‘ಅನುಕೂಲಿಸುವವರ ಸ್ತಿತಿಯೇ ಅನುಕೂಲಕರವಾಗಿಲ್ಲ’
– ಅಮುಬಾವಜೀವಿ.
ಮನುಶ್ಯನ ಅತ್ಯಂತ ಮಹತ್ವದ ಗಟ್ಟ ಎಂದರೆ ಬಾಲ್ಯ. ಇಲ್ಲಿ ನಲುಗಿದ ಮಗು ಕೆಲವೊಮ್ಮೆ ಅಪ್ರತಿಮ ಸಾದನೆಯನ್ನು ಮಾಡಬಹುದು. ಇಲ್ಲಾ ಎಲ್ಲವೂ ಇದ್ದು ಏನನ್ನು ಸಾದಿಸದೆ ಇರಬಹುದು. ಇದಕ್ಕೆಲ್ಲ ಮೂಲ ಕಾರಣ ಮಗುವಿನ ಬೆಳವಣಿಗೆಯಲ್ಲಿ ಶಿಕ್ಶಣದ ಪ್ರಬಾವ ಮತ್ತು ಅವಶ್ಯಕತೆ. ಪ್ರತಿ ಮಗುವು ಉತ್ತಮ ನಾಗರಿಕನಾಗಲು ಅವನ ಬಾಲ್ಯದ ಶಿಕ್ಶಣ ಅತ್ಯಂತ ಅವಶ್ಯಕವಾಗಿರುತ್ತದೆ. ಈ ಹಂತದಲ್ಲಿ ಶಿಕ್ಶಕರ ಪಾತ್ರ ತುಂಬಾ ಜವಾಬ್ದಾರಿಯುತವಾದುದ್ದಾಗಿದೆ. ಆದರೆ ಅಂತಹ ಜವಾಬ್ದಾರಿಯುತ ಸ್ತಾನ ನಿಬಾಯಿಸಬೇಕಾದ ಶಿಕ್ಶಕರ ಬದುಕು ಗೊಂದಲದ ಗೂಡಾಗಿ, ನಿತ್ಯ ಅವರ ಮಾನಸಿಕ ಸ್ವಾಸ್ತ್ಯವನ್ನು ಹಾಳು ಮಾಡುತ್ತಿದೆ.
ಪ್ರತಿಯೊಬ್ಬ ವ್ಯಕ್ತಿ ಅವನ ಕಾಯಕಕ್ಕೆ ನ್ಯಾಯ ಒದಗಿಸಬೇಕಾದಲ್ಲಿ ಅವನು ಮಾನಸಿಕ ನೆಮ್ಮದಿ ಪಡೆದಿರಬೇಕಾಗುತ್ತದೆ. ಆದರೆ ಈ ಜಗತ್ತನ್ನು ಗ್ನಾನದಿಂದ ಮುನ್ನಡೆಸಬೇಕಾದ ಶಿಕ್ಶಕರು ನಿಜವಾಗಿಯೂ ಇಂದು ನೆಮ್ಮದಿಯಿಂದ ಇದ್ದಾರೆಯೇ? ಈ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ ನಿಜವಾಗಲೂ ಸಂಕಶ್ಟಗಳ ಸರಮಾಲೆ ಅವರನ್ನು ಬಂದಿಸಿ ಹಿಂಡಿ ಹಿಪ್ಪೆ ಮಾಡುತ್ತಿರುವುದು, ಇಂದು ಶಿಕ್ಶಕರು ಎಂತಹ ಶೋಚನೀಯ ಸ್ತಿತಿಯಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ. ಅತ್ಯಂತ ಗೌರವಿತವಾಗಿ ಬದುಕುತ್ತಿದ್ದ ಶಿಕ್ಶಕರ ಬದುಕು ಇಂದು ತೀರಾ ನಿಕ್ರುಶ್ಟವಾದ, ಸದಾ ನಿಶ್ಟೂರಕ್ಕೆ ಗುರಿಯಾಗುವ ಮೂಲಕ ತೀರ ಕೆಳಹಂತದ ಮಾತುಗಳಿಗೆ ಆಹಾರವಾಗಿದ್ದಾರೆ.
ಹಿಂದೆ ಹರ ಮುನಿದರೂ ಗುರು ಕಾಯುವನು ಎಂಬ ಮಾತಿತ್ತು. ಆದರೆ ಇಂದು ಗುರು ತನ್ನನ್ನು ತಾನು ರಕ್ಶಿಸಿಕೊಳ್ಳಲಾಗದ ಇಕಟ್ಟಿನಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಗ್ನಾನಿಯಾಗಿ ತನ್ನ ಗ್ನಾನವನ್ನು ಸಮಾಜದ ಆಸ್ತಿಯನ್ನಾಗಿ ಮಾಡುತ್ತಿದ್ದರು. ಆದರೆ ಇಂದಿನ ಶಿಕ್ಶಕರ ಸ್ತಿತಿ ನಿಜಕ್ಕೂ ಶೋಚನೀಯವಾಗಿದೆ. ಅವರ ಗ್ನಾನ ವರ‍್ಗಾವಣೆಯಾಗುವುದು ಇರಲಿ, ಅದಕ್ಕೆ ತುಕ್ಕು ಹಿಡಿಯುತ್ತಿದೆ. ಕಾರಣ ಅವರಿಗೆ ಇರುವ ಒತ್ತಡಗಳು ಕೆಲಸವನ್ನು ನಿಬಾಯಿಸಲು ಆಗದಶ್ಟು ಅವರನ್ನು ಬಂದಿಸಿ ಬಿಟ್ಟಿವೆ. ಮೊದಲೆಲ್ಲಾ ಶಾಲೆ ಪ್ರಾರಂಬವಾಗುವುದಕ್ಕೆ ಮುನ್ನ ಅವರು ಅದ್ಯಯನ ಶೀಲನಾಗಿ ಸಿದ್ದವಾಗಿ ಬರುವ ಪರಿಪಾಟವಿತ್ತು. ಆದರೆ ಈಗ ತಡರಾತ್ರಿಯವರೆಗೂ ಇಲಾಕೆ ಕೇಳುವ ದಾಕಲೆಗಳನ್ನು ಅಂತರ‍್ಜಾಲದ ಹೊಟ್ಟೆಗೆ ತುಂಬಿಸಬೇಕು. ಮಗುವಿನ ಎಸ್ಟಿಎಸ್ ನಿಂದ ಹಿಡಿದು ಅವನ ವಿದ್ಯಾರ‍್ತಿವೇತನ, fa1 sa1 fa2 sa2, ದೈನಂದಿನ ಹಾಜರಾತಿ, ಬಿಸಿಯೂಟ , ಕ್ಶೀರಬಾಗ್ಯ, ಬ್ಯಾಂಕ್ ಕಾತೆಗೆ ಆದಾರ್ ಜೋಡಣೆ, ವಿದ್ಯಾರ‍್ತಿವೇತನಕ್ಕೆ ಅರ‍್ಜಿ ಸಲ್ಲಿಕೆ, ವರ‍್ಗಾವಣೆ ಪತ್ರ ಹೊರಗೆ ಕಳಿಸುವ ಮತ್ತು ಒಳಗೆ ತೆಗೆದುಕೊಳ್ಳುವ ಪ್ರಕ್ರಿಯೆ, ಶಾಲೆ ಬಿಟ್ಟ ಮಕ್ಕಳ ದಾಕಲೆ, ಅಂಗವಿಕಲ ಮಕ್ಕಳ ದಾಕಲೆ, ಮಾತ್ರೆ ಚುಚ್ಚುಮದ್ದುಗಳನ್ನು ಹಾಕಿಸಿದ ದಾಕಲೆ, ಇತ್ಯಾದಿಗಳನ್ನು ನಿಗದಿತ ಸಮಯದೊಳಗೆ ಇಂದೀಕರಿಸುವ (update), ಹಾಗೂ ದಾಕಲೆಗಳನ್ನು ಸೂಕ್ತ ನಿರ‍್ವಹಣೆ ಮಾಡುವ ಅತಿ ತುರ‍್ತು ಕಾರ‍್ಯಗಳು ಅವನ ಹಸಿವು ನಿದ್ರೆಗಳನ್ನೇ ಮರೆಸಿಬಿಟ್ಟಿವೆ.
ಇಂತಹ ಒತ್ತಡದ ಪರಿಸ್ತಿತಿಯಿಂದಾಗಿ ಅವರ ಆರೋಗ್ಯದಲ್ಲಿ ಏರುಪೇರುಗಳಾಗಿ ಅದರ ಕರ‍್ಚು-ವೆಚ್ಚಗಳಿಗೆ ತಮ್ಮದೇ ದುಡಿಮೆಯ ಬಹುಪಾಲು ವೆಚ್ಚವನ್ನು ಬರಿಸಬೇಕಾಗುತ್ತದೆ . ಇಶ್ಟೇ ಅಲ್ಲದೆ ಸಂಸಾರ ಮಕ್ಕಳು ಸಂಬಂದಿಕರು ಹಬ್ಬ-ಹರಿದಿನಗಳು ಸಂತೋಶಕೂಟಗಳು ಮದುವೆ ಮುಂಜಿ ಇವು ಯಾವುದರಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗದೆ ಬಳಲಿ ಬೆಂಡಾಗಿ ಹೋಗಿದ್ದಾರೆ. ವಿದ್ಯಾರ‍್ತಿಗಳಿಗೆ ಸಂಬಂದಿಸಿದ ಇಲಾಕೆಯ ಎಲ್ಲಾ ಒತ್ತಡವು ಕೆಳ ಹಂತದಲ್ಲಿರುವ ಶಿಕ್ಶಕರ ಮೇಲೆ ಬಿದ್ದು ಅದರಿಂದ ಪಾರಾಗಲು ಆಗದೆ ನಿತ್ಯ ಒದ್ದಾಡಿ ಹೈರಾಣಾಗಿದ್ದಾರೆ.
ಶಿಕ್ಶಕರ ಪ್ರಮುಕವಾದ ಕೆಲಸ ಬೋದನೆ. ವಿದ್ಯಾರ‍್ತಿಗಳಿಗೆ ನಿಗದಿತ ಪಟ್ಯಕ್ರಮವನ್ನು ಅತ್ಯಂತ ಪ್ರಾಮಾಣಿಕವಾಗಿ ಅಶ್ಟೇ ಕಾಳಜಿಯಿಂದ ಮನವರಿಕೆ ಮಾಡಿಸಿ ಪರೀಕ್ಶೆಯೆಂಬ ಹೋರಾಟದಲ್ಲಿ ಅವನು ಜಯಶಾಲಿಯನ್ನಾಗಿಸಿದಾಗಲೇ ಶಿಕ್ಶಕರಿಗೆ ಕೆಲಸದ ತ್ರುಪ್ತಿ. ಆದರೆ ಇಂದು ಶಿಕ್ಶಕರನ್ನು ಮಕ್ಕಳ ಬಳಿಗೆ ಹೋಗಲು ಬಿಡುತ್ತಿಲ್ಲ. ಅವರ ಅನ್ಯ ಕಾರ‍್ಯಗಳು , ಕ್ಶಣಕ್ಶಣಕ್ಕೊಂದು ನಿಯಮ, ಆ ನಿಯಮಗಳಿಗೆ ಪದೇ ಪದೇ ಕೇಳುವ ಮಾಹಿತಿಗಳು, ಮಾಹಿತಿಗಳನ್ನು ಕಲೆ ಹಾಕಲು, ಪೋಶಕರೊಡನೆ ಇಲಾಕೆಯೊಡನೆ ನಿತ್ಯ ಪರದಾಡಬೇಕು. ಇದರ ಜೊತೆಗೆ ಸಬೆಗಳು, ತರಬೇತಿಗಳು, ಪ್ರತಿಬಾ ಕಾರಂಜಿ , ಕಲಿಕೋತ್ಸವ, ಕ್ರೀಡಾಕೂಟ, ಇನ್ಸ್ಪೈರ್ ಅವಾರ‍್ಡ್, ಸಮವಸ್ತ್ರ, ಪಟ್ಯಪುಸ್ತಕ, ಡೈರಿ, ಶೂ ಸಾಕ್ಸ್, ಸೈಕಲ್ ವಿತರಣೆ, ಚುನಾವಣೆ ಕೆಲಸ, ಮತಪಟ್ಟಿ ಪರಿಶ್ಕರಣೆ, ಜನಗಣತಿ, ಗ್ರಾಮದಲ್ಲಿ ನಡೆಯುವ ಇತರೆ ಇಲಾಕೆಗಳ ಪ್ರಗತಿ ಪರಿಶೀಲನೆ, ಎಸ್ಡಿಎಂಸಿ ರಚನೆ, ಪ್ರೇರಣೆ, ಮೀನಾ ತಂಡ , ಸ್ವಚ್ಚ ಬಾರತ ಹೀಗೆ ಲೆಕ್ಕವಿಲ್ಲದಶ್ಟು ಯೋಜನೆಗಳು ಶಿಕ್ಶಕರ ಬೋದನಾ ಕಾರ‍್ಯಕ್ಕೆ ದೊಡ್ಡ ತೊಡಕನ್ನು ಉಂಟುಮಾಡಿವೆ. ಹೀಗೆ ಹತ್ತು ಹಲವಾರು ಯೋಜನೆಗಳಲ್ಲಿ ಕಳೆದುಹೋದ ಶಿಕ್ಶಕರಿಗೆ ಈಗ ಹೊಸ ನಾಮಕರಣವಾಗಿದೆ. ಅದು ಶಿಕ್ಶಕ ಕಲಿಕೆಗೆ “ಅನುಕೂಲಿಸುವವ, ಸುಗಮಕಾರ” ಎಂದೆಲ್ಲ ಕರೆಯಲಾಗುತ್ತದೆ. ಆದರೆ ಸುಗಮಕಾರರ ಹಾದಿಯೇ ಸುಗಮವಾಗಿಲ್ಲ. ಅನುಕೂಲಿಸುವವರ ಸ್ತಿತಿಯೇ ಅನುಕೂಲಕರವಾಗಿಲ್ಲ.* ಆದರೂ ಇಶ್ಟೆಲ್ಲದರ ನಡುವೆಯೂ ಮಕ್ಕಳ ಕಲಿಕೆಗಾಗಿ, ಇಲಾಕೆಯ ಆಶೋತ್ತರಗಳ ಈಡೇರಿಕೆಗಾಗಿ, ಅವಿರತವಾಗಿ ಶ್ರಮಿಸುತ್ತಾ ಬರುತ್ತಿದ್ದಾರೆ.
ಈ ಎಲ್ಲ ಕಾರ‍್ಯವನ್ನು ಅದು ಹೇಗೋ ನಿಬಾಯಿಸಿಕೊಂಡು ಬರುವವರನ್ನು ಈಗ ಮತ್ತೊಂದು ಅತಿ ದೊಡ್ಡ ಸಮಸ್ಯೆ ಅವರನ್ನು ಪೆಡಂಬೂತವಾಗಿ ಕಾಡುತ್ತಿದೆ. ಅದೇನೆಂದರೆ ಸುಮಾರು ವರ‍್ಶಗಳಿಂದ ಕಾರ‍್ಯನಿರ‍್ವಹಿಸುವ ಸ್ತಳದಿಂದ ಮತ್ತೊಂದು ಸ್ತಳಕ್ಕೆ ಹೋಗುವ ಅವರ ಹಂಬಲಕ್ಕೆ ವರ‍್ಗಾವಣೆ ಎಂಬ ಪ್ರಹಸನವು ಪದೇಪದೇ ತಣ್ಣೀರೆರೆಚಿ, ಹಾವೂ ಸಾಯದ ಕೋಲು ಮುರಿಯದ ಅತಂತ್ರ ಸ್ತಿತಿಯಲ್ಲಿ ಸಿಲುಕಿಸಿ ಒದ್ದಾಡಿಸಿ ನಿತ್ರಾಣವಾಗುವಂತೆ ಮಾಡಿದೆ. ವರ‍್ಶಗಟ್ಟಲೆ ಚಾತಕ ಪಕ್ಶಿಯಂತೆ ಕಾದು ಕುಳಿತಿದ್ದರು, ಅವರಿಗೆ ಕೊನೆಗೆ ಸಿಗುವುದು ಹೊಸ ಸ್ತಳಕ್ಕೆ ನಿಯಕ್ತಿಯಲ್ಲ ಬದಲಾಗಿ, ಕೆಲವು ವರ‍್ಶದ ಸೇವೆಯೊಂದಿಗೆ ತಮ್ಮ ಊರು ಮನೆ-ಮಟ ಸಂಬಂದಿಕರು ಹೆತ್ತವರೊಂದಿಗೆ ಸೇರಿಕೊಳ್ಳುವ ಅವಕಾಶವನ್ನೇ ನೀಡದ ನಿಯಮಗಳು ಅವರ ವ್ರುತ್ತಿ ಕ್ಶಮತೆಯನ್ನು ಕ್ಶೀಣಿಸುವಂತೆ ಮಾಡಿದೆ.
ಹಿಂದಿನ ಕಾಲದಲ್ಲಿ ಶಿಕ್ಶಕರೆಂದರೆ ಸಮಾಜದಲ್ಲಿ ಗೌರವ ಬಾವನೆಯಿಂದ ನೋಡುತ್ತಿದ್ದರು. ಸಬೆ-ಸಮಾರಂಬಗಳಲ್ಲಿ ವಿಶೇಶವಾದ ಮನ್ನಣೆಯನ್ನು ನೀಡುತ್ತಿದ್ದರು. ಗುರು ಎಂದರೆ ಅದೇನೋ ವಿಶೇಶವಾದ ಅಬಿಮಾನ ಅಕ್ಕರೆ ಇರುತ್ತಿತ್ತು. ಆದರೆ ಇಂದು ಇಂತಹ ಯಾವುದನ್ನು ಕಾಣದಾಗಿದೆ. ಪ್ರತಿಯೊಂದಕ್ಕೂ ಶಿಕ್ಶಕನನ್ನೇ ಹೊಣೆಗಾರರನ್ನಾಗಿ ಮಾಡಿ ಅವನ ಅಸ್ಮಿತೆಯನ್ನು ಹುಡುಗಿಸಿಬಿಟ್ಟಿದೆ. ಸಾರ‍್ವಜನಿಕರು, ಅದಿಕಾರಿಗಳು, ಪೋಶಕರು ಎಲ್ಲರ ದ್ರುಶ್ಟಿಯಲ್ಲೂ ಶಿಕ್ಶಕ ಅಪರಾದಿ ಸ್ತಾನದಲ್ಲಿದ್ದಾನೆ. ಅವನ ಬದ್ದತೆಗಿಂತಲೂ ಅವನ ಮೇಲಿನ ದ್ವೇಶ, ಅವನ ವ್ರುತ್ತಿಯನ್ನು ಗೌರವಿಸದಂತೆ ಮಾಡಿಬಿಟ್ಟಿದೆ.
ಮೊದಲೆಲ್ಲಾ ಶಿಕ್ಶಕರು ಎಂದರೆ ಎಲ್ಲೆಡೆಯಲ್ಲೂ ಅವನ ಕೆಲಸಗಳು ಸುಸೂತ್ರವಾಗಿ ಸಾಗುತ್ತಿದ್ದವು. ಯಾವುದೇ ಕಚೇರಿಗೆ ಹೋದರು ಮೊದಲ ಆದ್ಯತೆಯಲ್ಲಿ ಆತನನ್ನು ಆದರಣೀಯವಾಗಿ ಕಂಡು ಅಶ್ಟೇ ಗೌರವಿತವಾಗಿ ನಡೆಸಿಕೊಳ್ಳುತ್ತಿದ್ದರು. ಆದರೆ ಇಂದು ಒಬ್ಬ ತರಕಾರಿ ಮಾರುವವನಿಂದ ಹಿಡಿದು ಉನ್ನತ ಅದಿಕಾರಿಗಳವರೆಗೂ ಅವನನ್ನು ನಿಶ್ಕ್ರುಶ್ಟವಾಗಿ ಕಾಣುತ್ತಿದ್ದಾರೆ. ಸಮಾಜದ ಪ್ರತಿಯೊಬ್ಬರು ಅನುಮಾನಿಸುವ, ಅವಮಾನಿಸುವ ಅವಹೇಳನಕಾರಿಯಾಗಿ ಮಾತನಾಡುವ ಮಟ್ಟಕ್ಕೆ ಶಿಕ್ಶಕರ ನೈತಿಕತೆಯನ್ನು ಕುಂದಿಸಿದೆ.
ನಿಜಕ್ಕೂ ಶಿಕ್ಶಕ ವ್ರುತ್ತಿ ಅತ್ಯಂತ ಪಾರದರ‍್ಶಕವಾದ , ಸ್ವ ಹಿತಾಸಕ್ತಿಯನ್ನು ಬಯಸದ, ವಿದ್ಯಾರ‍್ತಿಗಳ ಏಳಿಗೆಯಲ್ಲಿ ತನ್ನ ಕುಶಿಯನ್ನು ಕಾಣುವ ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ದಾರೆಯೆರೆಯುವ ಪವಿತ್ರವಾದುದಾಗಿತ್ತು. ದೇವರಿಗಿಂತಲೂ ಒಂದು ಸ್ತಾನ ಹೆಚ್ಚು ಎಂದು ಬಾವಿಸಿದ್ದ ಗುರುಸ್ತಾನ ಇಂದು ಅಪಾಯ ಮಟ್ಟ ತಲುಪಿದೆ. ಗುರುವನ್ನು ಗೌರವಿಸದ ಯಾವ ಸಮಾಜವೂ ಉಳಿದಿಲ್ಲ. ಗುರು ಕಾಯ್ವನು ಎಂಬ ಸಮಾದಾನವಿತ್ತಾದರೂ ಇಂದು ಯಾರನ್ನು ಯಾರೂ ಕಾಯುವವರಿಲ್ಲ. ಅವರವರ ಕರ‍್ಮವನ್ನು ಅವರೇ ಅನುಬವಿಸಬೇಕು. ಗುರು ಮುನಿದರೆ ಹರನು ಕೂಡ ನಡುಗುತ್ತಿದ್ದ ಅಂದು, ಇಂದು ಗುರು ಮುನಿದು ಸಮಾಜಕ್ಕೆ ಗರ ಬಡಿದರೆ ಅದನ್ನು ಶಮನ ಮಾಡಲು ಮತ್ತದೇ ಗುರು ಬರಬೇಕು. ಸಮಾಜ ಅದಹಪತನಕ್ಕೆ ತಲುಪುವ ಮೊದಲು ಶಿಕ್ಶಕನ ಸ್ತಾನಕ್ಕೆ ನ್ಯಾಯಯುತವಾದ ಗೌರವಾದರ ಅಬಿಮಾನಗಳನ್ನು ನೀಡುತ್ತಾ ನಮ್ಮ ಸಮಾಜದಲ್ಲಿ ಗುರು ಪೂಜನೀಯವಾಗುವ ಕಾಲ ಆದಶ್ಟು ಬೇಗ ಬರಲಿ. ಆಗಲಾದರೂ ಶಿಕ್ಶಕರ ದಿನಾಚರಣೆಗೆ ಒಂದು ಗೌರವ ಸಮರ‍್ಪಿಸಿದಂತಾಗುತ್ತದೆ. ಆ ನಿಟ್ಟಿನಲ್ಲಿ ಪ್ರಗ್ನಾವಂತರು ಚಿಂತಿಸಿ ಸಮಾಜದ ಮನೋಬಾವವನ್ನು ಸರಿಪಡಿಸುವಂತಾಗಲಿ.
ಎಲ್ಲರಿಗೂ ಶಿಕ್ಶಕ ದಿನಾಚರಣೆಯ ಶುಬಾಶಯಗಳು. ಗುರುಕಾರುಣ್ಯ ಎಲ್ಲರ ಮೇಲೂ ನಿರಂತರವಾಗಿರಲಿ.
( ಚಿತ್ರ ಸೆಲೆ: scoopwhoop.com )
ಇತ್ತೀಚಿನ ಅನಿಸಿಕೆಗಳು