ಬಸವಣ್ಣನ ವಚನಗಳ ಓದು – 11 ನೆಯ ಕಂತು
– ಸಿ.ಪಿ.ನಾಗರಾಜ.
ಉಳ್ಳವರು ಶಿವಾಲಯ ಮಾಡಿಹರು
ನಾನೇನ ಮಾಡುವೆ ಬಡವನಯ್ಯಾ
ಎನ್ನ ಕಾಲೇ ಕಂಬ
ದೇಹವೇ ದೇಗುಲ
ಶಿರ ಹೊನ್ನಕಲಶವಯ್ಯಾ
ಕೂಡಲಸಂಗಮದೇವಾ,
ಕೇಳಯ್ಯಾ
ಸ್ಥಾವರಕ್ಕಳಿವುಂಟು
ಜಂಗಮಕ್ಕಳಿವಿಲ್ಲ.
ಜಡರೂಪಿಯಾದ ಶಿವನಿಗಾಗಿ ಉಳ್ಳವರು ದೇವಾಲಯವನ್ನು ಕಟ್ಟಿಸಿದ್ದರೆ, ಚೇತನರೂಪಿಯಾದ ಶಿವನಿಗಾಗಿ ವ್ಯಕ್ತಿಯು ತನ್ನ ಮಯ್ ಮನವನ್ನೇ ದೇವಾಲಯವನ್ನಾಗಿ ಮಾಡಿಕೊಂಡಿರುವ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.
‘ಜಡರೂಪಿಯಾದ ಶಿವ’ ಎಂದರೆ ಕಲ್ಲು/ಮಣ್ಣು/ಲೋಹ/ಮರದಿಂದ ಮಾಡಿರುವ ಶಿವನ ವಿಗ್ರಹ.
‘ಚೇತನರೂಪಿಯಾದ ಶಿವ’ ಎಂದರೆ ವ್ಯಕ್ತಿಯ ಅರಿವು ಮತ್ತು ಎಚ್ಚರದ ನಡೆನುಡಿಗಳ ಸಂಕೇತವಾಗಿರುವ ಶಿವ.
( ಉಳ್ಳ್=ಇರು/ಹೊಂದು/ಪಡೆ; ಉಳ್ಳವರು=ಆಸ್ತಿಪಾಸ್ತಿಯನ್ನು ಹೊಂದಿರುವವರು/ಹಣಕಾಸು ಒಡವೆ ವಸ್ತುಗಳನ್ನು ಇಟ್ಟಿರುವವರು/ಸಿರಿವಂತರು/ದೊಡ್ಡ ದೊಡ್ಡ ಗದ್ದುಗೆಯನ್ನೇರಿ ಹೆಚ್ಚಿನ ಸಂಪತ್ತನ್ನು ಪಡೆದವರು; ಶಿವ+ಆಲಯ; ಶಿವ=ಈಶ್ವರ/ದೇವರು; ಆಲಯ=ಮಂದಿರ/ಮನೆ/ನಿವಾಸ; ಶಿವಾಲಯ=ಲಿಂಗದ ಆಕಾರವುಳ್ಳ ಶಿವನ ವಿಗ್ರಹವನ್ನು ಇಟ್ಟು ಕಟ್ಟಿಸಿರುವ ದೇವಮಂದಿರ/ಶಿವ ದೇವಾಲಯ/ಶಿವ ದೇಗುಲ; ಮಾಡು+ಇಹರು; ಮಾಡು=ಎಸಗು/ನಿರ‍್ಮಿಸು/ಕಟ್ಟಿಸು; ಇಹರು=ಇರುವರು; ಮಾಡಿಹರು=ಮಾಡಿರುವರು/ಮಾಡಿದ್ದಾರೆ;
ಉಳ್ಳವರು ಶಿವಾಲಯ ಮಾಡಿಹರು=ದೊಡ್ಡ ಗದ್ದುಗೆಯನ್ನು ಏರಿದವರು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸಂಪತ್ತನ್ನು ಗಳಿಸಿರುವ ಸಿರಿವಂತರು ಶಿವನ ವಿಗ್ರಹವನ್ನು ನೆಲೆಗೊಳಿಸಿ ದೇಗುಲವನ್ನು ಕಟ್ಟಿಸಿದ್ದಾರೆ/ನಿರ‍್ಮಿಸಿದ್ದಾರೆ;
ನಾನ್+ಏನ್+ಅ; ಏನ್=ಯಾವುದು; ಏನ=ಯಾವುದನ್ನು ತಾನೆ; ಮಾಡುವೆ=ಮಾಡಲಿ; ಬಡವನ್+ಅಯ್ಯಾ; ಬಡವ=ಆಸ್ತಿಪಾಸ್ತಿ ಹಣಕಾಸು ಒಡವೆ ವಸ್ತುಗಳಿಲ್ಲದವನು/ಗತಿಯಿಲ್ಲದವನು/ಉಣ್ಣಲು ಉಡಲು ವಾಸಿಸಲು ಬೇಕಾದ ಅನುಕೂಲಗಳು ಇಲ್ಲದವನು; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;
ನಾನೇನ ಮಾಡುವೆ ಬಡವನಯ್ಯಾ=ಬಡವನಾದ ನಾನು ಸಿರಿವಂತರು ಕಟ್ಟಿಸಿರುವಂತೆ ಶಿವನಿಗಾಗಿ ದೇಗುಲವನ್ನು ಕಟ್ಟಿಸಲಾರೆನು;
ಎನ್ನ=ನನ್ನ; ಕಾಲ್+ಏ; ಕಾಲು=ನಡೆದಾಡಲು ಬಳಸುವ ದೇಹದ ಅಂಗ; ಕಾಲೇ=ಕಾಲುಗಳೇ ; ಕಂಬ=ದೇಗುಲದ ಮಾಳಿಗೆಗೆ ಆಸರೆಯಾಗಿ ನಿಲ್ಲಿಸಿರುವ ಕಲ್ಲಿನ ದಪ್ಪನೆಯ ಮತ್ತು ಉದ್ದನೆಯ ಉಪಕರಣ; ದೇಹ=ಮಯ್/ಶರೀರ ; ದೇಗುಲ=ದೇವ+ಕುಲ; ದೇವ=ದೇವರು; ಕುಲ=ಮನೆ/ಮಂದಿರ; ದೇಗುಲ=ದೇವಾಲಯ/ದೇವಮಂದಿರ; ಶಿರ=ತಲೆ/ರುಂಡ; ಹೊನ್ನಕಲಶ+ಅಯ್ಯಾ; ಹೊನ್ನು=ಚಿನ್ನ/ಬಂಗಾರ; ಕಲಶ=ದೇವಾಲಯದ ಗೋಪುರಕ್ಕೆ ಹಾಕಿರುವ ಕಂಚು/ಹಿತ್ತಾಳೆ/ತಾಮ್ರ/ಚಿನ್ನದ ತಗಡಿನಿಂದ ಮಾಡಿರುವ ಹೊದಿಕೆ; ಹೊನ್ನಕಲಶ=ಚಿನ್ನದ ಕಲಶ;
ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರ ಹೊನ್ನಕಲಶವಯ್ಯಾ=ನನ್ನ ಕಾಲುಗಳೇ ದೇಗುಲದ ಕಂಬಗಳಾಗಿವೆ. ನನ್ನ ದೇಹವೇ ದೇಗುಲವಾಗಿದೆ. ನನ್ನ ತಲೆಯೇ ದೇವಾಲಯದ ಗೋಪುರದ ತುತ್ತತುದಿಯಲ್ಲಿ ಹೊಳೆಹೊಳೆಯುತ್ತಿರುವ ಚಿನ್ನದ ಕಲಶವಾಗಿದೆ. ನನ್ನ ಮನದ ಒಳಗುಡಿಯಲ್ಲಿ ಅರಿವಿನ ಮತ್ತು ಎಚ್ಚರದ ನಡೆನುಡಿಯ ದಾರಿದೀಪವಾಗಿ ಚೇತನರೂಪಿಯಾದ ಶಿವನು ನೆಲೆಸಿದ್ದಾನೆ;
ಕೂಡಲಸಂಗಮದೇವ=ಶಿವ/ಈಶ್ವರ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ; ಕೇಳ್+ಅಯ್ಯಾ; ಕೇಳ್=ಆಲಿಸು/ಕಿವಿಗೊಡು/ಗಮನಿಸು; ಕೇಳಯ್ಯಾ=ಕೇಳುವಂತಹವನಾಗು/ಮನಸ್ಸಿಟ್ಟು ಕೇಳಿಸಿಕೊ;
ಸ್ಥಾವರಕ್ಕೆ+ಅಳಿವು+ಉಂಟು; ಸ್ಥಾವರ=ಜಡವಾದುದು/ಚಲನೆಯಿಲ್ಲದ್ದು/ದೇಗುಲದೊಳಗೆ ಮಣ್ಣು/ಮರ/ಕಲ್ಲು/ಲೋಹದಿಂದ ಮಾಡಿ ಇಟ್ಟಿರುವ ಲಿಂಗದ ವಿಗ್ರಹ; ಅಳಿ=ನಾಶವಾಗುವುದು/ಕೆಡುವುದು/ಹಾಳಾಗುವುದು/ಇಲ್ಲವಾಗುವುದು; ಅಳಿವು=ನಾಶ/ಹಾನಿ/ಕೆಡುಕು; ಉಂಟು=ಇದೆ/ಇರುವುದು; ಅಳಿವುಂಟು=ಹಾಳಾಗುವುದು/ನಾಶವಾಗುವುದು/ಇಲ್ಲವಾಗುವುದು; ಜಂಗಮಕ್ಕೆ+ಅಳಿವು+ಇಲ್ಲ; ಜಂಗಮ=ಚೇತನವುಳ್ಳದ್ದು/ಚಲನೆಯುಳ್ಳದ್ದು/ಯಾವ ಊರಿನಲ್ಲಿಯೂ ಹೆಚ್ಚು ಕಾಲ ನೆಲೆನಿಲ್ಲದೆ , ಸದಾಕಾಲ ಸಂಚರಿಸುತ್ತ, ಒಳ್ಳೆಯ ನಡೆನುಡಿಗಳಿಂದ ಬಾಳುವಂತೆ ಜನರಿಗೆ ತಿಳಿಯಹೇಳುವ ವ್ಯಕ್ತಿ/ಶಿವನಲ್ಲಿ ಒಲವುಳ್ಳ ವ್ಯಕ್ತಿ/ಜನಮನದಲ್ಲಿ ಅರಿವು ಮತ್ತು ಎಚ್ಚರವನ್ನು ಮೂಡಿಸುವ ವ್ಯಕ್ತಿ; ಅಳಿವಿಲ್ಲ=ನಾಶವಿಲ್ಲ/ಹಾನಿಯಿಲ್ಲ;
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ=ಕಾಲ ಉರುಳಿದಂತೆಲ್ಲಾ / ಸಾವಿರಾರು ವರುಶಗಳ ಕಾಲಮಾನದಲ್ಲಿ ಜಡರೂಪದ ಶಿವನ ವಿಗ್ರಹವನ್ನುಳ್ಳ ಶಿವಾಲಯ ಪಾಳುಬಿದ್ದು ಇಲ್ಲವಾಗುತ್ತದೆ/ಹಾಳಾಗುತ್ತದೆ/ಕಣ್ಮರೆಯಾಗುತ್ತದೆ. ಆದರೆ ಅರಿವು ಮತ್ತು ಎಚ್ಚರದ ನಡೆನುಡಿಗಳನ್ನು ಜನಮನದಲ್ಲಿ ಮೂಡಿಸುವ ಜಂಗಮನ ಕೆಲಸವು ತಲೆಮಾರಿನಿಂದ ತಲೆಮಾರಿಗೆ ಆಯಾಯ ಕಾಲದಲ್ಲಿ ಬದುಕಿ ಬಾಳುತ್ತಿರುವ ಒಳ್ಳೆಯ ವ್ಯಕ್ತಿಗಳಿಂದ ಮುಂದುವರಿಯುತ್ತಿರುತ್ತದೆ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ.
ಶಿವನನ್ನು ದೇವರನ್ನಾಗಿ ಒಪ್ಪಿಕೊಂಡಿರುವ ಶಿವಶರಣಶರಣೆಯರು ಶಿವಾಲಯವನ್ನು/ದೇಗುಲವನ್ನು ನಿರಾಕರಿಸುವುದಕ್ಕೆ ಅನೇಕ ಕಾರಣಗಳಿವೆ.
1) ವಿಗ್ರಹ ರೂಪದಲ್ಲಿ ಕಡೆದಿರುವ ದೇವರನ್ನು ದೇಗುಲದ ಒಳಗುಡಿಯಲ್ಲಿ ನೆಲೆಗೊಳಿಸುತ್ತಿದ್ದಂತೆಯೇ, ವಿಗ್ರಹದ ಹತ್ತಿರಕ್ಕೆ ಹೋಗಿ ಪೂಜಿಸಲು ಪೂಜಾರಿಯು ಮಾತ್ರ ಯೋಗ್ಯನಾಗುತ್ತಾನೆ/ತಕ್ಕವನಾಗುತ್ತಾನೆ. ಇನ್ನುಳಿದವರು ಒಳಗುಡಿಯಿಂದ ಹೊರನಿಲ್ಲಬೇಕಾಗುತ್ತದೆ. ಇಲ್ಲಿಂದಲೇ ಮಾನವರಲ್ಲಿ ಮೇಲು-ಕೀಳಿನ ವಿಂಗಡಣೆಯು ಮೊದಲಾಗುತ್ತದೆ. ಮೇಲು/ಕೀಳಿನ ಜಾತಿ ಮೆಟ್ಟಲುಗಳಿಂದ ಕೂಡಿರುವ ನಮ್ಮ ಸಮಾಜದ ಜಾತಿರಚನೆಯ ಕಟ್ಟುಪಾಡುಗಳನ್ನು ದೇಗುಲದಲ್ಲಿ ನಡೆಯುವ ಆಚರಣೆಗಳು ಮುಂದುವರಿಸಿಕೊಂಡು ಬರುತ್ತಿವೆ. ಮೇಲು ಜಾತಿಯವರಿಗೆ ಮತ್ತು ಮೇಲು ವರ‍್ಗದವರಿಗೆ ಅಂದರೆ ಸಿರಿವಂತರಿಗೆ ಹಾಗೂ ದೊಡ್ಡ ದೊಡ್ಡ ಗದ್ದುಗೆಯಲ್ಲಿರುವವರಿಗೆ ಮೊದಲ ಮನ್ನಣೆಯನ್ನು ನೀಡುವ ದೇಗುಲದ ಆಚರಣೆಗಳು, ಕೆಳ ಜಾತಿ ಮತ್ತು ಕೆಳ ವರ‍್ಗದ ಅಂದರೆ ಹಣವಿಲ್ಲದ/ಸಂಪತ್ತಿಲ್ಲದ/ಗದ್ದುಗೆಯಿಲ್ಲದ ಜನಸಮುದಾಯವನ್ನು ಕಡೆಗಣಿಸಿವೆ. ಈ ರೀತಿ ಮೇಲು/ಕೀಳಿನ ತರತಮವು ಮುಂದುವರಿದುಕೊಂಡು ಹೋಗಲು ಕಾರಣವಾಗಿರುವ ಮತ್ತು ನೆರವಾಗಿರುವ ದೇಗುಲದ ನೆಲೆಯಿಂದ ಶಿವಶರಣಶರಣೆಯರು ದೂರಸರಿದಿದ್ದಾರೆ.
2) ಉಳ್ಳವರು ಶಿವಾಲಯವನ್ನು / ಇನ್ನಿತರ ದೇವರಿಗೆ ದೇಗುಲವನ್ನು ಕಟ್ಟಿಸಲು ಕಾರಣವೇನೆಂಬುದನ್ನು ತಿಳಿಯಬೇಕಾದರೆ, ಮಾನವನ ಮನದಲ್ಲಿ ದೇವರು ರೂಪುಗೊಂಡ ಚರಿತ್ರೆಯನ್ನು ಮೊದಲು ಅರಿಯಬೇಕು. ಪ್ರಾಚೀನ ಕಾಲದಲ್ಲಿ ಮಾನವನು ತನ್ನ ಕಣ್ಣ ಮುಂದಿನ ನಿಸರ‍್ಗದಲ್ಲಿನ ಮಳೆ/ಗುಡುಗು/ಸಿಡಿಲು/ಕಾಳ್ಗಿಚ್ಚು/ಬಿರುಗಾಳಿ/ಬೂಕಂಪ/ಪ್ರವಾಹ/ಕಾಡು ಪ್ರಾಣಿಗಳಿಂದ ಉಂಟಾಗುವ ಅಪಾಯ/ಆಪತ್ತು/ಅವಗಡಗಳಿಂದ ಪಾರಾಗಿ ಜೀವವನ್ನು ಉಳಿಸಿಕೊಳ್ಳಲು ಒಂದೊಂದು ಪ್ರಸಂಗಕ್ಕೂ/ಸಂಗತಿಗೂ ಒಬ್ಬೊಬ್ಬ ದೇವತೆಯನ್ನು ಕಲ್ಪಿಸಿಕೊಂಡು ಬಗೆಬಗೆಯ ಆಚರಣೆಗಳ ಮೂಲಕ ಪೂಜಿಸತೊಡಗಿದನು. ಅನಂತರದ ಕಾಲಮಾನದಲ್ಲಿ ಅಲೆಮಾರಿಯಾಗಿದ್ದ ಮಾನವ ಗುಂಪುಗಳು ಬೇಸಾಯದ ಮೂಲಕ ಒಂದೆಡೆ ನೆಲೆಯೂರಿ ನಿಂತು ಸಮಾಜ ರಚನೆಗೊಂಡಾಗ, ವರ‍್ಣ ಮತ್ತು ಜಾತಿಗಳ ಜತೆಗೆ ಆಸ್ತಿಯ ಹಕ್ಕು ದೊರೆತು ಉಳ್ಳವರು/ಸಿರಿವಂತರು ಮತ್ತು ಇಲ್ಲದವರು/ಬಡವರು ಎಂಬ ವರ‍್ಗ ರೂಪುಗೊಂಡಿತು. ಬಡವರು ತಮ್ಮ ದಿನನಿತ್ಯದ ಅಗತ್ಯಗಳಾದ ಅನ್ನ.ಬಟ್ಟೆ,ವಸತಿ,ವಿದ್ಯೆ,ಉದ್ಯೋಗ,ಆರೋಗ್ಯಕ್ಕಾಗಿ ದೇವರಲ್ಲಿ ಮೊರೆಯಿಟ್ಟು ,ಅವನ್ನು ಪಡೆಯುವುದಕ್ಕಾಗಿ ಪೂಜಿಸತೊಡಗಿದರೆ, ಜೀವನಕ್ಕೆ ಅಗತ್ಯವಾದುದೆಲ್ಲವನ್ನೂ ಹೊಂದಿರುವ ಸಿರಿವಂತರು ಮತ್ತು ದೊಡ್ಡ ದೊಡ್ಡ ಗದ್ದುಗೆಯನ್ನು ಏರಿ ಕುಳಿತವರು ತಮ್ಮ ಬಳಿಯಿರುವ ಸಂಪತ್ತನ್ನು ಕಾಪಾಡಿಕೊಂಡು , ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಂಪತ್ತನ್ನು ಗೋರಿಗುಡ್ಡೆ ಹಾಕಿಕೊಳ್ಳಲು ಮತ್ತು ತಮ್ಮ ಗದ್ದುಗೆಯನ್ನು ಉಳಿಸಿಕೊಳ್ಳುವುದಕ್ಕಾಗಿ ದೇವರನ್ನು ಪೂಜಿಸತೊಡಗಿದರು.
ಜನಸಮುದಾಯದ ಎಲ್ಲರ ಅಗತ್ಯಗಳಿಗೆ ಬಳಕೆಯಾಗಬೇಕಾಗಿದ್ದ ನಿಸರ‍್ಗ ಸಂಪತ್ತು ಮತ್ತು ಮಾನವ ದುಡಿಮೆಯಿಂದ ಉತ್ಪನ್ನಗೊಂಡ ವಸ್ತುಗಳು ಕೆಲವೇ ಸಿರಿವಂತರ ಕಯ್ ಸೇರಿ, ಹೆಚ್ಚಿನ ಸಂಕೆಯ ಬಡಜನರು ತಮ್ಮ ಪಾಲಿನದನ್ನು ಪಡೆಯಲಾಗದೆ ಹಸಿವು/ಬಡತನ/ಅಪಮಾನಗಳಿಂದ ನರಳತೊಡಗಿದರು. ಬಡವರಾಗಿರುವ ಜನರ ಸಂಕಟಗಳಿಗೆ ಅವರು ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪ ಪುಣ್ಯಗಳೇ ಕಾರಣವೆಂಬ ನಂಬಿಕೆಯನ್ನು ದೇವರು ಮತ್ತು ದರ‍್ಮದ ಹೆಸರಿನಲ್ಲಿ ಸಿರಿವಂತರು ಮತ್ತು ಅಕ್ಕರವಂತರಾದ ಮೇಲು ಜಾತಿಯ ಜನರು ಕಲೆ,ಸಾಹಿತ್ಯ,ಸಂಗೀತಗಳ ಮೂಲಕ ಜನಮನದಲ್ಲಿ ಬಿತ್ತಿದರು.
ಸಮಾಜದ ರಚನೆಯಲ್ಲಿರುವ ಜಾತಿ/ವರ‍್ಗ ತಾರತಮ್ಯದ ಕಟ್ಟುಪಾಡುಗಳು ಮತ್ತು ಉಳ್ಳವರು ಮಾಡುತ್ತಿರುವ ವಂಚನೆ/ಕಪಟತನ/ಕ್ರೂರತನದ ನಡೆನುಡಿಗಳು ತಮ್ಮ ಬಾಳಿನ ನೋವು/ಸಂಕಟ/ಯಾತನೆಗಳಿಗೆ ಕಾರಣವೆಂಬುದನ್ನು ಬಡವರು ಅರಿಯಲಾಗದೆ, ದೇವರನ್ನೇ ತಮ್ಮ ಬದುಕಿನ ಆಗುಹೋಗುಗಳಿಗೆ ಹೊಣೆಗಾರನನ್ನಾಗಿ ಮಾಡಿಕೊಂಡರು. ಇದರಿಂದಾಗಿ ದುಡಿಯುವ ಸಮುದಾಯಕ್ಕೆ ಸೇರಿದ ಬಡವರು ತಮ್ಮ ದುಡಿಮೆಯ ಸಂಪತ್ತನ್ನು ಕೊಳ್ಳೆಹೊಡೆದು ಸುಲಿಗೆ ಮಾಡುತ್ತಿರುವ ಉಳ್ಳವರನ್ನು ಮತ್ತು ಗದ್ದುಗೆಯಲ್ಲಿರುವ ವ್ಯಕ್ತಿಗಳನ್ನು ತಮ್ಮ ಹಗೆಗಳೆಂದು ಗುರುತಿಸಲಾಗಲಿಲ್ಲ.
ಸಿರಿವಂತರು ದೇಗುಲಗಳನ್ನು ಕಟ್ಟಿಸುವ ಮೂಲಕ ಬಡವರ ಮನದಲ್ಲಿ ದೇವರ ಬಗೆಗೆ ಇದ್ದ ನಂಬಿಕೆಯನ್ನು ಹೆಚ್ಚುಮಾಡಿದರು. ಇದರಿಂದ ಸಿರಿವಂತರ ಸುಲಿಗೆಯು ಯಾವುದೇ ಅಡಚಣೆಗಳಿಲ್ಲದೆ ಮುಂದುವರಿಯಲು ಅನುಕೂಲವಾಯಿತು. ದುಡಿಯುವ ವರ‍್ಗದ ಬಡವರೆಲ್ಲರೂ ಒಂದಾಗಿ ಜತೆಗೂಡಿ ಸಿರಿವಂತರ ಎದುರು ಹೋರಾಡಿ ತಮ್ಮ ದುಡಿಮೆಯ ನ್ಯಾಯಯುತವಾದ ಪಾಲನ್ನು ಪಡೆಯದಂತೆ ಬಡವರನ್ನು ತಡೆಗಟ್ಟಿರುವ ಶಕ್ತಿಯೇ ದೇವರಾಗಿದೆ. ಏಕೆಂದರೆ ದೇವರನ್ನು ನಂಬಿದ ಬಡವರು ತಮ್ಮ ಈ ಜನ್ಮದ ಸಂಕಟಗಳಿಗೆ ತಾವು ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪ-ಪುಣ್ಯಗಳೇ ಕಾರಣವೆಂದು ತಿಳಿದು, ಅದಕ್ಕೆ ತಕ್ಕಂತೆ ತಮ್ಮ ಹಣೆಯಲ್ಲಿ ಬ್ರಹ್ಮನು ಬರೆದಿರುವ ವಿದಿಬರಹವನ್ನು ಇಲ್ಲವೇ ಹಣೆಬರಹವನ್ನು ಅಳಿಸಲಾಗದು/ಬದಲಾಯಿಸಲಾಗದು ಎಂದು ನಂಬಿದ್ದಾರೆ. ತಾವು ಈಗಿರುವ ನೆಲೆಯಲ್ಲಿಯೇ ಬದುಕನ್ನು ಕಳೆಯುವುದು ಅನಿವಾರ‍್ಯವೆಂದು ಒಪ್ಪಿಕೊಂಡು ಹಸಿವು/ಬಡತನ/ಅಪಮಾನದಲ್ಲಿಯೇ ಬೆಂದು ಬೂದಿಯಾಗುತ್ತಿದ್ದಾರೆ.
ಉಳ್ಳವರ ವಂಚನೆ/ಕ್ರೂರತನ/ಸುಲಿಗೆಯು ಹೆಚ್ಚಾದಂತೆಲ್ಲಾ ನಾಡಿನ ಉದ್ದಗಲದಲ್ಲಿ ಹೊಸ ಹೊಸ ದೇವಾಲಯಗಳ ಕಟ್ಟುವಿಕೆ ಮತ್ತು ಇರುವ ದೇವಾಲಯಗಳನ್ನು ಬೆಲೆಬಾಳುವ ವಸ್ತುಗಳಿಂದ ಅಲಂಕರಿಸಿ ಒಳಗುಡಿಯಲ್ಲಿರುವ ವಿಗ್ರಹಕ್ಕೆ ಚಿನ್ನ ಬೆಳ್ಳಿ ವಜ್ರ ವೈಡೂರ‍್ಯಗಳ ಒಡವೆಗಳನ್ನು ತೊಡಿಸಿ ದೇವರನ್ನು ಮೆರೆಸುವ ಆಚರಣೆಗಳು ಕಂಗೊಳಿಸುತ್ತವೆ. ಏಕೆಂದರೆ ಕೋಟಿಗಟ್ಟಲೆ ಜನರ ದಿನನಿತ್ಯದ ಬದುಕಿಗೆ ಅಗತ್ಯವಾದ ಸಂಪತ್ತನ್ನು ಲೂಟಿ ಮಾಡಿಟ್ಟಿರುವ ಹಣದಲ್ಲಿ ಒಂದು ಪಾಲನ್ನು ಈ ರೀತಿ ದೇವರ ಹೆಸರಿನಲ್ಲಿ ಉಳ್ಳವರು ವೆಚ್ಚಮಾಡಿ ಸಮಾಜದ ಮನ್ನಣೆಗೆ ಪಾತ್ರರಾಗುತ್ತಿದ್ದಾರೆ.
ಆದ್ದರಿಂದ ದೇಗುಲದ ನಿರ‍್ಮಾಣವು ಬಡವರಿಗೆ ಕೆಡುಕನ್ನುಂಟು ಮಾಡುತ್ತಿದ್ದರೆ, ಮೇಲು ಜಾತಿ ಮತ್ತು ಮೇಲು ವರ‍್ಗಕ್ಕೆ ಸೇರಿದ ಉಳ್ಳವರ ಮತ್ತು ಎತ್ತರದ ಗದ್ದುಗೆಯಲ್ಲಿ ಕುಳಿತು ಆಡಳಿತ ನಡೆಸುತ್ತಿರುವ ವ್ಯಕ್ತಿಗಳ ಹಿತವನ್ನು ಕಾಪಾಡುತ್ತಿದೆ.
3) ತಮ್ಮ ಅಂಗಯ್ ಮೇಲೆ ಸಣ್ಣ ಆಕಾರದ ಲಿಂಗವನ್ನು ಇಟ್ಟುಕೊಂಡು ಪೂಜಿಸುತ್ತಿದ್ದ ಶಿವಶರಣಶರಣೆಯರ ಪಾಲಿಗೆ ದೇವರು ಎನ್ನುವುದು ವ್ಯಕ್ತಿಯ ಮಯ್ ಮನದಲ್ಲಿ ನಿರಂತರವಾಗಿ ಮೂಡುತ್ತಿರುವ ಒಳ್ಳೆಯ ಮತ್ತು ಕೆಟ್ಟ ಒಳಮಿಡಿತಗಳಲ್ಲಿ, ಕೆಟ್ಟದ್ದನ್ನು ಹತ್ತಿಕ್ಕಿಕೊಂಡು ಸಾಮಾಜಿಕವಾಗಿ ಒಳ್ಳೆಯ ನಡೆನುಡಿಯಿಂದ ಬಾಳಲು ಅಗತ್ಯವಾದ ಅರಿವನ್ನು ನೀಡುವುದರ ಸಂಕೇತವಾಗಿತ್ತು.
ಉಳ್ಳವರು, ಮೇಲು ಜಾತಿಯವರು ಮತ್ತು ಅಕ್ಕರವಂತರು ದೇವರ ಹೆಸರಿನಲ್ಲಿ ಬಡವರ ಮನದಲ್ಲಿ ತಲೆತಲಾಂತರದಿಂದ ನಾಟಿಸಿದ್ದ ಕೀಳರಿಮೆ ಮತ್ತು ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿ, ವ್ಯಕ್ತಿಯು ಒಳ್ಳೆಯ ನಡೆನುಡಿ ಮತ್ತು ಕಾಯಕವನ್ನು ಪ್ರಾಮಾಣಿಕವಾಗಿ ಮಾಡುವುದರ ಮೂಲಕ ತನ್ನ ಒಳಿತಿನ ಜತೆಜತೆಗೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬಹುದೆಂಬುದನ್ನು ಶಿವಶರಣಶರಣೆಯರು ತಮ್ಮ ನಡೆನುಡಿಗಳ ಮೂಲಕ ಮನಗಾಣಿಸಿದರು.
ಜನರ ಬಯಕೆಗಳನ್ನು/ಆಸೆಗಳನ್ನು/ಕಾಮನೆಗಳನ್ನು ಈಡೇರಿಸುವ ಜಡವಸ್ತುವನ್ನಾಗಿ ದೇವರನ್ನು ಕಾಣದೆ, ಜನರಿಗೆ ಸತ್ಯ/ನೀತಿ/ನ್ಯಾಯದಿಂದ ಬಾಳಲು ಅಗತ್ಯವಾದ ಅರಿವನ್ನು ನೀಡುವ ಚೇತನವನ್ನಾಗಿ ಶಿವಶರಣೆಯರು ದೇವರನ್ನು ಕಂಡರು. ಕಲ್ಲು ಚಪ್ಪಡಿಗಳ ತಳಹದಿಯ ಮೇಲೆ ಕಟ್ಟುವ ದೇಗುಲದ ಬದಲು , ಒಳ್ಳೆಯ ನಡೆನುಡಿಗಳಿಂದ ಕೂಡಿದ ಸಾಮಾಜಿಕ ವ್ಯಕ್ತಿತ್ವದ ತಳಹದಿಯ ಮೇಲೆ ದೇವರನ್ನು ನೆಲೆಗೊಳಿಸಿದರು.
( ಚಿತ್ರಸೆಲೆ: lingayatreligion.com )
ಇತ್ತೀಚಿನ ಅನಿಸಿಕೆಗಳು