ಆಪ್ರಿಕಾದ ನವೋದಯ ಸ್ಮಾರಕ
ಅಮೇರಿಕಾದಲ್ಲಿನ ಸ್ಟಾಚೂ ಆಪ್ ಲಿಬರ‍್ಟಿ 305 ಅಡಿ ಒಂದು ಇಂಚು ಎತ್ತರವಿದೆ. ಅದರಲ್ಲಿ ಸರಿಸುಮಾರು ಅರ‍್ದದಶ್ಟು ಎತ್ತರವಿರುವುದು, ಅಂದರೆ 160 ಅಡಿಗಳಶ್ಟು (ಅಂದಾಜು 50 ಮೀಟರ‍್) ಆಪ್ರಿಕಾದ ನವೋದಯ ಸ್ಮಾರಕದ ಕಂಚಿನ ಪ್ರತಿಮೆ. ಇದು ಲೋಕಾರ‍್ಪಣೆಯಾಗಿದ್ದು 2010ರಲ್ಲಿ. ಸ್ಟಾಲಿನ್ನನ ಕ್ರೂರತನದ ವಿರುದ್ದ ಹೋರಾಡಿದ ಆಪ್ರಿಕನ್ ಸಮುದಾಯದ ಸವಿ ನೆನಪಿಗಾಗಿ ಇದರ ರಚನೆಯಾಯಿತಾದರೂ, ಪ್ರಸಿದ್ದಿಗೆ ಬಂದಿದ್ದು ಇದರ ನಿರ‍್ಮಾಣದಲ್ಲಿ ಆದ ಬಯಂಕರ ಬ್ರಶ್ಟಾಚಾರ ಮತ್ತು ಅಪವಿತ್ರ ಮೈತ್ರಿಯಿಂದ.
ಈ ಅಪೂರ‍್ವ ಸ್ಮಾರಕದಲ್ಲಿ ಪುರುಶ, ಮಹಿಳೆ ಮತ್ತು ಮಗು ಇದೆ. ಇದು ಸೋವಿಯತ್ ವ್ಯಂಗ್ಯ ಚಿತ್ರವನ್ನು ಹೋಲುತ್ತಿದ್ದರೂ ಈ ಸ್ಮಾರಕ ಆಪ್ರಿಕಾದಲ್ಲಿರುವ ಕಾರಣ, ಆಪ್ರಿಕನ್ನರು ಇದರಲ್ಲಿರುವ ಚಿತ್ರಗಳನ್ನು ಆಪ್ರಿಕನ್ನರೆಂದೇ ಬಾವಿಸಿದ್ದಾರೆ. ಆಪ್ರಿಕಾದಲ್ಲಿನ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಕೂಡ ಇದಕ್ಕಿದೆ. ಈ ಅದ್ಬುತ ಪ್ರತಿಮೆಯ ಪರಿಕಲ್ಪನೆ, ಆಗಿನ ಸೆನೆಗಲ್ ಅದ್ಯಕ್ಶ ಅಬ್ದುಲಾಯ್ ವೇಡ್‍ರವರದ್ದು. ಈತನಿಗೆ ಎಂಬತ್ತರ ಪ್ರಾಯವಾದರೂ ಈತನ ಅದ್ಯಕ್ಶೀಯ ಅವದಿಯಲ್ಲಿನ ಬ್ರಶ್ಟಾಚಾರ ಮತ್ತು ಸ್ವಜನ ಪಕ್ಶಪಾತದಿಂದಾಗಿ ಎಲ್ಲೆ ಮೀರಿದ ಆರೋಪಕ್ಕೆ ಗುರಿಯಾಗಿದ್ದ. ಅದಕ್ಕೆ ಪುಟವಿಟ್ಟಂತೆ ಈ ಸ್ಮಾರಕದ ನಿರ‍್ಮಾಣದಲ್ಲಾದ ಬ್ರಶ್ಟಾಚಾರ ಸಹ ಈತನ ಮುಡಿಗೇರಿತ್ತು.
ಸೆನೆಗಲ್ ದೇಶದ ರಾಜದಾನಿ ‘ಡಕಾರ್’ನ ಅಟ್ಲಾಂಟಿಕ್ ಸಾಗರದ ದಿಗಂತದಲ್ಲಿರುವ ಆಪ್ರಿಕಾದ ನವೋದಯ ಪ್ರತಿಮೆಗೆ ಆದ ಅಂದಾಜು ವೆಚ್ಚ 27 ಮಿಲಿಯನ್ ಡಾಲರ್‍ಗಳು. ಮೂರು ಸೆಂಟಿಮೀಟರ್ ದಪ್ಪದ ಕಂಚಿನ ಹಾಳೆಯಿಂದ ಈ ಪ್ರತಿಮೆಯನ್ನು ನಿರ‍್ಮಿಸಲಾಗಿದೆ. ದೇಶದ ಆಗಿನ ಆರ‍್ತಿಕ ಪರಿಸ್ತಿತಿ ಹಾಗೂ ಇದರ ನಿರ‍್ಮಾಣದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಆಪ್ರಿಕನ್ನರನ್ನು ತೊಡಗಿಸಿಕೊಂಡ ಕಾರಣ ಪ್ರತಿಮೆಯ ವಿರೋದಿಗಳು ಟೀಕಾಸ್ತ್ರಗಳ ಮೂಲಕ ಹರಿಹಾಯ್ದರು. ಇದೆಲ್ಲಾ ಸುಳ್ಳು ಆರೋಪ ಎಂದು ಸಮಜಾಯಿಶಿ ನೀಡಿದರೂ ಸಹ, ನಿರ‍್ಮಾಣದಲ್ಲಿ ವಿದೇಶಿಗಳ ಕೈವಾಡ ಹೆಚ್ಚೇ ಇತ್ತು. ಈ ಪ್ರತಿಮೆಯ ಮೂಲ ವಿನ್ಯಾಸಗಾರ ರೊಮೇನಿಯಾದ ವಾಸ್ತುಶಿಲ್ಪಿ. ನಂತರ ನಿರ‍್ಮಾಣದ ಹೊಣೆ ಹೊತ್ತಿದ್ದು ಉತ್ತರ ಕೊರಿಯಾದ ನಿರ‍್ಮಾಣ ಸಂಸ್ತೆ.
ಪ್ರತಿಮೆಯ ವಿನ್ಯಾಸ ಸಹ ಸಾಕಶ್ಟು ಟೀಕೆಗಳಿಗೆ ಗುರಿಯಾಯಿತು. ಪುರುಶ ತನ್ನ ಎಡ ಬುಜದ ಮೇಲೆ ಮಗುವನ್ನಿಟ್ಟುಕೊಂಡು, ಬಲಗೈನಿಂದ ಮಹಿಳೆಯ ಸೊಂಟವನ್ನು ಬಳಸಿ ಹಿಡಿದು ಮುನ್ನುಗ್ಗುತ್ತಿರುವಂತೆ ಈ ಸ್ಮಾರಕವನ್ನು ರಚಿಸಲಾಗಿದೆ. ಆತನ ಕೈಯಲ್ಲಿರುವ ಮಗು ಸಹ ಪೂರ‍್ಣ ಬೆತ್ತಲೆಯಾಗಿದೆ. ಇದು ಸಂಪ್ರದಾಯ ವಿರೋದಿ ಎನ್ನುವುದು ಅವರ ಅಹವಾಲು. ಇದೆಲ್ಲಾ ಸರ‍್ಕಾರದ ಕಿವುಡು ಕಿವಿಯ ಮೇಲೆ ಬಿದ್ದಂತಾಯಿತು ಅಶ್ಟೆ. ಪ್ರತಿಬಟನಾಕಾರರಿಗೆ ಅದ್ಯಕ್ಶರು ನೀಡಿರುವ ಉತ್ತರ ಹೀಗಿದೆ: “ಪ್ರತಿಮೆಯು ಶತಮಾನಗಳ ಅಸಹಿಶ್ಣುತೆ ಮತ್ತು ವರ‍್ಣಬೇದ ನೀತಿಯಿಂದ ಆಪ್ರಿಕನ್ ವಿಮೋಚನೆಯ ವಿಜಯವನ್ನು ಸಂಕೇತಿಸುತ್ತದೆ ಮತ್ತು ಇದು ಪ್ರವಾಸಿ ತಾಣವಾಗಿ ಸ್ಟಾಚೂ ಆಪ್ ಲಿಬರ‍್ಟಿ ಹಾಗೂ ಪ್ಯಾರಿಸ್’ನ ಐಪೆಲ್ ಟವರ್‍ಗೆ ಪ್ರತಿಸ್ಪರ‍್ದಿಯಾಗಲಿದೆ”.
ಇಶ್ಟೆಲ್ಲಾ ಅಸಂಕ್ಯಾತ ಪ್ರತಿಬಟನೆಗಳು ಹಾಗೂ ಅನೇಕ ದೂರುಗಳು ಇದ್ದಾಗ್ಯೂ, ‘ಕ್ಯಾರೇ’ ಅನ್ನದ ಸರ‍್ಕಾರ ಹಟಕ್ಕೆ ಬಿದ್ದವರಂತೆ 2010ರಲ್ಲಿ ಆಪ್ರಿಕಾದ ನವೋದಯ ಸ್ಮಾರಕವನ್ನು ಪೂರ‍್ಣಗೊಳಿಸಿದರು. ಇದು ಆಪ್ರಿಕಾದಲ್ಲಿ ಅತ್ಯಂತ ದೊಡ್ಡ ಪ್ರತಿಮೆ. ಇದರಿಂದ ದೇಶದ ಪ್ರವಾಸೋದ್ಯಮ ಬೆಳೆದು ಆರ‍್ತಿಕ ಪರಿಸ್ತಿತಿ ಸಾಕಶ್ಟು ಸುದಾರಿಸಲಿದೆ ಎನ್ನುವುದು ನಿಜವಾದರೂ ಗುರಿ ಮುಟ್ಟಲು ಕಾದು ನೋಡಬೇಕಿದೆ. 2010ರಲ್ಲಿ ಇದರ ಉದ್ಗಾಟನಾ ಸಮಾರಂಬ, ಸೆನೆಗಲ್ ದೇಶ ಪ್ರಾನ್ಸಿನಿಂದ ಬಿಡುಗಡೆ ಹೊಂದಿದ ಐವತ್ತನೇ ಸ್ವಾತಂತ್ರೋತ್ಸವದ ಶುಬ ವರ‍್ಶದಲ್ಲಾಗಿದೆ. ಉದ್ಗಾಟನೆಯ ದಿನ ಸಾಕಶ್ಟು ಪ್ರತಿಬಟನೆಗಳು ನಡೆದವು.
ಈಜಿಪ್ಟಿನ ಪಿರಮಿಡ್ ಗಳನ್ನು ಹೊರತು ಪಡಿಸಿದರೆ ಇದೇ ಅತ್ಯಂತ ಎತ್ತರದ ಬವ್ಯ ಸ್ಮಾರಕ. ವಿಶ್ವದಲ್ಲಿನ ಎಲ್ಲಾ ಪ್ರತಿಮೆಗಳೂ ಗಿನ್ನೆಸ್ ಬುಕ್‍ನಲ್ಲಿ ಸ್ತಾನ ಪಡೆಯಲು ಸಾದ್ಯವಿಲ್ಲ. ಅಂತಹುದರಲ್ಲಿ ಕಸದ ರಾಶಿಗಳ, ಸೂರಿಲ್ಲದ ಅರ‍್ದ ಕಟ್ಟಿದ ಮನೆಗಳ ನಡುವಿನ ಬೆಟ್ಟದ ಮೇಲೆ ವಿರಾಜಮಾನವಾಗಿರುವ ಈ ಆಪ್ರಿಕನ್ ನವೋದಯ ಸ್ಮಾರಕಕ್ಕೆ ಈ ಗರಿ ಸಂದಿದೆ. ಸೆನೆಗಲ್ ದೇಶದ ಪ್ರಮುಕ ಆಕರ‍್ಶಣೆ ಈ ಪ್ರತಿಮೆ.
( ಮಾಹಿತಿ ಮತ್ತು ಚಿತ್ರ ಸೆಲೆ : atlasobscura.com, npr.org, natureconservancyblog.blogspot.com )
ಇತ್ತೀಚಿನ ಅನಿಸಿಕೆಗಳು