ಸಣ್ಣ ಕತೆ: ಗುಟ್ಟು

– ಕೆ.ವಿ.ಶಶಿದರ.

ಗುಟ್ಟು

ಸಂಜೆ ಐದರ ಸಮಯ. ಆಗಂತುಕನೊಬ್ಬನ ಆಗಮನವಾಯ್ತು.

ಮೈ ತುಂಬಾ ವಿಬೂತಿ. ತಲೆಯ ಮೇಲೆ, ಈಶ್ವರನಂತೆ, ಸುರಳಿ ಸುತ್ತಿದ್ದ ಉದ್ದನೆಯ ಕೂದಲು. ಹಿಂದಕ್ಕೆ ಇಳೀ ಬಿದ್ದಿದ್ದ ಜಟೆ. ರಕ್ತ ಇನ್ನೇನು ಒಸರುತ್ತದೇನೋ ಎಂಬಶ್ಟು ಕೆಂಪಗಿರುವ ದೊಡ್ಡ ಕಣ್ಣು. ಹಣೆಯ ತುಂಬಾ ಬಯಂಕರ ಕೆಂಪು ಬಣ್ಣದ, ಹುಣ್ಣಿಮೆಯ ಚಂದ್ರನಶ್ಟು ದೊಡ್ಡ ಕುಂಕುಮ, ಮುಕ ಕಾಣದಂತೆ ಸೊಂಪಾದ ಕಪ್ಪು ಕೂದಲಿನ ನಡುವೆ ಹಣಕಿ ಹಾಕಿರುವ ನೆರೆತ ಕೂದಲಿನ ಎದೆಯ ಮಟ್ಟಕ್ಕೆ ಇಳಿಬಿದ್ದ ಗಡ್ಡ. ಬಾಯನ್ನು ಪೂರ‍್ಣವಾಗಿ ಮುಚ್ಚಿರುವ ಹಾಗೂ ಗಾಳಿಯಲ್ಲಿನ ಸಕಲ ಕಲ್ಮಶಗಳನ್ನು ತನ್ನಲ್ಲೇ ಉಳಿಸಿಕೊಂಡಿರುವ ಮೀಸೆ. ವಿಶಾಲವಾದ ಕೂದಲುಮಯ ಎದೆ. ಕಾಚದಂತೆ, ಮಾಸಿ ಮಲಿನ ವಸ್ತ್ರದಲ್ಲಿ ಸುತ್ತಿದ್ದ ಕಚ್ಚೆ. ಕೈಲೊಂದು ಕವೆಯಿರುವ ಉದ್ದನೆಯ ಕೋಲು. ವರ‍್ಶಾನುಗಟ್ಟಲೆಯಿಂದ ಮೆಟ್ಟು ಕಾಣದ ಮರಗಟ್ಟಿದ, ಹಿಮ್ಮಡಿ ಒಡೆದ ಪಾದ. ಕೈ ಕಾಲು ಬೆರಳುಗಳಲ್ಲಿ, ಬ್ಲೇಡು ಕಾಣದ, ಬಾಗಿದ ಉದ್ದನೆಯ ಉಗುರುಗಳು. ಹೆಗಲಲ್ಲಿ ಇಳೀ ಬಿದ್ದಿದ್ದ ನೀಳವಾದ, ಬಣ್ಣ ಗುರುತಿಲು ಅಸಾದ್ಯವಾದ ಕಾಲಿಯಾಗಿದ್ದಂತಹ ಜೋಳಿಗೆ. ಇದು ಆಗಂತುಕನ ವೇಶಬೂಶಣ. ಚಿಕ್ಕ ಮಕ್ಕಳೇನಾದರೂ ಕತ್ತಲಲ್ಲಿ ನೋಡಿದರೆ ಕಿಟಾರನೆ ಕಿರುಚಿಕೊಂಡು ಹ್ರುದಯ ಒಡೆದು ಸಾಯುವಶ್ಟು ಬಯಂಕರ.

ಗಂಬೀರ ನಡುಗೆಯಲ್ಲಿ ಬಂದ ಆತ, ನೇರವಾಗಿ ರೆಸಿಪ್ಶನ್ ಕೌಂಟರ್ ಬಳಿ ಹೋದ. ಕೌಂಟರ್ ಹಿಂದಿದ್ದವನಿಗೆ ಕೊಂಚ ಬಯಮಿಶ್ರಿತ ಆತಂಕ. ಕೂತಿದ್ದವ ತಕ್ಶಣ ಅಯಾಚಿತವಾಗಿ ಎದ್ದು ನಿಂತು ‘ಏನಾಗಬೇಕಿತ್ತು’ ಎಂದು ಸಂಜ್ನೆಯಲ್ಲೇ ಕೇಳಿದ.

ಅಚ್ಚ ಕನ್ನಡದಲ್ಲಿ ಆತ ‘ದಕ್ಶಿಣಕ್ಕೆ ಬಾಗಿಲಿರುವ ರೂಂ ಬೇಕಿತ್ತು’ ಎಂದ. “ಹಣ ಎಶ್ಟಾದರೂ ಸರಿ. ಒಂದು ರಾತ್ರಿಗೆ ಮಾತ್ರ’ ಎನ್ನುತ್ತಾ, ‘ಇಡೀ ಊರಿನಲ್ಲೆಲ್ಲಾ ವಿಚಾರಿಸಿದೆ. ರೂಮಗಳೇನೋ ಬೇಕಾದಶ್ಟು ಕಾಲಿ ಇದ್ದವು. ಆದರೆ ದಕ್ಶಿಣಕ್ಕೆ ಬಾಗಿಲಿರುವ ರೂಂ ಎಲ್ಲೂ ಕಾಣಲಿಲ್ಲ. ನಿಮ್ಮಲ್ಲಿ ಇದೆ ಅಂತ ಮಾಹಿತಿ ಸಿಕ್ತು. ಅದಕ್ಕೆ ಬಂದೆ” ಸ್ಪಶ್ಟವಾದ ಕನ್ನಡದಲ್ಲಿ, ಕಂಚಿನ ಕಂಟದಲ್ಲಿ ಹೇಳಿದ.

ಕೌಂಟರಿನಲ್ಲಿ ಇದ್ದವನಿಗೆ ಆತನ ಕನ್ನಡ ಕೇಳಿ ಆಶ್ಚರ‍್ಯವಾಯಿತು. ತಕ್ಶಣ ಏನು ಹೇಳಬೇಕು ಎಂದು ತೋಚಲಿಲ್ಲ. ಗೋಣಾಡಿಸಿದ. ರೆಸಿಪ್ಶನ್ ಕೌಂಟರ್‍ನಲ್ಲಿನ ಪುಸ್ತಕದಲ್ಲಿ ಹೆಸರು, ಬಂದ ಕಾರಣ, ಕಾಯಂ ವಿಳಾಸ ಬರೆಯಲು ಆತನ ಮುಂದೆ ಹಿಡಿದು, ಪೆನ್ನು ಕೊಟ್ಟ. ಮುತ್ತು ಪೋಣಿಸಿದಂತಹ, ಆಂಗ್ಲ ಬಾಶೆಯಲ್ಲಿ ಆತ ಎಲ್ಲಾ ಕಾಲಂಗಳನ್ನು ಬರ‍್ತಿ ಮಾಡಿ, ಮುಂಗಡದ ಕಾಲಂ ಮಾತ್ರ ಕಾಲಿ ಬಿಟ್ಟು, ತಲೆಯೆತ್ತಿ ಕೌಂಟರ್ ಕ್ಲರ‍್ಕ್ ಕಡೆ ನೋಡಿದ. ಕ್ಲರ‍್ಕ್ ಹೇಳಿದ ಮೊತ್ತವನ್ನು ಬರೆದು, ಜೋಳಿಗೆಯಲ್ಲಿ ಕೈಹಾಕಿ ಸಿಕ್ಕ ಕಂತೆಯಲ್ಲಿ ಹಣ ಎಣಿಸಿ ಕೌಂಟರ್‍ನ ಮೇಲಿಟ್ಟ.

ರೂಂ ಬಾಯ್ ಆಗಂತುಕನನ್ನು ನೇರವಾಗಿ ಮೂರನೇ ಮಹಡಿಯಲ್ಲಿದ್ದ ರೂಮಿಗೆ ಕರೆದುಕೊಂಡು ಹೋದ. ರೂಮಿನ ಬಾಗಿಲು ತೆಗೆದು ಒಳಗಡೆ ದೀಪದ ಸ್ವಿಚ್ ಹಾಕಿದ. ಮಾಮೂಲಿನಂತೆ ಬಕ್ಶೀಸಿಗಾಗಿ ಕಾದ. ಕೈಯಲ್ಲಿ ಐವತ್ತು ಇಟ್ಟ ಆ ಆಗಂತುಕ “ನಾನಾಗಿ ನಾನು ಬೆಲ್ ಮಾಡುವವರೆಗೂ ಯಾರೂ ನನ್ನನ್ನು ಡಿಸ್ಟರ‍್ಬ್ ಮಾಡಬಾರೆದೆಂದು” ಕಡಕ್ಕಾದ ಎಚ್ಚರಿಕೆ ಕೊಟ್ಟು ಕಳುಹಿಸಿದ.

ಹೇಳಿ ಕೇಳಿ ಅಮಾವಾಸ್ಯೆಯ ರಾತ್ರಿ. ಈ ಆಗಂತುಕನನ್ನು ನೋಡಿದರೆ ಅಗೋರಿಯಂತೆ ಇದ್ದಾನೆ. ಕೌಂಟರಿನ ಕ್ಲರ‍್ಕ್ ಆ ನೆನಪಿಗೇ ಬೆವೆತ. ಮ್ಯಾನೇಜರ್ ಬಂದ ಕೂಡಲೇ ಆತ ಮಾಡಿದ ಮೊದಲ ಕೆಲಸ, ಎಲ್ಲವನ್ನೂ ವದರಿದ್ದು. ಅವನ ಹಾವ ಬಾವದಿಂದ ಬಹಳಶ್ಟು ಹೆದರಿದ್ದಾನೆ ಎಂದು ತಿಳಿಯಿತು ಮ್ಯಾನೇಜರ್‌ಗೆ .

ಮ್ಯಾನೇಜರ್ ಹೊರ ಊರಿನವನಾದ್ದರಿಂದ ಆವರ ವಸತಿ ಇಲ್ಲೇ. ಇದೇ ಹೋಟೆಲ್‍ನ ಮೂರನೇ ಮಹಡಿಯಲ್ಲಿ. ಅದೂ ಈಗ ತಾನೇ ಅಗೋರಿ ಸಂನ್ಯಾಸಿಗೆ ನೀಡಿದ್ದ ರೂಂನ ಬದಿಯಲ್ಲಿ. ಆದರೂ ಮ್ಯಾನೇಜರ್ ರೂಂನ ಬಾಗಿಲು ಮಾತ್ರ ಪೂರ‍್ವ ದಿಕ್ಕಿಗಿತ್ತು.

ರಾತ್ರಿ ಹನ್ನೊಂದರ ವೇಳೆಗೆ ದಿನದ ಎಲ್ಲಾ ವಾಹಿವಾಟನ್ನು ಪರಿಶೀಲಿಸಿ ಮ್ಯಾನೇಜರ್ ತನ್ನ ರೂಮಿಗೆ ಮಾಮೂಲಿನಂತೆ ವಾಪಸ್ ಬಂದ. ರೂಮಿನ ಬಳಿ ಬಂದಾಗ ಸಾಂಬ್ರಾಣಿ ವಾಸನೆ ಅವನ ಮೂಗಿಗೆ ಬಡಿದಿತ್ತು. ಅಗೋರಿ ಸಂನ್ಯಾಸಿ ಇದ್ದ ರೂಮಿನ ಕಡೆ ಒಮ್ಮೆ ದ್ರುಶ್ಟಿ ಬೀರಿ, ತನ್ನ ರೂಮನ್ನು ಸೇರಿದ್ದ.

ನಿದ್ದೆಗೆ ಜಾರಿ ಇನ್ನು ಹೆಚ್ಚು ಹೊತ್ತು ಆಗಿರಲಿಲ್ಲ. ಪಕ್ಕದ ರೂಮಿನಲ್ಲಿದ್ದ ಅಗೋರಿ ಸಂನ್ಯಾಸಿಯ ಕಂಚಿನ ಕಂಟದಿಂದ ಹೊರಬರುತ್ತಿದ್ದ ಮಂತ್ರ ಗೋಶಗಳು ಕಿವಿಗೆ ರಾಚಿತ್ತು. ಬಾರಿ ಗಾತ್ರದ ಗಂಟೆ ಬಾರಿಸುವ ಹಾಗೂ ಜಾಗಟೆಯ ಶಬ್ದ ಒಟ್ಟಾಗಿ ಕೇಳಿಬಂತು. ಒಂದು ಕಡೆ ಮಂತ್ರ ಗೋಶ, ಮತ್ತೊಂದೆಡೆ ಗಂಟೆ, ಜಾಗಟೆಗಳು ಮೊಳಗಿದ ಸದ್ದು ಮುಗಿಲು ಮುಟ್ಟಿತ್ತು. ರೂಮಿನಲ್ಲಿರುವವನು ಒಬ್ಬನಾದರೂ ಏಕಕಾಲದಲ್ಲಿ ಇವೆಲ್ಲಾ ಹೇಗೆ ಸಾದ್ಯ? ಎನ್ನುತ್ತಾ ಮ್ಯಾನೇಜರ್ ತಲೆಯಲ್ಲಿ ಹುಳ ಬಿಟ್ಟುಕೊಂಡ. ಹೀಗೆ ಹತ್ತಾರು ನಿಮಿಶಗಳ ಬಯಂಕರ ಶಬ್ದದ ನಂತರ ಎಲ್ಲವೂ ಸ್ತಬ್ದವಾಯಿತು. ಮ್ಯಾನೇಜರ್ ತನ್ನ ಗಡಿಯಾರ ನೋಡಿಕೊಂಡ. ರಾತ್ರಿ ಎರೆಡೂವರೆ.

ಬೆಳಗಿನ ತನ್ನ ನಿತ್ಯ ಕರ‍್ಮಗಳನ್ನು ಮುಗಿಸಿ ಕಾರ‍್ಯಸ್ತಾನಕ್ಕೆ ಆಗಮಿಸುವ ವೇಳೆಗೆ ಮಾಮೂಲಿನಂತೆ ಹನ್ನೊಂದು ಹೊಡೆದಿತ್ತು. ಅಲ್ಲಿಯೇ ಇದ್ದ ದೇವರ ಪಟಕ್ಕೆ ಕೈಮುಗಿದು ಆತ ತನ್ನ ಕೆಲಸ ಕಾರ‍್ಯದಲ್ಲಿ ತೊಡಗಿಸಿಕೊಂಡ. ಹನ್ನೆರಡರ ಸುಮಾರಿಗೆ ಅಗೋರಿ ಸಂನ್ಯಾಸಿಯ ಆಗಮನವಾಯ್ತು. ನೇರವಾಗಿ ಕೌಂಟರ್ ಬಳಿ ಬಂದ ಆತ ರೂಂ ಕಾಲಿ ಮಾಡುತ್ತಿರುವುದಾಗಿಯೂ ಬಾಡಿಗೆ ಮುರಿದುಕೊಂಡು ಉಳಿದ ಮುಂಗಡ ಹಣ ಹಿಂದಿರುಗಿಸುವಂತೆಯೂ ಕೇಳಿದ. ಮ್ಯಾನೇಜರ್ ತಾನೇ ಕುದ್ದು ಲೆಕ್ಕ ಮಾಡಿ ಬಾಡಿಗೆ ಹಣ ಹಿಡಿದುಕೊಂಡು ಉಳಿದ ಹಣ ವಾಪಸ್ಸು ನೀಡುತ್ತಾ, ‘ಸ್ವಾಮಿ ತಾವು ತಪ್ಪು ತಿಳಿಯದಿದ್ದಲ್ಲಿ ನನ್ನದೊಂದು ಪ್ರಶ್ನೆ?’ ಎಂದು ಉತ್ತರಕ್ಕಾಗಿ ಕಾದ. ಹಿಂದಿರುಗಿ ನೀಡಿದ್ದ ಹಣವನ್ನು ಲೆಕ್ಕ ಮಾಡಿ ಜೋಳಿಗೆಯಲ್ಲಿ ಹಾಕುತ್ತಾ ‘ಕೇಳಿ’ ಎಂಬಂತೆ ತಲೆಯಾಡಿಸಿದ ಅಗೋರಿ ಸಂನ್ಯಾಸಿ.

‘ಸ್ವಾಮಿ, ರಾತ್ರಿ ಹನ್ನೆರೆಡರ ಸುಮಾರಿಗೆ ನಿಮ್ಮ ರೂಮಿಂದ ಮಂತ್ರ ಗೋಶಗಳು, ಗಂಟೆ, ಜಾಗಟೆಗಳ ಶಬ್ದ ಬಯಂಕರವಾಗಿ ಕೇಳಿಸಿತು. ಆದರೆ ತಮ್ಮಲ್ಲಿ ಗಂಟೆಯಾಗಲಿ, ಜಾಗಟೆಯಾಗಲಿ ಇದ್ದಂತೆ ಕಾಣುತ್ತಿಲ್ಲ? ಮೇಲಾಗಿ ನೀವು ಒಬ್ಬರೆ ಇದ್ದೀರಿ. ಒಟ್ಟೊಟ್ಟಿಗೆ ಈ ಎಲ್ಲಾ ಕಾರ‍್ಯ ಹೇಗೆ ಸಾದ್ಯವಾಯಿತು?’ ಎಂದ.

ರಕ್ತ ಕಣ್ಣುಗಳನ್ನು ಇನ್ನೂ ಹಿಗ್ಗಿಸಿ, ಕವೆಯ ಕೋಲನ್ನು ನೆಲಕ್ಕೆ ಕುಕ್ಕಿ, ಗಂಬೀರ ದನಿಯಲ್ಲಿ ‘ಇದು ನಮ್ಮ ವೈಯುಕ್ತಿಕ ಹಟ ಸಾದನೆಯ ಮಾರ‍್ಗ ಅಶ್ಟೆ. ನಮ್ಮದೇ ಆದ ಒಂದು ಗುರಿಯಿದೆ. ಕಳೆದ ಹತ್ತು ವರ‍್ಶಗಳಿಂದ ಅದರ ಸಾದನೆಗೆ ಅವಿರತ ಶ್ರಮಿಸುತ್ತಿದ್ದೇವೆ. ಈಗ ಕೊನೆಯ ಹಂತದಲ್ಲಿದ್ದೇವೆ. ಅದಕ್ಕಾಗಿ ಈ ಪೂಜೆ. ಹನ್ನೆರೆಡು ಅಮಾವಾಸ್ಯೆಯ ರಾತ್ರಿಯಲ್ಲಿ ಪೂಜೆ ಆಚರಿಸಬೇಕಿರುವುದು ಅನಿವಾರ‍್ಯ. ಒಮ್ಮೆ ಪೂಜಾ ಕೈಂಕರ‍್ಯ ಕೈಗೊಂಡ ನಂತರ, ಸ್ತಳ ಬದಲಾವಣೆ ಇಲ್ಲ. ಬೇರೆಡೆ ಮಾಡುವಂತಿಲ್ಲ. ಮಾಡಿದಲ್ಲಿ ಮತ್ತೆ ಮೊದಲಿನಿಂದ ಪ್ರಾರಂಬಿಸಬೇಕು. ಅದಕ್ಕಾಗಿ ಪ್ರತಿ ಅಮಾವಾಸ್ಯೆಯ ದಿನ ನಾವು ಇಲ್ಲಿಗೆ ಬರುತ್ತೇವೆ. ದಕ್ಶಿಣಕ್ಕೆ ಬಾಗಿಲಿರುವ ರೂಂ ಕಾಲಿಯಿರಲಿ’ ಎಂದು ಹೇಳುತ್ತಾ ಹೊರಡಲು ಅಡಿಯಿಡುತ್ತಿದ್ದಂತೆ, ಮ್ಯಾನೇಜರ್ ‘ಗಂಟೆ ಮತ್ತು ಜಾಗಟೆ ಬಗ್ಗೆ……..’ ಎಂದು ಮತ್ತೊಮ್ಮೆ ನೆನೆಪು ಮಾಡಿದರು.

ತೀಕ್ಶ್ಣ ದ್ರುಶ್ಟಿಯಿಂದ ಮ್ಯಾನೇಜರ್ ಕಡೆ ಒಮ್ಮೆ ದಿಟ್ಟಿಸಿ ನೋಡಿ, ‘ಅದರ ಬಗ್ಗೆ ವಿವರ ನಮ್ಮ ಪೂಜೆಯ ಕೊನೆ ದಿನ ತಿಳಿದುಕೊಂಡರೆ ಒಳಿತು. ಬಹಳ ಗುಟ್ಟಿನ ವಿಚಾರ. ಪೂಜೆ ಮುಗಿಯುವ ಮುನ್ನವೇ ತಿಳಿಸಿದರೆ ಪೂಜೆ ನಿಶ್ಪಲವಾಗುತ್ತೆ ಅಂತ ನಮ್ಮ ಗುರುಗಳು ಬೋದಿಸಿದ್ದಾರೆ. ಅದರ ಜೊತೆಗೆ ಎಚ್ಚರಿಕೆ ಸಹ ನೀಡಿದ್ದಾರೆ. ಗುಟ್ಟು ಮುಂಚೆಯೇ ರಟ್ಟಾದರೆ ತಿಳಿಸಿದವರ ಹಾಗೂ ತಿಳಿದುಕೊಂಡವರ ಪ್ರಾಣಕ್ಕೆ ಆಪತ್ತು ಅಂತಾ. ಸುಮ್ಮನೆ ಪ್ರಾಣಾಪಾಯ ಬೇಕಿಲ್ಲ ಅಲ್ಲವೆ?’ ಎಂದು ಪ್ರಶ್ನಿಸಿ ಉತ್ತರಕ್ಕಾಗಿ ಕಾಯದೆ, ತಿರುಗಿಯೂ ನೋಡದೆ ನಡದೇಬಿಟ್ಟರು.

ಮ್ಯಾನೇಜರ್‌ಗೆ ‘ಚೆ.. ಯಾಕಾದರೂ ಪ್ರಶ್ನೆ ಕೇಳಿದೆ’ ಎಂದೆನಿಸಿತು. ಆದರೂ ತೋರ‍್ಪಡಿಸಿಕೊಳ್ಳದೆ, ಕೌಂಟರ್ ಕ್ಲರ‍್ಕ್‍ಗೆ ‘ಪ್ರತಿ ಅಮಾವಾಸ್ಯೆ ದಿನ ರೂಂ ಬೇರಾರಿಗೂ ಕೊಡಬೇಡ ಅಗೋರಿ ಸಂನ್ಯಾಸಿಗೆ ಮೀಸಲಾಗಿರಲಿ’ ಎಂದು ನಿರ‍್ದೇಶನ ನೀಡಿ ತಮ್ಮ ದೈನಂದಿನ ಕಾರ‍್ಯದಲ್ಲಿ ತೊಡಗಿಸಿಕೊಂಡರು. ಮನದಲ್ಲಿ ಅಗೋರಿ ಸಂನ್ಯಾಸಿ ಹೇಳಿದ ಮಾತಿನ ಬಗ್ಗೆ ಚಿಂತೆ ಕಾಡತೊಡಗಿತ್ತು. ಅವ ಏನಾದರೂ ಮಾಡಿಕೊಳ್ಳಲಿ, ಅಕ್ಕ ಪಕ್ಕದ ರೂಮಿನವರಿಂದ ಕಂಪ್ಲೇಂಟ್ ಬರದಿದ್ದರೆ ಸಾಕು ಎಂದುಕೊಂಡ.

ಪ್ರತಿ ಅಮಾವಾಸ್ಯೆಯ ದಿನ ಅಗೋರಿ ಸಂನ್ಯಾಸಿ ಬರುತ್ತಿದ್ದ. ಮಾಮೂಲಿನಂತೆ ಎಲ್ಲದರಲ್ಲೂ ಅಚ್ಚುಕಟ್ಟು. ಮದ್ಯ ರಾತ್ರಿಯಿಂದ ಪೂಜೆ ಪ್ರಾರಂಬ, ಅದೇ ಬಾರಿ ಗಂಟೆ, ಜಾಗಟೆಗಳ ಬಯಂಕರ ಶಬ್ದ, ಕಿವಿಗಡಚಿಕ್ಕುವ ಮಂತ್ರ ಗೋಶಗಳು, ಮಾರನೆಯ ದಿನ ಬೆಳಗಿನ ಪ್ರಾತಹ ವಿದಿಗಳನ್ನು ಮುಗಿಸಿ ಹೊರಡುತ್ತಿದ್ದ. ಅವ ಹೋದ ಮೇಲೆ ರೂಮನ್ನು ಸ್ವಚ್ಚಗೊಳಿಸುವಾಗ ಪರಿಶೀಲಿಸಿದರೆ, ಪೂಜೆ ಮಾಡಿದ ಯಾವುದೇ ಕುರುಹು ಅಲ್ಲಿ ಕಾಣುತ್ತಿರಲಿಲ್ಲ. ಎಲ್ಲಾ ಯಾತಾ ಸ್ತಿತಿಯಲ್ಲೇ ಇರುತ್ತಿತ್ತು. ಊದುಕಡ್ಡಿ ಹಾಗೂ ಸಾಂಬ್ರಾಣಿ ವಾಸನೆಯೂ ಮಾಯ !!!

*****************************

ಮ್ಯಾನೇಜರ್ ತನ್ನ ರೂಮಿನಲ್ಲಿದ್ದ ಕ್ಯಾಲೆಂಡರ್ ನೋಡಿದರು. ಅರೆ….. ಇಂದು ಅಮಾವಾಸ್ಯೆ. ಅಗೋರಿ ಸಂನ್ಯಾಸಿಯ ಬರುವುದಿದೆ. ನೇರ ಕೌಂಟರ್ ಕ್ಲರ‍್ಕ್‍ಗೆ ಪೋನ್ ಮಾಡಿ ರೂಂ ಕಾಲಿಯಿರುವ ಬಗ್ಗೆ ಕಾತ್ರಿ ಮಾಡಿಕೊಂಡರು. ಕೌಂಟರ್ ಕ್ಲರ‍್ಕ್ ‘ಇದು ಕೊನೆ ಅಮಾವಾಸ್ಯೆಯ ಪೂಜೆ’ ಎಂದಾಗ ಮ್ಯಾನೇಜರ್ ಎದೆ ಬಡಿತ ಹೆಚ್ಚಾಯಿತು. ಕೌಂಟರ್‍ನಲ್ಲಿ ಇರುವವರಿಗೆಲ್ಲಾ ಗೊತ್ತು. ಇವತ್ತಿನ ಪೂಜೆ ಮುಗಿದ ನಂತರ, ನಾಳೆ ಹೊರಡುವ ಮುನ್ನ ಅಗೋರಿ ಸಂನ್ಯಾಸಿ ಗಂಟೆ ಜಾಗಟೆಗಳ ಗುಟ್ಟನ್ನು ಮ್ಯಾನೇಜರ್‌ಗೆ ತಿಳಿಸುತ್ತಾನೆ ಎಂದು.

ಮ್ಯಾನೇಜರ್‌ಗೂ ಆತಂಕ ಶುರುವಿಟ್ಟಿತು. ಅವರಾಗೇ ಕರೆದರೆ ಮಾತ್ರ ಹೋಗುವುದು, ಇಲ್ಲವಾದರೆ, ‘ಬೀಸೋ ದೊಣ್ಣೆ ತಪ್ಪಿತು’ ಎಂದು ಸುಮ್ಮನಿರುವುದು ಎಂದುಕೊಂಡ. ಅವ ಕರೆದು ಗುಟ್ಟನ್ನು ರಟ್ಟು ಮಾಡಿದ. ನಂತರ ಏನು? ‘ನಾನು ಇವರೆಲ್ಲರಿಗೂ ಹೇಳಬಹುದೇ ಅತವಾ ಇಲ್ಲವೆ?’ ಎಂಬ ಜಿಜ್ನಾಸೆ ಪ್ರಾರಂಬವಾಯಿತು. ಅವರಿಗೆಲ್ಲಾ ಗುಟ್ಟನ್ನು ಹೇಳಿದ ನಂತರ ತನಗೇನು ಅಪಾಯವಾಗದು ತಾನೆ? ತನ್ನನ್ನು ತಾನೇ ಪ್ರಶ್ನಿಸಿಕೊಂಡ. ಅಗೋರಿ ಸಂನ್ಯಾಸಿಯ ಅಬಿಪ್ರಾಯ ಕೇಳಿ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎಂದುಕೊಂಡಾಗ ಮನಸ್ಸಿಗೆ ಕೊಂಚ ನೆಮ್ಮದಿ.

ಅಗೋರಿ ಸಂನ್ಯಾಸಿ ಹೊರಡುವ ಸಮಯಕ್ಕೆ ಯಾವುದಾದರೂ ಕೆಲಸದ ಮೇಲೆ ಹೊರಗೆ ಹೋಗಿಬಿಟ್ಟರೆ. ಇದು ಒಳ್ಳೆಯ ಸುಲಬ ಉಪಾಯ ಅನ್ನಿಸಿತು ಮ್ಯಾನೇಜರ್‌ಗೆ. ಹಾಗೆಯೇ ಮಾಡುವ ಎಂದುಕೊಳ್ಳುತ್ತಾ ನೇರ ಕೌಂಟರ್ ಬಳಿ ಹೋದ. ಕಾಕಾತಾಳೀಯ ಎಂಬಂತೆ ಅಗೋರಿ ಸಂನ್ಯಾಸಿಯ ಆಗಮನ ಸಹ ಅದೇ ಸಮಯಕ್ಕೆ ಆಯಿತು. ಪ್ರತಿ ಅಮಾವಾಸ್ಯೆಯ ದಿನ ಸಂಜೆ ಬರುತ್ತಿದ್ದ ಅಗೋರಿ ಇಂದು, ಕೊನೆಯ ದಿನ, ಹನ್ನೊಂದು ಗಂಟೆಗೆಲ್ಲಾ ಆಗಮಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿತ್ತು. ಕೌಂಟರಿನ ಜನ ಇಂದು ಅವರಿಗೆ ಎಲ್ಲಾ ರೀತಿಯ ಸಹಕಾರವನ್ನೂ ನೀಡಿದರು. ಯತಾ ಪ್ರಕಾರ ಆತ ಪುಸ್ತಕದಲ್ಲಿ ವಿವರ ದಾಕಲಿಸಿ ಸಹಿ ಮಾಡಿ ಜೋಳಿಗೆಯಿಂದ ಹಣ ತೆಗೆದು ಕೊಟ್ಟು, ಅಲ್ಲಿಯೇ ಇದ್ದ ಮ್ಯಾನೇಜರ್ ಕಡೆ ತಿರುಗಿ ‘ನಾಳೆ ತಪ್ಪದೆ ನಮ್ಮನ್ನು ಬೇಟಿ ಮಾಡಿ’ ಎಂದು ನೇರವಾಗಿ ಹೇಳಿ ರೂಮಿನತ್ತ ಹೆಜ್ಜೆ ಹಾಕಿದ.

ಮ್ಯಾನೇಜರ್ ಅಂದುಕೊಂಡಿದ್ದ ಪ್ಲಾನ್ ಪೂರ‍್ಣ ಪ್ಲಾಪ್ ಆಗಿತ್ತು. ಇಬ್ಬಂದಿಗೆ ಬಿದ್ದ. ಅಗೋರಿ ಸಂನ್ಯಾಸಿ ಹೇಳಿದ ಮೇಲೆ ತಪ್ಪಿಸಿಕೊಂಡಲ್ಲಿ ಮತ್ತಾವ ಗ್ರಹಚಾರ ಕಾದಿದೆಯೋ ಎಂದು ಕೊಳ್ಳುತ್ತಾ ಅಗೋರಿ ಸಂನ್ಯಾಸಿಯ ಮಾತುಗಳನ್ನು ಮೆಲಕು ಹಾಕಿದ. ಎಂತಹ ಗಾಂಬೀರ‍್ಯತೆ, ದ್ರುಡತೆ ಇತ್ತು ಅವರ ಮಾತಲ್ಲಿ!!

ಇನ್ನೂ ಇಪ್ಪತ್ನಾಲ್ಕು ಗಂಟೆ ಸಮಯ ಇದೆಯಲ್ಲಾ ಎಂದು ನಿಟ್ಟಿಸುರು ಬಿಟ್ಟು ಕೆಲಸದ ಕಡೆ ಗಮನ ಹರಿಸಲು ಪ್ರಯತ್ನಿಸಿದ. ಕೆಲಸದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲಾಗಲಿಲ್ಲ. ಹೊರಗಡೆಯ ಕೆಲಸವಾದರೂ ಮುಗಿಸುವ ಎನ್ನುತ್ತಾ ಹೊರ ಹೊರಟ.

ಯತಾಪ್ರಕಾರ ರಾತ್ರಿ ಪೂಜೆ ಪುನಸ್ಕಾರದ ಜೊತೆ ಬಯಂಕರ ಗಂಟೆ, ಜಾಗಟೆಗಳ ಸಪ್ಪಳ. ಇಂದು ಅದಕ್ಕೆ ಹೊಸ ಸೇರ‍್ಪಡೆ ಶಂಕ. ಅದರ ಶಬ್ದ ಸಹ ಕಿವಿ ಬಿರಿದಿತ್ತು. ಗಂಟೆ, ಜಾಗಟೆ ಮತ್ತು ಶಂಕನಾದದ ಶಬ್ದಗಳ ಜೊತೆ ಮಂತ್ರ ಗೋಶಗಳು ಕೇಳಿದ್ದರಿಂದ ಮ್ಯಾನೇಜರ್ ನಿಜವಾಗಲೂ ವಿಸ್ಮಯಗೊಂಡಿದ್ದರು. ಕೊನೆಯ ಪೂಜೆಯಾದ ಕಾರಣ ಮಾಮೂಲಿ ಪೂಜೆಗಿಂತ ದೊಡ್ಡದಾಗಿ, ಬೆಳಗಿನ ಜಾವ ನಾಲ್ಕು ಗಂಟೆಯವರೆಗೂ ವಿಸ್ತರಿಸಿತ್ತು. ಪಕ್ಕದ ರೂಮಿನ ಸಪ್ಪಳ ಹಾಗೂ ಮನದಲ್ಲಿಯ ದುಗುಡದ ಕಾರಣ ಮ್ಯಾನೇಜರ್‌ಗೆ ರಾತ್ರಿಯಿಡೀ ನಿದ್ದೆ ಹತ್ತಿರಕ್ಕೆ ಸುಳಿಯಲಿಲ್ಲ. ನಾಲ್ಕು ಗಂಟೆಯ ನಂತರ ಶಬ್ದ ಕಡಿಮೆಯಾದಾಗ ಜೋಂಪು ಹತ್ತಿತ್ತು. ಹಾಗೆಯೇ ಮಲಗಿದರು.

ರೂಂನ ಕರೆಗಂಟೆ ಶಬ್ದವಾದಾಗ ಅವರಿಗೆ ಎಚ್ಚರವಾಯಿತು. ಸಮಯ ಆಗಲೇ ಹತ್ತೂವರೆ. ಬಾಗಿಲು ತೆಗೆದರು. ರೂಂ ಬಾಯ್. ‘ಅಗೋರಿ ಸಂನ್ಯಾಸಿಗಳು ನಿಮಗೆ ಹೇಳಿಕಳುಹಿಸಿದ್ದಾರೆ ಬೇಗ ಬರಬೇಕಂತೆ’ ಎಂದು ಒಂದೇ ಉಸಿರಿನಲ್ಲಿ ಹೇಳಿದ. ಮ್ಯಾನೇಜರ್‌ಗೆ ಗಾಬರಿಯಾಯಿತು. ಇನ್ನೇನು ಕಾದಿದೆಯೋ ಎನ್ನುತ್ತಾ ಬೇಗ ಬೇಗ ಪ್ರಾತಹವಿದಿಗಳನ್ನು ಮುಗಿಸಿ, ನೇರ ಅಗೋರಿ ಸಂನ್ಯಾಸಿಯ ರೂಂಗೆ ದಾವಿಸಿದರು.

ಅರ‍್ದ ಮುಕ್ಕಾಲು ಗಂಟೆಯ ನಂತರ, ಹಣೆಗೆ ವಿಬೂತಿ ಹಚ್ಚಿಕೊಂಡಿದ್ದ ಮ್ಯಾನೇಜರ್ ಹಾಗೂ ಅಗೋರಿ ಸಂನ್ಯಾಸಿ ಇಬ್ಬರು ರೂಮಿನಿಂದ ಹೊರ ಬಂದರು. ಕೌಂಟರ್‍ನಲ್ಲಿನ ಕೆಲಸ ಮುಗಿಸಿ, ಇಶ್ಟು ದಿನ ಸಹಕರಿಸಿದ್ದಕ್ಕೆ ಅಗೋರಿ ಸಂನ್ಯಾಸಿ ಎಲ್ಲರಿಗೂ ವಂದನೆಗಳನ್ನು ತಿಳಿಸುತ್ತಾ ಹೊರಟೇ ಹೋದ.

ಅಲ್ಲಿದ್ದವರೆಲ್ಲರ ದ್ರುಶ್ಟಿ ಈಗ ಮ್ಯಾನೇಜರ್ ಕಡೆ ತಿರುಗಿತು. ಅಗೋರಿ ಸಂನ್ಯಾಸಿ ಇರುವವರೆಗೂ ಸುಮ್ಮನಿದ್ದ ಅವರುಗಳು, ಈಗ ಮ್ಯಾನೇಜರ್ ಸುತ್ತಾ ನೆರೆದರು. ಅವರುಗಳಲ್ಲಿ ಕುತೂಹಲ ಇಮ್ಮಡಿಸಿತ್ತು. ಹನ್ನೆರೆಡು ತಿಂಗಳಿಂದ ಮಡುಗಟ್ಟಿದ್ದ ಅವರ ಕಾತರಕ್ಕೆ ಒಂದು ತೆರೆ ಬೀಳುವ ಸಮಯ ಒದಗಿ ಬಂದಿತ್ತು. ಚಾತಕ ಪಕ್ಶಿಯಂತೆ ಎಲ್ಲರೂ ಮ್ಯಾನೇಜರ್ ‘ಏನು ಹೇಳಬಹುದು?’ ಎಂದು ಅವರ ಮುಕವನ್ನೇ ದಿಟ್ಟಿಸಿದರು.

ಕೌಂಟರ್ ಹಿಂಬದಿಯ ಸೀಟಿನಲ್ಲಿ ತಲೆಯ ಮೇಲೆ ಕೈ ಹೊತ್ತು ಕುಳಿತ ಮ್ಯಾನೇಜರ್, ಮಂತ್ರಮುಗ್ದರಾಗಿದ್ದರು. ಅವರುಗಳೆಲ್ಲಾ ಕಾಯುತ್ತಿರುವುದು ನನ್ನಿಂದ ಗುಟ್ಟು ತಿಳಿಯಲು ಎಂದು ಅವರಿಗೆ ಸ್ಪಶ್ಟವಾಗಿತ್ತು. ಅಗೋರಿ ಸಂನ್ಯಾಸಿಯೇನೊ ಗುಟ್ಟನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ. ಆದರೆ…. ಆದರೆ ಎಲ್ಲಾ ವಿಶದವಾಗಿ ಹೇಳಿದ ಮೇಲೆ ಕೊಕ್ಕೆ ಹಾಕಿದ್ದು ಮ್ಯಾನೇಜರ್‌ಗೆ ಬಹಳ ಆಗಾತವಾಗಿತ್ತು. ‘ಬಯಂಕರ ಕುತೂಹಲದಿಂದ ಕಾಯುತ್ತಿರುವ ಇವರಿಗೆ ಏನು ಹೇಳಲಿ?’ ಎಂದು ಯೋಚಿಸತೊಡಗಿದರು. ಮನಸ್ಸಿನಲ್ಲೇ ದೀರ‍್ಗವಾಗಿ ಮಂತನ ಮಾಡಿ ಒಂದು ನಿರ‍್ದಾರಕ್ಕೆ ಬಂದು ತಲೆ ಮೇಲೆತ್ತಿದರು. ಅಲ್ಲಿದ್ದವರ ಕಣ್ಣೆಲ್ಲಾ ಇವರ ನೆಟ್ಟಿತ್ತು.

ಅಲ್ಲೇ ಇದ್ದ ನೀರಿನ ಬಾಟಲ್‍ನಿಂದ ಒಂದು ಗುಟುಕು ನೀರು ಕುಡಿದು, ಬಲವಂತವಾಗಿ ಕೆಮ್ಮಿ, ಗಂಟಲು ಸರಿಪಡಿಸಿಕೊಂಡು ‘ಅಗೋರಿ ಸಂನ್ಯಾಸಿ ಹೇಳಿದ್ದಂತೆ, ಗಂಟೆ, ಜಾಗಟೆ ಹಾಗೂ ಶಂಕದ ಶಬ್ದದ ಹಿಂದಿನ ಗುಟ್ಟನ್ನು ಹೇಳುವ ಮುನ್ನ. ತನ್ನ ಗುರುಗಳು ತನಗೂ ಇದೇ ರೀತಿ ಪೂಜೆ ಮುಗಿದ ಮೇಲೆ ಅದರ ಗುಟ್ಟನ್ನು ಹೇಳುತ್ತೇನೆ, ಎಂದಿದ್ದರು. ಪೂಜೆ ಮುಗಿಯುವವರೆಗೂ ಬಹಳ ಆಸಕ್ತಿಯಿಂದ, ದೈನ್ಯತೆಯಿಂದ, ಕುತೂಹಲದಿಂದ, ನಾವೂ ಕಾದಿದ್ದೆವು’

‘ಅಂದು ನಮ್ಮ ಗುರುಗಳು ನಮಗೆ ಹೇಳಿದ್ದನ್ನೆ, ಇಂದು ನಿಮಗೂ ಹೇಳುತ್ತೇವೆ. ಅದೇನೆಂದರೆ….” ಎಲ್ಲರೂ ನಿಂತಲ್ಲೇ ಗೋಣನ್ನು ಮುಂದಕ್ಕೆ ಹಾಕಿ, ನಿಮಿರಿದ ಕಿವಿಯನ್ನು ಮ್ಯಾನೇಜರ್ ಕಡೆ ತಿರುಗಿಸಿ, ನಿಶ್ಯಬ್ದವಾದರು. ಮುಂದುವರೆಸಿದ ಮ್ಯಾನೇಜರ್ ‘…..ಅದೇನೆಂದರೆ…. ‘ಗುಟ್ಟು ಗುಟ್ಟಾಗಿರಬೇಕೇ ಹೊರತು ರಟ್ಟಾಗಬಾರದಲ್ಲವೆ? ಎಂದು ಹೇಳಿದರು” ಎನ್ನುತ್ತಾ ಎಲ್ಲರ ಮುಕದ ಹಾವಬಾವಗಳನ್ನು ಸೂಕ್ಶ್ಮವಾಗಿ ಗಮನಿಸಿದರು.

(ಚಿತ್ರ ಸೆಲೆ: publicdomainpictures.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: