ಬಸವಣ್ಣನ ವಚನಗಳ ಓದು – 12 ನೆಯ ಕಂತು

–  ಸಿ.ಪಿ.ನಾಗರಾಜ.

ಬಸವಣ್ಣ,, Basavanna

ಎನ್ನವರೊಲಿದು
ಹೊನ್ನಶೂಲದಲ್ಲಿಕ್ಕಿದರೆನ್ನ
ಹೊಗಳಿ ಹೊಗಳಿ

ಎನ್ನ ಹೊಗಳತೆ
ಎನ್ನನಿಮ್ಮೈಗೊಂಡಿತ್ತಲ್ಲಾ
ಅಯ್ಯೋ ನೊಂದೆನು ಸೈರಿಸಲಾರೆನು

ಅಯ್ಯಾ ನಿಮ್ಮ ಮನ್ನಣೆಯೆ
ಮಸೆದಲಗಾಗಿ ತಾಗಿತ್ತಲ್ಲಾ
ಅಯ್ಯೋ ನೊಂದೆನು ಸೈರಿಸಲಾರೆನು

ಕೂಡಲಸಂಗಮದೇವಾ
ನೀನೆನಗೆ ಒಳ್ಳಿದನಾದಡೆ
ಎನ್ನ ಹೊಗಳತೆಗಡ್ಡ ಬಾರಾ ಧರ್ಮಿ.

ತನ್ನ ನಡೆನುಡಿಗಳನ್ನು ಕುರಿತು ಸುತ್ತಮುತ್ತಣ ಜನರು ಹೊಗಳಿಕೆಯ ಮಾತುಗಳನ್ನು ಎಡೆಬಿಡದೆ ಒಂದೇ ಸಮನೆ ಆಡತೊಡಗಿದಾಗ , ಹೊಗಳಿಕೆಗೆ ಗುರಿಯಾದ ವ್ಯಕ್ತಿಯು ತನ್ನ ಮನದಲ್ಲಿ ಉಂಟಾಗುತ್ತಿರುವ ತಲ್ಲಣಗಳನ್ನು ಈ ವಚನದಲ್ಲಿ ಹೇಳಿಕೊಂಡಿದ್ದಾನೆ.

( ಎನ್ನವರ್+ಒಲಿದು; ಎನ್=ನಾನು; ಎನ್ನ=ನನ್ನ; ಎನ್ನವರ್=ನನ್ನವರು/ನನ್ನೊಡನೆ ನಂಟನ್ನು ಹೊಂದಿರುವ ವ್ಯಕ್ತಿಗಳು/ನನ್ನ ಒಡನಾಡಿಗಳು/ನನ್ನ ನೆರೆಹೊರೆಯವರು; ಒಲಿ=ಮೆಚ್ಚು/ಪ್ರೀತಿಸು/ಒಪ್ಪು; ಒಲಿದು=ಮೆಚ್ಚಿಕೊಂಡು/ಪ್ರೀತಿಸುತ್ತ/ಒಪ್ಪಿಕೊಂಡು; ಎನ್ನವರೊಲಿದು=ನನ್ನೊಡನೆ ನಂಟನ್ನು ಹೊಂದಿರುವ ವ್ಯಕ್ತಿಗಳು ನನ್ನನ್ನು ಬಹಳವಾಗಿ ಮೆಚ್ಚಿಕೊಂಡು/ಒಪ್ಪಿಕೊಂಡು/ಪ್ರೀತಿಸುತ್ತ;

ಹೊನ್ನಶೂಲ+ಅಲ್ಲಿ+ಇಕ್ಕಿದರ್+ಎನ್ನ; ಹೊನ್ನು=ಚಿನ್ನ/ಬಂಗಾರ/ಸ್ವರ‍್ಣ/ಕಸವರ; ಶೂಲ=ಮರಣದಂಡನೆಗೆ ಗುರಿಯಾದವರ ಕೊರಳಿಗೆ ಹಾಕುವ ಉರುಳಿನಿಂದ ಕೂಡಿದ ನೇಣುಗಂಬ. ಈ ನೇಣುಗಂಬವನ್ನು ಮರ ಇಲ್ಲವೇ ಕಬ್ಬಿಣದ ಗೂಟ, ಕಂಬ ಮತ್ತು ತೊಲೆಗಳಿಂದ ಮಾಡಿರುತ್ತಾರೆ; ಹೊನ್ನಶೂಲ=ಚಿನ್ನದ ಹೊರಕವಚದಿಂದ ಕೂಡಿರುವ ಶೂಲ; ಇಕ್ಕು=ಹಾಕು/ಇಡು; ಇಕ್ಕಿದರ್=ಹಾಕಿದರು/ಏರಿಸಿದರು;

ಹೊಗಳು=ಯಾವುದೇ ವಸ್ತು-ಜೀವಿ-ವ್ಯಕ್ತಿಯ ಬಗ್ಗೆ ಮಾತನಾಡುವಾಗ, ಅದರಲ್ಲಿ/ಅವನಲ್ಲಿ ಕಂಡುಬರುವ ವಾಸ್ತವ ಸಂಗತಿಗಳ ಜತೆಗೆ ಇಲ್ಲಸಲ್ಲದ ಸಂಗತಿಗಳನ್ನು ಸೇರಿಸಿಕೊಂಡು ಅತಿಯಾಗಿ ಗುಣಗಾನ ಮಾಡುವುದು/ಕೊಂಡಾಡುವುದು/ಬಣ್ಣಿಸುವುದು/ಸ್ತುತಿಸುವುದು; ಹೊಗಳಿ=ಹೊಗಳುತ್ತ/ಕೊಂಡಾಡುತ್ತ/ಬಣ್ಣಿಸುತ್ತ;

ಎನ್ನವರೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ ಹೊಗಳಿ ಹೊಗಳಿ=ನನ್ನ ನಡೆನುಡಿಗಳನ್ನು ಮೆಚ್ಚಿಕೊಂಡ ವ್ಯಕ್ತಿಗಳು ಎಡೆಬಿಡದೆ ಗುಣಗಾನ ಮಾಡತೊಡಗಿ ನನ್ನನ್ನು ಹೊನ್ನಶೂಲಕ್ಕೇರಿಸಿದರು; ‘ಹೊನ್ನಶೂಲದಲ್ಲಿಕ್ಕಿದರು’ ಎಂಬ ಪದಕಂತೆಯು ರೂಪಕವಾಗಿ ಬಳಕೆಗೊಂಡಿವೆ.

ವ್ಯಕ್ತಿಯನ್ನು ಬಣ್ಣಬಣ್ಣದ ಮಾತುಗಳಿಂದ ಹೊಗಳಿ ಬಣ್ಣಿಸುವ ಕ್ರಿಯೆಯನ್ನು ಹೊನ್ನಶೂಲದ ಉರುಳಿಗೆ ವ್ಯಕ್ತಿಯ ಕೊರಳನ್ನಿಕ್ಕಿ ವ್ಯಕ್ತಿಯ ಜೀವವನ್ನು ತೆಗೆಯುವ ಕ್ರಿಯೆಯೊಡನೆ ಜೋಡಿಸಲಾಗಿದೆ. ಶೂಲವು ಹೊನ್ನಿನಿಂದ ನಿರ‍್ಮಾಣಗೊಂಡಿದ್ದರೂ ಅದರ ಪರಿಣಾಮ ಮಾತ್ರ ಇನ್ನುಳಿದ ಮರದ/ಕಬ್ಬಿಣದ ಶೂಲದಂತೆಯೇ ಇರುತ್ತದೆ. ನೋಡುವ ಕಣ್ಣುಗಳಿಗೆ ಶೂಲವು ಹೊನ್ನಿನ ಕಾಂತಿಯಿಂದ ಕಂಗೊಳಿಸುವಂತೆ, ಹೊಗಳಿಕೆಯ ಮಾತುಗಳು ವ್ಯಕ್ತಿಗೆ ಅಪಾರವಾದ ಆನಂದ ಮತ್ತು ಹೆಮ್ಮೆಯನ್ನುಂಟುಮಾಡುತ್ತವೆ. ಚಿನ್ನದ ಶೂಲಕ್ಕೆ ಹಾಕಿದ ವ್ಯಕ್ತಿಯು ಜೀವವನ್ನು ಕಳೆದುಕೊಂಡರೆ, ಹೊಗಳಿಕೆಯ ನುಡಿಗಳಿಗೆ ಮರುಳಾದ ವ್ಯಕ್ತಿಯು ತನ್ನಲ್ಲಿದ್ದ ಒಳ್ಳೆಯ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾನೆ. ಏಕೆಂದರೆ ತನ್ನನ್ನು ಮೆಚ್ಚಿಕೊಂಡವರು ಆಡುವ ಹೊಗಳಿಕೆಯ ನುಡಿಯನ್ನು ಕೇಳಕೇಳುತ್ತಿದ್ದಂತೆಯೇ , ವ್ಯಕ್ತಿಯ ಮನದಲ್ಲಿ ತಾನು ಇತರರಿಗಿಂತ ಹೆಚ್ಚಾಗಿ ತಿಳಿದವನು/ದೊಡ್ಡವನು/ಒಳ್ಳೆಯವನು/ನನ್ನಿಂದಲೇ ಎಲ್ಲವೂ ಆಗುತ್ತಿದೆ ಎಂಬ ಅಹಂಕಾರದ/ಒಣಹೆಮ್ಮೆಯ ಒಳಮಿಡಿತಗಳು ಮೂಡತೊಡಗುತ್ತವೆ.

ಹೊಗಳಿಕೆಯ ಮಾತಿನ ಗುಂಗಿನಲ್ಲಿ ಸಿಲುಕಿದ ವ್ಯಕ್ತಿಯು ತನ್ನ ಹೆಸರು ಮತ್ತು ತಾನು ಮಾಡುತ್ತಿರುವ ಕೆಲಸವು ಜನಮನದಲ್ಲಿ ಸದಾಕಾಲ ಶಾಶ್ವತವಾಗಿ ನೆಲಸುವಂತಾಗಬೇಕೆಂಬ ಕೀರ‍್ತಿಶನಿಗೆ ಒಳಗಾಗುತ್ತಾನೆ. ಹೊಗಳಿಕೆಯ ನುಡಿಗಳಿಂದ ಮಯ್ ಮರೆತು, ಸೊಕ್ಕಿನ ನಡೆನುಡಿಗಳಿಂದ ತನ್ನನ್ನು ತಾನೇ ಮೆರೆಸಿಕೊಳ್ಳುವುದರಲ್ಲಿ ಮಗ್ನನಾಗುತ್ತಾನೆ. ಆದ್ದರಿಂದ ಸದ್ದುಗದ್ದಲವಿಲ್ಲದೆ/ಆಡಂಬರವಿಲ್ಲದೆ ತನ್ನ ಪಾಡಿಗೆ ತಾನು ಜನಸಮುದಾಯಕ್ಕೆ ಒಳಿತನ್ನುಂಟುಮಾಡುತ್ತಿದ್ದ ವ್ಯಕ್ತಿಯ ಪಾಲಿಗೆ ಹೊಗಳಿಕೆಯೆಂಬುದು ಒಳಿತಿನ ದಾರಿಯನ್ನು ತಪ್ಪಿಸುವ ಇಲ್ಲವೇ ಕೇಡನ್ನು ಬಗೆಯುವ ಸಂಗತಿಯಾಗುತ್ತದೆ;

ಹೊಗಳತೆ=ಹೊಗಳಿಕೆ/ಕೊಂಡಾಟ/ಪ್ರಶಂಸೆ/ಮೆಚ್ಚುಗೆಯ ನುಡಿಗಳು; ಎನ್ನ ಹೊಗಳತೆ=ನನ್ನನ್ನು ಕುರಿತು ಆಡುತ್ತಿರುವ ಮೆಚ್ಚುಗೆಯ/ಗುಣಗಾನದ/ಪ್ರಶಂಸೆಯ ಮಾತುಗಳು; ಎನ್+ಅನ್+ಇಮ್ಮೈ+ಕೊಂಡು+ಇತ್ತು+ಅಲ್ಲಾ; ಎನ್ನನ್=ನನ್ನನ್ನು; ಎರಡು+ಮೆಯ್=ಇಮ್ಮೈ; ಮೆಯ್=ದೇಹ/ಶರೀರ; ಇಮ್ಮೈ=ಎರಡು ತುಂಡಾದ ಮೆಯ್/ದೇಹ/ಶರೀರ; ಕೊಳ್=ಮುಟ್ಟು/ಬಡಿ/ಕಡಿ; ಕೊಂಡಿತ್ತು=ಕತ್ತರಿಸಿತ್ತು/ಕಡಿದು ತುಂಡರಿಸಿತ್ತು; ಇಮ್ಮೈಗೊಂಡಿತ್ತು=ಒಂದು ದೇಹವು ಎರಡು ತುಂಡುಗಳಾದವು/ಸೀಳುಗಳಾದವು;

ಅಲ್ಲಾ=ಆ ರೀತಿಯಲ್ಲಿ/ ಆ ಬಗೆಯಲ್ಲಿ ಆಯಿತು; ಅಯ್ಯೋ=ಸಂಕಟ/ನೋವು/ಯಾತನೆಯ ಒಳಮಿಡಿತವನ್ನು ಹೊರಹಾಕುವಾಗ ಬಳಸುವ ಪದ; ನೋವು=ಬೇನೆ/ಅಳಲು/ವೇದನೆ; ನೊಂದೆನು=ಸಂಕಟಕ್ಕೆ ಒಳಗಾಗಿ ನರಳುತ್ತಿರುವೆನು; ಸೈರಿಸಲ್+ಆರೆನು; ಸೈರಿಸು=ತಾಳು/ಸಹಿಸು/ತಡೆದುಕೊಳ್ಳು; ಆರ್=ಶಕ್ತನಾಗು/ಕಸುವುಳ್ಳವನು/ಬಲವುಳ್ಳವನು; ಆರೆನು=ನನ್ನಲ್ಲಿ ಬಲವಿಲ್ಲ/ಶಕ್ತಿಯಿಲ್ಲ/ಕಸುವಿಲ್ಲ; ಸೈರಿಸಲಾರೆನು=ನನ್ನಿಂದ ತಡೆದುಕೊಳ್ಳಲು ಆಗುತ್ತಿಲ್ಲ/ಸಹಿಸುವುದಕ್ಕೆ ಆಗುತ್ತಿಲ್ಲ;

ಎನ್ನ ಹೊಗಳತೆ ಎನ್ನನಿಮ್ಮೈಗೊಂಡಿತ್ತಲ್ಲಾ ಅಯ್ಯೋ ನೊಂದೆನು ಸೈರಿಸಲಾರೆನು=ನನ್ನ ಬಗ್ಗೆ ಆಡುತ್ತಿರುವ ಹೊಗಳಿಕೆಯ ನುಡಿಗಳು ನನ್ನ ದೇಹವನ್ನು ಎರಡು ತುಂಡಾಗಿ ಸೀಳುತ್ತಿವೆ. ದೇಹವು ಎರಡು ಹೋಳುಗಳಾಗುವ ಕ್ರಿಯೆಯನ್ನು ವ್ಯಕ್ತಿಯ ವ್ಯಕ್ತಿತ್ವದಲ್ಲಿ ಉಂಟಾಗುವ ಒಡಕಿಗೆ ಒಂದು ರೂಪಕವಾಗಿ ಬಳಸಲಾಗಿದೆ. ‘ವ್ಯಕ್ತಿತ್ವದಲ್ಲಿ ಒಡಕು ಉಂಟಾಗುವುದು’ ಎಂದರೆ ವ್ಯಕ್ತಿಯ ಮನದಲ್ಲಿ ಇಬ್ಬಗೆಯ ಒಳಮಿಡಿತಗಳು ಮೂಡುವುದು. ಇದುವರೆಗೂ ಒಳ್ಳೆಯ ಉದ್ದೇಶಗಳಿಂದ ಕೂಡಿದ್ದ ವ್ಯಕ್ತಿಯ ಮನದಲ್ಲಿ ಈಗ ಕೆಟ್ಟ ಒಳಮಿಡಿತಗಳು ತುಡಿಯತೊಡಗುತ್ತವೆ. ಈಗ ವ್ಯಕ್ತಿಯು ಬಾಯಲ್ಲಿ ಹೇಳುವುದು ಒಂದಾದರೆ, ಕಯ್ಯಲ್ಲಿ ಮಾಡುವುದು ಮತ್ತೊಂದಾಗುತ್ತದೆ. ಇದರಿಂದಾಗಿ ವ್ಯಕ್ತಿಯ ನಡೆನುಡಿಯಲ್ಲಿ ಹೊಂದಾಣಿಕೆಯು ತಪ್ಪುತ್ತದೆ. ಹೊಗಳಿಕೆಯ ನುಡಿಗಳಿಗೆ ಮನಗೊಟ್ಟಂತೆಲ್ಲಾ ವ್ಯಕ್ತಿಯಲ್ಲಿದ್ದ ಒಳ್ಳೆಯ ವ್ಯಕ್ತಿತ್ವ ಹಾಳಾಗತೊಡಗುತ್ತದೆ. ತನ್ನ ವ್ಯಕ್ತಿತ್ವದಲ್ಲಿ ಆಗುತ್ತಿರುವ ಇಂತಹ ಬದಲಾವಣೆಯ ಬಗ್ಗೆ ಎಚ್ಚರವನ್ನುಳ್ಳ ವ್ಯಕ್ತಿಯು ಹೊಗಳಿಕೆಯಿಂದ ಉಂಟಾದ ಈ ಬಗೆಯ ಪೆಟ್ಟನ್ನು ತನ್ನಿಂದ ತಡೆದುಕೊಳ್ಳಲಾಗದೆ ಕಂಗಾಲಾಗಿ ಸಂಕಟಪಡುತ್ತಿದ್ದಾನೆ.

ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ; ನಿಮ್ಮ=ಹೊಗಳುತ್ತಿರುವ ವ್ಯಕ್ತಿಗಳ; ಮನ್ನಣೆ=ಮರ‍್ಯಾದೆ/ಹೆಚ್ಚಿನ /ಹೆಚ್ಚಿನ ಒಲವು; ಮಸೆದ+ಅಲಗು+ಆಗಿ; ಮಸೆ=ಲೋಹದಿಂದ ಮಾಡಿರುವ ಕತ್ತಿ/ಚಾಕು/ಚೂರಿ ಮುಂತಾದ ಹತಾರಗಳ ಅಂಚನ್ನು/ಬಾಯನ್ನು ಹರಿತಗೊಳಿಸಲೆಂದು/ಚೂಪು ಮಾಡಲೆಂದು ಕಲ್ಲಿನ ಮೇಲೆ ಉಜ್ಜುವುದು/ತಿಕ್ಕುವುದು; ಮಸೆದ=ಹರಿತಗೊಳಿಸಿದ/ಚೂಪನ್ನಾಗಿಸಿದ; ಅಲಗು=ಕತ್ತಿ/ಕರವಾಳು/ಕಡ್ಗ; ಮಸೆದಲಗು=ಹರಿತಗೊಳಿಸಿರುವ ಕತ್ತಿ; ತಾಗು+ಇತ್ತು+ಅಲ್ಲಾ; ತಾಗು=ಚುಚ್ಚು/ನಾಟು/ತಿವಿ/ಮುಟ್ಟು; ತಾಗಿತ್ತಲ್ಲಾ=ಚುಚ್ಚಿಕೊಂಡಿರುವುದು/ನಾಟಿಕೊಂಡಿರುವುದು;

ನಿಮ್ಮ ಮನ್ನಣೆಯೆ ಮಸೆದಲಗಾಗಿ ತಾಗಿತ್ತಲ್ಲಾ ಅಯ್ಯೋ ನೊಂದೆನು ಸೈರಿಸಲಾರೆನು=ಹಾಡಿ ಹೊಗಳುತ್ತಿರುವವರು ಮಾಡುತ್ತಿರುವ ಗುಣಗಾನ/ಸುತ್ತಮುತ್ತಲಿನವರು ನೀಡುತ್ತಿರುವ ಹೆಚ್ಚಿನ ಮನ್ನಣೆಯು ಹರಿತವಾದ ಕತ್ತಿಯಿಂದ ಚುಚ್ಚಿ ತಿವಿದು ಗಾಸಿಗೊಳಿಸಿದಂತೆ ವ್ಯಕ್ತಿಗೆ ಯಾತನೆಯನ್ನುಂಟುಮಾಡುತ್ತಿದೆ. ಈ ಬಗೆಯ ಮಾನಸಿಕ ಯಾತನೆಯನ್ನು ಸಹಿಸಿಕೊಳ್ಳಲಾಗುತ್ತಿಲ್ಲ; ಮಸೆದಲಗು ತಾಗಿದಾಗ ಉಂಟಾಗುವ ನೋವನ್ನು ಹೊಗಳಿಕೆಯಿಂದ ಉಂಟಾಗುವ ಯಾತನೆಗೆ/ಕೇಡಿಗೆ ಒಂದು ರೂಪಕವಾಗಿ ಬಳಸಲಾಗಿದೆ;

ಕೂಡಲಸಂಗಮದೇವ=ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ; ನೀನ್+ಎನಗೆ; ನೀನು=ದೇವರಾದ ಶಿವ/ಈಶ್ವರ; ಎನಗೆ=ನನಗೆ; ಒಳ್ಳಿದನ್+ಆದಡೆ; ಒಳ್=ಒಳ್ಳೆಯದು/ಒಳಿತಿನಿಂದ ಕೂಡಿರುವುದು; ಒಳ್ಳಿದನ್=ಒಳ್ಳೆಯವನು/ಒಳಿತನ್ನು ಮಾಡುವವನು; ಆದಡೆ=ಆಗಿದ್ದರೆ; ಹೊಗಳತೆಗೆ+ಅಡ್ಡ; ಅಡ್ಡ=ತಡೆ/ಎದುರುಗಡೆ ಅಡ್ಡಿಯಾಗಿರುವುದು/ತಡೆಗಟ್ಟುವುದು/ಆಗದಂತೆ ತಡೆಯುವುದು; ಬರ್=ಆಗಮಿಸುವುದು/ಬರುವುದು; ಬಾರಾ=ಬರುವಂತಹವನಾಗು; ಧರ್ಮಿ=ಕರುಣೆಯುಳ್ಳವನು/ಒಲವಿನಿಂದ ಕಾಪಾಡುವವನು;

ಕೂಡಲಸಂಗಮದೇವಾ ನೀನೆನಗೆ ಒಳ್ಳಿದನಾದಡೆ ಎನ್ನ ಹೊಗಳತೆಗೆ ಅಡ್ಡ ಬಾರಾ ಧರ್ಮಿ=ಹೊಗಳಿಕೆಗೆ ಅಡ್ಡಬಂದು ತನ್ನನ್ನು ಕಾಪಾಡುವಂತೆ ಒಳಿತಿನ ನಡೆನುಡಿಗಳ ಸಂಕೇತವಾಗಿರುವ ಕೂಡಲಸಂಗಮನಲ್ಲಿ ವ್ಯಕ್ತಿಯು ಮೊರೆಯಿಡುತ್ತಿದ್ದಾನೆ.

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ
ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ
ತನುವಿನಲ್ಲಿ ಹುಸಿ ತುಂಬಿ
ಮನದೊಳಗೆ ವಿಷಯ ತುಂಬಿ
ಮನದೊಳಗೆ ಮನದೊಡೆಯನಿಲ್ಲ
ಕೂಡಲಸಂಗಮದೇವಾ.

ಸುಳ್ಳು, ತಟವಟ, ಮೋಸ, ಕೆಟ್ಟ ಆಸೆಗಳಿಂದ ಕೂಡಿ, ಕ್ರೂರತನದ ನಡೆನುಡಿಯುಳ್ಳ ವ್ಯಕ್ತಿಯ ಮಯ್ ಮನದಲ್ಲಿ ದೇವರು ನೆಲೆಸಿರುವುದಿಲ್ಲ ಎಂಬ ಸಂಗತಿಯನ್ನು ರೂಪಕವೊಂದರ ಮೂಲಕ ಈ ವಚನದಲ್ಲಿ ಹೇಳಲಾಗಿದೆ.

( ಮನೆ+ಒಳಗೆ; ಮನೆ=ಜನರು ವಾಸಿಸುವ ಜಾಗ/ಬೀಡು/ನೆಲೆ; ಒಳಗೆ=ಆ ನೆಲೆಯಲ್ಲಿ/ಬೀಡಿನಲ್ಲಿ; ಮನೆ+ಒಡೆಯನ್+ಇದ್ದಾನೊ; ಒಡೆಯ=ಯಜಮಾನ/ಮನೆಯನ್ನು ಚೆನ್ನಾಗಿ ಕಾಪಾಡಿಕೊಳ್ಳುವ ಹೊಣೆಯನ್ನು ಹೊತ್ತಿರುವ ವ್ಯಕ್ತಿ; ಇರು=ವಾಸಮಾಡು/ಬದುಕು/ನೆಲಸು; ಇದ್ದಾನೊ=ಇರುವನೋ/ವಾಸಮಾಡುತ್ತಿರುವನೋ/ನೆಲೆಸಿರುವನೋ; ಇಲ್ಲವೋ=ವಾಸಮಾಡುತ್ತಿಲ್ಲವೋ/ನೆಲೆಸಿಲ್ಲವೋ;

ಹೊಸ್ತಿಲು=ಮನೆಯ ಮುಂಬಾಗಿಲಿನ ಚೌಕಟ್ಟಿನಲ್ಲಿ ಕೆಳಗಿರುವ ಮರದ ದಪ್ಪನೆಯ ಪಟ್ಟಿ; ಹುಲ್ಲು=ಗರಿಕೆ/ಚಿಕ್ಕದಾಗಿ ಬೆಳೆದಿರುವ ಹಸಿರಿನ ಪಯಿರು/ಹಲವಾರು ಬಗೆಯ ಕಳೆ/ಹಂಬು/ಗಿಡಗಳು; ಹುಟ್ಟು=ಬೆಳೆ; ರಜ=ದೂಳು/ಕಸಕಡ್ಡಿ/ದುಂಬು/ಕೊಳಕು ವಸ್ತುಗಳು; ತುಂಬು=ಹರಡು/ವ್ಯಾಪಿಸು;

ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ ಮನೆಯೊಡೆಯನಿದ್ದಾನೊ ಇಲ್ಲವೋ=ಮನೆಯ ಮುಂದುಗಡೆಯ ಹೊಸ್ತಿಲ ಎಡೆಯಲ್ಲಿ ಹುಲ್ಲು ಹುಟ್ಟಿ, ಮನೆಯ ಒಳಗಡೆ ರಜ ತುಂಬಿಕೊಂಡಿದ್ದರೆ, ಆ ಮನೆಯ ಒಡೆಯನಾಗಲಿ ಇಲ್ಲವೇ ಇನ್ನಿತರ ವ್ಯಕ್ತಿಗಳಾಗಲಿ ವಾಸವಾಗಿಲ್ಲವೆಂದು ಮೇಲುನೋಟಕ್ಕೆ ಗೊತ್ತಾಗುತ್ತದೆ. ಆ ರೀತಿ ಹಾಳುಬಿದ್ದಿರುವ ಮನೆಯಲ್ಲಿ ಯಾರೊಬ್ಬರೂ ವಾಸವಾಗಿಲ್ಲವೆಂಬುದನ್ನು ಮನೆಯ ಹೊಸ್ತಿಲಲ್ಲಿ ಬೆಳೆದು ಹಬ್ಬಿರುವ ಹಸಿರಿನ ಪಯಿರು ಮತ್ತು ಒಳಗೆ ತುಂಬಿಕೊಂಡಿರುವ ಕಸಕಡ್ಡಿಗಳೇ ಸೂಚಿಸುತ್ತಿವೆ;

ತನು+ಇನ್+ಅಲ್ಲಿ; ತನು=ಮಯ್/ದೇಹ/ಶರೀರ; ತನುವಿನಲ್ಲಿ=ಮಯ್ಯಲ್ಲಿ/ದೇಹದಲ್ಲಿ; ಹುಸಿ=ಸುಳ್ಳು/ಇರುವುದನ್ನು ಇಲ್ಲವೆಂದು-ಇಲ್ಲದ್ದನ್ನು ಇದೆಯೆಂದು ಹೇಳುವುದು;

ತನುವಿನೊಳಗೆ ಹುಸಿ ತುಂಬಿ=ವ್ಯಕ್ತಿಯು ತನ್ನ ದಿನನಿತ್ಯದ ವ್ಯವಹಾರಗಳಲ್ಲಿ ಸುಳ್ಳನ್ನಾಡಿ ತನ್ನ ಹಿತಕ್ಕಾಗಿ ಇತರರನ್ನು/ಸಮಾಜವನ್ನು ವಂಚಿಸಿ, ಕೇಡನ್ನು ಬಗೆಯುತ್ತಿರುವ ನಡೆನುಡಿಗಳಿಂದ ಕೂಡಿದವನಾಗಿ;

ಮನದ+ಒಳಗೆ; ಮನ=ಮನಸ್ಸು; ಮನದೊಳಗೆ=ಮನಸ್ಸಿನಲ್ಲಿ; ವಿಷಯ=ಅಯ್ದು ಇಂದ್ರಿಯಗಳಾದ ಕಣ್ಣು-ಕಿವಿ-ಮೂಗು-ತೊಗಲು-ನಾಲಗೆಯು ಬಯಸಿದ್ದೆಲ್ಲವನ್ನೂ ಎಂತಾದರೂ ಮಾಡಿ ಪಡೆದುಕೊಳ್ಳಬೇಕೆಂಬ ತುಡಿತ;

ಮನದೊಳಗೆ ವಿಷಯ ತುಂಬಿ=ಕೆಟ್ಟ ಕಾಮನೆಗಳನ್ನು/ಕೆಟ್ಟ ಆಸೆಗಳನ್ನು ಮನದಲ್ಲಿ ತುಂಬಿಕೊಂಡವನಾಗಿ;

ಮನದ+ಒಡೆಯನ್+ಇಲ್ಲ; ಮನದೊಡೆಯ=ಅರಿವು ಮತ್ತು ಎಚ್ಚರದ ನಡೆನುಡಿಯ ಸಂಕೇತನಾದ ದೇವರು;

ಅರಿವು ಎಂದರೆ “ ಜೀವನದಲ್ಲಿ ಯಾವುದು ಒಳ್ಳೆಯದು/ಯಾವುದು ಕೆಟ್ಟದ್ದು – ಯಾವುದು ಸರಿ/ಯಾವುದು ತಪ್ಪು – ಯಾವುದು ದಿಟ/ಯಾವುದು ಸಟೆ “ ಎಂಬ ತಿಳುವಳಿಕೆ. ಎಚ್ಚರದ ನಡೆನುಡಿ ಎಂದರೆ “ ವ್ಯಕ್ತಿಯು ತನ್ನ ಮಯ್ ಮನದಲ್ಲಿ ತುಡಿಯುವ ಕೆಟ್ಟ ಒಳಮಿಡಿತಗಳನ್ನು ಪ್ರತಿನಿತ್ಯವೂ ಜೀವನದ ಉದ್ದಕ್ಕೂ ಹತ್ತಿಕ್ಕಿಕೊಂಡು ತನ್ನನ್ನು ಒಳಗೊಂಡಂತೆ ಸಹಮಾನವರ ಮತ್ತು ಸಮಾಜದ ಒಳಿತಿಗೆ ಪೂರಕವಾಗುವಂತೆ ಬಾಳುವುದು. “

ಕೂಡಲಸಂಗಮದೇವ=ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತ ನಾಮ;

ತನುವಿನೊಳಗೆ ಹುಸಿ ತುಂಬಿ ಮನದೊಳಗೆ ವಿಷಯ ತುಂಬಿ ಮನದೊಳಗೆ ಮನದೊಡೆಯನಿಲ್ಲ=ಸಹಮಾನವರಿಗೆ ಮತ್ತು ಸಮಾಜಕ್ಕೆ ವಂಚನೆಯನ್ನು/ಕೇಡನ್ನು ಬಗೆಯುವಂತಹ ಸುಳ್ಳುಗಾರನ ಮತ್ತು ಕೆಟ್ಟ ನಡೆನುಡಿಯುಳ್ಳ ವ್ಯಕ್ತಿಯ ಮನದಲ್ಲಿ ದೇವರು ನೆಲೆಯಾಗಿರುವುದಿಲ್ಲ.

ತಾನು ವಾಸವಿರುವ ಮನೆಯಲ್ಲಿ ಪ್ರತಿನಿತ್ಯವೂ ಬೀಳುವ ಕಸಕಡ್ಡಿ ದುಂಬುದೂಳನ್ನು ತೆಗೆದು ಮನೆಯನ್ನು ವ್ಯಕ್ತಿಯು ಒಪ್ಪವಾಗಿಟ್ಟುಕೊಳ್ಳುವಂತೆ, ಜೀವನದ ಉದ್ದಕ್ಕೂ ಪ್ರತಿನಿತ್ಯವೂ ತನ್ನ ಮಯ್ ಮನದಲ್ಲಿ ಮೂಡುವ ಕೆಟ್ಟ ಒಳಮಿಡಿತಗಳನ್ನು ಹತ್ತಿಕ್ಕಿಕೊಂಡು, ಒಳ್ಳೆಯ ನಡೆನುಡಿಗಳಿಂದ ಬಾಳಬೇಕು. ಇಲ್ಲದಿದ್ದರೆ ಒಡೆಯನಿಲ್ಲದ ಮನೆಯು ಹಾಳುಬಿದ್ದಿರುವಂತೆ ಕೆಟ್ಟ ನಡೆನುಡಿಯುಳ್ಳ ವ್ಯಕ್ತಿಯ ಬದುಕು ಹಾಳಾಗುತ್ತದೆ ಎಂಬ ತಿರುಳನ್ನು ಈ ರೂಪಕ ಸೂಚಿಸುತ್ತದೆ)

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: