ಬೊಂಬೆಗಳ ಕತೆ – ಚನ್ನಪಟ್ಟಣದ ಗೊಂಬೆಗಳು

ಜಯತೀರ‍್ತ ನಾಡಗವ್ಡ.

ಚನ್ನಪಟ್ಟಣದ ಬೊಂಬೆ, Channapattana Toys

ಆಟಿಕೆ ಮತ್ತು ಗೊಂಬೆಗಳು ಎಂದರೆ ಯಾರಿಗೆ ಇಶ್ಟವಿಲ್ಲ. ಮಕ್ಕಳಾಗಿದ್ದನಿಂದ ಹಿಡಿದು ದೊಡ್ಡವರಾಗುವವರೆಗೆ ಆಟ/ಆಟಿಕೆಗಳಲ್ಲಿ ಮುಳುಗಿರುತ್ತೇವೆ. ಚಿಕ್ಕವರಿದ್ದಾಗ ಮರದ ಕಟ್ಟಿಗೆ ಇಲ್ಲವೇ ಪ್ಲ್ಯಾಸ್ಟಿಕ್‌ಗಳಿಂದಾದ ಬಗೆ ಬಗೆಯ ಆಟಿಕೆ-ಗೊಂಬೆಗಳನ್ನು ಆಡಿದ ನೆನಪುಗಳು ಮರೆಯಾಗದು. ದೊಡ್ಡವರಾದ ಮೇಲೆ, ಚೂಟಿಯುಲಿಗಳಲ್ಲಿ(Smartphones) ಬರುವ ಹಲಬಗೆಯ ಆಟಗಳಿಗೆ ಅಂಟಿಕೊಂಡಿರುವುದನ್ನು ನೋಡುತ್ತಿರುತ್ತೇವೆ. ಈ ಚೂಟಿಯುಲಿ, ಕಂಪ್ಯೂಟರ್ ಆಟಗಳ ಹೊತ್ತಿನಲ್ಲೂ, ಕೆಲವು ಆಟಿಕೆ ಮತ್ತು ಗೊಂಬೆಗಳು ಇನ್ನೂ ಮಕ್ಕಳಿಗೆ ಬಲು ಅಚ್ಚುಮೆಚ್ಚು. ಬರೀ ಮಕ್ಕಳೇ ಯಾಕೆ, ದೊಡ್ಡವರು ಮೆಚ್ಚುವಂತ ಗೊಂಬೆಗಳು, ಆಟಿಕೆಗಳು ಇನ್ನೂ ನಮ್ಮಲ್ಲಿ ಇವೆ. ಅಂತಹ ಕೆಲವು ಆಟಿಕೆ/ಗೊಂಬೆಗಳು ಮತ್ತು ಅವುಗಳ ತಯಾರಕರ ಬಗ್ಗೆ ಕಿರು ಮಾಹಿತಿಯನ್ನು ಈ ಬರಹ ಮೂಲಕ ನಿಮ್ಮ ಮುಂದೆ.

ನಮ್ಮ ಚನ್ನಪಟ್ಟಣದ ಗೊಂಬೆಗಳು

ಗೊಂಬೆಗಳು ಎಂದ ಕೂಡಲೇ ನಮ್ಮ ಕರ‍್ನಾಟಕದವರಿಗೆ ನೆನಪಿಗೆ ಬರುವುದು ಚನ್ನಪಟ್ಟಣದ ಗೊಂಬೆಗಳು. ಚನ್ನಪಟ್ಟಣದ ಗೊಂಬೆಗಳು ಬರೀ ಕರ‍್ನಾಟಕವಶ್ಟೇ ಅಲ್ಲದೇ, ಜಗತ್ತಿನೆಲ್ಲೆಡೆ ಹೆಸರುಗಳಿಸಿವೆ. ಸುಮಾರು 3 ನೂರೇಡುಗಳಶ್ಟು(century) ಹಳೆಯದಾದ ಚನ್ನಪಟ್ಟಣದ ಗೊಂಬೆಗಳ ತಯಾರಿಕೆ, ಈಗಲೂ ಮುಂದುವರೆದಿರುವುದು, ಈ ಗೊಂಬೆಗಳಿಗೆರುವ ಬೇಡಿಕೆಯನ್ನು ತೋರಿಸುತ್ತದೆ. ಆಲೆ ಮರ, ಬೀಟೆ, ಶ್ರೀಗಂದ, ತೇಗ, ರಬ್ಬರ್ ಮರ ಹೀಗೆ ಬಗೆ ಬಗೆಯ ಮರಗಳ ಕಟ್ಟಿಗೆಯಿಂದ ತಯಾರಿಸಲ್ಪಡುವ ಗೊಂಬೆಗಳು, ಅಮೇರಿಕ, ಜರ‍್ಮನಿ, ಜಪಾನ್, ಕೆನಡಾ ಮತ್ತು ಬ್ರಿಟನ್ ಸೇರಿದಂತೆ ಹಲವಾರು ದೇಶಗಳಿಗೆ ಮಾರಾಟವಾಗುತ್ತವೆ. ಪುಟಾಣಿ ಗುಲಗಂಜಿ ಗಾತ್ರದಿಂದ ಹಿಡಿದು ದೊಡ್ಡ ದೊಡ್ಡ ಗೊಂಬೆಗಳನ್ನು ಚನ್ನಪಟ್ಟಣದಲ್ಲಿ ತಯಾರಿಸಲಾಗುತ್ತದೆ. ದಸರಾ ಗೊಂಬೆಗಳು, ಮದುವೆ ಗೊಂಬೆಗಳು, ಬುಗುರಿ, ಎತ್ತಿನ ಬಂಡಿ, ಹಲವಾರು ಪ್ರಾಣಿ-ಹಕ್ಕಿಗಳ ಗೊಂಬೆಗಳನ್ನು ಚನ್ನಪಟ್ಟಣದಲ್ಲಿ ಮಾಡುತ್ತಾರೆ.

ಚನ್ನಪಟ್ಟಣದ ಗೊಂಬೆಗಳ ಹಳಮೆ

ಚನ್ನಪಟ್ಟಣದ ಗೊಂಬೆಗಳ ತಯಾರಿಕೆ ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ಮುನ್ನೆಲೆಗೆ ಬಂದಿತೆಂದು ಹಳಮೆಗಾರರು ಹೇಳುತ್ತಾರೆ. ಇಲ್ಲಿ ತಯಾರಿಸಿದ ಬೊಂಬೆಗಳನ್ನು ಪರ‍್ಶಿಯಾ, ಈಜಿಪ್ಟ್, ಇರಾನ್, ಚೀನಾ ಮತ್ತು ಟರ‍್ಕಿ ಮುಂತಾದ ದೇಶಗಳಿಗೆ ಕಳುಹಿಸಿ ಕೊಡಲಾಗುತ್ತಿತ್ತಂತೆ. ಅಂಕಿ ಸಂಕೆಗಳು ಹೇಳುವಂತೆ, ಈಗಲೂ ಸುಮಾರು 5000 ಮಂದಿ ಚನ್ನಪಟ್ಟಣದ ಬೊಂಬೆ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಚನ್ನಪಟ್ಟಣದ ಸುಮಾರು 250 ಮನೆಗಳಲ್ಲಿ ಮತ್ತು 50 ಪುಟ್ಟ ಕಾರ‍್ಕಾನೆಗಳಲ್ಲಿ ಬೊಂಬೆ ತಯಾರಿಕೆಯ ಗುಡಿ ಕೈಗಾರಿಕೆ ನಡೆದುಕೊಂಡು ಬರುತ್ತಿದೆ.

ಗೊಂಬೆಗಳ ಮಾಡುವ ಬಗೆ

ಸಾಮಾನ್ಯವಾಗಿ ಆಲೆಮರಗಳನ್ನು ಕಡಿದು ತಂದು ಕೂಡಿಡಲಾಗುತ್ತದೆ. ಇವುಗಳನ್ನು ಹಸನುಗೊಳಿಸಿ, ಬೇಕಾದ ಆಕಾರಕ್ಕೆ ಕತ್ತರಿಸಿ, ಗೊಂಬೆಗಳನ್ನು ಕೊರೆಯಲಾಗುತ್ತದೆ. ಕೊನೆಯದಾಗಿ ಇವುಗಳಿಗೆ ಬಣ್ಣ ಹಚ್ಚಿ, ಪಾಲಿಶ್ ಮಾಡುತ್ತಾರೆ. ಮಕ್ಕಳು ಇವುಗಳನ್ನು ಆಟಿಕೆಗಳಾಗಿ ಬಳಸುವುದರಿಂದ ಗೊಂಬೆಗಳ ತಯಾರಿಕೆಯಲ್ಲಿ ಯಾವುದೇ ಇರ‍್ಪಿನ(Chemical) ಬಣ್ಣಗಳನ್ನು ಬಳಕೆ ಮಾಡದೇ ಗಿಡಗಳಿಂದ ಪಡೆದ ಬಣ್ಣಗಳನ್ನೇ ಬಳಸುತ್ತಾರೆ. ಗೊಂಬೆಗಳನ್ನು ತಯಾರಿಸಲು ಬೇಕಾಗುವ ಮೆತ್ತನೆಯ ಆಲೆ ಮರಗಳನ್ನು ಚನ್ನಪಟ್ಟಣದ ಸುತ್ತಮುತ್ತ ಹೆಚ್ಚಾಗಿ ಬೆಳೆಯುತ್ತಾರೆ. ತಲೆಮಾರುಗಳಿಂದ ಗೊಂಬೆಗಳ ತಯಾರಿಕೆಯಲ್ಲಿ ತೊಡಗಿರುವ ಸಾವಿರಾರು ಕುಟುಂಬಗಳು ಚನ್ನಪಟ್ಟಣದಲ್ಲಿವೆ. ಹಳೆಯ ಮಾಡುಗೆಗಳನ್ನು ಚೆನ್ನಾಗಿ ಮೈಗೂಡಿಸಿಕೊಂಡಿರುವ ಗೊಂಬೆ ಸಿದ್ದಪಡಿಸುವವರು, ಹೊಸ ಚಳಕಗಳನ್ನು ಅಳವಡಿಸಿ ಗೊಂಬೆಗಳನ್ನು ಹೊಸ ಕಾಲಕ್ಕೆ ತಕ್ಕಂತೆ ಸಿದ್ದಪಡಿಸಿ ತಮ್ಮ ನಿಪುಣತೆಯನ್ನು ತೋರ‍್ಪಡಿಸುತ್ತಿದ್ದಾರೆ. ಕರ‍್ನಾಟಕ ಕರಕುಶಲ ಅಬಿವ್ರುದ್ದಿ ನಿಗಮವು ಈ ಗೊಂಬೆಗಳ ತಯಾರಿಕೆಗೆ ನೆರವು ಒದಗಿಸಿ, ವರ‍್ಡ್ ಟ್ರೇಡ್ ಆರ‍್ಗನೈಜೇಶನ್ ನಲ್ಲಿ “ನೆಲದ ಗುರುತು/ ವಿಶೇಶ” (Geographical Indication) ಎಂದು ನೋಂದಾಯಿಸಿದ್ದಾರೆ. ಗೊಂಬೆಗಳ ಮೂಲಕ ಹೆಸರು ಪಡೆದಿರುವ ಚನ್ನಪಟ್ಟಣಕ್ಕೆ ಕರ‍್ನಾಟಕದಲ್ಲಿ ಗೊಂಬೆಗಳ ಊರು ಎಂದರೆ, ಇಂಗ್ಲಿಶ್‌ನಲ್ಲಿ “ಟಾಯ್ ಟೌನ್” ಎಂದೇ ಕರೆಯಲ್ಪಡುತ್ತದೆ.

( ಮಾಹಿತಿ ಮತ್ತು ಚಿತ್ರ ಸೆಲೆ : wikipedia )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: