ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 3ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ಇಲಿಗಂಜಿ ಮನೆ ಸುಡುವರುಂಟೆ. (1208–111 )

ಇಲಿಗೆ+ಅಂಜಿ; ಇಲಿ=ಒಂದು ಬಗೆಯ ಪ್ರಾಣಿ/ಜನವಸತಿಯಿರುವ ಮನೆಗಳಲ್ಲಿ ಮತ್ತು ಹೊಲಗದ್ದೆತೋಟಗಳ ಬಿಲದಲ್ಲಿ/ಪೊಟರೆಯಲ್ಲಿ ನೆಲೆಸಿರುವ ಪ್ರಾಣಿ; ಅಂಜು=ಹೆದರು; ಇಲಿಗೆ ಅಂಜಿ=ಇಲಿಯಿಂದ ಮನೆಯಲ್ಲಿರುವ ಉಣಿಸು ತಿನಸು/ಬಟ್ಟೆಬರೆ/ವಸ್ತುಗಳು ಹಾಳಾಗುತ್ತವೆ ಎಂದು ಹೆದರಿಕೊಂಡು; ಮನೆ=ವಾಸದ ನೆಲೆ/ಬೀಡು/ನಿವಾಸ; ಸುಡುವರ್+ಉಂಟೆ; ಸುಡು=ಬೆಂಕಿಯಲ್ಲಿ ಬೇಯಿಸುವುದು/ಉರಿಯಲ್ಲಿ ಬೇಯುವಂತೆ ಮಾಡುವುದು; ಉಂಟೆ=ಇದ್ದಾರೆಯೆ/ಇರುವರೆ;

ವ್ಯಕ್ತಿಯ ಜೀವನದ ಆಗುಹೋಗುಗಳಲ್ಲಿ/ಏರಿಳಿತಗಳಲ್ಲಿ ಎಡರು ತೊಡರು ಉಂಟಾದಾಗ/ಎದುರಾದಾಗ, ಅವಕ್ಕೆ ಅಂಜಿ/ಹೆದರಿ/ಹಿಮ್ಮೆಟ್ಟಿ ಹತಾಶೆಯಿಂದ ಬದುಕನ್ನು ಹಾಳುಮಾಡಿಕೊಳ್ಳಬಾರದು. ಗಟ್ಟಿ ಮನಸ್ಸಿನಿಂದ ಮತ್ತು ಕೆಚ್ಚೆದೆಯಿಂದ ಸಮಸ್ಯೆಗಳನ್ನು ಎದುರಿಸಿ, ತೊಡಕುಗಳನ್ನು ಪರಿಹರಿಸಿಕೊಂಡು ಬಾಳುವುದನ್ನು ಕಲಿಯಬೇಕು ಎಂಬ ಇಂಗಿತವನ್ನು ಈ ನುಡಿಗಳು ಸೂಚಿಸುತ್ತಿವೆ.

ಎನ್ನ ಕಾಯಕ್ಕೆ ಕಾಹ ಹೇಳುವರಲ್ಲದೆ
ಮನಕ್ಕೆ ಕಾಹ ಹೇಳುವರಿಲ್ಲವಯ್ಯಾ. (1080–97 )

ಎನ್ನ=ನನ್ನ; ಕಾಯ=ದೇಹ/ಶರೀರ/ಮಯ್; ಕಾಪು>ಕಾಹು; ಕಾಹು=ಕಾಯುವಿಕೆ/ಪಹರೆ/ಎಚ್ಚರದಿಂದ ಕಾಪಾಡಿಕೊಳ್ಳುವುದು; ಕಾಯಕ್ಕೆ ಕಾಹು=ದೇಹಕ್ಕೆ ಯಾವುದೇ ಹಾನಿ ತಟ್ಟದಂತೆ ಎಚ್ಚರಿಕೆಯಿಂದಿರುವುದು/ದೇಹ ಹಾಳಾಗದಂತೆ ಕಾಪಾಡಿಕೊಳ್ಳುವುದು/ಮಯ್ಯಿನ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವುದು; ಹೇಳುವರ್+ಅಲ್ಲದೆ; ಹೇಳು=ತಿಳಿಸು/ನುಡಿ;

ಎನ್ನ ಕಾಯಕ್ಕೆ ಕಾಹ ಹೇಳುವರು=ಯಾವುದೇ ಬಗೆಯ ಕಾಯಿಲೆ ಕಸಾಲೆಗಳಿಗೆ ಇಲ್ಲವೇ ಅವಗಡಗಳಿಗೆ ಸಿಲುಕಿ ಹಾಳಾಗದಂತೆ ನನ್ನ ದೇಹವನ್ನು ಚೆನ್ನಾಗಿ ನೋಡಿಕೊಳ್ಳುವುದು/ಕಾಪಾಡಿಕೊಳ್ಳುವುದು ಎಂಬ ಮಾತುಗಳನ್ನು ನನ್ನವರೆಲ್ಲರೂ ಜೀವನದಲ್ಲಿ ನನಗೆ ಪದೇ ಪದೇ ಹೇಳುತ್ತಿರುತ್ತಾರೆ; ಅಲ್ಲದೆ=ಹಾಗೆ ಹೇಳುವುದನ್ನು ಬಿಟ್ಟು/ಅದನ್ನು ಹೊರತು ಪಡಿಸಿ;

ಮನ=ಮನಸ್ಸು/ಚಿತ್ತ; ಮನಕ್ಕೆ ಕಾಹು=ಮನಸ್ಸು ಹಾಳಾಗದಂತೆ ಕಾಪಾಡಿಕೊಳ್ಳುವುದು/ಮನದಲ್ಲಿ ಮೂಡುವ ಒಳ್ಳೆಯ ಮತ್ತು ಕೆಟ್ಟ ಒಳಮಿಡಿತಗಳಲ್ಲಿ, ಕೆಟ್ಟದ್ದನ್ನು ಹತ್ತಿಕ್ಕಿಕೊಂಡು ಒಳ್ಳೆಯ ನಡೆನುಡಿಗಳಿಂದ ಬಾಳಬೇಕೆಂಬ ಅರಿವು ಮತ್ತು ಎಚ್ಚರವನ್ನು ಹೊಂದಿರುವುದು; ಹೇಳುವರ್+ಇಲ್ಲ+ಅಯ್ಯಾ;

ಮನಕ್ಕೆ ಕಾಹ ಹೇಳುವರಿಲ್ಲವಯ್ಯಾ=ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಬಾಳು/ಒಳ್ಳೆಯ ನಡೆನುಡಿಗಳನ್ನು ರೂಪಿಸಿಕೊಳ್ಳುವ ಅರಿವನ್ನು ಪಡೆದು ಎಚ್ಚರದಿಂದ ಬಾಳು/ಸಹಮಾನವರಿಗೆ ಮತ್ತು ಸಮಾಜಕ್ಕೆ ಹಾನಿಯನ್ನುಂಟು ಮಾಡುವಂತಹ ಕೆಟ್ಟ ನಡೆನುಡಿಗಳನ್ನು ಹೊಂದಿರಬೇಡ ಎಂದು ಹೇಳುವವರು ಇಲ್ಲ;

ಎನ್ನವರೆನಗೊಲಿದು
ಹೊನ್ನಶೂಲವನಿಕ್ಕಿದರಯ್ಯಾ
ಅಹಂಕಾರಪೂರಾಯ ಗಾಯದಲ್ಲಿ
ಆನೆಂತು ಬದುಕುವೆನೆಂತು ಜೀವಿಸುವೆ (388–39)

( ಎನ್ನ್+ಅವರ್+ಎನಗೆ+ಒಲಿದು; ಎನ್ನ್=ನಾನು; ಎನ್ನ=ನನ್ನ; ಎನ್ನವರ್=ನನ್ನವರು/ನನ್ನೊಡನೆ ನಂಟನ್ನು ಹೊಂದಿರುವ ವ್ಯಕ್ತಿಗಳು/ನನ್ನ ಒಡನಾಡಿಗಳು/ನನ್ನ ನೆರೆಹೊರೆಯವರು; ಎನಗೆ=ನನಗೆ; ಒಲಿ=ಮೆಚ್ಚು/ಪ್ರೀತಿಸು/ಒಪ್ಪು; ಒಲಿದು=ಮೆಚ್ಚಿಕೊಂಡು/ಪ್ರೀತಿಸುತ್ತ/ಒಪ್ಪಿಕೊಂಡು;

ಎನ್ನವರೆನಗೊಲಿದು=ನನ್ನೊಡನೆ ನಂಟನ್ನು ಹೊಂದಿರುವ ವ್ಯಕ್ತಿಗಳು ನನ್ನನ್ನು ಬಹಳವಾಗಿ ಮೆಚ್ಚಿಕೊಂಡು/ಒಪ್ಪಿಕೊಂಡು/ಪ್ರೀತಿಸುತ್ತ;

ಹೊನ್ನಶೂಲ+ಅನ್+ಇಕ್ಕಿದರ್+ಅಯ್ಯಾ: ಹೊನ್ನು=ಚಿನ್ನ/ಬಂಗಾರ/ಸ್ವರ‍್ಣ/ಕಸವರ; ಶೂಲ=ಮರಣದಂಡನೆಗೆ ಗುರಿಯಾದವರ ಕೊರಳಿಗೆ ಹಾಕುವ ಉರುಳಿನಿಂದ ಕೂಡಿದ ನೇಣುಗಂಬ. ಈ ನೇಣುಗಂಬವನ್ನು ಮರ ಇಲ್ಲವೇ ಕಬ್ಬಿಣದ ಕಂಬ ಮತ್ತು ತೊಲೆಗಳಿಂದ ಮಾಡಿರುತ್ತಾರೆ; ಹೊನ್ನಶೂಲ=ಚಿನ್ನದ ಹೊರಕವಚದಿಂದ ಕೂಡಿದ ಕಂಬ ಮತ್ತು ತೊಲೆಗಳಿಂದ ಮಾಡಿರುವ ಶೂಲ; ಅನ್=ಅನ್ನು; ಇಕ್ಕು=ಹಾಕು/ಇಡು; ಇಕ್ಕಿದರ್=ಹಾಕಿದರು/ಏರಿಸಿದರು;

ಅಹಂಕಾರ+ಪೂರಾಯ; ಅಹಂಕಾರ=ನಾನೇ ದೊಡ್ಡವನು/ತಿಳಿದವನು ಎಂಬ ಸೊಕ್ಕಿನ ನಡೆನುಡಿ/ಗರ‍್ವ/ಹಮ್ಮು/ಹೆಮ್ಮೆ; ಪೂರಾಯ=ಹೆಚ್ಚಾದ/ಅತಿಯಾದ; ಗಾಯ=ದೇಹಕ್ಕೆ/ಮಯ್ಯಿಗೆ ಪೆಟ್ಟು/ಹೊಡೆತ ಬಿದ್ದಾಗ, ಆ ಜಾಗದಲ್ಲಿ ನೆತ್ತರು/ರಕ್ತ ಹೊರಬರುವುದು ಇಲ್ಲವೇ ಊದಿಕೊಳ್ಳುವುದು;

ಅಹಂಕಾರಪೂರಾಯ ಗಾಯದಲ್ಲಿ=ಈ ನುಡಿಯು ಒಂದು ರೂಪಕವಾಗಿ ಬಳಕೆಯಾಗಿದೆ. ಹೊಗಳಿಕೆಗೆ ಮರುಳಾದ ವ್ಯಕ್ತಿಯ ಮನದಲ್ಲಿ ನಾನೇ ದೊಡ್ಡವನು/ನನ್ನಿಂದಲೇ ಎಲ್ಲವೂ ನಡೆಯುತ್ತಿದೆ ಎಂಬ ಒಳಮಿಡಿತವು ಆವರಿಸಿಕೊಳ್ಳುತ್ತಿದ್ದಂತೆಯೇ, ಆತನ ನಡೆನುಡಿಗಳು ಆಡಂಬರಕ್ಕೆ/ತೋರಿಕೆಗೆ ಒಳಗಾಗುತ್ತವೆ. ದೇಹಕ್ಕೆ ಪೆಟ್ಟು ಬಿದ್ದಾಗ ಉಂಟಾಗುವ ರಣಗಾಯದಂತೆಯೇ, ಅಹಂಕಾರಕ್ಕೆ ಒಳಗಾದ ವ್ಯಕ್ತಿಯ ಒಳ್ಳೆಯ ವ್ಯಕ್ತಿತ್ವವೂ ಊನಗೊಳ್ಳುತ್ತದೆ/ಹಾಳಾಗುತ್ತದೆ ಎಂಬ ತಿರುಳಿನಲ್ಲಿ ಈ ರೂಪಕವು ಬಳಕೆಯಾಗಿದೆ.

ಆನ್+ಎಂತು; ಆನ್=ನಾನು; ಎಂತು=ಯಾವ ರೀತಿಯಲ್ಲಿ/ಯಾವ ಬಗೆಯಲ್ಲಿ; ಬದುಕುವೆನ್+ಎಂತು; ಬದುಕು=ಜೀವನ/ಬಾಳು; ಆನೆಂತು ಬದುಕುವೆನ್=ನಾನು ಹೇಗೆ ಜೀವನವನ್ನು ನಡೆಸಲಿ/ಬಾಳನ್ನು ರೂಪಿಸಿಕೊಳ್ಳಲಿ; ಜೀವಿಸು=ಜೀವನವನ್ನು ನಡೆಸು;

ಆನೆಂತು ಬದುಕುವೆನೆಂತು ಜೀವಿಸುವೆ=ಮನದಲ್ಲಿ ಅಹಂಕಾರದ ಒಳಮಿಡಿತದಿಂದ ಕೂಡಿದವನಾಗಿ, ಸರಳವಾದ ಮತ್ತು ಸಹಜವಾದ ಬದುಕಿನ ನಡೆನುಡಿಗಳನ್ನೇ ಮರೆತಿರುವ ನಾನು ಇನ್ನು ಮುಂದೆ ಹೇಗೆ ತಾನೆ ಒಳ್ಳೆಯ ಜೀವನವನ್ನು ನಡೆಸುವುದಕ್ಕೆ ಆಗುತ್ತದೆ ಎಂಬ ಕಳವಳಕ್ಕೆ/ಆತಂಕಕ್ಕೆ ವ್ಯಕ್ತಿಯು ಒಳಗಾಗಿದ್ದಾನೆ.

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: