ಕತೆ: ದೌರ‍್ಜನ್ಯ

ರಾಜೇಶ್.ಹೆಚ್.

ಜಗಳ, quarrel

“ಹೌದು, ಇನ್ನು ತಡೆಯೋದಿಕ್ಕೆ ಅಗೊಲ್ಲಾ. ಸಾಕು, ಈ ನರಕ ಅನುಬವಿಸಿದ್ದು ಸಾಕು. ಇನ್ನು ಮಕ್ಕಳು, ಮರಿ, ಸಮಾಜದ ಬಗ್ಗೆ ಯೋಚನೆ ಮಾಡುತ್ತಾ ಕೂರೋದಿಕ್ಕೆ ಆಗೋದಿಲ್ಲ ಬಗವಂತ. ಎಲ್ಲದಕ್ಕೂ ಮಿತಿಯನ್ನೋದು ಇದೆ. ಇವತ್ತು ದೂರು ನೀಡಲೇಬೇಕು…” ವಿಕಾಸ ಆಸ್ಪತ್ರೆಯ ಹಾಸಿಗೆಯಲ್ಲಿ ನೋವಿನಲ್ಲಿ ನರಳುತ್ತಾ ಒಂದು ದ್ರುಡವಾದ ನಿರ‍್ದಾರಕ್ಕೆ ಬಂದ. ತಲೆಯನ್ನು ಯಾರೋ ದೈತ್ಯ ಕುಸ್ತಿ ಪಟು ತನ್ನ ಮುಶ್ಟಿಯಲ್ಲಿ ಬಿಗಿಯಾಗಿ ಅಮುಕಿ ಹಿಡಿದಂತಿತ್ತು.  ವಿಪರೀತ ನೋವಿನಿಂದ ತಲೆ ಸಿಡಿಯುತ್ತಿತ್ತು. ತಲೆಯ ಸುತ್ತ ಐದಿಂಚು ಅಗಲವಾದ ಬ್ಯಾಂಡೇಜ್ ಪಟ್ಟಿಯನ್ನು ಬಿಗಿದು ಕಟ್ಟಿದ್ದರು. ತಲೆಯ ಹಿಂಬಾಗಕ್ಕೆ ಒಂದು ಡಜನ್ ಹೊಲಿಗೆ ಹಾಕಿದ್ದರು.

ಹೆಂಡತಿ ಕಾವ್ಯಳೊಡನೆ ತನ್ನ ತಂದೆಯ ಆಸ್ತಿಯ ವಿಚಾರವಾಗಿ ಜೋರಾಗಿ ವಾಗ್ವಾದ ಮಾಡಿ, ಮಗಳು ಸಾಹಿತ್ಯಳೊಡನೆ ಮಲಗಿ ಕೆಲವೇ ನಿಮಿಶ ಕಳೆದಿತ್ತಶ್ಟೆ. ತಲೆಯ ಹಿಂಬಾಗಕ್ಕೆ ಬಲವಾದ ಹೊಡೆತ ಬಿದ್ದಂತಾಗಿ, ನೋವಿನಿಂದ ಎಚ್ಚರಗೊಂಡು ತಲೆ ನೇವರಿಸಿದ. ತಲೆ, ಅಂಗಿ, ಹೊದಿಕೆ, ಎಲ್ಲವೂ ಒದ್ದೆಯಾಗಿತ್ತು. ಕೈಯನ್ನು ತಲೆಗೆ ನೇವರಿಸಿದಾಗ, ಅದೇನೋ ದ್ರವ ರೂಪಿ ವಸ್ತು ಅಂಗೈಗೆಲ್ಲಾ ಮೆತ್ತಿ, ಎಲ್ಲವೂ ಅಂಟಂಟಾದಂತೆ ಬಾಸವಾಯಿತು. ‘ಇದೇನಿರಬಹುದು? ನೀರೆ? ಅದೇನೆ ಇರಲಿ, ಕತ್ತಲಿನಲ್ಲಿ ಸಂಶಯದ ಗೋಪುರ ಕಟ್ಟಿಡುವುದು ಬೇಡ. ಲೈಟ್ ಹಾಕಿ ನೋಡಿಯೇ ಬಿಡುವ’ ಎಂದು ತಡವರಿಸಿ, ಪಕ್ಕದಲ್ಲಿ ಮಲಗಿರುವ ಪುಟ್ಟ ಕಂದನಿಗೆ ತೊಂದರೆಯಾದೀತೆಂದು, ಎಚ್ಚರದಿಂದ ಟೇಬಲ್ ಲ್ಯಾಂಪಿನ ಸ್ವಿಚ್ಚನ್ನು ಅದುಮಿದ. ಅಲ್ಲಿನ ದ್ರುಶ್ಯ ಕಂಡು ಹೌಹಾರಿದ. ಹಾಸಿಗೆಯ ಮೇಲೆ ಮಗಳು ಹಾಯಾಗಿ ಮಲಗಿದ್ದಳು. ಎಲ್ಲೆಡೆ ರಕ್ತದ ಕೆಂಬಣ್ಣದ ಚಿತ್ತಾರ ಮೂಡಿತ್ತು.

ತಾನು ಮಲಗಿದ್ದ ಹಾಸಿಗೆ, ದಿಂಬು ಹಾಗೂ ಹೊದಿಕೆ ಎಲ್ಲವೂ ನೆತ್ತೆರುಮಯವಾಗಿತ್ತು. ಹೌದು! ಅದು ನನ್ನದೇ ರಕ್ತ, ತಲೆಯೊಡೆದು, ದರೆಯೆಡೆಗೆ ಚಿಮ್ಮುತ್ತಲಿದೆ. ವಿಪರೀತ ನೋವು? ಯಾರೋ ನನ್ನ ತಲೆಗೆ ಬಲವಾಗಿ ಹೊಡೆದಂತಿದೆಯಲ್ಲವೇ? ಕಳ್ಳರು ನುಗ್ಗಿ ಬಂದಿರಬಹುದೇ? ಮೊದಲು ನನ್ನ ಕಂದನನ್ನು ಸುರಕ್ಶಿತ ಜಾಗಕ್ಕೆ ಸಾಗಿಸಬೇಕು, ನಂತರ ಕಾವ್ಯಳನ್ನು ಎಚ್ಚರಿಸಬೇಕೆಂದು ಕೊಂಡು, ಹೊರಡಲನುವಾದವನಿಗೆ, ಯಾರೋ ಪಕ್ಕದಲ್ಲಿ ಬಿಕ್ಕುತ್ತಾ ನಿಂತಂತೆ ಬಾಸವಾಗಿ, ಎಡಕ್ಕೆ ತಿರುಗಿ ನೋಡಿದ. ಅಲ್ಲಿ ಕಂಡ ಊಹಿಸದಸಳವಾದ ದ್ರುಶ್ಯ ಅವನನ್ನು ಬೇಸ್ತು ಬೀಳಿಸಿತು. ಅಗ್ನಿಸಾಕ್ಶಿಯಾಗಿ ಕೈ ಹಿಡಿದು ಮದುವೆಯಾಗಿ, ಹತ್ತು ವರುಶ ಸಂಸಾರ ಮಾಡಿ, ತನಗೆ ಮುದ್ದಾದ ಕಂದನನ್ನು ಕೊಟ್ಟ ಹೆಂಡತಿ ಕಾವ್ಯ ಸಿಟ್ಟಿನಿಂದ ಬುಸುಗುಡುತ್ತಾ, ಕೈಯಲ್ಲಿ ರಕ್ತಸಿಕ್ತವಾದ ತೆಳ್ಳಗಿನ ಕಬ್ಬಿಣದ ರಾಡ್ ಒಂದನ್ನು ಹಿಡಿದು ರಣಚಂಡಿಯಂತೆ ನಿಂತಿದ್ದಳು.  ಕಾವ್ಯ, ಕಳ್ಳನನ್ನು ಹೊಡೆದುರುಳಿಸಿದಳೇ? ಇಲ್ಲದಿದ್ದರೆ ಏಕೆ ಇಶ್ಟೊಂದು ಬೆವರುತ್ತಿದ್ದಾಳೆ? ಎದುಸಿರು ಬಿಡುತ್ತಿದ್ದಾಳೆ? ಕಳ್ಳರ ಸುಳಿವು ಎಲ್ಲೂ  ಕಾಣಿಸುತ್ತಿಲ್ಲ. ಆವಳು ಮಾತ್ರ ಗರ ಬಡಿದವಳಂತೆ ತದೇಕಚಿತ್ತದಿಂದ ಎದುರಿನ ಅಲಮಾರವನ್ನೇಕೆ ನೋಡುತ್ತಾ ನಿಂತಿದ್ದಾಳೆ? ಅವನಿಗೊಂದೂ ಅರ‍್ತವಾಗಲಿಲ್ಲ, ಎಲ್ಲವೂ ಗೋಜಲುಮಯವಾಗಿತ್ತು. ಓಡಿ ಹೋಗಿ ಅವಳನ್ನು ಅಪ್ಪಿಕೊಂಡ. ಅವನು ಅಪ್ಪಿ ಕೊಳ್ಳುತ್ತಿದ್ದಂತೆಯೇ ಅವಳು ಬೊಬ್ಬಿಡತೊಡಗಿದಳು. ಅವಳ ತಲೆ ನೇವರಿಸುತ್ತಾ ಕೇಳಿದ- “ಏನಾಯಿತು ಚಿನ್ನ? ಕಳ್ಳರು, ದರೋಡೆಕೋರರು ಒಳನುಗ್ಗಿದರೇ? ಚೀರಾಡಬೇಡ, ಶಾಂತವಾಗಿರು. ಈಗ ಜೂತೆಗೆ ನಾನಿದ್ದೇನೆ. ತಲೆ ನೋಯುತ್ತಿದೆ. ಒಂದೇ ಸಮನೆ ನೆತ್ತರು ಹರಿಯುತ್ತಿದೆ. ಯಾರು ಹೊಡೆದರೋ ಗೊತ್ತಿಲ್ಲ.”

ಅವಳ ಮುಕ ಸಂಪೂರ‍್ಣ ಬಿಳಿಚಿಹೋಗಿತ್ತು. ಮೆಲ್ಲನೆ ಅವನ ಕಿವಿಯಲ್ಲಿ ಉಸಿರಿದಳು. “ನನ್ನ ಕ್ಶಮಿಸಿ ಬಿಡಿ. ಯಾವ ಕಳ್ಳ ಕಾಕರೂ ಬರಲಿಲ್ಲ. ನಿಮ್ಮ ತಲೆಗೆ ಬಡಿದ ಪಾಪಿ ನಾನೇ. ಇಂದು ನನ್ನ ಬುದ್ದಿ ನನ್ನ ಸ್ವಾದೀನದಲ್ಲಿರಲಿಲ್ಲ. ಜಗಳವಾದ ನಂತರ ನನಗೆ ಹೆಣ್ಣಿನ ಮೇಲೆ ದೌರ‍್ಜನ್ಯವೆಸಗುವ ಗಂಡು ಜಾತಿಯ ಮೇಲೆ ಅತೀವ ಸಿಟ್ಟು ಬಂದು ಬಿಟ್ಟಿತ್ತು. ನನ್ನನ್ನು ಹೀಯಾಳಿಸಿದ ನಿಮಗೆ ಸರಿಯಾದ ಬುದ್ದಿ ಕಲಿಸಬೇಕೆಂದು ನನ್ನ ಬುದ್ದಿಯನ್ನು ಕಳೆದುಕೊಂಡು ಮತಿಹೀನಳಾಗಿ ನಿಮ್ಮ ತಲೆಗೆ ನನ್ನ ಕೈಯಾರೆ ಹೊಡೆದು ಬಿಟ್ಟೆ. ಯಾರ ಯೋಗಕ್ಶೇಮವನ್ನ ನೋಡಿಕೊಂಡು ಜೀವನಪರ‍್ಯಂತ ಸಂಗಾತಿಯಾಗಿ ಜೊತೆಯಾಗಿರುತ್ತೇನೆ ಎಂದು ಕೈಹಿಡಿದಿದ್ದೆನೋ, ನಿಮ್ಮನ್ನೇ ಕೊಲ್ಲಲು ಹೊರಟುಬಿಟ್ಟಿದ್ದೆ. ನನಗೆ ಶಿಕ್ಶೆಯಾಗಬೇಕು ಕಣ್ರೀ” ಎಂದು ಅಳಲು ಶುರು ಮಾಡಿದವಳು ಮರುಕ್ಶಣವೇ ಮೂರ‍್ಚೆ ಹೋದಳು. ಕಾಲು ಕೆಳಗಿನ ದರೆಯೇ ಕುಸಿದಂತೆ ಬಾಸವಾಯಿತು ಅವನಿಗೆ. ಇತ್ತೀಚೆಗೆ ಅವಳ ಕೋಪವು ಅವಳ ಹಿಡಿತದಲ್ಲಿ ಇರುತ್ತಿರಲಿಲ್ಲ. ಅನಾವಶ್ಯಕವಾಗಿ ಸಣ್ಣ ಸಣ್ಣ ವಿಶಯಗಳಿಗೂ ಸಿಟ್ಟಿನಿಂದ ಬುಗಿಲೇಳುತ್ತಿದ್ದಳು. ಆದರೆ ಅವಳ ಸಿಟ್ಟು ಈ ಮಟ್ಟಕ್ಕೆ ಏರೀತೆಂದು ಅವನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ.

ಮಲಗಿದ್ದ ಮಗು ಸಾಹಿತ್ಯ ದಿಡೀರನೆ ಎದ್ದು ಎಲ್ಲೆಡೆ ನೆತ್ತೆರನ್ನು ಕಂಡು ಕಿಟಾರನೆ ಕಿರುಚಿಕೊಳ್ಳಲಾರಂಬಿಸಿದಳು. ಅರೆಕ್ಶಣದಲ್ಲಿ ಮನೆ ರಣರಂಗದಂತೆ ಬಾಸವಾಗಿತ್ತು. ಅವನಿಗೆ ಏನು ಮಾಡುವುದೆಂದು ತೋಚುತ್ತಿರಲಿಲ್ಲ. ಹೇಗೋ ಸಾವರಿಸಿಕೊಂಡು, ತಲೆಗೆ ಗಟ್ಟಿಯಾಗಿ ಬಟ್ಟೆಯನ್ನು ಕಟ್ಟಿಕೊಂಡು ನಲ್ಲಿಯಿಂದ ನೀರು ಹರಿಯುತ್ತಿರುವಂತೆ ಹರಿಯುತ್ತಿರುವ ನೆತ್ತರನ್ನು ತಡೆದು ನಿಲ್ಲಿಸುವಲ್ಲಿ ಶಕ್ತನಾದ. ಅವನಿಗೆ ಉಬಯಸಂಕಟ ಎದುರಾಯಿತು. ಅತ್ತ ಮಗಳನ್ನು ಬಿಡಲಾಗದೆ, ಇತ್ತ ಮೂರ‍್ಚೆ ಹೋದ ಹೆಂಡತಿಯನ್ನು ಬಿಡಲಾಗದೆ, ಮಗದೊಂದು ಕಡೆ ನಿಶ್ಯಕ್ತಿ; ಸರಿಯಾಗಿ ನಡೆದಾಡಲಾಗದಿದ್ದರೂ, ಅದು ಹೇಗೋ ಸಾವರಿಸಿಕೊಂಡು, ಹೆಂಡತಿಯ ಮೊಗಕ್ಕೆ ನೀರನ್ನು ಚಿಮುಕಿಸಿ ಕಾವ್ಯಾಳನ್ನು ಎಬ್ಬಿಸಲು ಶಕ್ತನಾದ. ಅವಳು ಮುಕ ಮುಚ್ಚಿಕೊಂಡು ಅಳತೊಡಗಿದಳು. ತೋಳಿಗವುಚಿಕೊಂಡು ಅಳುತ್ತಿದ್ದ ಮಗಳನ್ನು “ತಪ್ಪಾಯಿತು ಕ್ಶಮಿಸಿ”ಎಂದು ಬಡಬಡಾಯಿಸುತ್ತಿದ್ದ ಕಾವ್ಯಾಳ ಮಡಿಲಲ್ಲಿ ಮಲಗಿಸಿ ತೂರಾಡುತ್ತಾ ಹೊರಗೆ ಬಂದ. ಈ ವಿಶಯವನ್ನು ಯಾರೊಡನೆಯೂ ಹೇಳಿಕೊಳ್ಳೋ ಗೋಜಿಗೆ ಹೋಗಲಿಲ್ಲ. ಅದು ಬಾಯಿಂದ ಬಾಯಿಗೆ ಹರಡಿ ದೊಡ್ಡ ವಿಶಯವಾಗಿ ಕುಟುಂಬದ ಮಾನ ಹರಾಜಾಗುವುದರಲ್ಲಿ ಎರಡು ಮಾತಿರಲಿಲ್ಲ.

ಇದು ಅವನ ಜೀವನದ ಅತ್ಯಂತ ದೊಡ್ಡ ಪರೀಕ್ಶೆಯಾಗಿತ್ತು. ಉಸಿರು ಬಿಗಿ ಹಿಡಿದು, ಆಟೋ ಹಿಡಿದು ತುರ‍್ತು ನಿಗಾ ವಿಬಾಗಕ್ಕೆ ತಲುಪಿದವನೇ ಕುಸಿದು ಬಿದ್ದ. ಕಣ್ಣು ಬಿಟ್ಟಾಗ ಅವನ ಮೈ ಪೂರಾ ತೆಳ್ಳಗಿನ ನಲ್ಲಿಯಂತ್ತಿರುವ ಟ್ಯೂಬುಗಳು ದೇಹವನ್ನು ಆವರಿಸಿದ್ದವು. ಹೆಂಡತಿ ಮಗಳೆಲ್ಲಿಯೂ ಕಾಣಿಸಲಿಲ್ಲ. “ಅವರು ಅಪಾಯದಿಂದ ಹೊರಗಿದ್ದಾರೆ, ಇನ್ನು ವಾರ‍್ಡಿಗೆ ಶಿಪ್ಟ್ ಮಾಡಬಹುದು” ಎಂದು ನಿದ್ದೆಯ ಮಂಪರಿನಲ್ಲಿ ಡಾಕ್ಟರರೊಬ್ಬರು ಹೇಳಿದ್ದು ಕೇಳಿಸಿತು. ವಾರ‍್ಡಿನಲ್ಲಿ ಎಚ್ಚರವಾದಾಗ ಅದೆಶ್ಟು ಹೊತ್ತು ಕಳೆದು ಹೋಗಿತ್ತೋ ಏನೋ? ಅವನಿಗೆ ನಿದ್ರೆಯ ಮಂಪರಿನಲ್ಲಿ ಸಮಯ ಹಾಗೂ ಲೋಕದ ಪರಿವೆಯೇ ಇರಲಿಲ್ಲ. ಕೆಲವೇ ಗಂಟೆಗಳ ಹಿಂದೆ ಆಸ್ತಿ ಹಾಗೂ ಹಣಕ್ಕಾಗಿ ಅವನು ಮತ್ತು ಕಾವ್ಯಳ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈಗ ಅದು ಯಾವುದೂ ಬೇಡ ಬದುಕಿದರೆ ಸಾಕೆಂದು ದೇವರಲ್ಲಿ ಬೇಡಿಕೊಳ್ಳುವ ಪರಿಸ್ತಿತಿ ಬಂದಿತ್ತು. ಉಳಿದ್ದೆಲ್ಲಾ ಗೌಣವಾಗಿ ತೋರುತ್ತಿತ್ತು. ಹೊತ್ತಿಗೆ ತಕ್ಕಂತೆ ಬದಲಾಗುವ ಮಾನವನ ಬಾವನೆಗಳ ಪರಿ ಅದ್ಬುತವೆನಿಸಿತ್ತು. ನೋವಿನ ನಡುವೆಯೂ ಅವನ ಮೊಗದಲ್ಲೊಂದು ಮಂದಹಾಸ ಮಿಂಚಿ ಮಾಯವಾಗಿತ್ತು.

ಆಪ್ತ ಗೆಳೆಯ ಜಯಂತ ಎಳನೀರು ಹಾಗೂ ಇಡ್ಲಿ ತಂದು ಕೊಟ್ಟು ಹೋದ. ಅವನೇ ಎಲ್ಲಾ ಸಂಬಾಳಿಸಿಕೊಂಡಿರಬೇಕು. ಅವನು ಮೌನವಾಗಿ ಹೊರಟು ಹೋದ. ಇಶ್ಟೆಲ್ಲಾ ಆದ ಮೇಲೆ ಕೂಡ ನಾನು ಅವನಿಗೆ ಒಂದೇ ಒಂದು ಮಾತು ಹೇಳಲಿಲ್ಲ ಎಂಬ ಬೇಸರವಿರಬಹುದು. ನಾವಿಬ್ಬರೂ ಪರಸ್ಪರರಿಗೆ ಏನೇ ಮಾಡಿದರೂ ಅದನ್ನು ಪ್ರೀತಿಯಂದ ಮಾಡುತ್ತಿದ್ದೆವೆಯೇ ಹೊರತು ಬೇರೇ ಯವುದೇ ಸ್ವಾರ‍್ತದಿಂದಲ್ಲ. ಅದಾದ ಮೇಲೆ ಆ ವಿಶಯದ ಬಗ್ಗೆ ನಾವು ಮಾತನ್ನಾಡುತ್ತಿರಲಿಲ್ಲ. ನಾವಾಗೇ ಹೇಳಬೇಕೆನಿಸಿದರೆ ಬೈಕಿನಲ್ಲಿ ಎಲ್ಲರಿಂದ ದೂರ ಸಾಗಿ ಯಾವುದಾದರೂ ಬೆಟ್ಟ ಗುಡ್ಡ ಏರಿ, ಅವನು ಒಂದು ಸಿಗರೇಟ್ ಹಚ್ಚಿದ ನಂತರ ನಮ್ಮಿಬ್ಬರ ಮಾತುಕತೆ ಪ್ರಾರಂಬವಾಗುತ್ತಿತ್ತು. ನನಗೆ ದೂಮಪಾನ ಸೇರುತ್ತಿರಲಿಲ್ಲ. ಅದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ನನ್ನಿಂದ ಮಾರುದೂರ ನಿಂತು ಸೇದುತ್ತಿದ್ದ. ಅದು ಪರಸ್ಪರ ದೂಶಣೆಗೋಸ್ಕರ ನಡೆಯುವ ಸಂಬಾಶಣೆ ಆಗಿರದೆ, ಕೇವಲ ಸ್ನೇಹದ ಮಾತುಕತೆ ಆಗಿರುತ್ತಿತ್ತು.

ಆದರೆ ಇಂದು ನಡೆದ ವಿಶಯದ ಬಗ್ಗೆ ಅವನಲ್ಲಿ ಕೂಡ ಹೇಳಲು ಮುಜುಗರವಾಗುತ್ತಿತ್ತು. ಅವನು ಈ ವಿಶಯ ಕೇಳಿದರೆ ದಿಗ್ಬ್ರಾಂತನಾದಾನೆಂದು ಬಯವಾಯಿತು. ನಮ್ಮಿಬ್ಬರನ್ನು ಹತ್ತಿರದಿಂದ ಬಲ್ಲ ಅವನಿಗೆ, ಕಾವ್ಯ ನನ್ನ ಮೇಲೆ ಹಲ್ಲೆ ನಡೆಸಿದಳೆಂದರೆ ಅವನು ನಂಬಲಾರನೆಂದು ಸ್ಪಶ್ಟ ಅರಿವಿತ್ತು. ಕೊನೇ ಪಕ್ಶ ನಂಬಿದರೂ, ಅವನು ಕ್ಯಾಕರಿಸಿ ಉಗಿದು ನನ್ನ ಗಂಡಸುತನಕ್ಕೆ ಸವಾಲು ಎಸೆದಾನೆಂದು ಬಯವಿತ್ತು. ಇನ್ನುಳಿದವರ ಬಗ್ಗೆ ಹೇಳಬೇಕೆ? ಬಿದ್ದು, ಬಿದ್ದು ನಕ್ಕಾರು ಮಂದಿ ಎಂದು ತಳಮಳವಾಗುತ್ತಿತ್ತು.

ಕೊನೆಗೂ ದೈರ‍್ಯ ಮಾಡಿ ಅವನಿಗೆ ಸತ್ಯ ಸಂಗತಿ ತಿಳಿಸಿಯೇ ಬಿಟ್ಟೆ. “ ಏನೋ ಹೇಳ್ತಾ ಇದ್ದೀಯ? ಅತ್ತಿಗೆ ನಿನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡ್ತಾಳಾ? ಹೋಗೋ. ಅವಳು ಅಶ್ಟೊಂದು ಸುಸಂಸ್ಕ್ರುತ ಹೆಣ್ಣು. ನನಗೆ, ನನ್ನ ಪರಿವಾರಕ್ಕೆ ಅನ್ನ ಹಾಕಿದ ಅನ್ನಪೂರ‍್ಣೆ. ಅವಳ ಬಗ್ಗೆ ಹೀನಾಯವಾಗಿ ಮಾತಾಡ್ತಿಯಲ್ಲೋ? ತಲೆಗಿಲೆ ಕೆಟ್ಟಿದೆಯೆನೋ? ಇದನ್ನು ನಂಬು ಅಂತೀಯ? ಇದು ನಡೆದದ್ದು ನಿಜವೇ ಆಗಿದ್ದರೆ ಗಂಡಸೆಂಬ ಜನುಮಕ್ಕೆ ನೀನು ಅವಮಾನ ಕಣೋ!” ಅವನಿಗೆ ಇದು ನಂಬಲಸದಳವಾದ ವಿಶಯವಾಗಿತ್ತು.

“ವಿಕಾಸ, ಒಬ್ಬ ಹೆಂಗಸು ಹೇಗೆ ಗಂಡಸಿನ ಮೇಲೆ ದೈಹಿಕ ಹಲ್ಲೆ ನಡೆಸಬಲ್ಲಳು? ನೀನೇನು ಬಳೆ ತೊಟ್ಟಿದ್ದೀಯೋ? ಗಂಡಸರು ಹೆಂಗಸರ ಮೇಲೆ ದೌರ‍್ಜನ್ಯ ನಡೆಸುವುದು ಸರ‍್ವೇಸಾಮನ್ಯ ವಿಶಯ. ಅದು ತಪ್ಪು ನಿಜ. ಆದರೆ ಗಂಡಸು ದೈಹಿಕವಾಗಿ ಬಲಶಾಲಿ. ಬಲಶಾಲಿಗಳು ಬಲಹೀನರ ಮೇಲೆ ಅತ್ಯಾಚಾರ ನಡೆಸುವುದು ಪುರಾತನ ಕಾಲದಿಂದ ನಡೆದು ಬಂದ ಪ್ರತೀತಿ. ನಾಗರೀಕ ಸಮಾಜ ಇದನ್ನು ತಡೆಯಲು ಸಾವಿರಾರು ಕಾನೂನುಗಳನ್ನು ಹಾಗೂ ದಂಡನೆಯನ್ನು ಸ್ರುಶ್ಟಿಸಿದೆ. ಒಬ್ಬ ದೈಹಿಕವಾಗಿ ನಿರ‍್ಬಲವಾದ ಅಬಲೆ ನಿನ್ನ ಮೇಲೆ ಹಲ್ಲೆ ಮಾಡಬೇಕಾದರೆ ಏನೋ ಪ್ರಬಲವಾದ ಕಾರಣವಿರಬೇಕು.” ಅವನು ನನ್ನೆಡೆಗೆ ಸಂಶಯದ ದ್ರುಶ್ಟಿಯಿಂದ ನೋಡಿದ.

ನಾನು ನಮ್ಮಿಬ್ಬರ ನಡುವೆ ಆಸ್ತಿಯ ವಿಚಾರವಾಗಿ ನಡೆದ ವಿವಾದದ ಬಗ್ಗೆ ಅವನಲ್ಲಿ ಹೇಳಿದೆ. ಅವಳು ಇತ್ತೀಚೆಗೆ ಸಣ್ಣ ವಿಚಾರಗಳ ವಿಶಯದಲ್ಲಿ ತಾಳ್ಮೆ ಕಳೆದುಕೊಳ್ಳುತ್ತಿರುವ ವಿಶಯದ ಬಗ್ಗೆ ಹಾಗೂ ನಮ್ಮ ವಿವಾದದ ವಿಚಾರವಾಗಿ ನುರಿತ ತಗ್ನರಿಂದ ಸಲಹೆ ಪಡೆಯಲು ಅವಳು ಒಪ್ಪಿಗೆ ಸೂಚಿಸದಿರುವ ಬಗ್ಗೆ ಹೇಳಿದೆ. ಅವನು ತಾಳ್ಮೆಯಿಂದಲೇ ಕೇಳಿದ. ಆದರೂ ಅವನಿಗೆ ಪೂರ‍್ಣ ನಂಬಿಕೆ ಬಂದಂತಿರಲಿಲ್ಲ. ಅವಳು ಮೊದಮೊದಲು ಸಲುಗೆಯಿಂದಲೇ ನನ್ನ ಮೇಲೆ ಕೈ ಮಾಡುತ್ತಿದ್ದಾಗ ತಾನು ಅದು ಸಣ್ಣ ವಿಶಯವೆಂದು ಬಾವಿಸಿ ಸುಮ್ಮನಾಗಿಬಿಡುತ್ತಿದ್ದ ಬಗ್ಗೆ ಹೇಳಿದೆ. ಆಗ ಅವನು “ಇದೆಲ್ಲಾ ನಡೆಯುತ್ತಿದ್ದು ನಿಜವೇ ಆಗಿದ್ದರೆ ನೀನೇಕೆ ಹೆಂಡತಿಯ ಕಪಾಳಕ್ಕೆ ಎರಡು ಬಿಗಿಯಲಿಲ್ಲ? ಅಲ್ಲಿಗೆ ಎಲ್ಲವೂ ಸರಿ ಹೋಗುತ್ತಿತ್ತಲ್ಲ” ಎಂದು ಅನುಮಾನದಿಂದಲೇ ಪ್ರಶ್ನಿಸಿದ. ಅವನ ಉತ್ತರ ಕೇಳಿ ನನ್ನ ಉತ್ಸಾಹವೆಲ್ಲಾ ಬತ್ತಿ ಹೋಗಿತ್ತು.

“ಹಾಗಂತ, ನನಗೆ ಒಬ್ಬ ಹೆಣ್ಣು ಮಗಳ ಮೇಲೆ ಕೈ ಎತ್ತುವುದು ಸರಿ ಅನಿಸಲಿಲ್ಲ.ನೋಡು ಜಯಂತ! ಇದು ಕಟ್ಟು ಕತೆಯಲ್ಲಾ. ನನ್ನ ನಿತ್ಯ ಕತೆ. ನಿತ್ಯ ಇಬ್ಬರೂ ಹೊಡೆದಾಡಿಕೊಂಡಿದ್ದರೆ ನನ್ನ ಕಂದನ ಗತಿಯೇನು? ಅವಳ ಮುಗ್ದ ಮನಸ್ಸಿನ ಮೇಲೆ ಆಗುವ ಪರಿಣಾಮವೇನು? ಇದೇ ಯೋಚನೆ ಮಾಡಿ ಸುಮ್ಮನಾಗಿಬಿಟ್ಟೆ ಕಣೋ. ಆದರೆ ಇದು ಇವತ್ತಿನ ಸ್ವರೂಪ ಪಡೆಯುತ್ತೆ ಎಂದು ಕನಸಿನಲ್ಲಿಯೂ ಅಂದು ಕೊಂಡಿರಲಿಲ್ಲ. ನನ್ನ ಮಾತನ್ನು ಯಾರೂ ನಂಬಲಾರರು ಎಂದು ನನಗೆ ಗೂತ್ತು. ಬದಲಾಗಿ ಅಪಹಾಸ್ಯಕ್ಕೀಡಾಗುವೆನಂದು ಅರಿತು ಸುಮ್ಮನಾದೆ.” ಗದ್ಗದಿತನಾಗಿ ಮಾತು ಹೊರಡದಂತಾಯಿತು. ಅವನ ಮುಕ ಪೆಚ್ಚಗಾಯಿತು. ಅವನು ತೀರ ಗೊಂದೊಲಕ್ಕೊಳಗಾದ.

“ನಿನಗೆ ಏನು ಹೇಳಲಿ ಕಣೋ? ಇಬ್ಬರೂ ಕೈತುಂಬಾ ಸಂಪಾದಿಸುತ್ತೀರಿ. ಒಂದು ಮುದ್ದಾದ ಪುಟ್ಟ ಮಗುವಿದೆ. ಹೊರಗಿಂದ ನೋಡುವವರಿಗೆ ಆದರ‍್ಶ ಸಂಸಾರ. ಆ ಮಗುವಿನ ಮುಕವನ್ನಾದರೂ ನೋಡಿ ನೀವು ಸಂದಾನ ಮಾಡಿಕೊಂಡು ಸಂಸಾರ ಮಾಡುವುದು ಒಳಿತು ಕಣೋ ಎಂದು ಹೇಳಬಲ್ಲೆ. ಆದರೆ ಇದು ಏಕೋ ಅತಿರೇಕಕ್ಕೆ ಹೋಗುತ್ತಿದೆಯೆಂದು ನನಗನಿಸುತ್ತಿದೆ.” ಎಂದು ಹೇಳಿದವನೇ ಯಾರಿಗೋ ಕರೆ ಹಚ್ಚಿದ. “ತಡಿ ಬರ‍್ತೀನಿ!” ಎಂದು ಹೊರಟು ಹೋದ.

ವಿಕಾಸ ನೋವಿನಲ್ಲಿ ನಿದ್ದೆ ಹೋದ. ಬಳಲಿ ಬೆಂಡಾಗಿದ್ದ ಅವನು, ಅದೆಶ್ಟು ಹೊತ್ತು ಮಲಗಿದ್ದನೋ ಅವನಿಗರಿವಿರಲಿಲ್ಲ. ಕಣ್ಣು ಬಿಟ್ಟು ನೋಡಿದಾಗ ಯಾರೋ ಒಬ್ಬ ಹೆಂಗಸು ಪಕ್ಕದಲ್ಲಿ ಕುಳಿತಿದ್ದಳು. ಸಾದಾರಣ ಮೈಕಟ್ಟು, ಎಣ್ಣೆ ಕಪ್ಪು ಬಣ್ಣ, ದುಂಡಗಿನ ಮುಕ, ಉದ್ದ ಜಡೆ, ನೋಡಲು ಲಕ್ಶಣವಾಗಿದ್ದರೂ ಅವಳ ಕಣ್ಣುಗಳು ಮಾತ್ರ ಕಾಂತಿಹೀನವಾಗಿದ್ದವು.

“ಯಾರು ನೀವು? ಏನಾಗಬೇಕಿತ್ತೆಂದು?” ಕೇಳಿದೆ.

“ನಮ್ಮದೊಂದು ದೌರ‍್ಜನ್ಯ ಸಂತ್ರಸ್ತರ ನೆರವಿಗಾಗಿ ಸ್ತಾಪಿತವಾಗಿರುವ ಸಂಗ. ನಿಮ್ಮ ಸ್ನೇಹಿತರು ನಮಗೆ ಕರೆ ಮಾಡಿದ್ದರು. ನಿಮ್ಮ ಮೇಲೆ ನಡೆದಿರುವ ದೌರ‍್ಜನ್ಯದ ಬಗ್ಗೆ ವಿಸ್ತಾರವಾಗಿ ತಿಳಿದು ನಿಮಗೆ ಮಾನಸಿಕ, ಸಾಮಾಜಿಕ, ನ್ಯಾಯಾಂಗಕ್ಕೆ ಸಂಬಂದಪಟ್ಟ ವಿಚಾರವಾಗಿ ಸಹಾಯ ಹಸ್ತ ಚಾಚಲು ನಮ್ಮ ಸಂಸ್ತೆ ತಯಾರಾಗಿದೆ. ಅದಕ್ಕಾಗಿ ನಾನು ಬಂದಿದ್ದೇನೆ” ಎಂದು ಹೇಳಿ ಸುಮ್ಮನಾದಳು.

ಜಯಂತನಿಗೆ ಯಾಕಾದರೂ ಬೇಕಿತ್ತೋ ಈ ಉಸಾಬರಿ. ನನಗೆ ಯಾವುದಾದರೂ ಉತ್ತಮವಾದ ಸಲಹೆ ನೀಡೋ ಎಂದು ಕೇಳಿದರೆ ಇಡೀ ಜಗಕ್ಕೆ ಗೊತ್ತಾಗೋ ಹಾಗೆ ಡಂಗುರ ಸಾರಿ ಬಿಟ್ಟ ಎಂದು ಹಪಹಪಿಸಿದ.

ಇನ್ನು ಹೊರಗಿನ ಲೋಕಕ್ಕೆ ನಾನು ಹೇಗೆ ಮುಕ ತೋರಿಸಲಿ? ಇಶ್ಟು ದಿನ ಕಾಪಾಡಿಕೊಂಡು ಬಂದ ಗೌಪ್ಯತೆ ಇಂದು ಇವನಿಂದಾಗಿ ನುಚ್ಚುನೂರಾಯಿತಲ್ಲ ಎಂದು ತೀವ್ರ ನಿರಾಶೆಗೊಳಗಾದ. ಈ ಜಗದ ನಾಲಿಗೆ ತಿರುಗಲು ಆರಂಬಿಸಿದರೆ ನನ್ನ ಮುದ್ದು ಕಂದಮ್ಮನ ಗತಿಯೇನು? ನನ್ನ ತಂದೆ ತಾಯಂದಿರ ಗತಿಯೇನು? ಹೆಂಡತಿಯ ನಡವಳಿಕೆ ಅತೀಯಾದದ್ದೇನೋ ನಿಜ. ಆದರೆ ನನಗೆ ಒಂದು ಮುದ್ದು ಕಂದನನ್ನು ಹಡೆದು ಕೊಟ್ಟಿದ್ದಾಳೆ. ಅದಕ್ಕಾಗಿ ಸಾಕಶ್ಟು ನೋವನ್ನು ಅನುಬವಿಸಿದ್ದಾಳೆ. 24 ಗಂಟೆಗಳ ಕಾಲ ಜತೆಗಿರುವಾಗ, ನಮ್ಮ ನಮ್ಮಲ್ಲಿ ಬೇದ-ಬಿನ್ನಾಬಿಪ್ರಾಯಗಳು ಬರುವುದು ಸಹಜ. ಅದನ್ನು ಇತ್ಯರ‍್ತಗೊಳಿಸಲು ಸಾದ್ಯವಾಗದಾಗ ಕೋಪವು ಜಗಳವಾಗಿ, ಜಗಳವು ಮೈ-ಕೈ ಹೊಸೆದುಕೊಳ್ಳುವವರೆಗೆ ತಲುಪುವುದು ಮಾನವ ಸಹಜ ಪ್ರಕ್ರಿಯೆ ಅಲ್ಲವೇನು? ಇದನ್ನು ಟಾಣೆ-ನ್ಯಾಯಾಲಯ ಅಂತ ಮಾನವನ್ನು ಹರಾಜು ಹಾಕಿಸಿಕೊಳ್ಳಬೇಕೇ? ಪತ್ರಿಕೆಯಲ್ಲಿ ಸುದ್ದಿಯಾಗಬೇಕೆ? ಪಾಲಿಗೆ ಬಂದದ್ದು ಪಂಚಾಮ್ರುತ ಅಂದುಕೊಂಡು ಬದುಕು ಸಾಗಿಸಬಾರದೆ? ದೌರ‍್ಜನ್ಯ ಎಂಬ ವಿಶಾಲವಾದ ಪದದ ಬಳಕೆ ಬೇಕೆ?

“ನಾನು ನಿಮಗೆ ಬರ ಹೇಳಿದೆನೇ? ಇಲ್ಲವಲ್ಲಾ! ನಾನು ಈ ವಿಶಯದಲ್ಲಿ ನಿಮ್ಮಲ್ಲಿ ಮಾತನಾಡುವುದು ಏನೂ ಉಳಿದಿಲ್ಲ. ತಾವು ಹೋಗಬಹುದು.” ಎಂದು ಕಡಕ್ಕಾಗಿ ನುಡಿದೆ.

“ಸರ್! ನಿಮ್ಮ ಕೋಪ ನನಗೆ ಅರ‍್ತವಾಗುತ್ತದೆ. ಯಾರಿಗೂ ಪ್ರತಮ ಬಾರಿಗೆ ತಮ್ಮ ಮೇಲೆ ದೌರ‍್ಜನ್ಯ ನಡೆದಿದೆ ಎಂದು ಒಪ್ಪಿಕೊಳ್ಳೋದು ಕಶ್ಟಸಾದ್ಯ. ಅದರೆ ಸಹಾಯ ದೊರೆತ ಮೇಲೆ ಸರಿ ಹೋಗುತ್ತದೆ. ಇದು ಸಹಜ ಪ್ರಕ್ರಿಯೆ. ದಯವಿಟ್ಟು ಸಹಕರಿಸಿ” ತುಂಬಾ ಕಳಕಳಿಯಿಂದ ಬೇಡಿಕೊಂಡಳು.

“ನೋಡಿ ತಾಯಿ, ನನ್ನ ಸಂಸಾರ ಪ್ರಾಣಕ್ಕೆ ಸಮಾನ. ನಮ್ಮ ನಡುವಿರುವುದು ಸಾಮರಸ್ಯದ ಕೊರತೆ. ಅದನ್ನು ನಮ್ಮ ನಡುವೆ ತೀರಿಸಿಕೊಳ್ಳುತ್ತೇವೆ. ನೀವು ಇದರ ಮದ್ಯಸ್ತಿಕೆ ವಹಿಸಿಕೊಳ್ಳುವ ಅಗತ್ಯವಿಲ್ಲ. ಅಲ್ಲದೆ ತೊಂದರೆ ಬಂದಿರೋದು ನನಗೆ, ಒಬ್ಬ ಗಂಡಸಿಗೆ. ನೀವು ಹೆಣ್ಣು ಮಗಳು. ನಿಮ್ಮಿಂದ ನನಗೆ ನ್ಯಾಯ ದೊರಕುವುದೆಂದು ನಾನು ಹೇಗೆ ನಂಬಲಿ?”

ಅಶ್ಟರಲ್ಲಿ ಆಸ್ಪತ್ರೆಯ ಕ್ಯಾಂಟೀನಿನ ಹುಡುಗ ಎರಡು ಚಹಾ ತಂದ, ಒಂದು ಅವಳಿಗೆ, ಇನ್ನೊಂದು ನನಗೆ ನೀಡಿ ಹೊರಟು ಹೋದ. ಇದು ಜಯಂತನ ಕೆಲಸವಿರಬೇಕೆಂದು ಶಪಿಸಿದ. ಅವಳು ಆಲೋಚನಾ ಮಗ್ನಳಾಗಿ ಮೌನದಿಂದ ಚಹಾ ಕುಡಿದು ನಂತರ ಮಾತಿಗಿಳಿದಳು.

“ಸಾರ್, ನಾನು ಹೆಣ್ಣಾದರೇನು ಗಂಡಸರಿಗೆ ನ್ಯಾಯ ಕೊಡಿಸಬಾರದೆಂದು ಏನಿಲ್ಲವಲ್ಲಾ? ಸಹಜವಾಗಿ ಹೆಣ್ಣಿನ ಕಡೆಗೆ ನನ್ನ ಒಲವಿರುತ್ತದೆಂದು ನಿಮ್ಮ ಮತ. ಅದು ನಿಜವೇ ಆಗಿದ್ದರೆ ನಮ್ಮ ದೇಶದ ರಾಜ್ಯಾಂಗ, ನ್ಯಾಯಾಂಗ, ಶಾಸಕಾಂಗಗಳಲ್ಲಿ ಮಹಿಳಾ ಅದಿಕಾರಿಗಳು ಇರಲೇಬಾರದಿತ್ತಲ್ಲ? ಇದ್ದರೂ ಅವರು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಇರಬೇಕಿತ್ತಲ್ಲ. ಇದು ನನ್ನ ಉದ್ಯೋಗ. ಸಂತ್ರಸ್ತರು ಮೊದಲು ಮಾನವರು, ನಂತರ ಬೇರೆ ವಿಶಯಗಳು ಪ್ರಾದಾನ್ಯ ಪಡೆಯುತ್ತವೆ. ಎಲ್ಲರಿಗೂ ಸಂಸಾರದ ಮೇಲೆ ಮಮಕಾರವಿರುತ್ತದೆ. ಹೆಚ್ಚಿನ ಅಪರಾದಿಗಳೆಲ್ಲ ಸಂಸಾರಸ್ತರಾಗಿರುತ್ತಾರೆ. ಹಾಗಂತ ಅವರ ಅಪರಾದವೇನು ಕಡಿಮೆ ಆಗುವುದಿಲ್ಲ. ಅಪರಾದವನ್ನು ಸ್ವೀಕರಿಸಿ ಸುಮ್ಮನಾದರೆ ಅದು ನ್ಯಾಯವೇ?” ಅವಳ ಹರಿತ ಉತ್ತರ ಅವನನ್ನು ಬೆಚ್ಚಿಬೀಳಿಸಿತು.

“ನೋಡಿ ಮೇಡಂ, ನಿಮಗೆ ಹೇಳುವುದು ಸುಲಬ. ಏಕೆಂದರೆ ಇದು ನಿಮಗೆ ಆಗಲಿಲ್ಲ. ಇದು ನಿಮ್ಮ ಸಂಸಾರದಲ್ಲಿ ಆಗಲಿಲ್ಲ. ಇದರ ನೋವು ನಿಮಗೆ ಅರ‍್ತವಾಗದು. ನಿಮಗೆ ನಮ್ಮ ಮನೆಯ ಗರ‍್ಶಣೆ ಉದ್ಯೋಗ – ಹಣ ಸಂಪಾದನೆಗೆ ದಾರಿ. ಆದರೆ ನಮಗೆ ಇದು ನಮ್ಮ ಜೀವನದ ಪ್ರಶ್ನೆ.” ಎಂದು ಸವಾಲೊಡ್ಡಿದ.

ಅವಳು ತುಂಬಾ ಹೊತ್ತು ನಕ್ಕಳು. ನಕ್ಕು ಸುಸ್ತಾದಾಗ ಅವಳ ಕಣ್ಣಿಂದ ಕಣ್ಣೀರ ಕೋಡಿ ಹರಿಯತೊಡಗಿತು. ಅವಳು ತುಂಬಾ ಹೊತ್ತು ಅತ್ತಳು. ಇವನು ಕಕ್ಕಾಬಿಕ್ಕಿಯಾದ. ಕಾರಣವೇನೆಂದು ಅರಿಯದೆ ಚಡಪಡಿಸತೊಡಗಿದ.

ಅವಳು ಸ್ವಲ್ಪ ಸಮಯದ ನಂತರ ಸಾವರಿಸಿಕೊಂಡು “ನನ್ನನ್ನು ಮನ್ನಿಸಿ. ತಪ್ಪು ತಿಳಿಯಬೇಡಿ. ನಾನು ಸಮಜಸೇವೆಗೆಂದು ಈ ಉದ್ಯೋಗಕ್ಕೆ ಬಂದೆ. ಕೇವಲ ಹಣಕ್ಕಾಗಿ ಅಲ್ಲ. ನನಗೆ ನೋವಿನ ಅರಿವಿಲ್ಲವೆಂದು ಹೇಳಿದಿರಲ್ಲವೇ?” ಅವಳ ಸೆರೆಗನ್ನು ಸ್ವಲ್ಪ ಸರಿಸಿದಳು.

ಅವಳ ಹೊಟ್ಟೆ ಕಾಣಿಸತೊಡಗಿತು. ಅದನ್ನು ನೋಡಿ ಅವನು ಅವಕ್ಕಾದ. ಅವಳ ಚರ‍್ಮವೆಲ್ಲಾ ತೀವ್ರ ಬರ ಹಾಗು ಸುಡು ಬಿಸಿಲಿನಿಂದ ಒಣಗಿ ಸುಟ್ಟು ಸುಕ್ಕುಗಟ್ಟಿದ ಬಂಜರು ಬೂಮಿಯಂತೆ ಸುಟ್ಟು ಸುಕ್ಕುಗಟ್ಟಿ ಹೋಗಿತ್ತು. ಹಚ್ಚ ಹಸಿರಾದ ಬೂಮಿಯಂತಿದ್ದ ಅವಳ ಒಡಲು ಕಾಡ್ಗಿಚ್ಚಿನಿಂದ ಸುಟ್ಟು ಕಮರಿ ಹೋಗಿತ್ತು. ಅವಳು ಅನುಬವಿಸಿದ ನೋವಿನ ತೀವ್ರತೆಯ ಮುಂದೆ ಇವನ ನೋವು ತ್ರುಣಸಮಾನವಾಗಿ ತೋರತೊಡಗಿ ಬಾಯಿಯಿಂದ ಮಾತೇ ಹೂರಡದಾಯಿತು. ಅವಳದು ನಕ್ಕು ನಲಿದಾಡುವ ವಯಸ್ಸಿರಬೇಕು. ವಸಂತ ರುತುವಂತಿರಬೇಕ್ಕಿದ್ದ ಅವಳ ಜೀವನ ಸುಟ್ಟು ಕರಿಮುಗಿಲಿನಂತೆ ಬೂದಿಯಂತಾಗಿತ್ತು. ಮಲಗಿದ್ದವನು ಚಂಗನೆ ಎದ್ದು ಕುಳಿತು “ಹೇಗೆ” ಎಂದು ಕೇಳಿದನು.

“ಗಂಡ. ಇಶ್ಟವಿಲ್ಲದ ಹಿರಿಯರ ಒತ್ತಾಯಕ್ಕೆ ಮಣಿದು ಮದುವೆ, ವರದಕ್ಶಿಣೆ ಸಾಕಾಗಲಿಲ್ಲ ಎಂಬುದೊಂದು ಕಾರಣ, ಹುಟ್ಟಿದ ಕುಡಿಯನ್ನು ಹೆಣ್ಣೆಂದು ಕೊಂದ ನೀಚ. ನನ್ನ ಮೈಗೂ ಕೊಳ್ಳಿಯಿಟ್ಟ, ಕಿರುಚಿದೆ, ಅಕ್ಕಪಕ್ಕದವರು ಓಡಿ ಬಂದರು. ನನ್ನ ರಕ್ಶಿಸಿದರು. ನನ್ನ ಕಂದನಿಗೆ ಆ ಜ್ವಾಲೆಯನ್ನು ತಡೆದುಕೊಳ್ಳಲಾಗಲಿಲ್ಲ. ಕಣ್ಣುಮುಚ್ಚಿತು. ನನಗಾದ ನೋವು ಪರ‍್ವಾಗಿಲ್ಲ. ಆದರೆ ಒಡಲಿಗಿಟ್ಟ ಕೊಳ್ಳಿಗಿಂತ ಮಿಕ್ಕಿದ್ದೆಲ್ಲವೂ ಗೌಣವಾಗಿ ತೋರಿತ್ತು.” ಎಂದು ಹೇಳುವಾಗ ಅವಳ ಕಣ್ಣೀರು ಜಲಪಾತದಂತೆ ದುಮ್ಮಿಕ್ಕತೊಡಗಿದವು.” ತನ್ನ ಜೀವವನ್ನೇ ಕಳೆದುಕೊಂಡ ತಾಯಿಯೊಬ್ಬಳ ಎದೆಯಾಳದ ನೋವು ಸ್ಪಶ್ಟವಾಗಿ ಅವಳ ಕಣ್ಣಲ್ಲಿ ಕಾಣಿಸುತ್ತಿತ್ತು.

“ಮುಂಚೆ ಯಾವುದೇ ಸುಳಿವು ಸಿಗಲಿಲ್ಲವೇ?”

“ಸಿಕ್ಕಿತ್ತು. ಮೊದ ಮೊದಲು ಕೈಮಾಡಿದಾಗ ಪ್ರೀತಿಯಿಂದ ಅಂದುಕೊಂಡೆ. ಮಗುವಿನ ಮೇಲೆ ಕೈಎತ್ತಿದಾಗ ಲೋಕದ ಯಾವುದೇ ತಂದೆ ತನ್ನ ಸ್ವಂತ ಮಗುವಿಗೆ ಹಾನಿ ಮಾಡಲಾರ ಅಂದುಕೊಂಡೆ. ವ್ರುತ್ತಪತ್ರಿಕೆಗಳಲ್ಲಿ ಓದಿದ್ದೆಲ್ಲಾ ನನ್ನ ಜೀವನದಲ್ಲಿ ಗಟಿಸಲು ಸಾದ್ಯವಿಲ್ಲ ಅಂದುಕೊಂಡೆ. ಪ್ರತಿಸಲವೂ ನನ್ನೊಂದಿಗೆ ನಡೆಯುತ್ತಿರುವ ಪ್ರತಿಯೊಂದು ಗಟನೆಯನ್ನು ಸ್ವೀಕರಿಸಲು ನಿರಾಕರಿಸಿದೆ. ದೌರ‍್ಜನ್ಯವೆಂದರೆ ಅದು ಕ್ರೂರಿಗಳು 24 ಗಂಟೆ ನಡೆಸುವ ಗೋರ ಕ್ರುತ್ಯವೆಂದು ಅಂದುಕೊಂಡೆ. ನನ್ನ ಗಂಡ ಅಲ್ಲೋ ಇಲ್ಲೋ ಒಂದು ಹಲ್ಲೆ ಮಾಡುತ್ತಿದ್ದ. ಉಳಿದ ಸಮಯದಲ್ಲಿ ನಮ್ಮ ಜೀವನ ಸಾಮಾನ್ಯವಾಗಿತ್ತು. ಹಾಗಾಗಿ ನಾನು ಹೆಚ್ಚಿಗೆ ಗಮನ ಕೊಡಲಿಲ್ಲ. ಒಂದೆರಡು ಬಾರಿ ಅಮ್ಮನಲ್ಲಿ ದುಕ್ಕ ತೋಡಿಕೊಂಡೆ. ಆದರೆ ಸಂಸಾರವೆಂದರೆ ಇದೆಲ್ಲಾ ಸಾಮಾನ್ಯವೆಂದು ಸಮಾದಾನ ಹೇಳಿದರು. ಹಾಗಾಗಿ ಅವನ ದೈರ‍್ಯ ಹೆಚ್ಚಾಗುತ್ತಾ ಹೋಯಿತು. ಕೋಪ ಬಂದರೆ ಅವನಿಗೆ ತನ್ನ ಮೇಲೆ ನಿಯಂತ್ರಣವಿರಲಿಲ್ಲ. ಅವನನ್ನು ಮನೋವೈದ್ಯರ ಬಳಿ ಕರೆದುಕೊಂಡು ಹೋಗಿದ್ದರೆ ಇದೆಲ್ಲಾ ನಡೆಯುತ್ತಿರಲಿಲ್ಲವೇನೋ” ಎಂದು ಮತ್ತೆ ಬಿಕ್ಕತೊಡಗಿದಳು.

ಆದರೆ ಸಾವರಿಸಿಕೊಂಡು ಮತ್ತೆ ಮುಂದುವರಿಸಿದಳು “ಹೀಗೆ ಯಾವುದನ್ನೂ ಒಪ್ಪಿಕೊಳ್ಳದೆ ನಾನು ತಪ್ಪು ಮಾಡಿದೆ. ಅವನ ಮೇಲೆ ಟಾಣೆಯಲ್ಲಿ ದೂರೇನೋ ಬೇಗ ದಾಕಲಿಸಿದೆ. ಆದರೆ ಅವನನ್ನು ನ್ಯಾಯಲಯದಲ್ಲಿ ಶಿಕ್ಶಿಸಲು ಸಾಕ್ಶಿ ಹೇಳಲು ನಿಂತಾಗ ನನ್ನ ಹ್ರುದಯ ನಡುಗಿದ್ದು ಸುಳ್ಳಲ್ಲ. ಎಲ್ಲವೂ ಮತ್ತೊಮ್ಮೆ ಮುಂಚಿನಂತಾದರೆ ಸಾಕಲ್ಲವೇ ಎಂದು ಅನಿಸಿದ್ದು ಸುಳ್ಳಲ್ಲ. ಕೊನೆಗೆ ನನ್ನ ಕಂದಮ್ಮನಿಗೋಸ್ಕರ ಇದ್ದ ಎಲ್ಲಾ ದೈರ‍್ಯ ತುಂಬಿಕೊಂಡು ಅವನ ವಿರುದ್ದ ಸಾಕ್ಶ್ಯ ನುಡಿದೆ. ಅದು ಸುಲಬದ ಕೆಲಸವಾಗಿರಲಿಲ್ಲ. ಬಗೀರತನ ಪ್ರಯತ್ನಗಿಂತ ಕಶ್ಟಕರವಾಗಿತ್ತು. ಯಾರನ್ನು ನಂಬಿ ನಾನು ಸರ‍್ವಸ್ವವನ್ನು ತ್ಯಜಿಸಿ ಸಪ್ತಪದಿ ತುಳಿದು ಹೊಸ ಜೀವನಕ್ಕಾಗಿ ಹಂಬಲಿಸಿದ್ದೆನೋ ಅವನೇ ತನ್ನ ಕೈಯಾರೆ ನಮ್ಮಿಬ್ಬರ ಕನಸನ್ನು ಬೆಂಕಿಯಲ್ಲಿ ಹೊಸಕಿ ಹಾಕಿದ್ದ. ಅವನು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗ ತನ್ನ ಪರವಾಗಿ ಯಾವುದೇ ವಕೀಲರನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಒಂದೇ ಒಂದು ಮಾತನ್ನೂ ಆಡಲಿಲ್ಲ. ಅವನು ಒಳಗೇ ಕುಸಿದು ಹೋದಂತ್ತಿತ್ತು. ಅವನಿಗೆ ಜೇವಾವದಿ ಶಿಕ್ಶೆ ಆಯಿತು.

ಅವನನ್ನು ಜೈಲಿಗೆ ಕೊಂಡು ಹೋಗುವಾಗ ಅವನ ಕೊರಳ ಪಟ್ಟಿಯನ್ನು ಹಿಡಿದು ಕೇಳಿದೆ- ಹೀಗೇಕೆ ಮಾಡಿದೆ? ಎಂದು. ‘ಕೆಟ್ಟ ಸಾಂಗತ್ಯ, ಕೆಟ್ಟ ಗಳಿಗೆ- ನಾನು,  ನಿನಗೆ ಬೆಂಕಿ ಇಟ್ಟಾಗ ನಮ್ಮ ಕಂದ ನಿನ್ನನ್ನು ಅಪ್ಪಿಕೊಳ್ಳುತ್ತಾಳೆಂದು ಕನಸು ಮನಸ್ಸಿನಲ್ಲಿಯೂ ಅಂದು ಕೊಳ್ಳಲಿಲ್ಲ. ಆ ಎಳೆಯ ಮಗುವು ಹಾಗೂ ನೀನು ಜೀವಂತ ಚಿತೆಯಾದಾಗಲೇ ನನಗರಿವಾದ್ದು ನಾ ಮಾಡಿದ ಆ ಪಾಪದ ಕೆಲಸದ ತೀವ್ರತೆ. ಅಲ್ಲಿಯವರೆಗೂ ನಾನು ಅಹಂಕಾರದ ಅಂದಕಾರದಲ್ಲಿ ನಾನು ಮಾಡಿದ್ದೇ ಸರಿ, ಹೋರಿ ಹೋದದ್ದೇ ದಾರಿ ಎಂದು ಸಾಗಿದ್ದೆ. ನಿನ್ನಲ್ಲಿ ಕ್ಶಮೆ ಯಾಚಿಸಲಾರೆ. ನಾನು ಈ ಮಾನವ ಜನ್ಮದಲ್ಲಿರುವ ಅತೀ ಕಟಿಣ ಶಿಕ್ಶೆಗೆ ಅರ‍್ಹನು. ನನ್ನಂತ ರಾಕ್ಶಸರಿಗೆ ಬದುಕಲು ಹಕ್ಕಿಲ್ಲ” ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದ.

“ಕೇವಲ ಮೂರೇ ದಿನದಲ್ಲಿ ಬಂದೀಕಾನೆಯಲ್ಲಿ ಬೆಂಕಿ ಹಚ್ಚಿಕೊಂಡು, ಒಂದು ವಾರ ಆಸ್ಪತ್ರೆಯಲ್ಲಿ ನರಳಿ ಸತ್ತ. ನಾನು ನೋಡಲು ಹೋದಾಗ ಕಣ್ಣಿಂದ ಕೇವಲ ಕಣ್ಣೀರು ಹರಿದಿತ್ತೇ ಹೊರತು ಒಂದಕ್ಶರವೂ ಹೊರಡಲಿಲ್ಲ. ನಾನು ಗೆದ್ದೆನೋ ಸೋತೆನೋ ನನಗೆ ಇಂದಿಗೂ ತಿಳಿದಿಲ್ಲ. ಆದರೆ ನಮ್ಮಿಬ್ಬರ ಬೇಜವಾಬ್ದಾರಿ ನಡವಳಿಕೆಯಿಂದ ನನ್ನ ಅಮೂಲ್ಯ ರತ್ನವಾದ ನನ್ನ ಬಡಕೂಸನ್ನು ಶಾಶ್ವತವಾಗಿ ಕಳೆದುಕೊಂಡೆ ಎಂಬ ಸತ್ಯವೂ ಇಂದಿಗೂ ನನ್ನನ್ನು ಕ್ಶಣ ಕೊಲ್ಲುತ್ತಿದೆ. ಸರಿಯಾದ ಸಮಯದಲ್ಲಿ ಸಹಾಯ ದೊರಕಿದ್ದಿದ್ದರೆ ನನ್ನ ಕುಟುಂಬ ಉಳಿಯುತ್ತಿತ್ತೋ ಏನೋ? ಅದೇ ಕೊರಗಿನಲ್ಲಿ ವಿದಿಯನ್ನು ಹಳಿಯುತ್ತಾ ಒಳಗೆ ಕೂರಲಿಲ್ಲ. ನನ್ನಂತೆ ಇತರಿಗಾಗಬಾರದೆಂಬ ಒಂದೇ ದ್ಯೇಯದಿಂದ ಹೊಸಬದುಕು ಆರಂಬಿಸಿದೆ. ಕೊನೆಗೆ ನಿಮ್ಮ ಗೆಳೆಯನ ಸಹಾಯದಿಂದ ಈ ಸಂಸ್ತೆಯಲ್ಲಿ ನೌಕರಿ ಸಿಕ್ಕಿತು. ಅದು ನನ್ನ ಬಾಳಿಗೆ ಹೊಸ ತಿರುವನ್ನು ನೀಡಿತು, ಹೊಸ ಅರ‍್ತ ಕಲ್ಪಿಸಿತು. ನಾನು ಯಾರಿಗಾಗಿ ದುಡ್ಡು ರಾಶಿ ಹಾಕಲಿ? ಯಾಕೆ ಇನ್ನೂಬ್ಬರ ಮನೆಯೊಡೆಯಲಿ? ನಿಮಗೆ ಮತ್ತು ನಿಮ್ಮ ಹೆಂಡತಿಗೆ ಯಾವುದಾದರು ಕೌಟುಂಬಿಕ ಸಲಹೆಗಾರರ ಬಳಿ ಕರೆದುಕೊಂಡು ಹೋಗುವುದಶ್ಟೇ ನನ್ನ ಉದ್ದೇಶವಾಗಿತ್ತು. ಇನ್ನು ನಿರ‍್ದಾರ ನಿಮಗೆ ಬಿಟ್ಟಿದ್ದು. ನೀವು ಹೇಳಿದ ಮಾತು ನನ್ನನ್ನು ತುಂಬಾ ಗಾಸಿಗೊಳಿಸಿತು. ನಿಮಗೆ ನನ್ನ ಕತೆ ಗೊತ್ತಿಲ್ಲದೇ ಹೇಳಿದಿರಿ ಎಂದು ಸಾಂತ್ವನ ತಂದುಕೊಂಡೆ. ಜಯಂತವರು ನಿಮಗೆ ಏನನ್ನೂ ಹೇಳಲಿಲ್ಲ ಎಂದರಿವಾಯಿತು” ಎಂದು ಮಾತು ಮುಗಿಸಿದಳು.

ಅವಳ ನೋವಿನ ಜರಿ ದುಮ್ಮಿಕ್ಕಿದ ಪರಿ ಕಂಡು ವಿಕಾಸನ ಕಣ್ಣಂಚು ತೇವವಾಯಿತು.

“ತಪ್ಪಾಯಿತು ಮೇಡಂ. ತಿಳಿಯದೇ ಎರಡು ಮಾತಂದೆ. ನಾವು ನಿರ‍್ಮಿಸಿದ ಸಮಾಜದಲ್ಲಿ ಸರಿ-ತಪ್ಪುಗಳ ನಡುವಿನ ಹಂದರ ತೀರ ತೆಳುವಾಗಿದೆ. ನ್ಯಾಯ-ಅನ್ಯಾಯ, ನೀತಿ-ಅನೀತಿ, ದರ‍್ಮ-ಅದರ‍್ಮಗಳ ಪರಿಬಾಶೆಯೂ ವ್ಯಕ್ತಿನಿಶ್ಟವಾಗಿವೆ. ಸೌಜನ್ಯ-ದೌರ‍್ಜನ್ಯಗಳನ್ನು ಸಂಸಾರದ ಕನ್ನಡಿಯಲ್ಲಿ ವಸ್ತುನಿಶ್ಟವಾಗಿ ನೋಡಬೇಕು. ನನಗೆ ನನ್ನ ಮೇಲಾಗುವ ದೌರ‍್ಜನ್ಯಕ್ಕಿಂತ ನನ್ನ ಕಂದಮ್ಮಗಳ ಬವಿಶ್ಯ ಮುಕ್ಯ. ಜೀವನವು ಐತಿಹ್ಯದಲ್ಲಿ ರಾಮ, ಕ್ರಿಶ್ಣ, ಬೀಶ್ಮ, ಕರ‍್ಣರಂತ ಮಹಾಪುರುಶರನ್ನೇ ಬಿಟ್ಟಿಲ್ಲ. ಇದಕ್ಕೇ “Life is not fair” ಎಂದು ಬಲ್ಲವರು ಹೇಳುತ್ತಾರೆ. ಇದು ನನ್ನ ವೈಯುಕ್ತಿಕ ಅಬಿಪ್ರಾಯ. ಹಾಗಾಗಿ ನಾನು ಕೌಟುಂಬಿಕ ಸಲಹೆಗಾರರನ್ನು ಬೇಟಿಯಾಗಲು ಒಪ್ಪುತ್ತೇನೆ. ಆದರೆ ನನ್ನ ಹೆಂಡತಿಯನ್ನು ಒಪ್ಪಿಸುವ ಹೊಣೆಗಾರಿಕೆ ನಿಮ್ಮದು” ಎಂದು ಕೈಮುಗಿದ ವಿಕಾಸ.

“ನೀವು ಸೀತೆ, ದ್ರೌಪದಿ, ಕುಂತಿ, ಮಂಡೋದರಿ ಬಗ್ಗೆ ಮಾತನಾಡಲೇ ಇಲ್ಲ. ನಿಮ್ಮ ಅರ‍್ದಾಂಗಿಯನ್ನು ಒಪ್ಪಿಸುವ ಜವಾಬ್ದಾರಿ ನನ್ನದು” ಎಂದು ನಕ್ಕಳು. ಸೂರ‍್ಯ ಮುಳುಗಿದ್ದರೂ ಕಾರ‍್ಗತ್ತಲ ಆಗಸದಲ್ಲಿ ಬೆಳ್ಳಿಯ ಪೂರ‍್ಣ ಚಂದಿರ ಉದಯಿಸಿ ಬಂದಿದ್ದ.

“ದೌರ‍್ಜನ್ಯವನ್ನು ಅನುಬವಿಸುವುದು ಎಶ್ಟು ಕ್ಲಿಶ್ಟಕರವೋ, ಅದರ ಬಗ್ಗೆ ಮಾತನಾಡುವುದು ಅಶ್ಟೇ ಕಶ್ಟ. ಸ್ವಜನರ ಪಕ್ಶಪಾತದಿಂದ ಹೊರಬಂದು, ನ್ಯಾಯಕ್ಕಾಗಿ ಹೋರಾಡುವುದು ನನ್ನಂತ ಸಣ್ಣವನಿಗೆ ಸಾದ್ಯವಾಗದ ಮಾತು. ಆದರೆ ಎಲ್ಲವನ್ನು ಬದಿಗೊತ್ತಿ ತನ್ನ ಗುರಿಗಾಗಿ, ನ್ಯಾಯಕ್ಕಾಗಿ ಹೋರಾಡಿದ ಆ ಹೆಣ್ಣು ಮಗಳ ಮುಂದೆ ನಾನು ತೀರಾ ಕುಬ್ಜ. ಮಹಾಬಾರತದಲ್ಲಿ ದುರ‍್ಯೋದನನ ಪರವಾಗಿ ಹೋರಾಡಿದ ವೀರಾದಿವೀರರಿಗೆಲ್ಲಾ ಇದೇ ಪಾಪ ಪ್ರಗ್ನೆ ಕಾಡಿ, ಅವರು ಸ್ವಯಂಕ್ರುತ ಅಪರಾದದಕ್ಕೆ ಬಲಿ ಪಶುವಾದರಲ್ಲವೇ? ಈ ಮಹಾಬಾರತವು ನಿತ್ಯವೂ ನಮ್ಮ ಕಣ್ಮುಂದೆ ನಮೆಲ್ಲರ ಜೀವನದಲ್ಲಿ ನಡೆಯುತ್ತಿರುತ್ತದೆ. ಆದರೆ ಎಶ್ಟು ಜನ ಕೆಚ್ಚೆದೆಯ ಪಾಂಡವರು ಅತವಾ ದೂರ‍್ತ ಕೌರವರ ಪಕ್ಶ ವಹಿಸಿ ಹೋರಾಡುತ್ತಾರೋ, ಅದು ಅವರವರ ಬಾಳಿನ ಕುರುಕ್ಶೇತ್ರದ ಪಲಿತಾಂಶವನ್ನು ನಿರ‍್ದರಿಸುತ್ತದೆ. ಒಂದಂತೂ ನಿಚ್ಚಳ – ಕೌರವನಾಗುವುದು ಸುಲಬ, ಆಯ್ಕೆ ನಮ್ಮದು” ಎಂದು ವಿಕಾಸನು ತನ್ನೊಳಗೆ ಅಂದುಕೊಂಡ.

( ಚಿತ್ರಸೆಲೆ : khaskhabar.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications