ಎಳವೆಯ ನೆನಪುಗಳು: ಆಲೂಬಾತ್ ಮತ್ತು ಮರಕೋತಿ ಆಟ

– ಮಾರಿಸನ್ ಮನೋಹರ್.

ಮರ ಕೋತಿ, ಹಳ್ಳಿ, ನೆನಪುಗಳು

ಬೇಸಿಗೆ ರಜದಲ್ಲಿ ನನ್ನ ಅಜ್ಜಿಯ ಹಳ್ಳಿಯ ದೊಡ್ಡ ಬೇವಿನ ಮರದ ಕೆಳಗೆ ಗೋಲಿ ಆಡುತ್ತಿದ್ದಾಗ ಒಬ್ಬ ನಮಗಿಂತ ದೊಡ್ಡ ಹುಡುಗನ ಆಲೂಬಾತ್ ಪ್ಲಾನು ಸಾಕಾರ ಮಾಡಲು ನಾವು ಪಣತೊಟ್ಟಿದ್ದೆವು. ಈ ಪ್ಲಾನು ಯಾವ ದೊಡ್ಡವರಿಗೂ, ಅವರವರ ತಂದೆ ತಾಯಿಗಳಿಗೆ ಗೊತ್ತಾಗದೆ ಮಾಡಬೇಕಿತ್ತು ‘ಟಾಪ್ ಸಿಕ್ರೆಟ್’! ಇದೇ ಗಳಿಗೆಯಲ್ಲಿ ಆ ದೊಡ್ಡ ಹುಡುಗನಿಗೂ ನನ್ನ ಗೆಳೆಯ ಮೋನುವಿಗೂ ಮಾತಿನ ಚಕಮಕಿಯಾಗಿತ್ತು. ಈ ಆಲೂಬಾತ್ ಮಿಶನ್ ಗೆ ಮೋನು ಒಪ್ಪಲೇ ಇಲ್ಲ. ಆ ದೊಡ್ಡ ಹುಡುಗನಿಗೂ ಸಿಟ್ಟು ಬಂದು ಇಬ್ಬರೂ ಅಂಗಿ ಹಿಡಿದು ಹೊಡೆದಾಡಿಕೊಳ್ಳುವವರಿದ್ದರು. ಹುಡುಗರೆಲ್ಲರೂ ಸೇರಿ ಅವರನ್ನು ದೂರ ತಳ್ಳಿ ಬೇರೆ ಬೇರೆ ಮಾಡಿದ್ದೆವು. ಮೋನು ಮನೆಗೆ ಹೊರಟು ಹೋಗಿದ್ದ. ಈ ಜಗಳವಾಗಿದ್ದರೂ ನಮ್ಮ ಮಿಶನ್ ನಿಲ್ಲುವ ಹಾಗಿರಲಿಲ್ಲ. ಎಲ್ಲರೂ ಮಾವಿನ ತೋಪಿನ ಕೊನೆ ಗಿಡದ ಬಳಿ ಹೋಗಿ ಮೇಲಿನ ಪ್ಲಾನ್ ಮಾಡಿಬಿಟ್ಟೆವು.

ಮಾವಿನ ತೋಪಿನ ಕೊನೆ ಗಿಡದ ಬಳಿ ಆಲೂಬಾತ್ ಮಾಡುವ ಪ್ರೋಗ್ರಾಂ ಗಟ್ಟಿಯಾಯ್ತು. ಆದರೆ ಅದಕ್ಕೆ ಬೇಕಾದ ಸಾಮಾನುಗಳು, ಆಲೂಬಾತ್ ಮಾಡಲು ಬೇಕಾದ ಪದಾರ‍್ತಗಳು ಎಲ್ಲಿಂದ ತರುವುದು? ಹೇಗೆ ತರುವುದು? ಎಲ್ಲರೂ ಅವರವರ ಮನೆಯಿಂದ ಸ್ವಲ್ಪ ಸ್ವಲ್ಪ ಅಕ್ಕಿ ಕಡ್ಡಾಯ ತರಬೇಕು. ಒಬ್ಬರ ಮನೆಯಿಂದ ಮೂರು – ನಾಲ್ಕು ಗ್ಲಾಸಿನಶ್ಟು ಅಕ್ಕಿ ತಂದರೆ ಆ ಹುಡುಗನ ಮನೆಯವರಿಗೆ ಡೌಟ್ ಬಂದು ಎಲ್ಲ ಹಂಚಿಕೆಯು (plan) ‘ಹರಂಚಿಕೆ’ (ಹಾಳಾಗುತ್ತೆ, ಒಡೆದುಹೋಗುತ್ತೆ ) ಆಗಿ ಬಿಡುತ್ತದೆ ಅಂತ ತಿಳಿಹೇಳಲಾಯಿತು. ಒಬ್ಬ ‘ಒಳ್ಳೆಣ್ಣೆ’ ತರಬೇಕು, ಒಬ್ಬ ಅರಿಶಿಣ, ಸಾಸಿವೆ, ಕರಿಬೇವು ತರಬೇಕು. ಒಬ್ಬ ಪಾತ್ರೆ ಮುಚ್ಚಳ ಅನ್ನದ ಕೈ ತರಬೇಕು. ಅಲ್ಲಿಯವರೆಗೆ ಒಬ್ಬ ಒಣ ಕಟ್ಟಿಗೆಗಳನ್ನು ಕೂಡಿಸಿ, ಮೂರು ಕಲ್ಲಿಟ್ಟು ಒಲೆ ಹಾಕಬೇಕು… ಇಂತೆಲ್ಲ ಹಂಚಿಕೆ ಹಾಕಿ ಎಲ್ಲರೂ ದಿಕ್ಕಿಗೊಬ್ಬರು ಹೊರಟು ಹೋದೆವು.

ನಾನು ಅಜ್ಜಿ ತಾತನ ಕಣ್ಣು ತಪ್ಪಿಸಿ, ನನ್ನ ಪ್ಯಾಂಟಿನ ಜೇಬಲ್ಲಿ ಅಕ್ಕಿ ತುಂಬಿಕೊಂಡೆ. ಏನೂ ಆಗಿಲ್ಲಪ್ಪ ಅನ್ನೋ ತರಹ ತೆಗೆದುಕೊಂಡು ಮಾವಿನ ತೋಪಿನ ಕಡೆ ಬಂದೆ. ನನ್ನ ಗುಂಡಿಗೆ ಬಡಿತ ಜೋರಾಗಿತ್ತು. ಎಲ್ಲ ಹುಡುಗರು ನನ್ನ ಹಾಗೆಯೇ ಅಲ್ಲಿ ಇಲ್ಲಿ ಬಚ್ಚಿಟ್ಟುಕೊಂಡು ಅಕ್ಕಿ ತಂದಿದ್ದರು. ಈ ಮಿಶನ್ನಿನ ಮಾಸ್ಟರ ಪ್ಲಾನ್ ಮಾಡಿದ ದೊಡ್ಡ ಹುಡುಗ ಅವನ ಮನೆಯಿಂದ ಬೋಗುಣಿ ಮುಚ್ಚಳ ಅನ್ನದ ಕೈ ತೆಗೆದುಕೊಂಡು ಬಂದಿದ್ದ. ಅದು ಹೇಗೆ ತಂದ ಅಂತ ನಮಗೆ ಗೊತ್ತಾಗಲಿಲ್ಲ ಬಹುಶಹ ಮಿಸ್ಟರ ಇಂಡಿಯಾ ವಾಚ್ ಕಟ್ಟಿಕೊಂಡಿದ್ದ ಅನ್ಸುತ್ತೆ! ಎಲ್ಲರ ಮನೆ ಅಕ್ಕಿಯೂ ಬೇರೆ ಬೇರೆ ತರಹವೇ ಆಗಿದ್ದವು.  ಆದರೆ ಎಣ್ಣೆಗೆ ಚಿಂತೆ ಬಂತು ಕೂತಿತ್ತು. ನಮ್ಮ ಹಂಚಿಕೆ ಪ್ರಕಾರ ಎಣ್ಣೆ ತರುವ ವಿದಾನವೇ ನಮ್ಮನ್ನು ಹಿರಿಯರಿಗೆ ಹಿಡಿದು ಕೊಡುಬಹುದಾಗಿತ್ತು. ಅದಕ್ಕೆ ಯಾರ ಮನೆಯಿಂದಲೂ ಎಣ್ಣೆ ಬರಲಿಲ್ಲ. ಎಣ್ಣೆ ತರಬೇಕಾದರೆ ಏನಾದರೂ ಬಟ್ಟಲು, ಸಣ್ಣ ಡಬ್ಬಿ ಇಲ್ಲವೇ ಪ್ಲಾಸ್ಟಿಕ್ ಕಂಟೇನರ್ ಬೇಕಾಗಿತ್ತು. ಹಾಗೆ ತರುವುದನ್ನು ನೋಡಿದರೆ ದೊಡ್ಡವರು ಕಿವಿ ಹಿಂಡಿ ನಮ್ಮ ಎಣ್ಣೆಯೇ ತೆಗೆದುಬಿಡುತ್ತಿದ್ದರು‌.

ಹೀಗೆ ಪೇಚಾಟಕ್ಕೆ ಸಿಕ್ಕಿಕೊಂಡ ನಾವು ಈಗ ಹಂಚಿಕೆಯ ಅರ‍್ದ ಹಾದಿಗೆ ಬಂದು ಬಿಟ್ಟಿದ್ದೆವು ಹಿಂದಕ್ಕೆ ಹೋಗುವ ಮಾತೇ ಇರಲಿಲ್ಲ. ಆಗ ಎಲ್ಲರ ಬಳಿ ಎಶ್ಟು ಹಣ ಇದೆ ಅಂತ ಲೆಕ್ಕ ಹಾಕಿದೆವು. ಎಂಟು ರೂಪಾಯಿ ಚಿಲ್ಲರೆ ಸಿಕ್ಕವು. ಅದನ್ನೆ ತೆಗೆದುಕೊಂಡು ಕಿರಾಣಿ ಅಂಗಡಿಗೆ ಹೋಗಿ “ಎಂಟು ರೂಪಾಯಿ ಸೈಎಣ್ಣೆ (ಸಿಹಿ ಎಣ್ಣೆ) ಕೊಡಿ” ಅಂತ ಅಂಗಡಿಯವನಿಗೆ ಕೇಳಿದೆವು. ಅವನು ನಮ್ಮನ್ನು ಮೇಲಿಂದ ಕೆಳಗೆ ನೋಡಿ ಹನಿ ಹನಿಗಳನ್ನು ಲೆಕ್ಕಹಾಕಿ ಒಂದು ಚಟಾಕಿಗಿಂತ (50ಗ್ರಾಂ) ಸ್ವಲ್ಪ ಹೆಚ್ಚಿಗೆ ಬರುವ ಹಾಗೆ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಕೊಟ್ಟ. ಅದನ್ನು ಒಬ್ಬ ದಾರದಿಂದ ಬಾಯನ್ನು ಕಟ್ಟಿ ತನ್ನ ಅಂಗಿಯ ಒಳಗೆ ಹಾಕಿ ಬಚ್ಚಿಟ್ಟುಕೊಂಡ. ಎಲ್ಲರೂ ಸೇಪಾಗಿ ಮಾವಿನ ತೋಪನ್ನು ಸೇರಿದವು. ಈಗ ನಮ್ಮ ಮುಂದೆ ಎಲ್ಲ ಬಂದು ಸೇರಿದ್ದವು, ಅಕ್ಕಿ, ಎಣ್ಣೆ, ಪಾತ್ರೆ, ಸೌಟು, ಕಟ್ಟಿಗೆ, ಮುಚ್ಚಳ ಹೀಗೆ. ಆದರೆ ನಾವು ಆಲೂಗಡ್ಡೆಯನ್ನೇ ತಂದಿರಲಿಲ್ಲ! ಅದನ್ನು ತರಲು ಹಣಕಾಸಿನ ಮುಗ್ಗಟ್ಟು, ಸಾಮಾಜಿಕ ಮತ್ತು ಕೌಟುಂಬಿಕ ಅಡ್ಡಿಗಳು ಮುಂದೆ ಬಂದು ಅದನ್ನು ಕೈಬಿಟ್ಟೆವು. ಆಲೂಗಡ್ಡೆ ಇಲ್ಲದೆಯೇ ಆಲೂಬಾತ್ ಮಾಡುವ ಟರಾವು ತೆಗೆದುಕೊಂಡೆವು!

ಒಲೆ ಕೆಳಗೆ ಒಣಗಿದ ಸಿಪ್ಪೆ, ಸ್ವಲ್ಪ ಸಣ್ಣ ಕಟ್ಟಿಗೆ, ಪೇಪರ್ ಹಾಕಿ ಒಲೆ ಶುರು ಮಾಡಿದೆವು. ಬೆಂಕಿ ಹೊತ್ತಿಕೊಂಡಾಗ ಅದರ ಮೇಲೆ ದೊಡ್ಡ ಕಟ್ಟಿಗೆಗಳನ್ನು ಇಟ್ಟು ಉರಿಸಿದೆವು. ನಮ್ಮಲ್ಲಿ ಯಾರಿಗೂ ಅಡುಗೆ ಮಾಡಲು ಬರುತ್ತಿರಲಿಲ್ಲ. ಆ ದೊಡ್ಡ ಹುಡುಗನೇ ಅಡುಗೆಯ ಪಾರುಪತ್ಯ ವಹಿಸಿದ, ನಾವು ಹೆಲ್ಪರ್ ಗಳಾದೆವು. ಮಾವಿನ ತೋಪಿನ ಬಳಿಯೇ ಸ್ವಲ್ಪ ದೂರದಲ್ಲಿ ಕಬ್ಬು ಬೆಳೆಯಲಾಗಿತ್ತು. ಅಲ್ಲಿ ಇದ್ದ ಪಂಪ್ ನಿಂದ ಪ್ಲಾಸ್ಟಿಕ್ ಕೊಡದಲ್ಲಿ ನೀರು ತಂದೆವು. ಇರುವುದು ಒಂದೇ ಬೋಗುಣಿ, ಅಕ್ಕಿ ತೊಳೆವುದು ಹೇಗೆ ? ಅಕ್ಕಿಯನ್ನು ತೊಳೆದು ಮುಚ್ಚಳದ ಮೇಲೆ ಇಟ್ಟ ಬೋಗುಣಿಯನ್ನು ಒಲೆಯ ಮೇಲೆ ಇಟ್ಟು ಒಗ್ಗರಣೆ ಕೊಟ್ಟು ತನಗೆ ಸರಿಕಂಡ ಹಾಗೆ ಕಣ್ಣಳತೆಯಿಂದ ನೀರು ಹಾಕಿ ಎಸರಿಗೆ ಇಟ್ಟ. ನೀರು ಕುದಿಯಲು ಆರಂಬಿಸಿದಾಗ ಮುಚ್ಚಳದ ಮೇಲಿದ್ದ ಅಕ್ಕಿಯನ್ನು ಹಾಕಿದ.

ಅನ್ನ ಕುದಿಯಲು ಆರಂಬಿಸಿದಾಗ ನಮಗೆಲ್ಲ ಕುಶಿಯೋ ಕುಶಿ. ನಾವು ಮಾಡಿದ ಈ ಸಾಹಸಕ್ಕೆ ನಮಗೆ ಆಗ ಯಾರಾದರೂ ಒಂದು ಪದಕ ಕೊಟ್ಟರೆ ತುಂಬಾ ಸರಿಯಾಗಿ ಇರುತ್ತಿತ್ತು. ಆಲೂಗಡ್ಡೆಯೇ ಇಲ್ಲದ ಆಲೂಬಾತ್ ಈಗ ರೆಡಿಯಾಗಿತ್ತು. ನಡುಹೊತ್ತು ಆಗಿದ್ದರಿಂದ ಎಲ್ಲ ಹುಡುಗರು ಹಸಿದಿದ್ದರು. ಮುಚ್ಚಳ ತೆಗೆದು ಅನ್ನ ಆಗಿದೆ ಅಂತ ಹೇಳಿದ. ಆದರೆ ಉಣ್ಣಲು ಪ್ಲೇಟು?! ಇಂತಹ ಸಣ್ಣ ಗೋಜಲಿಗೆ ನಮ್ಮಲ್ಲಿ ಪರಿಹಾರ ಇತ್ತು, ಬಾದಾಮಿ ಗಿಡದ ಎಲೆಗಳು! ಎಲ್ಲರೂ ಎಲ್ಲ ಕಡೆ ಚದುರಿ ಹೋಗಿ ಬಾದಾಮಿ ಗಿಡ ಹುಡುಕಿದೆವು, ಸಿಕ್ಕಿತು. ಅದರಿಂದ ಎಲ್ಲರೂ ಎರಡೆರಡು ಎಲೆಗಳನ್ನು ಕಿತ್ತು ಕೊಂಡು ಬಂದೆವು. ಸಾಲಾಗಿ ಅಲ್ಲಿಯೇ ಕೂತುಕೊಂಡು ಬಾದಾಮಿ ಎಲೆಗಳನ್ನು ಹರಡಿಸಿಕೊಂಡು, ಅದರ ಮೇಲೆ ‘ಆಲೂಬಾತ್’ ಹಾಕಿಕೊಂಡು ತಿಂದೆವು. ಹೋಟೆಲಿನಲ್ಲಿ ಸಿಗುವ ಆಲೂಬಾತಿನ ಹಾಗೆ ಬಿಡಿ ಬಿಡಿಯಾಗಿರದೆ ಇದ್ದು ಮುದ್ದೆಯಾಗಿತ್ತು ಆದರೂ ಹೊರಗೆ ಪಿಕ್ ನಿಕ್ ತರಹ ಇದ್ದದರಿಂದ ನಮಗೆ ಅದರ ಪರಿವೆ ಇರಲಿಲ್ಲ. ಎಲ್ಲರೂ ಊಟ ಮಾಡಿ ಈಗ ಆಟ ಆಡಲು ಮುಂದಾದೆವು.

ಮರಕೋತಿ ಆಟವೇ ನಮಗೆ ಸರಿಯಾದದ್ದು ಅಂತ ನಮಗೆ ಗೊತ್ತಾಗಿತ್ತು. ಅದನ್ನೇ ಆಡೋಣ ಅಂತ ತೀರ‍್ಮಾನಿಸಿದೆವು. ನಾವು ಒಟ್ಟು ಎಂಟು ಮಂದಿ ಇದ್ದೆವು ಅದರಲ್ಲಿ ಸಾಗರ್ ಕೂಡ ಒಬ್ಬ. ಸತೀಶನ ಮೇಲೆ ಆಟ ಬಂದದರಿಂದ ಅವನು ಕೆಳಗೆ ನಿಲ್ಲಬೇಕಾಯ್ತು. ಸಾಗರ್ ಅವನ ಜೊತೆ ಕೆಳಗೆ ನಿಂತು ಕೋಲನ್ನು ದೂರಕ್ಕೆ ಬಿಸಾಡಿದ. ಅದನ್ನು ತರಲು ಸತೀಶ ಜೋರಾಗಿ ಓಡಿದ. ಅಶ್ಟರಲ್ಲಿ ಸಾಗರ್ ಮರವನ್ನು ಏರಿದ್ದ. ಸತೀಶ ಕೋಲನ್ನು ತಂದು ಮರದ ಕೆಳಗೆ ಮಣ್ಣಿನಲ್ಲಿ ಎಳೆದಿದ್ದ ದುಂಡಿನಲ್ಲಿ ಕೋಲನ್ನು ಇಟ್ಟ. ಮರದ ಕೆಳಗೆ ನಿಂತು ಮೇಲೆ ನೋಡಿದ, ನಮ್ಮ ಉತ್ಸಾಹ ಎಲ್ಲೆ ಮೀರಿತ್ತು. ಕೋತಿಗಳು ಕೂಡ ಅಶ್ಟು ಚೀರುತ್ತಾ ಕೂಗುತ್ತಾ ಸದ್ದು ಮಾಡುತ್ತಾ ಇರಲಿಲ್ಲ, ಆದರೆ ನಾವು ಮಾಡುತ್ತಿದ್ದೆವು. ಸತೀಶ ನಮ್ಮನ್ನು ಹಿಡಿಯಲು ಮರವನ್ನು ಏರತೊಡಗಿದ.

ಎಲ್ಲಕ್ಕಿಂತ ಕೆಳಗಿನ ಮತ್ತು ಚಿಕ್ಕ ಕೊಂಬೆಯನ್ನು ಮರಿಕೋತಿಯ ಹಾಗೆ ಹಿಡಿದು ಕೂತಿದ್ದ ಸಾಗರನಿಗೆ ಏನಾಯಿತೋ ಏನೋ ಅವನು ಅಲ್ಲಿಂದ ಕೆಳಗೆ ಬಿದ್ದು ಬಿಟ್ಟ. ಆಗ ಅವನ ಬಾಯಿಂದ “ಯಪ್ರೋ.. ಯವ್ರೋ…” ಎಂಬ ಗೋಳಾಟ ಬಂತು, ನಿಲ್ಲಲೇ ಇಲ್ಲ. ನಮ್ಮ ಆಟ ನಿಂತುಬಿಟ್ಟಿತು. ನಾವೆಲ್ಲರೂ ನಮ್ಮ ಆಟ ನಿಲ್ಲಿಸಿ ಕೆಳಗೆ ಜಿಗಿದೆವು, ಅವನ ಸುತ್ತಲೂ ನೆರೆದೆವು. ಕೋತಿಗಳು ಕೂಡ ತಮ್ಮಲ್ಲಿನ ಯಾವ ಕೋತಿಗಾದರೂ ಗಾಯವಾದರೆ ಹೀಗೆಯೇ ಸುತ್ತುವರೆಯುತ್ತವೆ, ಇರಲಿ. ಸಾಗರನ “ಯಪ್ರೋ… ಯವ್ರೋ…” ತಡೆಯಿಲ್ಲದೆ ಮುಂದುವರೆದು ಇನ್ನೂ ಹೆಚ್ಚಾಗುತ್ತಲೇ ಹೋಯಿತು. ಈಗ ನಮಗೆ ನಿಜವಾಗಿ ಹೆದರಿಕೆಯಾಗಲು ಆರಂಬವಾಯ್ತು. ಮರಕೋತಿ ಆಡುವಾಗ ಮರದಿಂದ ಬೀಳುವುದು ಸಾಮಾನ್ಯವಾಗಿತ್ತು. ಆದರೆ ಸಾಗರ ತನ್ನ ಬಲಗೈಯನ್ನು ಹಿಡಿದುಕೊಂಡು ವಿಚಿತ್ರವಾಗಿ ನರಳುತ್ತಾ ಅರಚುತ್ತಿದ್ದ. ನಾವು ಅವನನ್ನು ಹಿಡಿದು ಎತ್ತಿದೆವು. ಅವನ ಬಲಗೈ ಕಡೆ ನೋಡಿದಾಗ ಅದು ಎಂದಿನಂತೆ ನೇರವಾಗಿ ಇರದೆ ನಡುವೆ ತಗ್ಗಾಗಿತ್ತು. ಅವನ ಕೈ ಮುರಿದಿತ್ತು. ಅವನು ಅಳಲು ಆರಂಬಿಸಿದ, ಕಣ್ಣೀರು ಹರಿಯತೊಡಗಿತ್ತು.

ಅವನ ಕಿರುಚಾಟ ನಿಲ್ಲುವ ಯಾವ ಲಕ್ಶಣಗಳೂ ಕಾಣಿಸಲಿಲ್ಲ. ನಮ್ಮ ಪಿಕ್ ನಿಕ್ ಈ ರೀತಿ ಕೊನೆಗಾಣುತ್ತದೆ ಅಂತ ನಾವು ಎಣಿಸಿರಲಿಲ್ಲ. ಅವನನ್ನು ಕರೆದುಕೊಂಡು ಅವನ ಮನೆಗೆ ಹೋಗುವಾಗ ಸುತ್ತಮುತ್ತಲಿನ ಮಂದಿ ಬಂದು ಕೇಳತೊಡಗಿದರು. ನಾವು “ಅವನು ಮರದಿಂದ ಬಿದ್ದು ಬಿಟ್ಟ” ಅಂತ ಅಶ್ಟೇ ಹೇಳಿದೆವು. ಮಂದಿ “ಕೋತಿಗಳಿಗೆ ಬುದ್ದಿ ಹೇಳಬಹುದು. ಆದರೆ ಈ ಹುಡುಗರಿಗೆ ಹೇಳಲಿಕ್ಕೆ ಆಗದು” ಅಂತ ಅಂದರು. ಅವನ ಮನೆ ತಲುಪಿ ಅವನು ಅಶ್ಟರವರೆಗೆ ಕರೆಯುತ್ತಿದ್ದ ಅವನ ತಂದೆ ತಾಯಿಗಳಿಗೆ ಒಪ್ಪಿಸಿದೆವು. ಅವರಿಗೂ “ಅವನು ಆಡುವಾಗ ಮರದಿಂದ ಬಿದ್ದುಬಿಟ್ಟ” ಅಂತ ಹೇಳಿದೆವು. ಅವರು ತಮ್ಮ ಬೈಗುಳ ಶುರು ಮಾಡಿದರು. ನಾವು ನಮ್ಮ ನಮ್ಮ ಮನೆಗಳ ಕಡೆಗೆ ಓಡಿಹೋದೆವು. ಮರುದಿನ ಸಾಗರ ಬಂದ. ಅವನ ಕೈಗೆ ಕಟ್ಟಿಗೆ ಕಡ್ಡಿಗಳನ್ನು ಸಾಲಾಗಿ ಸುತ್ತಿ ಕಟ್ಟಲಾಗಿತ್ತು. ಅದರ ಮೇಲೆ ಬ್ಯಾಂಡೇಜ್. ಕೈಗೆ ಆದಾರವಾಗಿ ಬ್ಯಾಂಡೇಜಿನ ಕೊರಳ ಸರ ಅವನ ಕುತ್ತಿಗೆ ಸುತ್ತಲೂ ಕಟ್ಟಲಾಗಿತ್ತು. ಕೈಗೆ ಒಂದು ನವಿಲುಗರಿಯನ್ನೂ ಕಟ್ಟಲಾಗಿತ್ತು.

ರಜೆ ಮುಗಿದ ಬಳಿಕ ಅಜ್ಜಿ ಊರಿನಿಂದ ನಮ್ಮ ಊರಿಗೆ ನಾನೂ ವಾಪಸಾದ ಕಾರಣ, ಆಮೇಲೆ ಸಾಗರನಿಗೆ ಏನಾಯ್ತು ಎಂಬುದು ಇಲ್ಲೀವರೆಗೂ ಗೊತ್ತಿಲ್ಲ. ಎಳವೆಯ ದಿನಗಳನ್ನು, ಆ ಗಟನೆಗಳನ್ನು ನೆನೆಸಿಕೊಂಡರೆ ಈಗ ನಗು ಬರುತ್ತದೆ ಹಾಗೇ ನಲಿವನ್ನೂ ತರುತ್ತದೆ. ಆ ದಿನಗಳು ಮತ್ತೆ ಬರಬಾರದೇ ಎಂದೂ ಕೂಡ ಅನಿಸುತ್ತದೆ 🙂

(ಚಿತ್ರ ಸೆಲೆ: staticflickr.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: