ನಮ್ಮ ‘ಅಹಂ’ ಗಳ ಕೋಟೆಯಿಂದ ಹೊರಬರಬೇಕು

–  ಅಶೋಕ ಪ. ಹೊನಕೇರಿ.

ಶಾಂತಿ, ನೆಮ್ಮದಿ

ನಮಗೆ ಪ್ರೀತಿ ಸ್ನೇಹಗಳ ನಿಜವಾದ ಅನುಬೂತಿಯಾಗಬೇಕಾದರೆ ಮೊದಲು ನಮ್ಮ ನಮ್ಮ ‘ಅಹಂ’ ಗಳ ಕೋಟೆಯಿಂದ ಹೊರಬರಬೇಕು. ಎಲ್ಲಿವರೆಗೂ ‘ಅಹಂ’ ಎಂಬ ಕೋಟೆಯನ್ನು ಕಟ್ಟಿಕೊಂಡು ಅದರೊಳಗಿರುತ್ತೇವೆಯೋ ಅಲ್ಲಿಯವರೆಗೆ ನಾವು ಯಾವ ಪ್ರೀತಿ ಸ್ನೇಹಗಳನ್ನು ಯಾರಲ್ಲೂ ಗುರುತಿಸಲು ಆಗುವುದಿಲ್ಲ. ಬೇರೆಯವರಲ್ಲಿ ಪ್ರೀತಿ-ಸ್ನೇಹ ಗುರುತಿಸುವ ಮಾತು ಒಂದೆಡೆ ಇರಲಿ, ನಮ್ಮೊಳಗಿನ ನಮ್ಮ ಪ್ರೀತಿಯನ್ನೂ ಸಹ ನಾವು ಗುರುತಿಸಿಕೊಳ್ಳದೆ ಹೋಗುತ್ತೇವೆ.

“ಇರುವುದೆಲ್ಲವ ಬಿಟ್ಟು ಇರದ ಬಾಗ್ಯವನು ಏಕೆ ನೆನೆಯುತ್ತಿ” ಎಂಬ ಮಾತನ್ನು –  ‘ಕುಟುಂಬದವರಲ್ಲಿ, ನೆರಹೊರೆಯವರಲ್ಲಿ, ಸಹಪಾಟಿಗಳಲ್ಲಿ, ಸಹೋದ್ಯೋಗಿಗಳಲ್ಲಿ – ಹೀಗೆ ನಿತ್ಯಸಂಬಂದಗಳಲ್ಲೆ ಪ್ರೀತಿ, ಸ್ನೇಹದ ಬಂದವಿರುವಾಗ ಸ್ನೇಹ, ಪ್ರೀತಿಯನ್ನು ಬೇರೆಲ್ಲೂ ಹುಡುಕದೆ ಇರುವ ಸಂಬಂದಗಳಲ್ಲೇ ಕಾಣು’ ಎಂಬುದಾಗಿ ತಿಳಿಯಬಹುದು. ಆದರೆ ನಾವು ನಮ್ಮ ಕಣ್ಣಿಗೆ ಅಹಂ ಎಂಬ ಪೊರೆ ಮೆತ್ತಿಕೊಂಡು ಪ್ರೀತಿ-ಸ್ನೇಹ ಸಂಬಂದಗಳನ್ನು ಕಾಣದಾಗಿದ್ದೇವೆ.

ಅಗತ್ಯದ ಆದಾಯ ಮತ್ತು ಕೂಡು ಕುಟುಂಬ ಇದ್ದ ಕಾಲದಲ್ಲಿ ಈ ಪ್ರೀತಿ ಸ್ನೇಹಕ್ಕೆ ಏನೂ ಕೊರತೆ ಇರಲಿಲ್ಲ. ಆದರೆ ಇತ್ತೀಚಿಗೆ ಆದಾಯ ಹೆಚ್ಚಾಗಿ ಕೂಡು ಕುಟುಂಬಗಳು ಒಡೆದ ಕುಟುಂಬಗಳಾಗಿ ಜೀವಿಸಲು ಪ್ರಾರಂಬಿಸಿದ ಮೇಲೆ, ಮನೆಯಲ್ಲಿ ಇರುವ ಮೂರು ನಾಲ್ಕು ಮಂದಿ ಒಂದೊಂದು ಕೊಟಡಿ ಹಿಡಿದು ಮೊಬೈಲ್, ಲ್ಯಾಪ್ ಟಾಪ್, ಇಂಟರ‍್ನೆಟ್‌ನಲ್ಲಿ ಮುಳುಗಿ ಅವರ ಸಂಗತಿ ಇವರಿಗೆ ಇವರ ಸಂಗತಿ ಅವರಿಗೆ ತಿಳಿಯದಶ್ಟು ಅಪರಿಚಿತರಾಗಿದ್ದೇವೆ. ಪರಸ್ಪರ ಪ್ರೀತಿಯ ಸೆಲೆ ಬತ್ತಿಹೋಗಿ ಯಾಂತ್ರಿಕತೆ ಉಳಿದಿದೆ. ನೆರೆಹೊರೆಯವರೊಡನೆ ಅಪರಿಚಿತರಂತೆ ಬದುಕುತ್ತ ನಾವು ಬಾವನೆಗಳಿರುವ ಮನುಶ್ಯರು ಎಂಬುದನ್ನು ಮರೆಯುತಿದ್ದೇವೆ.

ಕ್ರಮೇಣ, ನಾವು ಬಾವನೆಗಳಿರುವ ಮನುಶ್ಯರೆಂಬುದನ್ನು ಮರೆಯುತಿದ್ದೇವೆ. ಯಂತ್ರಗಳಿಗಿಂತ ಕಡೆಯಾಗುತಿದ್ದೇವೆ. ನಮ್ಮೊಳಗಿನ ಮೇಲು ಕೀಳು, ಬಡವ ಬಲ್ಲಿದ ಎಂಬ ತಾರತಮ್ಯ ಬಾವಗಳು ನಮ್ಮನ್ನು ಮನುಶ್ಯ ಸಹಜವಾಗಿ ಬೆರೆಯದಂತೆ ತಡೆಯೊಡ್ಡಿದ್ದಾವೆ. ನಾವೆಲ್ಲ ಮನುಜರು, ನಾವೆಲ್ಲ ಸಾವಿರುವವರು ಎಂಬ ಬಾವ ಪ್ರತಿಯೊಬ್ಬರಲ್ಲೂ ಮೂಡಿದಾಗ ಸಹೋದರತೆ ಏರ‍್ಪಟ್ಟು ವಿಶ್ವ ಸಹೋದರತ್ವದ ಪ್ರೀತಿ ಏರ‍್ಪಡುತ್ತದೆ, ಸ್ನೇಹ ಹೆಮ್ಮರವಾಗಿ ಬೆಳೆಯುತ್ತದೆ.

ಈ ವಿಶ್ವ ಬ್ರಾತ್ರುತ್ವದ ಪ್ರೀತಿ, ಕುಟುಂಬದ ಪ್ರೀತಿ ನೆರೆಹೊರೆಯವರ ಪ್ರೀತಿ ಇವೆಲ್ಲ ಹ್ರುದಯಾಂತರಾಳದಲ್ಲಿ ಅರಳ ಬೇಕಾದರೆ ನಮ್ಮ ವಿದ್ಯಾಬ್ಯಾಸದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು. ರಾಶ್ಟ್ರೀಯತೆ, ರಾಶ್ಟ್ರ ಪ್ರೇಮ ನಿಜವಾದ ಅರ‍್ತದಲ್ಲಿ ಪ್ರತಿಯೊಬ್ಬರ ಹ್ರುದಯದಲ್ಲಿ ಅರಳಲು ಬೋದನೆಗಳು ಅಗತ್ಯ. ಅಂತಹ ಬದಲಾವಣೆ ಆಗಲಿ ವಿಶ್ವಬ್ರಾತ್ರುತ್ವ ಬೆಳೆಯಲಿ ಎಂದು ಅಶಿಸೋಣ.

(ಚಿತ್ರ ಸೆಲೆ: commons.wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: