ಸಾಮಾಜಿಕ ಜಾಲತಾಣಗಳು – ಇಂದಿನ ಅನಿವಾರ‍್ಯತೆ

– ಪ್ರಕಾಶ್ ಮಲೆಬೆಟ್ಟು.

social network, ಸಾಮಾಜಿಕ ಜಾಲತಾಣ

ಹಳೆಯ ಸಂಬಂದಗಳನ್ನು ಗಟ್ಟಿಗೊಳಿಸುತ್ತ, ಹೊಸ ಸಂಬಂದಗಳನ್ನು ಬೆಸೆಯುವ ಸಾಮಾಜಿಕ ಜಾಲತಾಣಗಳು ಇಂದಿನ ಪ್ರಪಂಚದ ಅನಿವಾರ‍್ಯತೆ ಆಗಿಬಿಟ್ಟಿದೆ. ‘ಸಾಮಾಜಿಕ ಜಾಲತಾಣ’ ಒಂದು ಕ್ರಾಂತಿಕಾರಕ ಆವಿಶ್ಕಾರವಾಗಿದ್ದರೂ, ಅನೇಕರು ಇದು ಸಮಾಜದ ಮೇಲೆ ಬೀರುವ ನಕಾರತ್ಮಕ ಪರಿಣಾಮಗಳ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುವುದನ್ನು ನಾವು ಕೇಳುತ್ತಿದ್ದೀವೆ. ಆದರೆ ನಾಣ್ಯಕ್ಕೆ ಹೇಗೆ ಎರಡು ಮುಕಗಳಿರುತ್ತದೆಯೋ, ಹಾಗೆ ಮಾನವನಿಂದ ಹಿಡಿದು ಅವನ ಹೊಸ ಹೊಸ ಆವಿಶ್ಕಾರಗಳ ತನಕ ಪ್ರತಿಯೊಂದಕ್ಕೂ ದನಾತ್ಮಕ ಮತ್ತು ರುಣಾತ್ಮಕ ಗುಣಗಳಿರುತ್ತವೆ. ಯಾವುದೇ ಒಂದು ಉತ್ಪನ್ನದ ವಿಮರ‍್ಶೆ ನಾವು ಮಾಡಿದಾಗ ಅದರ ವೈಶಿಶ್ಟತೆ ಮಾತ್ರವಲ್ಲ, ಅದರ ಮಿತಿಯ ಬಗ್ಗೆ ಕೂಡ ಮಾತನಾಡುತ್ತೇವೆ. ಸಾಮಾಜಿಕ ಜಾಲತಾಣ ಕೂಡ ಹಾಗೆಯೇ. ಅದು ಇಂದಿನ ಜೀವನಶೈಲಿಗೆ ಎಶ್ಟು ಅಗತ್ಯ ಇದೆಯೋ ಅಶ್ಟೇ ಅಪಾಯಕಾರಿಯೆಂಬುದು ಕೂಡ ವಾಸ್ತವ ಸತ್ಯ . ಆದರೆ ನಾವು ಇದನ್ನು ಹೇಗೆ ಗ್ರಹಿಸುತ್ತೇವೆ ಹಾಗು ಹೇಗೆ ಸದುಪಯೋಗಪಡಿಸಿಕೊಳ್ಳುತ್ತೇವೆ ಎಂಬುವುದು ನಮ್ಮ ಮೇಲೆ ಅವಲಂಬಿತವಾಗಿದೆ.

ಸಕಾರಾತ್ಮಕ ಪರಿಣಾಮಗಳು

ನಮ್ಮ ಜೀವನದಲ್ಲಿ ಸಾಮಾಜಿಕ ಜಾಲತಾಣಗಳ ಪ್ರಬಾವ ಅಪಾರ. ದಿನನಿತ್ಯದ ಜೀವನದಲ್ಲಿ ನಮ್ಮ ಅನೇಕ ಕೆಲಸಕಾರ‍್ಯಗಳಿಗೆ ಇದನ್ನು ಅವಲಂಬಿಸಿದ್ದೇವೆ. ಯಾವುದೇ ವ್ಯಕ್ತಿಯಿರಲಿ, ವಸ್ತುವಿರಲಿ, ಅದರ ವಿರುದ್ದ ಮಾತನಾಡುವುದರಿಂದ ರುಣಾತ್ಮಕ ಬಾವನೆ ಹೆಚ್ಚುತ್ತದೆ. ಸಕಾರತ್ಮಕ ಚಿಂತನೆ ಅತವಾ ಅದರ ಸದುಪಯೋಗವಾಗಬೇಕಿದ್ರೆ ನಾವು ಕೇವಲ ಒಳ್ಳೆತನದ ಬಗ್ಗೆ ಮಾತನಾಡಬೇಕು. ಕೆಲವೊಮ್ಮೆ ನಕಾರತ್ಮಕ ವಿಶಯದ ಬಗ್ಗೆ ಮಾತನಾಡುವುದು ಕೂಡ ಕೆಟ್ಟ ಮನಸ್ತಿತಿಗೆ ನಾವು ಹೇಳಿಕೊಡುವ ಪಾಟ ಇಲ್ಲವೇ ನಕಾರತ್ಮಕ ಗ್ನಾನವಾಗಿಬಿಡುವ ಸಂಬವನೀಯತೆ ಕೂಡ ಇದೆ. ಹಾಗಾಗಿ ಸಾಮಾಜಿಕ ಜಾಲತಾಣಗಳ ಒಳ್ಳೆತನದ ಬಗ್ಗೆ, ಅವು ನಮ್ಮ ಬಾಳಲ್ಲಿ ಎಶ್ಟು ಅಗತ್ಯ ಎಂಬುದರ ಬಗ್ಗೆ ಮಾತ್ರ ಇಲ್ಲಿ ಬೆಳಕು ಚೆಲ್ಲಲು ಇಶ್ಟಪಡುತ್ತೇನೆ.

ಸ್ನೇಹ ಸಂಬಂದಗಳ ಬೆಸುಗೆಯಾಗಿ ಸಾಮಾಜಿಕ ಜಾಲತಾಣಗಳು

ಸಾಮಾಜಿಕ ಜಾಲತಾಣಗಳು ಸ್ನೇಹಿತರನ್ನು ಮತ್ತು ಸಂಬಂದಿಗಳನ್ನು, ಬೆಸೆಯುವಲ್ಲಿ ತುಂಬಾ ಸುಲಬವಾದ ಹಾಗು ಅನುಕೂಲಕರವಾದ ವಾತಾವರಣವನ್ನು ನಿರ‍್ಮಿಸಿಕೊಟ್ಟಿದೆ. ನಾನು 1997 ಪಿ.ಯು.ಸಿ. ಯಲ್ಲಿ ವಿದಾಯ ಕೋರುವ ಕಾರ‍್ಯಕ್ರಮದಲ್ಲಿ ಬಾಶಣ ಮಾಡುತ್ತ ಹೇಳಿದ್ದೆ, ಇಂದು ನಮ್ಮ ಹಾಗು ನಿಮ್ಮ ನಡುವಿನ ಅಂತಿಮ ಸಮ್ಮಿಲನ ಅಂತ. ಆದರೆ ಆಗ ನನಗೆ ಗೊತ್ತಿರಲಿಲ್ಲ, ವಾಟ್ಸ್ಯಾಪ್ ಅಂತ ಬರುತ್ತೆ ಹಾಗು ನನ್ನ ಎಲ್ಲ ಸಹಪಾಟಿಗಳನ್ನು 21 ವರುಶಗಳ ನಂತರ ಮತ್ತೆ ಒಟ್ಟುಗೂಡಿಸುತ್ತೆ ಅಂತ! ಎಶ್ಟೊಂದು ಅದ್ಬುತ ಅಲ್ಲವೇ. ಹಾಗೆ ಕುಟುಂಬದ ವಾಟ್ಸ್ಯಾಪ್  ಗುಂಪುಗಳು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಕ್ಶಣಾರ‍್ದದಲ್ಲಿ ನಮ್ಮನ್ನು ಒಂದುಗೂಡಿಸುತ್ತದೆ. ಇದರಿಂದಾಗಿ ಪ್ರೀತಿಯ ಬಾವನೆಗಳು ಕುಟುಂಬದಲ್ಲಿ ಹೆಚ್ಚಾಗುತ್ತಿವೆ. ಕೂಡು ಕುಟುಂಬಗಳು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಇಂತ ಸಾಮಾಜಿಕ ಜಾಲತಾಣಗಳು ಕಡೇಪಕ್ಶ ನಾವು ದೂರದಲ್ಲಿದ್ದರೂ ನಮ್ಮನ್ನು ಒಂದೇ ಮನೆಯವರಂತೆ ಪರಸ್ಪರ ಬೆಸೆಯುತ್ತಿವೆ.

ತೆರೆಮರೆಯ ಪ್ರತಿಬೆಗಳಿಗೆ ಬೆಳಕು ಚೆಲ್ಲುವ ಸಾಮಾಜಿಕ ಜಾಲತಾಣಗಳು

ಸಾಮಾಜಿಕ ಜಾಲತಾಣಗಳು ಇಂದು ನಮ್ಮ ವಿಚಾರಗಳನ್ನು, ಅಬಿಪ್ರಾಯಗಳನ್ನು ಮಂಡಿಸಲು ಒಂದು ಉತ್ತಮ ವೇದಿಕೆಯನ್ನು ಒದಗಿಸಿಕೊಡುತ್ತಿವೆ. ಎಲೆಮರೆಯ ಕಾಯಿಯಂತಿದ್ದ ಎಶ್ಟೋ ಪ್ರತಿಬೆಗಳು ಇಂದು ಜಗತ್ತಿಗೆ ತಮ್ಮ ಅಸ್ತಿತ್ವವನ್ನು ಸಾರುತ್ತಿದ್ದಾರೆ. ಇಂದು ಕನ್ನಡಿಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿರುವ ಅರ‍್ಜುನ್ ಇಟಗಿ ಎಂಬ ಪುಟ್ಟ ಬಾಲಕನ ಪ್ರತಿಬೆ ಸಾಮಾಜಿಕ ಜಾಲತಾಣ ಇಲ್ಲದಿದ್ದರೆ ಹೊರಜಗತ್ತಿಗೆ ಗೊತ್ತಾಗಲು ಸಾದ್ಯವಿತ್ತೇ? ಪೇಸ್ ಬುಕ್ ನಲ್ಲಿ ಹಲವು ಕತೆ-ಕವನಗಳ ಸಂಕಲನ ಗುಂಪಿನಲ್ಲಿ ಬರೆಯುವರ ಕತೆ, ಕವನಗಳನ್ನೂ ಓದಿದಾಗ ನಲಿವು ಮತ್ತು ಅಚ್ಛರಿಯಾಗುತ್ತದೆ. ಎಶ್ಟೊಂದು ಪ್ರತಿಬೆಗಳ ಸಂಗಮ. ಎಲ್ಲಿ ಇದ್ರು ಇವರೆಲ್ಲ ಇಶ್ಟು ದಿನ ಅಂತ ಯೋಚಿಸುವಂತೆ ಬರೆಯುತ್ತಾರೆ. ಪೇಸ್ ಬುಕ್ ವೆಂಬ ಸಾಮಾಜಿಕ ಜಾಲತಾಣ ಇಲ್ಲದಿದ್ದಿದ್ರೆ ಈ ಪ್ರತಿಬೆಗಳ ಬಗ್ಗೆ ಯಾರಿಗೆ ಗೊತ್ತಾಗುತಿತ್ತು?

ಸಾಮಾಜಿಕ ಜಾಲತಾಣಗಳಿಂದ ವ್ಯಾವಹಾರಿಕ ಅವಕಾಶಗಳು

ಉದ್ಯಮಗಳಿಗೆ ಮಾತ್ರವಲ್ಲದೆ ಮನೆಯಲ್ಲಿ ಕುಳಿತು ಕುರಕುಶಲ ವಸ್ತುಗಳು ಅತವಾ ಕೇಕು ತಯಾರಿಸುವ ಗ್ರುಹಿಣಿಯರ, ವಿದ್ಯಾರ‍್ತಿಗಳ ಉದ್ಯಮ ವಿಸ್ತರಣೆಯಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ ಅಪಾರ. ಉದ್ಯಮಕ್ಕೆ ಒಂದು ಹೊಸ ದಿಕ್ಕನ್ನು ತೋರಿಸಿದ ಕೀರ‍್ತಿ ಸಾಮಾಜಿಕ ಜಾಲತಾಣಗಳಿಗೆ ಸಿಗಬೇಕು. ಇವುಗಳ ಮೂಲಕ ನೀವು ನಿಮ್ಮ ವ್ಯಾವಹಾರಿಕ ಕನಸನ್ನು ನನಸು ಮಾಡುವುದು ತುಂಬಾ ಸುಲಬವಾಗಿ ಬಿಟ್ಟಿದೆ. ಸಾಮಾಜಿಕ ಮಾರ‍್ಕೆಟಿಂಗ್ ತುಂಬಾ ವೇಗವಾಗಿ ಬೆಳೆಯುತ್ತಿದೆ. ನಿಮ್ಮ ಉತ್ಪನ್ನಗಳನ್ನು, ಅದರ ಜಾಹೀರಾತನ್ನು ತುಂಬಾ ಕಡಿಮೆ ವೆಚ್ಚದಲ್ಲಿ ಮಾರುಕಟ್ಟೆಗೆ ಪರಿಚಯಿಸಬಹುದು. ಅದು ತುಂಬಾ ಜನರಿಗೆ ತಲುಪುತ್ತದೆ ಕೂಡ. ನನ್ನ ಒಬ್ಬ ಶಿಕ್ಶಕ ಮಿತ್ರ ಹೇಳುತ್ತಿದ್ದರು. ಸಾಮಾಜಿಕ ಜಾಲತಾಣಗಳು ಬೇಡ ಅಂದ್ರು ನಿಲ್ಲಿಸಲಿಕ್ಕೆ ಸಾದ್ಯವಿಲ್ಲ. ನಮಗೆ ಶಾಲೆಯಿಂದ ಯಾವುದೇ ಸಂದೇಶ ಬರೋದಾದ್ರೂ ವಾಟ್ಸ್ಯಾಪ್ ಮೂಲಕನೇ ಕಳುಹಿಸುತ್ತಾರೆ ಅಂತ. ಸಾಮಾಜಿಕ ಜಾಲತಾಣಗಳು ಅಶ್ಟೊಂದು ಪ್ರಬಾವಶಾಲಿಯಾಗಿ ಬಿಟ್ಟಿದೆ.

ಶಿಕ್ಶಣ ಹಾಗೂ ಉದ್ಯೋಗದಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ

ಸಾಮಾಜಿಕ ಜಾಲತಾಣಗಳು ಆದುನಿಕ ಶಿಕ್ಶಣ ಪದ್ದತಿಯಲ್ಲಿ ತಮ್ಮದೇ ಆದ ಕಾರ‍್ಯ ನಿರ‍್ವಹಿಸುತ್ತಿವೆ. ಸಮಯದೊಂದಿಗೆ ವೇಗವಾಗಿ ಹೆಜ್ಜೆ ಹಾಕಲು ಶಿಕ್ಶಣದಲ್ಲಿ ಇದರ ಸದುಪಯೋಗ ತುಂಬಾ ಅಗತ್ಯ. ಹಾಗೆ ಅನೇಕ ಉದ್ಯೋಗ ಅವಕಾಶಗಳು ಸಾಮಾಜಿಕ ಜಾಲತಾಣದಿಂದಾಗಿ ಯುವಜನತೆಗೆ ಸಿಗುತ್ತಿರುವುದು ನಮಗೆ ಕಂಡುಬರುತ್ತಿದೆ.

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದ ಸರಿಯಾದ ಬಳಕೆ ಮಾಡಿದರೆ ನಿಜವಾಗಿಯೂ ಅದು ಒಂದು ಸಂಪತ್ತು ಆಗೋದ್ರಲ್ಲಿ ಯಾವುದೇ ಸಂಶಯವಿಲ್ಲ. ಬೇಕಾಗಿರುವುದು ವಿವೇಕ ಹಾಗು ವಿವೇಚನಾಯುಕ್ತ ಬಳಕೆ!

(ಚಿತ್ರ ಸೆಲೆ: wheelerblogs.files.wordpress.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: