ಮಕ್ಕಳ ಅಚ್ಚುಮೆಚ್ಚಿನ ಲೆಗೊ ಆಟಿಕೆಗಳು

ಜಯತೀರ‍್ತ ನಾಡಗವ್ಡ.

ಲೆಗೊ ಆಟಿಕೆಗಳು, Lego Toys

ಲೆಗೊ ಕಂಪನಿ ಹೆಸರು ಕೇಳದೇ ಇರುವವರು ಕಡಿಮೆಯೇ. ಮಕ್ಕಳಿಗಂತೂ ಲೆಗೊಗಳೆಂದರೆ ಬಲು ಅಚ್ಚುಮೆಚ್ಚು. ಲೆಗೊ ಎಂಬ ಪುಟಾಣಿ ಪ್ಲ್ಯಾಸ್ಟಿಕ್ ಇಟ್ಟಿಗೆಯ ಆಟಿಕೆಗಳನ್ನು ಬಹುತೇಕ ಎಲ್ಲರೂ ಆಡಿಯೇ ಇರುತ್ತಾರೆ. ಲೆಗೊ ಕಂಪನಿ ಶುರುವಾಗಿದ್ದು 1932 ರಲ್ಲಿ. ಡೆನ್ಮಾರ‍್ಕ್ ದೇಶದ ಒಲೆ ಕಿರ‍್ಕ್ ಕ್ರಿಸ್ಟಿಯನ್ಸೆನ್ (Ole Kirk Kristiansen) ಎಂಬುವರು ಈ ಕಂಪನಿ ಹುಟ್ಟು ಹಾಕಿದರು. ಇವರು ಮೊದಲಿಗೆ ಮರಗೆಲಸಿಗರಾಗಿ, ಆಟಿಕೆ ಮಾಡುತ್ತ, ಲೆಗೊ ಕೂಟವನ್ನು ಹುಟ್ಟುಹಾಕಿದರು. ಲೆಗೊ ಇಂದು ಜಗತ್ತಿನ ಹೆಸರುವಾಸಿ ಆಟಿಕೆ ತಯಾರಿಕೆ ಕಂಪನಿಗಳಲ್ಲೊಂದು. ಲೆಗೊ ಆಟಿಕೆಗಳು, ಆಟಿಕೆ ಮಳಿಗೆಗಳು ಇರದ ದೇಶಗಳೇ ಇಲ್ಲವೆನ್ನುವಶ್ಟರ ಮಟ್ಟಿಗೆ ಲೆಗೊ ಕೂಟ ಇಂದು ಬೆಳೆದು ನಿಂತಿದೆ.

ಲೆಗೊ ಎಂದರೆ…

ಲೆಗೊ ಎಂದರೆ ಡ್ಯಾನಿಶ್ ನುಡಿಯ “ಲೆಗ್ ಗೊಡ್ಟ್” (Leg Godt) ಎಂದರೆ “ಚೆನ್ನಾಗಿ ಆಡು” ಎಂದರ‍್ತ. ಎರಡು ಪದಗಳ ಮೊದಲ ಪದ ಸೇರಿಸಿ ಪುಟ್ಟದಾಗಿ ಲೆಗೊ ಎಂಬ ಹೆಸರು ಹುಟ್ಟಿಕೊಂಡಿತು.ಒಂದರ ಮೇಲೊಂದು ಜೋಡಿಸಿ ಕಟ್ಟಬಲ್ಲ ಪ್ಲ್ಯಾಸ್ಟಿಕ್ ಇಟ್ಟಿಗೆಗಳೇ ಈ ಲೆಗೊಗಳು. ಇವುಗಳನ್ನು ಒಂದರ ಮೇಲೆ ಒಂದು ಅಡ್ಡ, ಉದ್ದ ಹೀಗೆ ಬೇಕಾದ ರೀತಿಯಲ್ಲಿ ಒಡಗೂಡಿಸಿ(Interlock) ಅದನ್ನು ನಮಗಿಶ್ಟದ ಕಟ್ಟಡ, ಸೇತುವೆ, ಹಕ್ಕಿ-ಉಸಿರಿ, ಬಂಡಿ, ಡಬ್ಬ, ಗೋಪುರ, ಮನುಶ್ಯ – ಹೀಗೆ ಹಲವಾರು ಆಕಾರಗಳಲ್ಲಿ ಜೋಡಿಸಬಹುದು. ಈಗಿನ ಪ್ಲ್ಯಾಸ್ಟಿಕ್ ಲೆಗೊ ಇಟ್ಟಿಗೆ ಮೊದಲು ತಯಾರಾದದ್ದು 1947ರಲ್ಲಿ, 1959ರ ಹೊತ್ತಿಗೆ ಲೆಗೊ ಇಟ್ಟಿಗೆಗಳಿಗೆ ಹಕ್ಕೋಲೆಯನ್ನು(Patent) ಪಡೆಯಲಾಯಿತು. ಇಲ್ಲಿಂದ ಬೆಳೆಯುತ್ತಲೇ ಸಾಗಿದ ಲೆಗೊ ಹಿಂತಿರುಗಿ ನೋಡಿದ್ದೇ ಇಲ್ಲ. ಮೊದಲು ಡೆನ್ಮಾರ‍್ಕ್ ದೇಶದಲ್ಲಿ ಕಾರ‍್ಕಾನೆ ಹೊಂದಿದ್ದ ಲೆಗೊ ಕಂಪನಿ, ಮುಂದೆ ಮೆಕ್ಸಿಕೊ, ಚೆಕ್, ಜರ‍್ಮನಿ, ಹಂಗೇರಿ ಮತ್ತು ಚೀನಾ ದೇಶಗಳಲ್ಲೂ ಕಾರ‍್ಕಾನೆಗಳನ್ನು ತೆರೆದು ಹೆಮ್ಮರವಾಗಿ ನಿಂತಿದೆ.

ಲೆಗೊಗಳನ್ನು ಬಳಸಿ ಬಾನಬಂಡಿ ಮಾದರಿ!

ಹೆಸರುವಾಸಿ ಇಂಟರ್‌ನಾಶನಲ್ ಸ್ಪೇಸ್ ಸ್ಟೇಶನ್ ಎಂಬ ಅಮೇರಿಕಾದ ಬಾನರಿಮೆ (Space Technology) ಸಂಸ್ತೆಯವರು ಲೆಗೊ ಇಟ್ಟಿಗೆಗಳನ್ನು ಕರೀದಿಸಿ, ಬಾನಬಂಡಿಯ ಮಾದರಿಗಳನ್ನು ತಯಾರಿಸಿದ್ದುಂಟು. ಹಾಲಿವುಡ್‌ನ ಸಿನೆಮಾ ಸ್ಟಾರ್‌ವಾರ‍್ಸ್ ನಲ್ಲಿ ಕಾಣಿಸಿಕೊಂಡ ಎಕ್ಸ್-ವಿಂಗ್ ಪೈಟರ್ ಬಾನಬಂಡಿಯ(Space Vehicle) ಮಾದರಿಯೊಂದನ್ನು ಲೆಗೊ ಮೂಲಕ ತಯಾರಿಸಲಾಗಿತ್ತು. 2013 ರ ನ್ಯೂಯಾರ‍್ಕ್ ನಲ್ಲಿ ಮಾಡಲ್ಪಟ್ಟ ಈ ಮಾದರಿ ಸಿದ್ದಪಡಿಸಲು 5 ಲಕ್ಶ ಲೆಗೊಗಳನ್ನು ಬಳಸಲಾಗಿತ್ತು. ಲೆಗೊ ಬಳಸಿ ತಯಾರಿಸಿದ ದೊಡ್ಡ ಮಾದರಿಯೆಂದು ಇದು ದಾಕಲೆಯಾಗಿದೆ. ಇತರೆ ದೊಡ್ಡ ಲೆಗೊ ಮಾದರಿಗಳೆಂದರೆ, 34 ಮೀಟರ್ ಉದ್ದದ ಗೋಪುರ, 4 ಕಿ.ಮೀ. ಉದ್ದದ ರೈಲಿನ ಹಳಿ ಮತ್ತು 5922 ಇಟ್ಟಿಗೆಗಳಿಂದಾದ ನಮ್ಮ ದೇಶದ ತಾಜಮಹಲ್. ಲೆಗೊಗಳನ್ನು ಒಡಗೂಡಿಸಿ ಕಾರೊಂದನ್ನು ತಯಾರಿಸಿದ್ದರ ಬಗ್ಗೆ ಹೊನಲಿನಲ್ಲಿ ಈ ಮುಂಚೆ ಓದಿರುವಿರಿ.

ಮಾಡುವ ಬಗೆ

ಲೆಗೊಗಳನ್ನು ಎಲ್ಲಬಳಕೆಯ ಏರ‍್ಪಾಟಿಗೆ(Universal System) ತಕ್ಕ ಹಾಗೆ ಮಾಡಲಾಗುತ್ತದೆ. ಉದ್ದ-ಅಗಲಗಳಲ್ಲಿ ಬೇರೆಯಾಗಿದ್ದರೂ ಎಲ್ಲ ಲೆಗೊಗಳನ್ನು ಒಂದಕ್ಕೊಂದು ಒಡಗೂಡಿಸಿ ನಮಗಿಶ್ಟದ ಆಕಾರವನ್ನು ತಯಾರಿಸಬಹುದು. ಒಂದಕ್ಕೊಂದು ಜೊತೆ ಸೇರಿಸಿದಾಗ ಗಟ್ಟಿಯಾಗಿ ಜೋಡಣೆಯಾಗುವ ಲೆಗೊಗಳನ್ನು ಅಶ್ಟೇ ಸಲೀಸಾಗಿ ಬೇರ‍್ಪಡಿಸಬಹುದು. ಇದೇ ಲೆಗೊಗಳ ವಿಶೇಶತೆ. 1958ರಲ್ಲಿ ತಯಾರಾದ ಲೆಗೊಗಳನ್ನು ಇಂದು ತಯಾರಿಸಿದ ಲೆಗೊಗಳೊಂದಿಗೆ ಜೋಡಿಸಬಹುದು, ಇವುಗಳು ಅಶ್ಟೊಂದು ಸುಳುವಾಗಿ ಹೊಂದಿಕೊಳ್ಳುತ್ತವೆ. ಲೆಗೊ ಹೆಸರಿನಲ್ಲಿ ಹಲವಾರು ಸಿನೆಮಾ ಮತ್ತು ಮಕ್ಕಳ ಕಾರ‍್ಟೂನ್‌ಗಳು ಕೂಡ ಬಂದಿವೆ.

( ಚಿತ್ರ ಸೆಲೆ : lego.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: