ಕುವೆಂಪು ಕವನಗಳ ಓದು – 5ನೆಯ ಕಂತು

ಸಿ.ಪಿ.ನಾಗರಾಜ.

ಕುವೆಂಪು, kuvempu

ಆತ್ಮಶ್ರದ್ಧೆ

ಎಷ್ಟು ದೇವರ ನೀನೆಷ್ಟು ನಂಬಿದರೇನೊಂ
ದಿಷ್ಟು ನೀ ನಂಬದಿರೆ ನಿನ್ನ ನೀನು
ಹತ್ತು ಸಾವಿರ ಜನರು ಸುತ್ತಲಿದ್ದೊಡಮೇನು
ಚಿತ್ತಹತ್ಯಕೆ ಯಾರು ತಡೆಯ ಕಟ್ಟುವರಯ್ಯ
ಹೆರರ ಕೊಲ್ಲಲು ಕತ್ತಿ ಪರಶು ತೋಮರ ಬೇಕು
ತನ್ನ ಕೊಲ್ಲಲು ಸಣ್ಣದೊಂದು ಸೂಜಿಯೆ ಸಾಕು
ಶ್ರದ್ಧೆಯಿಂದಲೆ ಸೂರ್ಯ ಗಗನ ದೇಶದಿ ನಿಂತು
ನೂರು ಲೋಕವ ಹಿಡಿವ ಶಕ್ತಿ ಪಡೆದಿಹನಯ್ಯ
ಶ್ರದ್ಧೆಯಿರುವುದೆ ನಾಕ ಅಶ್ರದ್ಧೆಯೇ ನರಕ
ಶ್ರದ್ಧೆಯಿದ್ದರೆ ಕೋಟಿ ದೇವರೆಮಗಾಳಯ್ಯ
ಮಾನವನೆ ದೇವತೆಯು ನರನೆ ನಾರಾಯಣನು
ನಮ್ಮ ವಿಶ್ವಕೆ ನಾವೆ ನಿರುಪಮಾದ್ಭುತವಯ್ಯ
ಕ್ರಿಸ್ತ ಬುದ್ಧರು ಎಲ್ಲ ಅಹಮಸ್ಮಿ ಸಾಗರದಿ
ಮಿಂಚಿ ಮುಳುಗುವ ಬರಿಯ ಕಿರಿಯ ಬುದ್ಬುದವಯ್ಯ.

ವ್ಯಕ್ತಿಯು ತನ್ನಲ್ಲಿ ತಾನು ನಂಬಿಕೆಯನ್ನು ಇಟ್ಟುಕೊಂಡು, ಅರಿವು ಮತ್ತು ಎಚ್ಚರದಿಂದ ಕ್ರಿಯಾಶೀಲನಾಗಿ ಬಾಳುವುದು ಜೀವನದಲ್ಲಿ ಎಲ್ಲಕ್ಕಿಂತ ಮಿಗಿಲಾದುದು ಎಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

“ ತನ್ನಲ್ಲಿ ತಾನು ನಂಬಿಕೆಯನ್ನು ಇಟ್ಟುಕೊಳ್ಳುವುದು “ ಎಂದರೆ ಜೀವನವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳುವ ಶಕ್ತಿಯು ತನ್ನ ಮಯ್ ಮನದಲ್ಲಿದೆಯೇ ಹೊರತು ಬೇರೆಲ್ಲೋ ಇಲ್ಲ ಎಂಬ ವಾಸ್ತವವನ್ನು ಅರಿತುಕೊಂಡು, ತನ್ನ ಬಾಳಿನ ಆಗುಹೋಗುಗಳಿಗೆ ತಾನೇ ಹೊಣೆಗಾರನೆಂಬ ಎಚ್ಚರವನ್ನು ಹೊಂದುವುದು.

( ಆತ್ಮ=ಮನಸ್ಸು; ಶ್ರದ್ಧೆ=ನಂಬಿಕೆ/ಎಲ್ಲ ಸಂಗತಿಗಳಲ್ಲಿಯೂ ಆಸಕ್ತಿ, ಕುತೂಹಲ, ಒಳ್ಳೆಯ ಕೆಲಸವನ್ನು ಮಾಡಬೇಕೆಂಬ ಉದ್ದೇಶ ಮತ್ತು ಒಳ್ಳೆಯ ರೀತಿಯಲ್ಲಿ ಬಾಳಬೇಕೆಂಬ ಬಯಕೆ; ಆತ್ಮಶ್ರದ್ಧೆ=ವ್ಯಕ್ತಿಯು ತನ್ನಲ್ಲಿ ತಾನು ನಂಬಿಕೆಯನ್ನು ತಳೆದು, ತನ್ನ ಬದುಕನ್ನು ಒಳ್ಳೆಯ ರೀತಿಯಲ್ಲಿ ನಡೆಸಬೇಕೆಂಬ ಹಂಬಲವನ್ನು ಹೊಂದಿರುವುದು; ಎಷ್ಟು=ವಸ್ತು/ಜೀವಿ/ವ್ಯಕ್ತಿಗಳ ಸಂಕೆ, ಅಳತೆ, ಮೊತ್ತ, ಗಾತ್ರವನ್ನು ತಿಳಿಯುವುದಕ್ಕಾಗಿ ಬಳಸುವ ಪದ;

ದೇವರು=ಜೀವನದಲ್ಲಿ ಬರುವ ಎಡರು ತೊಡರುಗಳನ್ನು ನಿವಾರಿಸಿ, ತಮಗೆ ಒಳಿತನ್ನು ಮಾಡಿ ಕಾಪಾಡುವ ವ್ಯಕ್ತಿಯನ್ನು ಇಲ್ಲವೇ ಶಕ್ತಿಯನ್ನು ದೇವರೆಂದು ಮಾನವ ಸಮುದಾಯ ಕಲ್ಪಿಸಿಕೊಂಡಿದೆ; ನೀನ್+ಎಷ್ಟು; ನಂಬಿದರೆ+ಏನ್+ಒಂದು+ಇಷ್ಟು; ನಂಬು=ನೆಚ್ಚು/ಅವಲಂಬಿಸು; ಏನ್=ಯಾವುದು; ಇಷ್ಟು=ತುಸು/ಸ್ವಲ್ಪ/ಕೊಂಚ;

ಎಷ್ಟು ದೇವರ ನೀನೆಷ್ಟು ನಂಬಿದರೇನೊಂದಿಷ್ಟು ನೀ ನಂಬದಿರೆ ನಿನ್ನ ನೀನು=ನಿನ್ನ ಮಯ್ ಮನದ ಬಲವನ್ನು ಬಳಸಿಕೊಂಡು ಒಳ್ಳೆಯ ನಡೆನುಡಿಗಳಿಂದ ಬದುಕನ್ನು ರೂಪಿಸಿಕೊಳ್ಳಬಲ್ಲೆನು ಎಂಬ ನಂಬಿಕೆಯು ನಿನ್ನಲ್ಲಿ ಇಲ್ಲದೆ, ಕೇವಲ ನೂರಾರು ದೇವರುಗಳನ್ನು ನಂಬುವುದರಿಂದ ಏನೊಂದು ದೊರೆಯುವುದಿಲ್ಲ;

ಸುತ್ತಲ್+ಇದ್ದೊಡಮ್+ಏನು; ಸುತ್ತಲು=ಅಕ್ಕಪಕ್ಕ ಹಿಂದೆಮುಂದೆ ಎಲ್ಲ ಕಡೆಯಿಂದಲೂ ಬಳಸಿಕೊಂಡಿರುವುದು; ಇದ್ದೊಡಮ್=ಇದ್ದರೂ; ಚಿತ್ತ=ಮನಸ್ಸು; ಹತ್ಯ=ಕೊಲ್ಲುವಿಕೆ/ಸಾಯಿಸು; ಚಿತ್ತಹತ್ಯ=ವ್ಯಕ್ತಿಯು ತನ್ನ ಮನದೊಳಗೆ ಹೆದರಿಕೆ, ಆತಂಕ, ಕೋಪ , ಸೇಡು, ಹಗೆತನದ ಒಳಮಿಡಿತಗಳಿಂದ ಒಂದೇ ಸಮನೆ ನರಳುತ್ತ, ಪ್ರತಿ ಗಳಿಗೆಯಲ್ಲಿಯೂ ತನ್ನನ್ನು ತಾನೇ ಗಾಸಿಗೊಳಿಸಿಕೊಳ್ಳುತ್ತಿರುವುದು; ತಡೆ=ನಿಲ್ಲಿಸು/ಅಡ್ಡಗಟ್ಟು; ಕಟ್ಟು=ಹೂಡು; ತಡೆಯ ಕಟ್ಟುವುದು=ಬೇಲಿಯನ್ನು ಹಾಕುವುದು;

ಹತ್ತು ಸಾವಿರ ಜನರು ಸುತ್ತಲಿದ್ದೊಡಮೇನು ಚಿತ್ತಹತ್ಯಕೆ ಯಾರು ತಡೆಯ ಕಟ್ಟುವರಯ್ಯ=ವ್ಯಕ್ತಿಯು ತನ್ನ ಮನಸ್ಸಿಗೆ ತಾನೇ ಗಾಸಿ ಮಾಡಿಕೊಂಡು ಪಡುತ್ತಿರುವ ನೂರೆಂಟು ಬಗೆಯ ಚಿತ್ರಹಿಂಸೆಯನ್ನು ತಡೆಗಟ್ಟುವುದಕ್ಕೆ ಯಾರಿಂದಲೂ ಆಗುವುದಿಲ್ಲ. ಏಕೆಂದರೆ ವ್ಯಕ್ತಿಯ ದೇಹ ಕುಸಿದುಬಿದ್ದರೆ ಇತರರು ನೆರವು ನೀಡಿ ದೇಹವನ್ನು ಎತ್ತಿ ಇಲ್ಲವೇ ಮಲಗಿಸಿ ಉಪಚರಿಸಬಹುದು. ಆದರೆ ವ್ಯಕ್ತಿಯು ಮಾನಸಿಕವಾಗಿ ಕುಸಿಯ ತೊಡಗಿದರೆ ಅವನನ್ನು ಬೇರೆಯವರು ಕಾಪಾಡಲಾಗದು. ’ ಮಾನಸಿಕವಾಗಿ ಕುಸಿಯುವುದು ‘ ಎಂದರೆ ವ್ಯಕ್ತಿಯು ತನ್ನಲ್ಲಿ ತಾನು ನಂಬಿಕೆಯನ್ನು ಕಳೆದುಕೊಂಡು ಜೀವನದಲ್ಲಿ ಏನು ಮಾಡಬೇಕೆಂಬುದನ್ನು ನಿಶ್ಚಯಿಸಲಾಗದೆ ದಿಕ್ಕುತೋಚದಂತಾಗಿ ನರಳುವುದು;

ಹೆರರ=ಇತರರನ್ನು/ಬೇರೆಯವರನ್ನು; ಕೊಲ್=ಸಾಯಿಸು; ಕತ್ತಿ=ಹರಿತವಾದ ಮೊನೆಯುಳ್ಳ ಹತಾರ; ಪರಶು=ಕೊಡಲಿ; ತೋಮರ=ಈಟಿ; ಸೂಜಿ=ಬಟ್ಟೆಯನ್ನು ಹೊಲಿಯುವುದಕ್ಕೆ ಬಳಸುವ ಚೂಪಾದ ಮೊನೆಯುಳ್ಳ ಅತಿ ಚಿಕ್ಕ ಉಪಕರಣ;

ಸೂರ್ಯ=ರವಿ; ಗಗನ=ಆಕಾಶ; ದೇಶ=ಪ್ರಾಂತ್ಯ; ಗಗನದೇಶ=ಆಕಾಶದ ಎಡೆಯಲ್ಲಿ; ಪಡೆದು+ಇಹನ್+ಅಯ್ಯ; ಪಡೆ=ಹೊಂದು; ಇಹನ್=ಇರುವನು; ಅಯ್ಯ=ಗಂಡಸರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ಶ್ರದ್ಧೆಯಿಂದಲೆ ಸೂರ್ಯ ಗಗನ ದೇಶದಿ ನಿಂತು ನೂರು ಲೋಕವ ಹಿಡಿವ ಶಕ್ತಿ ಪಡೆದಿಹನಯ್ಯ= ಆಕಾಶಕಾಯಗಳ ಕೇಂದ್ರದಲ್ಲಿ ನೆಲೆಗೊಂಡಿರುವ ಸೂರ‍್ಯ ಮಂಡಲವನ್ನು ಒಂದು ರೂಪಕವಾಗಿ ಬಳಸಲಾಗಿದೆ. ವ್ಯಕ್ತಿಯು ಯಾವುದೇ ಒಂದು ಒಳ್ಳೆಯ ಕೆಲಸವನ್ನು ಒಲವು ನಲಿವು ಪ್ರಾಮಾಣಿಕತನದಿಂದ ಮಾಡತೊಡಗಿದರೆ, ಅದರಿಂದ ಅವನನ್ನು ಒಳಗೊಂಡಂತೆ ಇಡೀ ಜಗತ್ತಿಗೆ ಒಳಿತಾಗುತ್ತದೆ ಎಂಬ ತಿರುಳನ್ನು ಈ ರೂಪಕ ಸೂಚಿಸುತ್ತದೆ;

ಶ್ರದ್ಧೆ+ಇರುವುದೆ; ನಾಕ=ಸ್ವರ‍್ಗ; ನಾಕ ಮತ್ತು ನರಕ=ಮಾನವನ ಮನದ ಕಲ್ಪನೆಯಲ್ಲಿ ರೂಪುಗೊಂಡಿರುವ ಎರಡು ನೆಲೆಗಳು. ಚೆಲುವು ಒಲವು ನಲಿವನ್ನು ನೀಡುವ ನೆಲೆಯನ್ನು ನಾಕವೆಂದು ಮತ್ತು ಸಂಕಟ ವೇದನೆ ಹಿಂಸೆಯನ್ನು ನೀಡುವ ನೆಲೆಯನ್ನು ನರಕವೆಂದು ಕಲ್ಪಿಸಿಕೊಳ್ಳಲಾಗಿದೆ. ವ್ಯಕ್ತಿಯು ಒಳಿತನ್ನು ಮಾಡಿ ಸತ್ತರೆ ನಾಕಕ್ಕೆ, ಕೇಡನ್ನು ಬಗೆದು ಸತ್ತರೆ ನರಕಕ್ಕೆ ಹೋಗುತ್ತಾನೆ ಎಂಬ ನಂಬಿಕೆಯು ಜನಮನದಲ್ಲಿದೆ;

ಅಶ್ರದ್ಧೆ=ನಂಬದಿರುವುದು/ಯಾವುದರಲ್ಲಿಯೂ ಆಸಕ್ತಿಯಾಗಲಿ, ಕುತೂಹಲವಾಗಲಿ, ಒಳ್ಳೆಯ ಕೆಲಸವನ್ನು ಮಾಡಬೇಕೆಂಬ ಉದ್ದೇಶವಾಗಲಿ ಇಲ್ಲವೇ ಒಳ್ಳೆಯ ರೀತಿಯಲ್ಲಿ ಬಾಳಬೇಕೆಂಬ ಬಯಕೆಯೇ ಇಲ್ಲದಿರುವುದು;

ಶ್ರದ್ಧೆಯಿರುವುದೆ ನಾಕ ಅಶ್ರದ್ಧೆಯೇ ನರಕ=ವ್ಯಕ್ತಿ ಇಲ್ಲವೇ ಜನರು ನಂಬಿಕೆಯಿಂದ ಮಾಡುವ ಒಳ್ಳೆಯ ಕೆಲಸಗಳು ನಾಕದಲ್ಲಿರುವಂತೆ ಆನಂದ ಮತ್ತು ನೆಮ್ಮದಿಯನ್ನು ಎಲ್ಲರಿಗೂ ನೀಡುತ್ತವೆ. ಯಾವುದೇ ಕೆಲಸವನ್ನು ಮಾಡುವಾಗ ನಂಬಿಕೆಯಿಲ್ಲದೆ ಅಂದರೆ ಆಸಕ್ತಿಯಿಲ್ಲದೆ ಬೇಜವಾಬ್ದಾರಿಯಿಂದ ಮಾಡಿದರೆ ನರಕದಲ್ಲಿರುವಂತೆ ಅದು ಎಲ್ಲರ ಪಾಲಿಗೆ ಸಂಕಟವನ್ನು ತರುತ್ತದೆ;

ಶ್ರದ್ಧೆ+ಇದ್ದರೆ; ಕೋಟಿ=ಒಂದು ನೂರು ಲಕ್ಶ/ಅತಿ ಹೆಚ್ಚಿನ ಪ್ರಮಾಣದಲ್ಲಿರುವುದು; ದೇವರ್+ಎಮಗೆ+ಆಳ್+ಅಯ್ಯ; ಎಮಗೆ=ನಮಗೆ; ಆಳ್=ಸೇವಕ;

ಶ್ರದ್ಧೆಯಿದ್ದರೆ ಕೋಟಿ ದೇವರೆಮಗಾಳಯ್ಯ=ಜೀವನದಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತನದ ನಡೆನುಡಿಗಳಿಂದ ನಾವು ಬಾಳಿದರೆ ಕೋಟಿ ದೇವರುಗಳು ನಾವು ಹೇಳಿದಂತೆ ಕೇಳುತ್ತಾರೆ. ಅಂದರೆ ಮಾನವರ ಬದುಕನ್ನು ರೂಪಿಸಿರುವವರು ದೇವರುಗಳಲ್ಲ. ದೇವರುಗಳ ಇಚ್ಚೆಯಂತೆ ಈ ಜಗತ್ತು ನಡೆಯುತ್ತಿಲ್ಲ. ಮಾನವರೇ ಜಗತ್ತಿನ ಒಡೆಯರಾಗಿದ್ದಾರೆ ಹಾಗೂ ತಮ್ಮ ಬದುಕಿನ ಜವಾಬ್ದಾರಿಯನ್ನು ತಾವೇ ಹೊತ್ತಿದ್ದಾರೆ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ;

ನರ=ಮಾನವ ಜೀವಿ; ನಾರಾಯಣ=ಒಂದು ದೇವರ ಹೆಸರು; ವಿಶ್ವ=ಜಗತ್ತು/ಪ್ರಪಂಚ; ನಾವೆ=ಮಾನವರೇ; ನಿರುಪಮ+ಅದ್ಭುತ+ಅಯ್ಯ; ನಿರುಪಮ=ಹೋಲಿಕೆಯನ್ನು ಮಾಡಲಾಗದ; ಅದ್ಭುತ=ಯಾವುದೇ ವಸ್ತು, ಜೀವಿ, ವ್ಯಕ್ತಿಯ ರೂಪ ಇಲ್ಲವೇ ಗುಣ ಅತಿ ಅಚ್ಚರಿಯನ್ನುಂಟುಮಾಡುವಂತಹ ಬಗೆಯಲ್ಲಿರುವುದು;

ಮಾನವನೆ ದೇವತೆಯು ನರನೆ ನಾರಾಯಣನು ನಮ್ಮ ವಿಶ್ವಕೆ ನಾವೆ ನಿರುಪಮಾದ್ಬುತವಯ್ಯ=ಈ ಜಗತ್ತಿನಲ್ಲಿ ಮಾನವ ಸಮುದಾಯದ ನೆಮ್ಮದಿಯ ಬದುಕಿಗೆ ಅಗತ್ಯವಾದ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯವನ್ನು ನಿಸರ‍್ಗದ ನೆರವಿನೊಡನೆ ನಿರ‍್ಮಿಸಕೊಳ್ಳಬಲ್ಲ ಶಕ್ತಿಯು ನಮ್ಮಲ್ಲಿದೆ. ನಮ್ಮ ಜೀವನದಲ್ಲಿ ಉಂಟಾಗುವ ಎಡರು ತೊಡರುಗಳನ್ನು ನಿವಾರಿಸಿಕೊಂಡು ನಮ್ಮನ್ನು ನಾವು ಕಾಪಾಡಿಕೊಂಡು ಮುನ್ನಡೆಯುವ ಶಕ್ತಿಯುಳ್ಳವರಾಗಿದ್ದೇವೆ. ನಮ್ಮ ದೇಹ ಬಲ ಮತ್ತು ಮನೋಬಲದಿಂದ ನಿರ‍್ಮಿಸುವ ವಸ್ತುಗಳು ಜಗತ್ತಿಗೆ ಅಚ್ಚರಿಯನ್ನುಂಟುಮಾಡುತ್ತಿವೆ.  ಈ ಜಗತ್ತಿನಲ್ಲಿ ನಾವೇ ದೇವತೆಗಳಾಗಿದ್ದೇವೆ. ಆದ್ದರಿಂದ ಮಾನವ ಸಮುದಾಯದ ಬದುಕಿನ ಮುನ್ನಡೆಗೆ ದೇವರ ಕರುಣೆಯ ಅಗತ್ಯವಿಲ್ಲವೆಂಬ ಇಂಗಿತವನ್ನು ಈ ನುಡಿಗಳು ಸೂಚಿಸುತ್ತಿವೆ;

ಅಹಮ್+ಅಸ್ಮಿ=ಅಹಮಸ್ಮಿ; ಅಹಮ್=ನಾನು; ಅಸ್ಮಿ=ಇದ್ದೇನೆ; ಅಹಮಸ್ಮಿ=ನಾನು ಇದ್ದೇನೆ; ಸಾಗರ=ಸಮುದ್ರ;

‘ ಅಹಮಸ್ಮಿ ‘ ಎನ್ನುವುದು ಸಂಸ್ಕ್ರುತ ನುಡಿಯ ವಾಕ್ಯ. ಪ್ರಪಂಚದಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಇರುವಿಕೆಯನ್ನು ಹೇಳಿಕೊಳ್ಳುವಾಗ “ ನಾನು ಇದ್ದೇನೆ “ ಎನ್ನುತ್ತಾನೆ;

ಅಹಮಸ್ಮಿ ಸಾಗರ=ಇದೊಂದು ರೂಪಕವಾಗಿ ಬಳಕೆಗೊಂಡಿದೆ. ಮಾನವ ಸಮುದಾಯವನ್ನು ಒಂದು ಸಮುದ್ರಕ್ಕೆ ಹೋಲಿಸಲಾಗಿದೆ. ಅನಂತವಾಗಿ ಹಬ್ಬಿರುವ ಸಮುದ್ರದಲ್ಲಿ ನೀರಿನ ಒಂದೊಂದು ಕಣಕ್ಕೂ ತನ್ನದೇ ಆದ ಅಸ್ತಿತ್ವ ಇರುವಂತೆಯೇ ಈ ಜಗತ್ತಿನಲ್ಲಿರುವ ಕೋಟಿಗಟ್ಟಲೆ ಜನರಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಬೇರೆಬೇರೆ ಬಗೆಯ ಅಸ್ತಿತ್ವವಿದೆ. ಸಾಗರದ ನೀರಿನ ಕಣಗಳಲ್ಲಿ ಯಾವುದೊಂದು ದೊಡ್ಡದೂ ಅಲ್ಲ, ಸಣ್ಣದೂ ಅಲ್ಲ. ಅಂತೆಯೇ ಜನಸಮುದಾಯದಲ್ಲಿ ಯಾವೊಬ್ಬ ವ್ಯಕ್ತಿಯೂ ದೊಡ್ಡವನೂ ಅಲ್ಲ; ಸಣ್ಣವನೂ ಅಲ್ಲ. ಗಣ್ಯನೂ ಅಲ್ಲ ; ನಗಣ್ಯನೂ ಅಲ್ಲ. ಪ್ರತಿಯೊಬ್ಬ ವ್ಯಕ್ತಿಯ ಬದುಕಿಗೂ ಒಂದು ಗುರಿಯಿದೆ, ಒಂದು ನೆಲೆಯಿದೆ. ಅಂದರೆ ಎಲ್ಲರೂ ಸಮಾನರು.

ಬುದ್ಧ=ಕ್ರಿ.ಪೂ.ಅಯ್ದನೆಯ ಶತಮಾನದಲ್ಲಿದ್ದ ವ್ಯಕ್ತಿ ಗವುತಮ ಬುದ್ದ. ಈಗ ನೇಪಾಲ ದೇಶಕ್ಕೆ ಸೇರಿರುವ ಕಪಿಲವಸ್ತು ಎಂಬ ಪಟ್ಟಣದಲ್ಲಿ ಹುಟ್ಟಿ ಬೆಳೆದವನು. ದೇವರ ಇರುವಿಕೆಯನ್ನು ನಿರಾಕರಿಸಿ, ನಿಸರ‍್ಗದಲ್ಲಿ ನಡೆಯುವ ಸಂಗತಿಗಳು ಮತ್ತು ಮಾನವರ ನಡೆನುಡಿಗಳೇ ಜಗತ್ತಿನ ಒಳಿತು ಕೆಡುಕುಗಳಿಗೆ ಕಾರಣವೆಂಬ ಅರಿವನ್ನು ಜನಮನದಲ್ಲಿ ಮೂಡಿಸಿದ ವ್ಯಕ್ತಿ;

ಕ್ರಿಸ್ತ=ಕ್ರಿ.ಶ.ಒಂದನೆಯ ಶತಮಾನದಲ್ಲಿದ ವ್ಯಕ್ತಿ ಏಸು ಕ್ರಿಸ್ತ. ರೋಮ್ ಸಾಮ್ರಾಜ್ಯಕ್ಕೆ ಸೇರಿದ ಜೆರೂಸಲೆಮ್ ಪಟ್ಟಣದಲ್ಲಿ ಹುಟ್ಟಿ ಬೆಳೆದವನು. ವ್ಯಕ್ತಿಗಳು ಮಾಡುವ ತಪ್ಪುಗಳನ್ನು ಮನ್ನಿಸಿ, ಸಹಮಾನವರನ್ನು ಪ್ರೀತಿ ಮತ್ತು ಕರುಣೆಯಿಂದ ಕಾಣುತ್ತ, ಎಲ್ಲರೂ ಜತೆಗೂಡಿ ಬಾಳಬೇಕೆಂಬುದನ್ನು ಜನತೆಗೆ ತಿಳಿಯ ಹೇಳಿದವನು

ಮಿಂಚಿ=ಹೊಳೆದು; ಮುಳುಗು=ಮರೆಯಾಗುವುದು; ಬರಿದು=ಕೇವಲ; ಕಿರಿದು=ಚಿಕ್ಕ/ಸಣ್ಣ; ಬುದ್ಬುದ+ಅಯ್ಯ; ಬುದ್ಬುದ=ನೀರ ಮೇಲಣ ಗುಳ್ಳೆ. ನೀರಗುಳ್ಳೆಗಳು ಅರೆ ಗಳಿಗೆ ಇದ್ದು , ಮರು ಗಳಿಗೆಯಲ್ಲೇ ಇಲ್ಲವಾಗುತ್ತವೆ;

ಕ್ರಿಸ್ತ ಬುದ್ದರು ಎಲ್ಲ ಅಹಮಸ್ಮಿ ಸಾಗರದಿ ಮಿಂಚಿ ಮುಳುಗುವ ಬರಿಯ ಕಿರಿಯ ಬುದ್ಬುದವಯ್ಯ=ಸಾಗರದ ನೊರೆತೆರೆಗಳ ನಡುವೆ ಮೂಡಿ ಮರೆಯಾಗುವ ನೀರಗುಳ್ಳೆಗಳಂತೆ ಮಾನವ ಸಮುದಾಯದ ಜನಕೋಟಿಯಲ್ಲಿ ಕ್ರಿಸ್ತ ಬುದ್ದರು ಸೇರಿಹೋಗಿದ್ದಾರೆ. ಕ್ರಿಸ್ತ ಮತ್ತು ಬುದ್ದರ ಬದುಕಿಗೆ ಜಗತ್ತಿನಲ್ಲಿ ಯಾವ ಮಹತ್ವವಿದೆಯೋ ಅಂತೆಯೇ ಈ ಜಗತ್ತಿನಲ್ಲಿ ಹುಟ್ಟಿ ಬೆಳೆದು ಅಳಿಯುತ್ತಿರುವ ಮಾನವ ಜೀವಿಗಳೆಲ್ಲರ ಬದುಕಿಗೂ ಒಂದೊಂದು ಬಗೆಯ ಮಹತ್ವವಿದೆ.

ಪ್ರತಿಯೊಬ್ಬ ವ್ಯಕ್ತಿಯು ತನ್ನ ಬದುಕಿನ ನೆಲೆಯಲ್ಲಿ ತನ್ನನ್ನು ತಾನು ಮೇಲು ಎಂದುಕೊಂಡು ಹಿಗ್ಗದೆ ಇಲ್ಲವೇ ಕೀಳು ಎಂದುಕೊಂಡು ಕುಗ್ಗದೆ, ತನ್ನ ಬದುಕಿಗೆ ಒಂದು ಗುರಿಯಿದೆ ಎಂಬ ನಂಬಿಕೆಯನ್ನು ತಳೆದು ಕ್ರಿಯಾಶೀಲನಾಗಿ ಬಾಳಬೇಕು ಎಂಬ ಸಂಗತಿಯನ್ನು ಅಹಮಸ್ಮಿ ಸಾಗರದ ಚಿತ್ರಣ ಸೂಚಿಸುತ್ತಿದೆ.)

( ಚಿತ್ರಸೆಲೆ : karnataka.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Sachin.H.J Jayanna says:

    ಗ್ರೇಟ್ ಎಫರ‌್ಟ್ ತುಂಬ ಚನಾಗಿದೆ

  2. Raghuramu N.V. says:

    ತುಂಬ ಚೆನ್ನಾಗಿದೆ ಸರ್

ಅನಿಸಿಕೆ ಬರೆಯಿರಿ:

%d bloggers like this: