ಮುನ್ಕಟಿಯಾದ ಒಂದು ವಿಶೇಶ ಗಣಪತಿ ದೇವಾಲಯ
ಒಮ್ಮೆ ಪಾರ‍್ವತಿದೇವಿ ಜಳಕ ಮಾಡ ಬಯಸಿದಾಗ, ತನ್ನ ಏಕಾಂತಕ್ಕೆ ಯಾವುದೇ ರೀತಿಯ ಬಂಗ ಬಾರದಿರಲಿ ಎಂಬ ಉದ್ದೇಶದಿಂದ ಶಿವನ ವಾಹನ ನಂದಿಗೆ ‘ಯಾರನ್ನು ಒಳಗೆ ಬಿಡದಂತೆ’ ಬಾಗಿಲಲ್ಲಿ ಕಾಯಲು ಆಗ್ಮಾಪಿಸಿದಳಂತೆ. ನಂದಿ, ಪಾರ‍್ವತಿ ಮಾತೆಯ ಆಗ್ನೆಯನ್ನು ಶಿರಸಾವಹಸಿ ಪಾಲಿಸಲು ಬಾಗಿಲ ಬಳಿ ಕಾವಲಿಗೆ ನಿಂತ. ಶಿವ ಹಿಂದಿರುಗಿ ಬಂದಾಗ, ನಂದಿ ಬೇರೆ ದಾರಿಯಿಲ್ಲದೆ, ತನ್ನ ಒಡೆಯನನ್ನು ಒಳ ಹೋಗಲು ಅನುಮತಿಸಿದನಂತೆ. ಇದರಿಂದ ಕುಪಿತಗೊಂಡ ಪಾರ‍್ವತಿದೇವಿ. ಶಿವ ಒಳ ಹೋಗಲು ನಂದಿ ಪರವಾನಗಿ ನೀಡಿದ್ದಕ್ಕಿಂತಾ ಹೆಚ್ಚಾಗಿ, ಶಿವನಿಗೆ ನಂದಿ ಇದ್ದಂತೆ, ತನಗೆ ಒಬ್ಬ ನಿಶ್ಟಾವಂತ ಸೇವಕ ಇಲ್ಲವಲ್ಲ ಎಂದು ಬಹಳ ನೊಂದುಕೊಂಡಳಂತೆ. ಇದನ್ನು ನೀಗುವ ಸಲುವಾಗಿ, ಮತ್ತೆ ಜಳಕ ಮಾಡುವಾಗ, ಮೈಗೆ ಬಳಿದುಕೊಂಡ ಅರಿಶಿನದ ಕಣಕವನ್ನು, ತೆಗೆದು ಅದನ್ನು ಬೊಂಬೆ ಮಾಡಿ, ತನ್ನ ಶಕ್ತಿಯಿಂದ ಬೊಂಬೆಗೆ ಜೀವ ನೀಡಿದಳಂತೆ. ಆ ಗೊಂಬೆಯೇ ಗಣೇಶ. ಪಾರ‍್ವತಿದೇವಿಯ ನಿಶ್ಟಾವಂತ ಮಗ. ತಾನು ಜಳಕ ಮಾಡುವಾಗ ಬಾಗಿಲಲ್ಲಿ ನಿಂತು ‘ಯಾರನ್ನೂ ಒಳಗೆ ಬಿಡದಂತೆ’ ಕಾಯಲು ಗಣೇಶನಿಗೆ ಆದೇಶಿಸಿದಳಂತೆ.
ಶಿವ ವಾಪಸ್ಸು ಬಂದಾಗ, ಅಪರಿಚಿತ ಬಾಲಕನೊಬ್ಬ ಬಾಗಿಲಲ್ಲಿ ನಿಂತು, ತನ್ನನ್ನು ತಡೆದು ಒಳ ಹೋಗಲು ಅನುಮತಿ ನಿರಾಕರಿಸಿದ ಕಾರಣ, ಕೋಪಗೊಂಡು, ತನ್ನ ಸೈನ್ಯಕ್ಕೆ ಈ ಬಾಲಕನನ್ನು ನಾಶ ಮಾಡುವಂತೆ ಆಗ್ಮಾಪಿಸಿದನಂತೆ. ಶಿವನ ಸೈನ್ಯ ಆತನೊಡನೆ ಎಶ್ಟೇ ಹೋರಾಡಿದರೂ, ಪಾರ‍್ವತಿದೇವಿಯ ಕ್ರುಪೆಯಿಂದ ಅತುಲ ಪರಾಕ್ರಮಿಯಾದ ಆ ಬಾಲಕನನ್ನು ಮಣಿಸಲು ಸಾದ್ಯವಾಗಲಿಲ್ಲವಂತೆ. ಶಿವನಿಗೂ ಸಹ ಆ ಬಾಲಕನ ಶಕ್ತಿ ಕಂಡು ಅಚ್ಚರಿಯಾಯಿತಂತೆ. ಸಾಮಾನ್ಯವಾಗಿ ಕೋಪಿಸಿಕೊಳ್ಳದ ಕೈಲಾಸೇಶ್ವರ, ತನ್ನ ಸೈನ್ಯಕ್ಕೆ ಆದ ಅವಮಾನದಿಂದ ಕುಪಿತಗೊಂಡನಂತೆ. ಈತನನ್ನು ಮಣಿಸಲು ತಾನೇ ಸೆಣಸಲು ಮುಂದಾದನಂತೆ. ದೈವ ಶಕ್ತಿಯ ಮುಂದೆ ಬೇರೆಲ್ಲಾ ಶಕ್ತಿಗಳು ಯಾವ ಲೆಕ್ಕಕ್ಕೂ ಇಲ್ಲ ಅಲ್ಲವೇ? ಶಿವ, ಗಣೇಶನ ಶಿರಚ್ಚೇದನ ಮಾಡಿದನಂತೆ. ಇದನ್ನು ಅರಿತ ಪಾರ‍್ವತಿದೇವಿ, ಕುಪಿತಗೊಂಡು ಇಡೀ ಸ್ರುಶ್ಟಿಯನ್ನೇ ನಾಶಮಾಡುವುದಾಗಿ ಆರ‍್ಬಟಿಸಿದಳಂತೆ. ಸ್ರುಶ್ಟಿಕರ‍್ತನಾದ ಬ್ರಹ್ಮನಿಗೆ ಇದು ನುಂಗಲಾರದ ತುತ್ತಾಯಿತಂತೆ. ಆತಂಕ ಹೆಚ್ಚಾಗಿ, ಪಾರ‍್ವತಿದೇವಿಯ ಬಳಿ ಶಾಂತಳಾಗುವಂತೆ ಕೋರಿ, ಪಾರ‍್ವತಿ ತನ್ನ ನಿರ‍್ಣಯವನ್ನು ಮರುಪರಿಶೀಲಿಸುವಂತೆ ಕೋರಿಕೊಂಡನಂತೆ. ಆಗ ಆಕೆ ತನ್ನ ನಿರ‍್ಣಯವನ್ನು ಹಿಂಪಡೆಯಲು, ಎರಡು ಬೇಡಿಕೆಗಳನ್ನು ಮುಂದಿಟ್ಟಳಂತೆ. ತನ್ನ ಮಗ ಗಣೇಶನಿಗೆ ಮರು ಜೀವ ನೀಡುವುದು ಒಂದಾದರೆ, ಮತ್ತೊಂದು ಗಣೇಶನಿಗೆ ಅಗ್ರ ಪೂಜೆ ಸಲ್ಲಿಸುವ ವರ ನೀಡಬೇಕು ಎನ್ನುವುದು.
ತನ್ನ ತಪ್ಪು ಮನವರಿಕೆಯಾದ ಶಿವ, ಪಾರ‍್ವತಿದೇವಿಯ ಆಶೋತ್ತರವನ್ನು ಈಡೇರಿಸಲು ಒಪ್ಪಿಗೆ ಸೂಚಿಸಿದನಂತೆ. ಅದಕ್ಕೆ ಪೂರಕವಾಗಿ, ಮಗನಿಗೆ ಮರುಜೀವ ನೀಡುವ ಸಲುವಾಗಿ, ತನ್ನ ಸೈನ್ಯಕ್ಕೆ ‘ಹೋಗಿ, ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಿರುವ ಯಾವುದೇ ಜೀವದ ಶಿರವನ್ನು ಕತ್ತರಿಸಿ ತರುವಂತೆ ಆಗ್ಮಾಪಿಸಿ ಕಳುಹಿಸಿದನಂತೆ. ಕೂಡಲೇ ಹೊರಟ ಶಿವಸೈನ್ಯವು, ಉತ್ತರಕ್ಕೆ ತಲೆಯಿಟ್ಟು ಮಲಗಿದ್ದ ಬಲವಾದ ಮತ್ತು ಶಕ್ತಿಯುತವಾದ ಆನೆಯ ಶಿರವನ್ನು ಹಿಡಿದು ಬಂದರಂತೆ. ಶಿವ ಅದನ್ನೇ ಗಣೇಶನ ಮುಂಡಕ್ಕೆ ಜೋಡಿಸಿ ಜೀವ ಕೊಟ್ಟನಂತೆ. ನಂತರ ಆತನನ್ನು ತನ್ನ ಮಗನಾಗಿ ಸ್ವೀಕರಿಸಿ, ಎಲ್ಲಾ ದೇವರುಗಳಿಗಿಂತಾ ಮೊದಲು ಗಣೇಶನಿಗೆ ಅಗ್ರ ಪೂಜೆ ಸಲ್ಲಿಸುವಂತೆ ಅನುಗ್ರಹಿಸಿ, ದೇವಗಣಕ್ಕೆ ನಾಯಕನನ್ನಾಗಿ ಮಾಡಿದನಂತೆ. ಇದು ಪುರಾಣದಲ್ಲಿ ಕಂಡುಬರುವ ಗಣೇಶನ ಸ್ರುಶ್ಟಿ ವ್ರುತ್ತಾಂತ. ಹಾಗಾಗಿ ಗಜಮುಕ ಹೊತ್ತ ಗಣಪತಿಯನ್ನೇ ಮೊದಲು ಎಲ್ಲರೂ ಪೂಜಿಸುವುದು. ಬಾದ್ರಪದ ಚೌತಿಯಂದೇ ವಿನಾಯಕ ಪೂಜೆ.
ಈ ವ್ರುತ್ತಾಂತವನ್ನು ಇಲ್ಲಿ ಪ್ರಸ್ತಾಪಿಸುವ ಉದ್ದೇಶದ ಹಿಂದೆ ವಿಶೇಶ ಗಣೇಶನ ದೇವಸ್ತಾನದ ವಿಚಾರ ಅಡಗಿದೆ. ಶಿವ ಗಣೇಶನ ಶಿರವನ್ನು ಕತ್ತರಿಸಿದ ಎನ್ನಲಾದ ಸ್ತಳದಲ್ಲಿ, ರುಂಡವಿಲ್ಲದ ಗಣಪನ ವಿಗ್ರಹವನ್ನು ಪ್ರತಿಶ್ಟಾಪಿಸಿದ ದೇವಸ್ತಾನ ಈಗಲೂ ಇದೆ. ಆಶ್ಚರ‍್ಯವಾಯಿತೇ? ಇದು ನಿಜ. ಅದು ಎಲ್ಲಿದೆ? ಹೇಗೆ ಅಲ್ಲಿಗೆ ಹೋಗಲು ಸಾದ್ಯ? ಎಂಬೆಲ್ಲಾ ವಿಶಯದ ವಿವರ ಇಲ್ಲಿದೆ.
ತಲೆಯ ಬಾಗವಿಲ್ಲದ ಗಣೇಶನನ್ನು ಪೂಜಿಸುವ ವಿಶ್ವದ ಏಕೈಕ ಗುಡಿ ಮುನ್ಕಟಿಯಾ ದೇವಾಲಯ. ಶಿವನು ಗಣೇಶನ ಶಿರವನ್ನು ಕತ್ತರಿಸಿದ ಸ್ತಳ ಇದು ಎಂಬುದು ಅಲ್ಲಿನವರ ವಾದ. ಹಾಗಾಗಿ ಇಲ್ಲಿನ ದೇವಾಲಯದಲ್ಲಿನ ಗಣೇಶನ ವಿಗ್ರಹಕ್ಕೆ ರುಂಡವೇ ಇಲ್ಲ. ಈ ಸುಂದರವಾದ ಪುಟ್ಟ ದೇವಸ್ತಾನವು ಉತ್ತರಕಾಂಡ ರಾಜ್ಯದಲ್ಲಿದೆ. ಮನಸ್ಸಿಗೆ ಮುದ ನೀಡುವ ಕೇದಾರ ಕಣಿವೆಯಲ್ಲಿರುವ ರುಂಡವಿಲ್ಲದ ಗಣಪತಿ ದೇವಾಲಯ ಸೋನ್ ಪ್ರಯಾಗದಿಂದ ಅಂದಾಜು ಮೂರು ಕಿಲೋಮೀಟರ್ ದೂರದಲ್ಲಿ, ಗೌರಿ ಕುಂಡ್ ಗೆ ಹೋಗುವ ಮಾರ‍್ಗದಲ್ಲಿದೆ. ಇದನ್ನು ದೇವ ಬೂಮಿ ಎಂದು ಸ್ತಳೀಯರು ಕರೆಯುತ್ತಾರೆ. ಕೇದಾರನಾತಕ್ಕೆ ಹೋಗುವ ಹಳೆಯ ಚಾರಣ ರಸ್ತೆಯ ಮೂಲಕ ಸಹ ಈ ದೇವಾಲಯವನ್ನು ತಲುಪಬಹುದು. ಹಿಂದೆ ಕೇದಾರನಾತಕ್ಕೆ ಹೋಗುವ ಎಲ್ಲಾ ಬಕ್ತಾದಿಗಳು ಇಲ್ಲಿ ಪೂಜೆ ಸಲ್ಲಿಸಿ ಮುಂದುವರೆಯುತ್ತಿದ್ದರು. ಕೇದಾರ ಕಣಿವೆಯ ಮದ್ಯದಲ್ಲಿ ಇರುವ ಕಾರಣ ಇದು ಹೆಚ್ಚು ಪ್ರಚಲಿತವಾಗಿಲ್ಲ. ಬೇಟಿ ನೀಡುವ ಬಕ್ತರ ಸಂಕ್ಯೆ ಕೂಡ ಗಣನೀಯವಾಗಿಲ್ಲ.
ರುಂಡವಿಲ್ಲದ ಗಣಪತಿಯ ದೇವಾಲಯವಿರುವ ಬೆಟ್ಟ ಕೇದಾರ ಕಣಿವೆಯಲ್ಲಿರುವ ಸುಂದರ ಹಚ್ಚ ಹಸಿರು ವನರಾಶಿ ಮತ್ತು ಬೆಟ್ಟಗಳು ನಡುವೆ ಇದ್ದು ಬೆಟ್ಟದ ತಳದಲ್ಲಿ ಹರಿಯುವ ಮಂದಾಕಿನಿ ನದಿ ಇಲ್ಲಿನ ಸೌಮ್ಯತೆಯನ್ನು ಹೆಚ್ಚಿಸಿದೆ. ಇದು ಚಾರಣಿಗರಿಗೆ ಮತ್ತು ಪ್ರವಾಸಿಗರಿಗೆ ಮನಮೋಹಕ ದ್ರುಶ್ಯಾವಳಿಯ ತಾಣ ಹಾಗೂ ನೆಮ್ಮದಿಯ ಸ್ತಳ. ಇಡೀ ಬಾರತದಲ್ಲಿ ಗಣಪತಿಯನ್ನು ಪೂಜಿಸದಿರುವ ರಾಜ್ಯವೇ ಇಲ್ಲ. ಇದರ ಹಿಂದಿರುವ ಮರ‍್ಮ ಏನೇ ಇರಲಿ, ಗಣೇಶನ ಪೂಜೆ ಬಾರತದಲ್ಲಿ ಅತಿ ಮುಕ್ಯವಾದ ಒಂದು ಹಬ್ಬ. ಎಲ್ಲಾ ಜಾತಿ ದರ‍್ಮಗಳವರು ಆಚರಿಸುವ ಏಕೈಕ ಹಬ್ಬ ಇದು. ದೇಶವ್ಯಾಪಿ ಗಣಪತಿಯನ್ನು ಆರಾದಿಸುತ್ತಿದ್ದರೂ, ಆತನ ಹುಟ್ಟಿಗೆ ಕಾರಣವಾಗಿದೆ ಎನ್ನಲಾದ ಸ್ತಳ ಇನ್ನೂ ಹೆಚ್ಚಿನ ಮಂದಿಗೆ ತಿಳಿಯದೇ ಇರುವುದು ವಿಪರ‍್ಯಾಸ. ಇಲ್ಲಿಗೆ ಬರುವ ಬಕ್ತಾದಿಗಳ ಸಂಕ್ಯೆ ಕೂಡ ಕಡಿಮೆ. ಇದರ ಶ್ರೇಶ್ಟತೆ ಬಗ್ಗೆ ಅವಶ್ಯವಿರುವಶ್ಟು ಪ್ರಚಾರ ಇಲ್ಲದಿರುವುದೇ ಮೂಲ ಕಾರಣ ಎನ್ನುತ್ತಾರೆ ದೇವಾಲಯದ ಟ್ರಸ್ಟಿಗಳು.
ಈ ದೇವಾಲಯಕ್ಕೆ ತಲುಪಲು ಸೋನ್ ಪ್ರಯಾಗ್ ನಿಂದ ಸ್ತಳೀಯ ಜೀಪ್ ಗಳನ್ನು ಬಳಸಬಹುದು, ಇಲ್ಲವೆ ನಡೆದೇ ಹೋಗಬಹುದು. ಸೋನ್ ಪ್ರಯಾಗ್ ಗೆ ಹೋಗಲು ರಸ್ತೆ ಮೂಲಕ ದೆಹಲಿ, ಡೆಹ್ರಾಡೂನ್ ಮತ್ತು ರಿಶಿಕೇಶ್ (ಹ್ರುಶಿಕೇಶ್) ನಿಂದ ನೇರ ಬಸ್ ಸಂಪರ‍್ಕ ಇದೆ. ಕ್ಯಾಬ್ ಅನುಕೂಲ ಸಹ ಲಬ್ಯವಿದೆ. ರೈಲಿನಲ್ಲಿ ಹೋಗ ಬಯಸುವವರು ಡೆಹ್ರಾಡೂನ್ ಅತವಾ ರಿಶಿಕೇಶ್ ಗೆ ಬರದೆ ವಿದಿಯಿಲ್ಲ. ಅಲ್ಲಿಂದ ಮುಂದಿನ ಪ್ರಯಾಣಕ್ಕೆ ಬಸ್ ಅತವಾ ಕ್ಯಾಬ್ ಅವಲಂಬಿಸಬೇಕಿದೆ. ವಿಮಾನ ಪ್ರಯಾಣ ಬಯಸುವವರಿಗೆ ಡೆಹ್ರಾಡೂನ್ ಅತಿ ಹತ್ತಿರದ ನಿಲ್ದಾಣ. ಅಲ್ಲಿಗೆ ಬಂದು ಮೇಲಿನಂತೆ ಪ್ರಯಾಣ ಮುಂದುವರೆಸಬಹುದು.
ಇತ್ತೀಚಿನ ಅನಿಸಿಕೆಗಳು