ಕವಿತೆ: ತೌರಿಗೆ ಹೊಂಟೋಳೆ ಗೌರಮ್ಮ
– ವಿನು ರವಿ.
ತೌರಿಗೆ ಹೊಂಟೋಳೆ ಗೌರಮ್ಮ
ನಾಕುದಿನ ಇರವಾಸೆ ಅವಳಿಗಮ್ಮ
ಕಂಕುಳಲ್ಲಿ ಗಣಪ
ಕಿರುಬೆರಳ ಹಿಡಿದವ್ನೆ ತುಂಟ ಶಣುಮೊಗ
ಕಾಸಗಲ ಕುಂಕುಮ
ಮುಡಿ ತುಂಬಾ ಮಲ್ಲಿಗೆ
ಎದೆಯೊಳಗೆ ಪ್ರೀತಿಯ ತುಂಬಿ
ತೌರಿಗೆ ಹೊಂಟೋಳೆ ಗೌರಮ್ಮ
ನಾಕುದಿನ ಇರವಾಸೆ ಅವಳಿಗಮ್ಮ
ಅಣ್ಣನಿಗೊಂದು ಅಂಗಿ
ಅವ್ವನಿಗೊಂದು ಅಂಚಿನ್ ಸೀರೆ
ಚಿಕ್ಕೂಸಿಗೊಂದು ಉಂಗುರವಿಡಲು
ತೌರಿಗೆ ಹೊಂಟೋಳೆ ಗೌರಮ್ಮ
ನಾಕುದಿನ ಇರವಾಸೆ ಅವಳಿಗಮ್ಮ
ಆಡಿ ಕುಣಿದ ಅಂಗಳ
ಹಿತ್ತಲ ಮಲ್ಲಿಗೆ ಬಳ್ಳಿ
ತುಪ್ಪದ ಹೋಳಿಗೆ
ಬೆಲ್ಲದ ಪಾಯಸ
ಸವಿ ನೆನಪಿನ ಗಮಲು ಕಾಡಲು
ತೌರಿಗೆ ಹೊಂಟೋಳೆ ಗೌರಮ್ಮ
ನಾಕುದಿನ ಇರವಾಸೆ ಅವಳಿಗಮ್ಮ
ಅಂಗಳದ ಹಸಿರು ಚಪ್ಪರ
ಅವ್ವನ ಪ್ರೀತಿಯ ಮಡಿಲು
ಬಾಲ್ಯದ ಗೆಳತಿಯರ
ಕ್ವಾಟ್ಲೆ ಮಾತುಗಳಿಗೆ
ಮನಸಾರೆ ನಗಲು
ತೌರಿಗೆ ಹೊಂಟೋಳೆ ಗೌರಮ್ಮ
ನಾಕುದಿನ ಇರವಾಸೆ ಅವಳಿಗಮ್ಮ…
(ಚಿತ್ರ ಸೆಲೆ: jnanada.in)
ಇತ್ತೀಚಿನ ಅನಿಸಿಕೆಗಳು