ಮಕ್ಕಳ ಕಲಿಕೆಯಲ್ಲಿ ಶ್ರದ್ದೆಯನ್ನು ಮೂಡಿಸುವುದು ಹೇಗೆ?

–  ಅಶೋಕ ಪ. ಹೊನಕೇರಿ.

ಸ್ಕೂಲು, ಶಾಲೆ School

ಮಕ್ಕಳ ಮನಸ್ಸು ಮಣ್ಣಿನ ಮುದ್ದೆ ಇದ್ದ ಹಾಗೆ. ನೀವು ಒಳ್ಳೆಯದನ್ನೇ ಹೇಳಿ ಕೆಟ್ಟದ್ದನ್ನೇ ಹೇಳಿ ಬಹಳ ಬೇಗ ಅವರ ಮನಸ್ಸಿಗೆ ನಾಟುತ್ತದೆ.

ಶ್ರೇಶ್ಟ ಮಾನಸಿಕ ತಗ್ನ ಸಿಗ್ಮಂಡ್ ಪ್ರಾಯ್ಡ್‌ ಹೇಳುತ್ತಾರೆ:

ಮಕ್ಕಳ ಮನಸ್ಸು ಬಲೂನ್ ಇದ್ದ ಹಾಗೆ ನೀವು ಆ ಬಲೂನನ್ನು ಊದಿ ಯಾವ ಆಕಾರಕ್ಕೆ ಬೇಕಾದರೂ ತರಬಹುದು.

ಇನ್ನೂ ಮುಂದೆ ಹೋಗಿ ಅವರು ಹೇಳುತ್ತಾರೆ:

ಹುಟ್ಟಿದ ಮಗುವನ್ನು ನನ್ನ ಕೈಗೆ ಕೊಡಿ ಅವನೇನಾಗಬೇಕೆಂದು ಬಯಸುತ್ತಾನೊ ಅದನ್ನು ನಾನು ಮಾಡಿಯೇ ತೀರುತ್ತೇನೆ.

ಮೇಲಿನ ಅವರ ಎರಡೂ ಹೇಳಿಕೆ ನೋಡಿದಾಗ ಮಕ್ಕಳ ಮೇಲೆ ಸುತ್ತ ಮುತ್ತಲಿನ ಪರಿಸರದ ಪ್ರಬಾವದಿಂದ, ಮನೆಯ ಎಲ್ಲಾ ಸದಸ್ಯರ ಉತ್ತೇಜನದಿಂದ ಆತನನ್ನು ನೀವು ಯಾವ ಆಕಾರಕ್ಕಾದರೂ ತಿದ್ದಿ ತೀಡಬಹುದು ಎಂಬುದು ಸ್ಪಶ್ಟವಾಗುತ್ತದೆ. ಮಕ್ಕಳ ಕಲಿಕೆಯಲ್ಲಿ ಶ್ರದ್ದೆ ಮೂಡಬೇಕಾದರೆ ಮೊದಲು ತಂದೆ ತಾಯಿಯರ ಅಂದ ಶ್ರದ್ದೆ ತೊಲಗಬೇಕು. ಅವರ ಮಗ ಎಂಜಿನಿಯರ್ ಆದ, ಇವರ ಮಗಳು ಡಾಕ್ಟರ್ ಆದಳು, ಅವರಂತೆ ನನ್ನ ಮಕ್ಕಳೂ ಇದೇ ಆಗಬೇಕು, ಅದೇ ಆಗಬೇಕು ಎಂಬ ಹೋಲಿಕೆ ಮೊದಲು ತಂದೆ ತಾಯಂದಿರಿಂದ ದೂರವಾಗಬೇಕು. ಕೆಲವು ಮಕ್ಕಳಿಗೆ ಗಣಿತವೆಂದರೆ ಕಗ್ಗಂಟು ಅದು ಏನು ಮಾಡಿದರೂ ತಲೆಗೆ ಹತ್ತುವುದಿಲ್ಲ ಹಾಗಿದ್ದಾಗ “ನೀನು ಗಣಿತದಲ್ಲಿ ನೂರಕ್ಕೆ ನೂರು ಅಂಕ ತೆಗಿಬೇಕು, ನೀನು ಟ್ಯೂಶನ್ಗೆ ಹೋಗು, ಅಡ್ವಾನ್ಸ್ಡ್ ರೆಪರೆನ್ಸ್ ಬುಕ್ ತರಿಸಿಕೊಂಡು ಲೆಕ್ಕ ಬಿಡಿಸು” ಎಂದು ಒತ್ತಡ ಹೇರಿದರೆ, ಗಣಿತವೆಂದರೆ ಅಲರ‍್ಜಿ ಇರುವ ಮಗುವಿನ ಮನಸ್ಸು ಏನಾಗಬೇಡ?

ಕಲಿಕೆ ಎನ್ನುವುದು ಸ್ವಾತಂತ್ರ್ಯವಾಗಬೇಕೆ ವಿನಹ ಅದು ಹೇರಿಕೆಯಾಗಬಾರದು. ನಮ್ಮ ಇಂದಿನ ತಂದೆ ತಾಯಂದಿರಲ್ಲಿ ಒಂದು ಅನಿಸಿಕೆ ಇದೆ, ತಮ್ಮ ಮಗ/ಮಗಳು ಎಂಜಿನಿಯರಿಂಗ್ ಇಲ್ಲ ಮೆಡಿಕಲ್ ವಿದ್ಯಾಬ್ಯಾಸ ಪಡೆದರೇನೆ ಅವರ ಜೀವನದಲ್ಲಿ ಗಳಿಕೆ ಗ್ಯಾರಂಟಿ ಇಲ್ಲದಿದ್ದರೆ ಗೋರಂಟಿ ಎಂಬುದು. ಹಾಗೂ ಅವರ ಪ್ರತಿಶ್ಟೆಗೊಂದು ಗರಿ ಮೂಡುವುದು ಎಂಬ ತಪ್ಪು ಗ್ರಹಿಕೆ. ಇದು ಅವರ ಬ್ರಮೆಯಲ್ಲದೆ ಮತ್ತೇನು? ಮೊದಲು ನಾವು ಸರಿಯಾದರೇನೆ ಮಕ್ಕಳ ಕಲಿಕೆಯಲ್ಲಿ ಶ್ರದ್ದೆ ಮೂಡಿಸಲು ಸಾದ್ಯ!

ಮಕ್ಕಳಿಗೆ ಓದಿನಲ್ಲಿ ಶ್ರದ್ದೆ ಮೂಡಬೇಕಾದರೆ ಮೊದಲು ಹೊರಗಿನ ವಾತವರಣದಲ್ಲಿ ಸ್ವಲ್ಪ ಕಾಲ ಮುಕ್ತವಾಗಿ ಮಕ್ಕಳು ಮಕ್ಕಳು ಬೆರೆತು ಆಡುವುದನ್ನು ಮೊದಲು ಕಲಿಸಬೇಕು. ತಂದೆ ತಾಯಿಗಳು ಮಕ್ಕಳ ಮೇಲೆ ಕೆಂಗಣ್ಣು ಬಿಟ್ಟು ಓದೋ…. ಓದೋ… ಎಂದು ಗದರುವ ಬೆರ‍್ಚಪ್ಪಗಳಾಗದೆ, ಅವರೊಡನೆ ಮುಕ್ತವಾಗಿ, ಸ್ನೇಹಮಯಿಯಾಗಿ ಅವರ ಮಟ್ಟಕ್ಕೆ ಇಳಿದು ಬೆರೆತು ಪ್ರೀತಿಯಿಂದ ಸಂವಾದ ನಡೆಸಿ, ಮಕ್ಕಳ ಮನಸ್ಸಿನಲ್ಲಿರಬಹುದಾದ ಗೊಂದಲ, ಬಯ, ದುಗುಡ, ಒತ್ತಡ ಇವುಗಳನ್ನು ಎಳೆ ಎಳೆಯಾಗಿ ಅರಿವ ಮನೋತಗ್ನರಂತೆ ಕೆಲಸ ನಿರ‍್ವಹಿಸಬೇಕು. ಆಗ ಮಕ್ಕಳ ಅಬಿರುಚಿ ಏನು, ಅವರ ಆಸಕ್ತಿ ಯಾವುದರ ಮೇಲಿದೆ ಎಂಬುದು ಅರಿವಿಗೆ ಬರುತ್ತದೆ. ನಾವು ಮಕ್ಕಳ ಅಬಿರುಚಿ, ಅವರ ಆಸಕ್ತಿ, ಮತ್ತು ಅವರು ಕುಶಿ ಪಡುವ ವಿಶಯಗಳ ಕಲಿಕೆಗೆ ಒತ್ತು ಕೊಟ್ಟರೆ ನಾವು ಆ ಮಕ್ಕಳ ಕಲಿಕೆಯಲ್ಲಿ ಶ್ರದ್ದೆ ಮೂಡಿಸಬೇಕೆಂದೇನಿಲ್ಲ. ಆಸಕ್ತಿ ಅವರಲ್ಲಿ ತಂತಾನೆ ಮೂಡುತ್ತದೆ.

ಮಕ್ಕಳ ಮನದಲ್ಲಿ ಒಬ್ಬ ಶ್ರೇಶ್ಟ ಚಿತ್ರ ಕಲಾಕಾರ, ಸಂಗೀತಗಾರ, ನಟ, ಚಾಯಚಿತ್ರಗಾರ, ಸಾಹಿತಿ, ಕವಿ, ವಕೀಲ, ಕ್ರುಶಿಕ, ಅತ್ಲೆಟಿಕ್, ಆಟಗಾರ, ಉದ್ಯಮಿ, ಬಾಶಣಕಾರ, ಎಂಜಿನಿಯರ್, ವೈದ್ಯ, ಇತಿಹಾಸಕಾರ, ಬೂಗೋಳ ತಗ್ನ, ವ್ಯಾಪಾರಿ ಅಡಗಿರಬಹುದು. ಅದು ನಮಗೆ ಗೊತ್ತಾಗದಿದ್ದಲ್ಲಿ, ಅತವಾ ಅವರೊಳಗೆ ನಾವು ಹುಡುಕಾಟ ನಡೆಸಿ ಆ ನಿಟ್ಟಿನಲ್ಲಿ ವಿದ್ಯಾಬ್ಯಾಸ, ತರಬೇತಿ ಕೊಡಿಸಲು ಮುಂದಾಗದಿದ್ದಲ್ಲಿ ನಾವು ಪ್ರವಾಹದ ವಿರುದ್ದ ಈಜಿದಂತಾಗುತ್ತದೆ. ಮತ್ತು ಅವರಿಗೆ ಆಸಕ್ತಿ ಇಲ್ಲದ ವಿಶಯಗಳನ್ನು ನಾವು ಹೇರಿದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿ, ಅದರಲ್ಲಿ ಹೆಚ್ಚಿನದು ಸಾದಿಸಲಾಗದೆ ಮಾನಸಿಕ ಕಿನ್ನತೆಯನ್ನು ಅನುಬವಿಸಿ ಕಲಿಕೆಯಲ್ಲಿ ಶ್ರದ್ದೆ ಕಳೆದುಕೊಂಡು ಬಿಡುತ್ತಾರೆ.

ಮೊದಲು ಪೋಶಕರು ಮಾನಸಿಕ ಸ್ವಸ್ತರಾಗಿ ಆಲೋಚಿಸುವುದನ್ನು ಕಲಿತು. ಮಕ್ಕಳ ಅಬಿರುಚಿಗೆ ತಕ್ಕನಾದ ವಿದ್ಯಾಬ್ಯಾಸ ಕೊಡಿಸುವುದರ ಮುಕೇನ ಒಂದು ಸುಂದರ ಉತ್ತೇಜಕ ವಾತವಾರಣ ಸ್ರುಶ್ಟಿ ಮಾಡಬೇಕು, ಜೊತೆಗೆ ಅವರ ದೈಹಿಕ, ಮಾನಸಿಕ ಬೆಳವಣಿಗೆಗೆ ಪೋಶಕರು ಒತ್ತುಕೊಟ್ಟು ಒಂದು ಆರೋಗ್ಯಪೂರ‍್ಣ ಸ್ಪರ‍್ದಾತ್ಮಕತೆಯನ್ನು ಅವರಲ್ಲಿ ಒಡಮೂಡಿಸಿದರೆ ತಂತಾನೆ ಅವರಿಗೆ ಕಲಿಕೆಯಲ್ಲಿ ಶ್ರದ್ದೆ ಮೂಡುತ್ತದೆ. ಮರೀಚಿಕೆಯ ಬೆನ್ನ ಹಿಂದೆ ಬೀಳುವುದನ್ನು ಪೋಶಕರು ಬಿಡಬೇಕು, ಮಕ್ಕಳ ಮನಸ್ಸನ್ನು ಅರಿಯಬೇಕು, ಮಕ್ಕಳ ಅಬಿರುಚಿ ಆಸಕ್ತಿಯನ್ನು ತಿಳಿದು, ಆ ದಿಕ್ಕಿನಲ್ಲಿ ಅವರನ್ನು ಪ್ರೋತ್ಸಾಹಿಸಿದರೆ ಕಂಡಿತವಾಗಿಯೂ ಮಕ್ಕಳ ಕಲಿಕೆಯಲ್ಲಿ ತಂತಾನೆ ಶ್ರದ್ದೆ ಮೂಡುತ್ತದೆ. ಇದು ಬಿಟ್ಟು ಒತ್ತಾಯದಿಂದ ಕಡಬುನ್ನು ಬಾಯಿಗೆ ತುರುಕಿದರೆ ಗಂಟಲಲ್ಲಿ ಸಿಲುಕಿ ಕೊಳ್ಳುತ್ತದೆ ಅಲ್ವೇ?

(ಚಿತ್ರ ಸೆಲೆ: Pixabay)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.