ಸಿಂಹಗಳ ಜಗತ್ತಿನಲ್ಲಿ

– ಮಾರಿಸನ್ ಮನೋಹರ್.

ಸಿಂಹ, lion

ಸೆರೆಂಗೆಟಿಯ ದೊಡ್ಡದಾದ ಹುಲ್ಲುಗಾವಲುಗಳಲ್ಲಿ ಅಲ್ಲಲ್ಲಿ ಇರುವ ದಿನ್ನೆಗಳ ಮೇಲೆ ಸಿಂಹಗಳು ನಿಂತು ಸುತ್ತಮುತ್ತಲೂ ನೋಡುತ್ತವೆ. ಯಾವ ಪ್ರಾಣಿಯ ಮೇಲೆ ಅಟ್ಯಾಕ್ ಮಾಡಬೇಕು ಅಂತ ತಮ್ಮ ತಮ್ಮಲ್ಲಿ ಹಂಚಿಕೆ ಹಾಕಿಕೊಳ್ಳುತ್ತವೆ. ಸಿಂಹಗಳು ಚಿರತೆಗಳ ಹಾಗೆ ತಮ್ಮ ಬೇಟೆಯನ್ನು ಬೆನ್ನಟ್ಟಿ ಹೋಗುವುದಿಲ್ಲ. ಚಿರತೆಗಳಿಗೆ ಹೋಲಿಸಿದರೆ ಸಿಂಹದ ಓಟದ ಸ್ಪೀಡು ಕಡಿಮೆ. ಚಿರತೆ ಮತ್ತು ಹುಲಿಗಳು ಒಂಟಿಯಾಗಿ ಬೇಟೆಯಾಡುತ್ತವೆ ಆದರೆ ಸಿಂಹಗಳು ನಾಲ್ಕು ಐದು ಹೀಗೆ ಗುಂಪು ಕಟ್ಟಿಕೊಂಡು ಬೇಟೆಯಾಡುತ್ತವೆ‌. ಚಿರತೆ , ಹುಲಿ , ಸಿಂಹಗಳನ್ನು “ಬಿಗ್ ಕ್ಯಾಟ್” ಅಂದರೆ “ದೊಡ್ಡ ಬೆಕ್ಕುಗಳು” ಅಂತ ಕರೆಯುತ್ತಾರೆ. ನಾಯಿ ,ನರಿ, ತೋಳ, ಹಾಯಿನಾ, ಕಾಡುನಾಯಿ ಇವುಗಳೆಲ್ಲ “ಕೆನಾಯಿನ್” ಎಂಬ ಗುಂಪಿಗೆ ಸೇರಿದರೆ, ಬೆಕ್ಕು ಹುಲಿ ಚಿರತೆ, ಚಿಗಟೆ, ಸಿಂಹ, ಕರಿಚಿರತೆ, ಪೂಮಾ, ಹಿಮಬೆಕ್ಕು, ಇವುಗಳೆಲ್ಲ “ಪೀಲಾಯಿನ್” ಗುಂಪಿಗೆ ಸೇರುತ್ತವೆ.

ಸಿಂಹಕ್ಕೂ ಹುಲಿಗೂ ಇರುವ ಹೋಲಿಕೆ ಅಂದರೆ ಇವೆರಡು ಪ್ರಾಣಿಗಳು ‘ಅಡಗಿಕೊಂಡು’ ಹೊಂಚುಹಾಕಿ ಕೂಡಲೇ ಜಿಗಿದು ತಮ್ಮ ಬೇಟೆಯನ್ನು ಹಿಡಿದು ಕೊಂದು ತಿನ್ನುತ್ತವೆ‌. ಹುಲಿ, ಸಿಂಹ, ಚಿರತೆಗಳು ಬೇರೆ ಪ್ರಾಣಿಗಳು ಅವುಗಳನ್ನು ನೋಡುತ್ತಿದ್ದರೆ ಅವು ಬೇಟೆಯಾಡುವುದಿಲ್ಲ, ಬೆನ್ನು ತಿರುಗಿಸಿದ ತಕ್ಶಣ ದಾಳಿ ಮಾಡುತ್ತವೆ. ಮನುಶ್ಯರು ಕೂಡ ಹುಲಿ ಚಿರತೆ ಸಿಂಹಗಳ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರೆ ಅವು ದಾಳಿ ಮಾಡಲು ಹಿಂದೆ ಮುಂದೆ ನೋಡುತ್ತವೆ. ಆದರೆ ಬೆನ್ನು ತಿರುಗಿಸಿದ ತಕ್ಶಣ ದಾಳಿ ಮಾಡಲು ಮುಂದೆ ಬರುತ್ತವೆ. ಹುಲಿಗಳ ಬಗ್ಗೆ ವಿವರವಾಗಿ ಅದ್ಯಯನ ಮಾಡಿದ ‘ಜಿಮ್ ಕಾರ‍್ಬೆಟ್’ ಪ್ರಾಣಿಪ್ರಿಯರಿಗೆ ಚಿರಪರಿಚಿತ ಹೆಸರು.

ಸಿಂಹಗಳು ಹೆಚ್ಚಾಗಿ ಒಂಟಿಯಾಗಿ ಇರುವುದಿಲ್ಲ ಮತ್ತು ಒಂಟಿಯಾಗಿ ಬೇಟೆಯಾಡುವುದಿಲ್ಲ!

ಇವು ಮಾಡಿಕೊಂಡ ಗುಂಪಿಗೆ ‘ಪ್ರೈಡ್’ ಅನ್ನುತ್ತಾರೆ. ಈ ‘ಪ್ರೈಡ್’ನಲ್ಲಿ ನಾಲ್ಕೈದು ಹೆಣ್ಣು ಸಿಂಹಗಳು ಮತ್ತು ಒಂದರಿಂದ ಎರಡು ಗಂಡು ಸಿಂಹಗಳು ಇರುತ್ತವೆ. ಗಂಡುಸಿಂಹಗಳು ಕೊರಳ ಸುತ್ತ ದಟ್ಟಬಣ್ಣದ ಕೂದಲುಗಳಿಂದ ಸುಲಬವಾಗಿ ಗುರುತು ಸಿಗುತ್ತವೆ. ಹೆಣ್ಣು ಸಿಂಹಗಳಿಗೆ ಕೊರಳ ಸುತ್ತ ಕೂದಲು ಇರುವುದಿಲ್ಲ. ವಿಶೇಶವೆಂದರೆ ಬಹಳ ಸಲ ಹೆಣ್ಣು ಸಿಂಹಗಳು ಬೇಟೆಯಾಡಲು ಹೋಗುತ್ತವೆ. ತುಂಬಾ ದೊಡ್ಡ ಬೇಟೆಗಳಿದ್ದರೆ ಅಂದರೆ ಜೀಬ್ರಾ, ಕಾಡೆಮ್ಮೆ, ಕಾಡುಕೋಣ, ಆವಾಗ ಗಂಡು ಸಿಂಹ ಬೇಟೆಯಾಡುತ್ತದೆ, ಹೆಣ್ಣುಸಿಂಹಗಳು ಹೆಲ್ಪರ್ ಆಗಿ ಕೆಲಸ ಮಾಡುತ್ತವೆ.

ಗಂಡು ಸಿಂಹದ ಮುಕ್ಯ ಕೆಲಸ ಅಂದರೆ ಈ ‘ಪ್ರೈಡ್‌’ನ ರಕ್ಶಣೆ ಮಾಡುವುದು. ಯಾಕೆಂದರೆ ಬೇರೆ ಗಂಡು ಸಿಂಹಗಳು ಬಂದು ಈ ಪ್ರೈಡಿನ ಸಿಂಹದ ಮರಿಗಳನ್ನು ಕೊಂದು ಹಾಕಿ ಹಾನಿ ಮಾಡುತ್ತವೆ. ಅದಕ್ಕೆ ಗಂಡು ಸಿಂಹಗಳು ದಾಳಿ ಮಾಡುವ ಆ ಬೇರೆ ಸಿಂಹಗಳ ಮೇಲೆ ಯಾವಾಗಲೂ ಒಂದು ಕಣ್ಣು ಇಟ್ಟುಕೊಂಡು ಎಚ್ಚರಿಕೆಯಿಂದ ಇರುತ್ತವೆ. ತುಂಬ ಮಂದಿ ತಿಳಿದುಕೊಂಡಿರುವ ಪ್ರಕಾರ ಸಿಂಹಗಳು ದಟ್ಟ ಕಾಡಿನ ಒಳಗೆ ವಾಸಿಸುವುದಿಲ್ಲ. ಅವಕ್ಕೆ ಬಟಾ ಬಯಲು ಸವನ್ನಾದಂತಹ ಹುಲ್ಲುಗಾವಲು ಬೇಕು. ಹುಲ್ಲು ಮೇಯಲು ಬರುವ ಕಾಡಮ್ಮೆ ಕಾಡುಕೋಣ ಜಿರಾಪೆ, ವಿಲ್ಡಬೀಸ್ಟ್, ಜಿಂಕೆ, ಗಜೆಲ್, ಜೀಬ್ರಾ, ಕ್ರಿಶ್ಣಮ್ರುಗ ಇಂತಹ ಪ್ರಾಣಿಗಳೇ ಇವುಗಳ ನಿಚ್ಚದ ಉಣಿಸು. ಗಂಡು ಸಿಂಹ ದಿನಕ್ಕೆ 7 ಕಿಲೋ ಮಾಂಸ ತಿಂದರೆ ಹೆಣ್ಣು ಸಿಂಹ 5 ಕಿಲೋ ಮಾಂಸ ತಿನ್ನುತ್ತದೆ.

ಬೇಟೆಮಾಡುವಾಗ ಗಾಳಿ ಬೀಸುವ ದಿಕ್ಕನ್ನು ಸರಿಯಾಗಿ ತಿಳಿದುಕೊಂಡಿರುತ್ತವೆ‌!

ಸಿಂಹಗಳು ಬೇಟೆಯಾಡುವ ಪರಿಯು ಪೆಂಟಾಸ್ಟಿಕ್ ! ನಾಲ್ಕೈದು ಸಿಂಹಗಳು ಕೂಡಿ ಮೆಲ್ಲ ಮೆಲ್ಲನೆ ತಮ್ಮ ಮೆತ್ತನೆಯ ಹೆಜ್ಜೆಗಳನ್ನು ಊರುತ್ತಾ ಸ್ವಲ್ಪವೂ ಸಪ್ಪಳವಾಗದ ಹಾಗೆ, ಬೇಟೆಗೆ ತಮ್ಮ ಇರುವಿಕೆಯ ಬಗ್ಗೆ ಸ್ವಲ್ಪವೂ ಸುಳಿವು ಕೊಡದೆ, ಪಟಕ್ಕನೆ ಅದರ ಮೇಲೆ ದಾಳಿ ಮಾಡಿ ಹಿಡಿಯುತ್ತವೆ. ಸಿಂಹಗಳು ತಮ್ಮ ಬೇಟೆಯನ್ನು ಹಿಡಿಯಲು ಹೋಗುವಾಗ ತಮ್ಮ ದಿಕ್ಕನ್ನು ಮತ್ತು ಗಾಳಿ ಬೀಸುವ ದಿಕ್ಕನ್ನು ಸರಿಯಾಗಿ ತಿಳಿದುಕೊಂಡಿರುತ್ತವೆ‌. ಗಾಳಿ ತಮ್ಮ ಕಡೆಯಿಂದ ತಮ್ಮ ಬೇಟೆ ಪ್ರಾಣಿಗಳ ಕಡೆಗೆ ಬೀಸುತ್ತಿದ್ದರೆ ಅವು ಅಲ್ಲಿಂದ ದಾಳಿ ಮಾಡದೆ ಅದರ ವಿರುದ್ದ ದಿಕ್ಕಿಗೆ ಬಂದು ಹಿಂದಿನಿಂದ ದಾಳಿ ಮಾಡುತ್ತವೆ. ಸಿಂಹ, ಹುಲಿ, ಚಿರತೆಗಳ ಈ ದಾಳಿ ಮಾಡುವ ದಾಟಿಯನ್ನು ಅಚ್ಚ ಕನ್ನಡದಲ್ಲಿ “ಮೆಗ್ಗಾಳಿ – ಕಿಗ್ಗಾಳಿ” (ಮೇಲಿನ ಗಾಳಿ – ಕೆಳಗಿನ ಗಾಳಿ) ಅನ್ನುತ್ತಾರೆ. ಸಿಂಹಗಳು ತಮ್ಮ ಬೇಟೆಯನ್ನು ಹೀಗೆ ಸರಪ್ರೈಸ್ ಕೊಟ್ಟು ಹಿಡಿದ ಮೇಲೆ ಅವುಗಳ ಕುತ್ತಿಗೆ ಬಳಿ ಇರುವ ಉಸಿರುನಾಳಗಳನ್ನು, ತಮ್ಮ ದೊಡ್ಡದಾದ ಬಲಿಶ್ಟ ದವಡೆಗಳ ನಡುವೆ ಬಿಗಿಯಾಗಿ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲ್ಲುತ್ತವೆ. ಆಮೇಲೆ ತಿನ್ನಲು ಮೊದಲು ಮಾಡುತ್ತವೆ.

ಇವುಗಳು ಮುಕ್ಯವಾಗಿ ಜಿಂಕೆ, ಕಡವೆ, ಜೀಬ್ರಾ (ಪಟ್ಟೆಕುದುರೆ), ಎರಳೆ, ವಿಲ್ಡರಬೀಸ್ಟ, ಗಜೆಲ್, ಕಾಡೆಮ್ಮೆ, ಕಾಡುಕೋಣಗಳನ್ನು ಬೇಟೆಯಾಡಿ ತಿನ್ನುತ್ತವೆ. ಅಪರೂಪಕ್ಕೆ ಜಿರಾಪೆ ಮತ್ತು ಆನೆಯಂತಹ ಪ್ರಾಣಿಗಳ ಮೇಲೂ ದಾಳಿ ಮಾಡುತ್ತವೆ. ತುಂಬಾ ವಿರಳವಾಗಿ ನೀರಿನ ಪ್ರಾಣಿಗಳಾದ ಹಿಪ್ಪೊಪೊಟೋಮಸ್‌ ಮತ್ತು ಮೊಸಳೆಗಳ ಮೇಲೂ ದಾಳಿ ಮಾಡುತ್ತವೆ! ಸಿಂಹಗಳಿಗೆ ಚಿರತೆಗಳೆಂದರೆ ಆಗಿ ಬರದು. ಹೆಣ್ಣು ಸಿಂಹಗಳು ಎಲ್ಲಿಯಾದರೂ ಚಿರತೆಗಳ ಮರಿಗಳು ಸಿಕ್ಕರೆ ಅವುಗಳನ್ನು ಕಚ್ಚಿ ಸಾಯಿಸಿ ಬಿಡುತ್ತವೆ. ಚಿರತೆಗಳು ತಾವು ಬೇಟೆಯಾಡಿ ತಂದ ಪ್ರಾಣಿಗಳನ್ನು ಎಳೆದುಕೊಂಡು ಮರದ ಮೇಲೆ ಇಡುತ್ತವೆ. ಆಗ ಸಿಂಹಗಳು ಬಂದು ಆ ಮರವನ್ನು ಏರಿ ಚಿರತೆಯ ಬೇಟೆಯನ್ನು ಕಸಿದುಕೊಳ್ಳುತ್ತವೆ. ಬಯಲಿನಲ್ಲಿ ಚಿರತೆಗಳು ಬೇಟೆಯಾಡುತ್ತಿದ್ದರೆ ಅವುಗಳ ಬೇಟೆಯನ್ನು ಕಿತ್ತುಕೊಂಡು ಚಿರತೆಯನ್ನು ಓಡಿಸಿಬಿಡುತ್ತವೆ.

ಸಿಂಹಗಳ ನೇರ ಕಾಂಪಿಟಿಟರ್ ಅಂದರೆ ‘ಹಾಯಿನಾ’ಗಳು (ಕತ್ತೆ ಕಿರುಬ). ಹಾಯಿನಾಗಳೂ ಕಾಡುನಾಯಿಗಳು ಸಿಂಹಗಳು ಅವಕಾಶ ಸಿಕ್ಕರೆ ಒಂದರ ಬೇಟೆಯನ್ನು ಮತ್ತೊಂದು ಕದ್ದುಕೊಂಡು ಕಸಿದುಕೊಂಡು ಹೋಗುತ್ತವೆ. ನಾಲ್ಕೈದು ಸಿಂಹಗಳು ಜೀಬ್ರಾ ಬೇಟೆಯಾಡಿ ಕೊಂದು ತಿನ್ನುತ್ತಿರುವಾಗಲೇ ಹಾಯಿನಾಗಳ ಗುಂಪು ತಮ್ಮ ವಿಚಿತ್ರ “ನಗುವಿನಂತ” ಸದ್ದು ಹೊರಡಿಸುತ್ತಾ, ಬಳಿ ಬಂದು ಸತ್ತ ಜೀಬ್ರಾದ ಕಾಲನ್ನೋ ತಲೆಯನ್ನೋ ಕಸಿದುಕೊಂಡು ಹೋಗುತ್ತವೆ. ಸಿಂಹಗಳು ಅಂತಹ ಸನ್ನಿವೇಶಗಳಲ್ಲಿ ಸಿಟ್ಟಿಗೆದ್ದು ಹಾಯಿನಾಗಳನ್ನೇ ಕಚ್ಚಿ ಕೊಂದು ಹಾಕುತ್ತವೆ. ಬೇಸಿಗೆ ಕಾಲದಲ್ಲಿ ಎಲ್ಲ ಕಡೆ ಹುಲ್ಲುಗಾವಲು, ನೀರು ಕಡಿಮೆಯಾಗಿ ಬೇಟೆಗೆ ಪ್ರಾಣಿಗಳು ಸಿಗದೆ ಇದ್ದಾಗ, ಹೀಗೆ ಮಾಂಸಾಹಾರಿ ಪ್ರಾಣಿಗಳ ನಡುವೆ ಸಿಕ್ಕ ಸ್ವಲ್ಪ ಉಣಿಸಿಗಾಗಿ ಪೋಟಿ ಏರ‍್ಪಡುವುದು ಸಾಮಾನ್ಯ.

ಸಿಂಹ ಮತ್ತು ಗ್ಲಾಡಿಯೇಟರ್‌

ರೋಮನ್ ಎಂಪೈರಿನ ಉತ್ತುಂಗ ಕಾಲದಲ್ಲಿ ಕೊಲೊಸಿಯಮ್‌ಗಳಲ್ಲಿ ಮಂದಿಯ ಮನರಂಜನೆಗೆ ಸಿಂಹಗಳನ್ನು ತರಲಾಗುತ್ತಿತ್ತು. ಗ್ಲಾಡಿಯೇಟರ್‌ಗಳು ತಮ್ಮ ಬಿಡುಗಡೆಗಾಗಿ ಹಸಿದ ಸಿಂಹಗಳ ಜೊತೆ ಸೆಣಸಾಡಬೇಕಾಗುತ್ತಿತ್ತು. ಇಂತಹ ಸೆಣಸಾಟಗಳನ್ನು ಏರ‍್ಪಾಡು ಮಾಡುವುದು ರೋಮನ್‌ ಚಕ್ರವರ‍್ತಿಗಳು ತಮ್ಮ ಪ್ರತಿಶ್ಟೆಯ ವಸ್ತುವನ್ನಾಗಿ ಮಾಡಿಕೊಂಡಿದ್ದರು. ಇಂತಹ ರಕ್ತಸಿಕ್ತ ಪೋಟಿಗಳಲ್ಲಿ ಗೆದ್ದ ಗ್ಲಾಡಿಯೇಟರಗಳನ್ನು ಬಿಡುಗಡೆ ಮಾಡಿ ಚಕ್ರವರ‍್ತಿಗಳು ತಾವು ಎಶ್ಟು ಉದಾರಿಗಳು ಅಂತ ತೋರಿಸಿಕೊಳ್ಳುತ್ತಿದ್ದರು. ಇಂತಹ ಸೆಣಸಾಟ ಪೋಟಿಗಳ ಮೇಲೆ ಜೂಜು ಬಾಜಿ ಕಟ್ಟುವವರ ದಂಡು ಕೂಡ ದೊಡ್ಡದಾಗಿಯೇ ಇರುತ್ತಿತ್ತು. ಕಾಡಿನಲ್ಲಿ ತಮ್ಮ ರಾಜ್ಯ ಕಟ್ಟಿಕೊಂಡಿರುತ್ತಿದ್ದ ಸಿಂಹಗಳು ರೋಮ್‌ನ ಕೊಲೊಸಿಯಮ್‌ಗಳಲ್ಲಿ ಮಂದಿಯ ಮನರಂಜನೆಯ ಬೆಕ್ಕಾಗಿ ಈಟಿ ಕತ್ತಿಗಳಿಂದ ಚುಚ್ಚಿಸಿಕೊಂಡು ಸಾಯಬೇಕಾಗಿ ಬರುತ್ತಿದ್ದದ್ದು ದುಕ್ಕದ ಸಂಗತಿ. ಜಗತ್ತಿನ ಎಲ್ಲ ರಾಜರುಗಳು, ಚಕ್ರವರ‍್ತಿಗಳು ಸಿಂಹ ಹುಲಿಗಳ ಬೇಟೆಯನ್ನು ತಮ್ಮ ಅದಿಕಾರ, ದರ‍್ಪ, ಸಾಹಸ, ಹಮ್ಮು ಬಿಮ್ಮುಗಳ ಪ್ರದರ‍್ಶನಕ್ಕಾಗಿ ಬಳಸಿಕೊಳ್ಳುತ್ತಿದ್ದರು. ತಾವು ಬೇಟೆಯಾಡಿ ತಂದ ಸಿಂಹ, ಹುಲಿ, ಚಿರತೆಗಳ ಚರ‍್ಮಗಳನ್ನು ಆಡಂಬರದಿಂದ ತೋರಿಸಿಕೊಳ್ಳುತ್ತಿದ್ದರು.

ಸಿಂಹಗಳಲ್ಲಿ ಮುಕ್ಯವಾಗಿ ಎರಡು ತಳಿಗಳು ಇವೆ. ಒಂದು ಆಪ್ರಿಕಾ ಕಂಡದ ‘ಆಪ್ರಿಕನ್ ಸಿಂಹ’. ಇನ್ನೊಂದು ಏಶ್ಯಾ ಕಂಡದ ‘ಏಶಿಯಾಟಿಕ್ ಸಿಂಹ’. ಇವೆರಡರ ನಡುವಿನ ವ್ಯತ್ಯಾಸ ಅಂದರೆ ಆಪ್ರಿಕನ್ ಸಿಂಹ ಸೈಜಿನಲ್ಲಿ ಏಶಿಯಾಟಿಕ್ ಸಿಂಹಕ್ಕಿಂತ ಸ್ವಲ್ಪ ದೊಡ್ಡದಾಗಿ ಇರುತ್ತದೆ. ಆಪ್ರಿಕನ್ ಗಂಡು ಸಿಂಹ ತನ್ನ ಪ್ರೈಡ್‌ನ ಜೊತೆಗೆ ಹೆಚ್ಚಾಗಿ ಇರುತ್ತದೆ. ಅದೇ ಏಶಿಯಾಟಿಕ್ ಸಿಂಹ ಒಂಟಿಯಾಗಿ ತಿರುಗಾಡುವ ಸ್ವಬಾವ ಹೊಂದಿರುತ್ತದೆ. ಒಂದು ಕಾಲದಲ್ಲಿ ಏಶಿಯಾಟಿಕ್ ಸಿಂಹಗಳು ಬಡಗಣ ಇಂಡಿಯಾದಿಂದ ಹಿಡಿದು ಇರಾನ್ ಇರಾಕ್ ದೇಶಗಳವರೆಗೂ ಹೇರಳವಾಗಿ ಹರಡಿಕೊಂಡಿದ್ದವು. ಆದರೆ ಈಗ ಗುಜರಾತಿನ ಗಿರ್ ನ್ಯಾಶನಲ್ ಪಾರ‍್ಕಿನಲ್ಲಿ ಮಾತ್ರ ಇವೆ. ಮತ್ತೊಂದು ಕಡೆ ಆಪ್ರಿಕನ್ ಸಿಂಹಗಳು 1960 ರಿಂದ ಬಡಗಣ ಆಪ್ರಿಕಾದಿಂದ ಅಳಿದುಹೋಗಿ ಈಗ ಕೇವಲ‌ ತೆಂಕಣ ಆಪ್ರಿಕಾದಲ್ಲಿ ಮಾತ್ರ ಕಂಡುಬರುತ್ತವೆ. ಅವುಗಳಲ್ಲಿ ತುಂಬಾ ಹೆಸರುವಾಸಿ ಆದದ್ದು ತಾಂಜಾನಿಯಾದ “ಸೆರೆಂಗೆಟಿ” ನ್ಯಾಶನಲ್ ಪಾರ್‍ಕ್.

( ಮಾಹಿತಿ ಸೆಲೆ: youtubeWikipedia )

(ಚಿತ್ರ ಸೆಲೆ: pixabay.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.