ಚಕ್ರತೀರ್‍ತ…

– ಪ್ರಸನ್ನ ಕುಲಕರ‍್ಣಿ.

ಚಕ್ರತೀರ್‍ತ Chakratheertha

ಚಕ್ರತೀರ‍್ತದಲ್ಲಿ ಹೇಗೆ ನದಿಯ ದಿಕ್ಕು ಬದಲಾಗುತ್ತೊ ಅದೇ ತರ ನನ್ನ ಜೀವನದ ದಿಕ್ಕುಕೂಡ ಬದಲಾಯಿತು. ಹಂಪಿಗೆ ತಾಯಿ ಆಗಿರುವ ಈ ತುಂಗಬದ್ರೆ ಇದೆ ಜಾಗದಲ್ಲಿ ತನ್ನ ದಿಕ್ಕನ್ನು ಬದಲಾಯಿಸಿಕೊಂಡು ಮುಂದೆ ಹೋಗುವುದು, ಅದೆ ತರ ನನ್ನ ಗಂಡನ ಜೀವ ಕಿತ್ತುಕೊಂಡು ನನ್ನ ಜೀವನದ ದಿಕ್ಕನ್ನು ಬದಲಾಯಿಸಿದಳು ಎಂದು ನೆನಸಿಕೊಳ್ಳುತ್ತ ಯಂತ್ರೋದ್ದಾರ ಆಂಜನೇಯ ಕಟ್ಟೆಯ ಮೇಲೆ ಕುಳಿತ ಬೂಮಿಜ ಶೂನ್ಯಬಾವದಲ್ಲಿ ಕಳೆದುಹೋದಳು.

ಕಲ್ಲು, ದೊಡ್ಡ ಬಂಡೆಗಳ ನಡುವೆ ರಬಸವಾಗಿ ಹರಿದರು ಸೂಕ್ಶ್ಮ ಮತ್ತು ಅತ್ಯಂತ ಶಾಂತವಾಗಿ ಹರಿಯುವ ಇವಳು ಅಂದೇಕೆ ರೌದ್ರ ರೂಪ ತಾಳಿದಳೋ, ನೆನಸಿಕೊಂಡರೆ ಹಿಡಿ ಶಾಪ ಹಾಕುವಶ್ಟು ಸಿಟ್ಟು ಬರುತ್ತದೆ ಎಂದು ಕೊಳ್ಳುವಾಗ ಬೂಮಿಜ ತನಗೆ ಗೊತ್ತಿಲ್ಲದೆ ತಾನೇ ಹಿಂದಿನ ನೆನಪಿಗೆ ಜಾರಿಹೋದಳು.

ಈ ಹಾಳು ಹಂಪಿ ಕಂಡರೆ ಅವನಿಗೆ ಏಕೆ ಅಶ್ಟು ಆಕರ‍್ಶಣೆ ಇತ್ತೊ , ವರ‍್ಶಕ್ಕೆ ಕನಿಶ್ಟ 3-4 ಬಾರಿಯಾದರೂ ಇಲ್ಲಿಗೆ ಬರುತ್ತಿದ್ದ. ನಾನು ಪ್ರತಿಬಾರಿ ಕೇಳಿದಾಗಲೂ ಒಂದೆ ಉತ್ತರ “ಈ ಹಂಪಿ ಪ್ರತಿಬಾರಿ ನೋಡುವಾಗಲೂ ಹೊಚ್ಚಹೊಸದಾಗಿ ಕಾಣುತ್ತದೆ, ಮಳೆಗಾಲದಲ್ಲಿ ಹಸಿರು ಸೀರೆಯುಟ್ಟ ತುಂಬು ಗರ‍್ಬಿಣಿಯಂತೆ, ಬೇಸಿಗೆಯಲ್ಲಿ ಗಂಗೂಬಾಯಿ ಹಾನಗಲ್ಲರ ದನಿಯಂತೆ ಮತ್ತೆ ಮತ್ತೆ ಕೇಳಬೇಕೆಂಬ ಹಂಬಲದಂತೆ. ಇಲ್ಲಿನ ಪ್ರತಿಯೊಂದು ಕಲ್ಲಿಗೂ ಒಂದೊಂದು ಕತೆ, ಅಲ್ಲಿ ಶಿಲೆಗಳಲ್ಲಿ ಸಂಗೀತ ಹೊರಟರೆ, ಇಲ್ಲಿ ಬಂಡೆಗಳ ಮದ್ಯ ಸ್ವರಗಳ ಏರಿಳಿತಕ್ಕೆ ಕುಣಿಯುತ್ತ ಹರಿಯುವ ತುಂಗಬದ್ರೆ …!!!” ಎಂದು ಇಶ್ಟುದ್ದ ಏನೇನೋ ಹೇಳುತ್ತಿದ್ದ ಆದರೆ ವರ‍್ಶಕ್ಕೆ ಒಂದು ಬಾರಿ ನಾನು ಇಲ್ಲಿಗೆ ಬರುತ್ತಿದ್ದೆ ಅದು ಅವನ ತಾಯಿಯ ತಿತಿಯ ದಿನ. ಈಗ ತಾಯಿ ಮತ್ತು ಮಗನ ತಿತಿ ಒಂದೇ ದಿನ ಮಾಡುವಂತಾಗಿದೆ.

ಈ ಹಂಪೆಯ ಪ್ರತಿಯೊಂದು ಕಲ್ಲಿನ ಕತೆಯು ಅವನಿಗೆ ಗೊತ್ತಿತ್ತು. ಅಂದು ವಿರೂಪಾಕ್ಶ ದೇವಾಲಯದ ಎಡಬಾಗದಲ್ಲಿ ನದಿಯ ದಂಡೆಯ ಮೇಲಿರುವ ಶ್ರಾದ್ದ ಕರ‍್ಮಗಳಿಗೆ ಮಾಡಿರುವ ಜಾಗದಲ್ಲಿ ಅವನ ತಾಯಿಗೆ ಪಿಂಡಪ್ರದಾನ ಮಾಡಿ, ಊಟ ಮುಗಿಸಿ ಅದೇ ರಾಜಬೀದಿಯಲ್ಲಿ ಚಕ್ರತೀರ‍್ತದತ್ತ ಹೊರಟೆವು, ನಾನು, ಅವನು ಮತ್ತು ನಮ್ಮ ಒಂದು ವರ‍್ಶದ ಮಗಳು ನಾದ. ಹಂಪಿಯಲ್ಲಿ ಅವನಿಗೆ ತುಂಬಾ ಇಶ್ಟವಾದ ಜಾಗ ಚಕ್ರತೀರ‍್ತ. ತುಂಗಬದ್ರೆ ತನ್ನ ದಿಕ್ಕನ್ನು ಬದಲಿಸುವ ಅತಿಸುಂದರವಾದ ಜಾಗ, ಬಲಕ್ಕೆ ಕತ್ತೆತ್ತಿ ನೋಡಿದರೆ ಅಂಜನಾದ್ರಿ, ಆಂಜನೇಯ ಹುಟ್ಟಿದ ಜಾಗ, ಕೇವಲದೊಡ್ಡ ಬಂಡೆಗಳಿಂದ ಮಾಡಲ್ಪಟ್ಟಿದ್ದು, ಬೆಟ್ಟದ ಮೇಲೆ ಬಿಳಿ ಬಣ್ಣದ ದೇವಾಲಯ, ಅಲ್ಲಿಗೆ ಹೋಗಲು ಮೆಟ್ಟಿಲುಗಳು ಅವು ಸಹ ಬಿಳಿ ಬಣ್ಣದ್ದೇ. ದೂರದಿಂದ ನೋಡಿದರೆ ಬಿಳಿ ಇರುವೆಯ ಸಾಲಿನ ಹಾಗೆ ಕಾಣುತ್ತದೆ. ಎಡಕ್ಕೆ ಕತ್ತೆತ್ತಿ ನೋಡಿದರೆ ವಿರೂಪಾಕ್ಶ ದೇವಾಲಯದ ಮುಕ್ಯಗೋಪುರ, ತೆಂಗಿನಮರಗಳ ಮದ್ಯ ಕಾಣುವ ಗೋಪುರದ ತುದಿ, ಅದುಸುಂದರವಾದ ಬ್ರುಹಾದಾಕಾರದ ಗೋಪುರ, ಸುಮಾರು 7ನೇ ಶತಮಾನದಲ್ಲಿ ಕಟ್ಟಿದ್ದು. ಹೀಗೆ ಅವನು ನೀಡುವ ಎಲ್ಲ ವಿವರಗಳು ನಮ್ಮನ್ನು ಆ ಕಾಲಕ್ಕೆ ಕರೆದುಕೊಂಡು ಹೋಗುವಂತಿದ್ದವು. ಈ ರಾಜಬೀದಿ, ಮುತ್ತು ರತ್ನಗಳನ್ನು ಮಾರುತಿದ್ದ ಅಂಗಡಿಗಳು ಈಗಲೂ ಹಾಗೆ ನಿಂತಿವೆ. ಹಾಗೆ ತುಂಗಬದ್ರೆಯನ್ನು ಎಡಕ್ಕೆ ಬಿಟ್ಟು ಮುಂದೆ ನಡೆದರೆ ಅಚ್ಯುತರಾಯ ದೇವಸ್ತಾನ. ಅದಕ್ಕೂ ಮೊದಲು ಸುಗ್ರೀವ ಗುಹೆ ಮತ್ತು ಸಹಸ್ರಲಿಂಗ! ಸಹಸ್ರಲಿಂಗದರ‍್ಶನ ಮಾಡಿಕೊಂಡು..

ಹಾ ..!! ಸಹಸ್ರಲಿಂಗ ಎಂದರೆ ಮೈಜುಮ್ಮೆನ್ನುವಂತಹ ಅನುಬವ. ಇದೆ ಜಾಗದಲ್ಲಿ ಅವನ ತಲೆ ಕಲ್ಲಿಗೆ ಬಡಿದು ರಕ್ತ ನೀರಿನೊಟ್ಟಿಗೆ ಬೆರೆತಿದ್ದು…

ಅಂದು ಸಹಸ್ರಲಿಂಗ ದರ‍್ಶನ ಮಾಡಿಕೊಂಡು ಮುಂದೆ ನಡೆದು ವಿಜಯ ವಿಟ್ಟಲ ದೇವಸ್ತಾನಕ್ಕೆ ಹೋದೆವು. ಅದು ಅತಿ ಸುಂದರವಾದ ದೇವಸ್ತಾನ. ಅತಿ ಸೂಕ್ಶ್ಮ ಮತ್ತು ಸುಂದರವಾದ ಶಿಲೆಯಕೆತ್ತನೆಯಿಂದ ಕೂಡಿದ್ದು. ಇದು ಈಗಲೆ ಇಶ್ಟು ಸುಂದರವಾಗಿರುವಾಗ ನೂರಾರು ವರ‍್ಶಗಳ ಹಿಂದೆಎಶ್ಟು ವೈಬವದಿಂದ ಇದ್ದಿರಬಹುದು, ಎನ್ನುವ ಅವನ ಕಲ್ಪನಾತೀತ ವಿವರಣೆ. ನಿಜಕ್ಕೂ ಅದು ಸುಂದರವಾದ ದೇವಾಲಯವೇ. ಆ ಕಲ್ಲಿನ ರತ, ಸಂಗೀತ ಕಂಬಗಳು ಸುಮಾರು 72 ಇದ್ದಿರಬಹುದು. ಇಬ್ಬರು ರಾಣಿಯರಿಗಾಗಿ ಕಟ್ಟಿಸಿರುವ ನ್ರುತ್ಯ ಮಂಟಪ ಎಲ್ಲವು ನಿಜವಾಗಲೂ ಅದ್ಬುತ.

ಇದನ್ನೆಲ್ಲಾ ನೋಡಿ ಅಲ್ಲಿಯೇ ಸ್ವಲ್ಪ ಕುಳಿತು ಮತ್ತೆ ಅದೇ ದಾರಿಯಲ್ಲಿ ಮರಳಿ ಬಂದು ಚಕ್ರತೀರ‍್ತದಲ್ಲಿ ಕುಳಿತುಕೊಂಡಾಗ, ಅಲ್ಲಿಯ ಮುಂದೆ ತುಂಗಬದ್ರೆಯ ದಡದಲ್ಲಿ ಆಟವಾಡುತ್ತ ಕುಳಿತ ಮಗು ನೀರಿನಲ್ಲಿ ಬಿದ್ದು ಮುಳುಗಹತ್ತಿತು. ಅದನ್ನು ಕಾಪಾಡಲು ಇವನು ನೀರಿಗೆ ಜಿಗಿದ, ಇವನಿಗೆ ಈಜು ಬರುತ್ತಿತ್ತು ಆದರೆ ನನ್ನ ದುರಾದ್ರುಶ್ಟಕ್ಕೆ ಅವತ್ತು ನೀರಿನ ಹೆಚ್ಚಳದಿಂದ ತುಂಗಬದ್ರೆಯ ಆಣೆಕಟ್ಟಿನ ಎಲ್ಲ ಬಾಗಿಲು ತೆರದಿತ್ತು, ಅದಕ್ಕೆ ಇಲ್ಲಿ ನೀರಿನ ರಬಸ ಹೆಚ್ಚಿತ್ತು. ಇವನು ನೀರಿಗೆ ಜಿಗಿದ ಮೇಲೆ ನಾನು ಹಿಂಬಾಲಿಸುತ್ತ ದಂಡೆಯಮೇಲೆ ಓಡ ತೊಡಗಿದೆ. ಹಾಗೆಯೇ ಸಹಸ್ರಲಿಂಗದ ಹತ್ತತ್ತಿರ ಬಂದಾಗ ಅವನ ತಲೆ ಕಲ್ಲಿಗೆ ಬಡಿದು, ರಕ್ತ ನೀರಿನೊಟ್ಟಿಗೆ ಮೇಲೆ ಬಂತು. ಮುಂದೆ ಎರಡು ಗಂಟೆಗಳ ನಂತರ ಇವನು ಸಿಕ್ಕಿದ್ದು ಹೆಣವಾಗಿಯೇ ಮತ್ತೆ ಆ ಮಗು ಕೂಡ ಉಳಿಯಲಿಲ್ಲ. ಯಾರದೊ ಮಗುವನ್ನು ಕಾಪಾಡಲು ಹೋಗಿ ನನ್ನನ್ನು ನನ್ನ ಮಗುವನ್ನು ಅನಾತ ಮಾಡಿ ಹೋದ.

ಇಂದು ಮತ್ತೆ ಅದೆ ಜಾಗದಲ್ಲಿ ಕುಳಿತುಕೊಂಡಿದ್ದೇನೆ. ಶಾಂತವಾಗಿ ಹರಿಯುವ ತುಂಗಬದ್ರೆ ಆದರೆ ನನ್ನ ಮನಸ್ಸಿನಲ್ಲಿ ಅಶಾಂತಿ, ಶೂನ್ಯಬಾವ, ಆತಂಕ. ಆತಂಕ ಏಕೆ? ವಯಸ್ಸಾದ ಮಾವ ಮತ್ತು ಪುಟ್ಟ ಮಗಳ ಬಗ್ಗೆ. ಒಂದು ತಿಳಿಯುತ್ತಿಲ್ಲ. ಈಗ ಅವನು ಇದ್ದಿದ್ದರೆ ಇದೆ ಕ್ಶಣ ಎಶ್ಟು ಸುಂದರವಾಗಿರುತ್ತಿತ್ತು. ಅವನು ಸತ್ತಮೇಲೆ ಇದೆ ಜಾಗದಲ್ಲಿ ಇದೆ ತುಂಗಬದ್ರೆಗೆ ನನ್ನ ಪ್ರಾಣ ಅರ‍್ಪಿಸುವ ಯೋಚನೆ ಎಶ್ಟೋಸಲ ಬಂದಿದೆ ಆದರೆ ನನ್ನ ಜವಾಬ್ದಾರಿ ನನ್ನನ್ನು ಕಟ್ಟಿಹಾಕಿದೆ.

“ಈ ತುಂಗಬದ್ರೆಯ ನೀರನ್ನು ಯಾರೂ ಉಪಯೋಗಿಸಬೇಡಿ, ಇವಳು ಪಾಪಿ, ನನ್ನನ್ನು ವಿದವೆ ಮಾಡಿದ ಪಾಪಿ, ನನ್ನ ಮಗಳನ್ನು ಅನಾತೆಯನ್ನಾಗಿ ಮಾಡಿದ ಪಾಪಿ ” ಎಂದು ಕೂಗಿಹೇಳುವಶ್ಟು ಸಿಟ್ಟುಆದರೆ ಕೇಳುವವರು ಯಾರು. ಇವಳು ಲಕ್ಶಾಂತರ ಜನರ ಜೀವನಾಡಿ.

ಆದರೆ ಇವಳಿಗೆ ಕೇಳಿಕೊಳ್ಳುವುದು ಇಶ್ಟೇ, ನನ್ನ ಗಂಡನ ಹಾಗೆ ಮತ್ತೆ ಯಾರನ್ನು ನುಂಗಬೇಡ.

ಇವನಿಗೆ ಹೀಗಾಗುತ್ತೆ ಅಂತ ಮೊದಲೇ ಗೊತ್ತಿತ್ತೋ ಏನೋ, ಅದಕ್ಕೆ ನಮ್ಮನ್ನು ಆರ‍್ತಿಕವಾಗಿ ಸಬಲರನ್ನಾಗಿ ಮಾಡಿದ್ದಾನೆ. ನನ್ನ ಜೀವನಕ್ಕೆ ಇವಳ ಅಬ್ಯಾಸಕ್ಕೆ ಯಾವುದೇ ತೊಂದರೆ ಬಾರದಂತೆ ಎಲ್ಲವೂ ಇದೆ ಆದರೆ ಅವನಿಲ್ಲ ಎಂಬ ಕೊರಗು….!!!

ಇಲ್ಲಿ ಕುಳಿತರೆ ಮತ್ತೆ ಕಹಿ ಗಟನೆಗಳ ನೆನಪು, ಎನ್ನುತ್ತಾ ಬೂಮಿಜ ತನ್ನ ಎರಡು ವರ‍್ಶದ ಮಗಳನ್ನು ಕರೆದುಕೊಂಡು ಕಾರಿನತ್ತ ಹೊರಟಳು.

ಇತ್ತ ಎಲ್ಲವನ್ನು ನೋಡುತ್ತಿದ್ದರೂ, ವಿದಿಯನ್ನು ಬದಲಿಸಲಾಗದೆ ತನ್ನ ಕಾರ‍್ಯವನ್ನು ಮುಗಿಸಿ ಪಶ್ಚಿಮದಲ್ಲಿ ಸೂರ‍್ಯ ಅಸ್ತಂಗತನಾದ.

(ಚಿತ್ರ ಸೆಲೆ: ಪ್ರಸನ್ನ ಕುಲಕರ‍್ಣಿ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: