗಿ ಇಟ್ಟಿರಿ. ನಾನು ಒಂದು ವಾರ ರಜೆ ಹಾಕಿದ್ದೀನಿ, ಸೋಮವಾರ ಇದನ್ನ ಮರೀದೆ ಮ್ಯಾನೇಜರ್ ಗೆ ತಲುಪಿಸಿ” ಎಂದು ಕೊಟ್ಟ ಪೈಲ್‌ನಲ್ಲಿ ಏನಿತ್ತು? ತಲೆಯಲ್ಲಿ ಹುಳ ಹೊಕ್ಕಿತು. ಏನಾದರೂ ಇರಲಿ ‘ನನಗೇನಾಗಬೇಕು’ ಎಂದುಕೊಂಡು ಆ ಯೋಚನೆಯಿಂದ ಹೊರಬರಲು ಪ್ರಯತ್ನಿಸಿದಳು. ಸಾದ್ಯವಾಗಲಿಲ್ಲ. ಬೇರೆ ಏನೇ ಯೋಚಿಸಿದರೂ ಅದರ ಕೊನೆ ಮತ್ತದೇ ಪೈಲ್ ನ ವಿಚಾರಕ್ಕೆ ಬಂದು ನಿಲ್ಲುತ್ತಿತ್ತು.

‘ಯಾಕೆ ಹೀಗೆ? ಇಶ್ಟು ತಲೆ ತಿನ್ನುತ್ತಿದೆ?’ ಎಂದುಕೊಂಡಳು.

ಅಶ್ಟು ಜನ ಸಹೋದ್ಯೋಗಿಗಳಲ್ಲಿ ನನ್ನನ್ನೆ ಹುಡುಕಿ ಆ ಪೈಲ್ ಕೊಟ್ಟದ್ದಾದರೂ ಏಕೆ? ಎಂದು ಪ್ರಶ್ನಿಸಿಕೊಂಡಳು. ಉತ್ತರ ಹೊಳೆಯಲಿಲ್ಲ. ಸಹೋದ್ಯೋಗಿಗಳನ್ನೆಲ್ಲಾ ತಕ್ಕಡಿಯಲ್ಲಿ ಹಾಕಿ ಒಬ್ಬೊಬ್ಬರನ್ನಾಗಿ ತೂಗಿದಳು. ತನ್ನ ತೂಕ ಎಲ್ಲರಿಗಿಂತ ಹೆಚ್ಚೆನಿಸಿತು. ಮನಸ್ಸಿನಲ್ಲೇ ತನ್ನ ಬೆನ್ನನ್ನು ತಾನೆ ತಟ್ಟಿಕೊಂಡಳು ತಮೋಗ್ನ. ಇದ್ದಕ್ಕಿದ್ದಂತೆ ಮನದಲ್ಲಿ ಸಂದೇಹದ ಹುಳ ಹೊಕ್ಕಿತು. ‘ಹೌದು ನನ್ನ ಮೇಲೆ ಅಶ್ಟು ನಂಬಿಕೆ ಇಟ್ಟು, ಬಾಸ್ ಕೊಟ್ಟ ಪೈಲನ್ನು ಬದ್ರವಾಗಿ ಇಟ್ಟಿದ್ದೇನೆಯೇ???’ ಅನುಮಾನದ ಹುತ್ತ ಹೊಗೆಯಾಡಲು ಪ್ರಾರಂಬಿಸಿತು.

ಬಸ್ಸು ತಾನಿಳಿಯಬೇಕಿರುವ ಸ್ಟಾಪಿನ ಹತ್ತಿರ ಬರುತ್ತಿದ್ದಂತೆ ಕೆಳಗಿಳಿದಳು. ಮನದಲ್ಲಿ ಬುಗಿಲೆದ್ದಿದ್ದ ಸಂದೇಹ ಬಲವಾಯಿತು. ಆ ಪೈಲ್ ಏನಾದರೂ ಮಿಸ್ಸಾದರೆ ಏನಾಗಬಹುದು? ತನ್ನ ಕೆಲಸಕ್ಕೆ ಕುತ್ತಾಗಬಹುದೇ? ಏನೆಲ್ಲಾ ಯೋಚನೆ ಮನದಲ್ಲಿ ಹರಿದಾಡಿತು ಅವಳಿಗೇ ತಿಳಿಯದು. ಮನೆ ಬೇಗ ಸೇರುವ ಆಸೆಯನ್ನು ‘ಹೆದರಿಕೆ’ ಬಲಿ ತೆಗೆದುಕೊಂಡಿತ್ತು. ಹೆಚ್ಚು ಯೋಚನೆಗೂ ಅವಕಾಶ ಕೊಡದೆ ಕೂಡಲೇ ತೀರ‍್ಮಾನ ತೆಗೆದುಕೊಂಡು, ಎದುರಿದ್ದ ಬಸ್ ಸ್ಟಾಪ್ ಕಡೆ ನಡೆದಳು.

ಕಾಲಿ ಬಸ್ಸೊಂದು ಬಂತು. ಲಗುಬಗನೆ ಹತ್ತಿ, ಮತ್ತೆ ಆಪೀಸಿನತ್ತ ಹೊರಟಳು. ಬಸ್ಸಿನಲ್ಲಿ ಕೂರಲು ಸೀಟ್ ಸಿಕ್ಕ ಕಾರಣ ಮನಸ್ಸಿಗೆ ನೆಮ್ಮದಿಯಾಯಿತು. ಕಿಟಕಿ ಪಕ್ಕ ಕೂತು ಗಾಳಿಗೆ ಮುಕವೊಡ್ಡಿದಳು. ಯೋಚನೆ ಎತ್ತತ್ತಲೋ ಹರಿಯಿತು.

ಪ್ರತಿಯೊಬ್ಬರ ಜೀವನದಲ್ಲೂ ಇಂತಹ ಪರಿಸ್ತಿತಿ ಸಾಮಾನ್ಯ. ಎಲ್ಲಾದರೂ ಪ್ರವಾಸ ಹೊರಟಾಗ ಮನೆ ಬಾಗಿಲು ಸರಿಯಾಗಿ ಹಾಕಿದೆಯೇ ಎಂಬ ಅನುಮಾನ, ಆಪೀಸಿಗೆ ಹೊರಟ ಮೇಲೆ ಹಾಲು ಪ್ರಿಜ್ಜಿನಲ್ಲಿ ಇಟ್ಟಿರುವ ಬಗ್ಗೆ ಅನುಮಾನ, ಯಾವುದಾದರೂ ಪಂಕ್ಶನ್ ಗೆ ಹೋಗುವಾಗ ವಿಳಾಸ ಸರಿಯಾ ಎಂಬ ಅನುಮಾನಗಳು ಕಾಡುತ್ತವೆ. ಅದರಂತೆ ಬಾಸ್ ಕೊಟ್ಟಿದ್ದ ಪೈಲ್ ಬದ್ರ ಪಡಿಸಿದ್ದರ ಬಗ್ಗೆ ಅನುಮಾನದ ಪಿಶಾಚಿ ಕಾಡಿದ್ದು ತಮೋಗ್ನಳನ್ನ.

ಕಾಲಿ ಬಸ್ಸು. ವೇಗವಾಗಿ ತಮೋಗ್ನ ಇಳಿಯಬೇಕಾದ ಸ್ತಳಕ್ಕೆ ಬಂದಿತ್ತು. ದಾವಂತವಾಗಿ ಕೆಳಗಿಳಿದ ಅವಳು ನೇರ ಮೆಟ್ಟಲೇರಿ ತನ್ನ ಕಚೇರಿಯ ಬಾಗಿಲ ಬಳಿ ಬಂದಳು.

ವಾಚ್ಮನ್ ಎಲ್ಲಾ ಬಾಗಿಲುಗಳನ್ನು ಬದ್ರಪಡಿಸಿದ್ದ. ಅವನಿಂದ ‘ತುರ‍್ತು’ ಎಂದು ಚುಟುಕಾಗಿ ಹೇಳಿ ‘ಕೀ’ ಪಡೆದ ತಮೋಗ್ನ, ತನ್ನ ಚೇಂಬರ್ ಕದ ತೆರೆದಳಶ್ಟೆ. ದ್ರುಶ್ಯ ಕಂಡು ಸ್ತಂಬೀಬೂತಳಾದಳು. ಜೋರಾಗಿ ಚೀರಲು ಪ್ರಯತ್ನಿಸಿದಳು. ಶಬ್ದ ಹೊರಡಲಿಲ್ಲ. ಬಾಯಿಗೆ ಕರವಸ್ತ್ರ ಹಿಡಿದು ಮತ್ತೆ ಆ ದ್ರುಶ್ಯವನ್ನು ದಿಟ್ಟಿಸಿದಳು. ಸುತ್ತಲೂ ರಕ್ತ ಚಲ್ಲಾಡಿತ್ತು. ನಿಸ್ತೇಜವಾಗಿ ಬಿದ್ದಿದ್ದ ದೇಹದತ್ತ ದ್ರುಶ್ಟಿ ಹರಿಸಿದಳು. ಅದು ತನ್ನದೇ ಎಂದು ತಿಳಿದಾಕ್ಶಣ ತಾನೂ ಅದರಲ್ಲಿ ಲೀನವಾದಳು.

(ಚಿತ್ರ ಸೆಲೆ: wikimedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: