ನ್ಯಾನೋ ಕತೆಗಳು

– ವೆಂಕಟೇಶ ಚಾಗಿ.

ಮರ

(1) ಅಪ್ಪನ ಚಿಂತೆ

ಆ ತಂದೆಗೆ ತನ್ನ ಮಕ್ಕಳು ತನ್ನ ಜೊತೆಯಲ್ಲಿ ಇಲ್ಲವಲ್ಲ ಎಂಬ ಕೊರಗಿತ್ತು. ಪ್ರೀತಿಯಿಂದ ಬೆಳೆಸಿದ ಮೇಲೆ ರೆಕ್ಕೆ ಬಲಿತ ಹಕ್ಕಿಗಳಂತೆ ಹಾರಿಹೋದ ಮಕ್ಕಳ ಬಗ್ಗೆ ಸಿಟ್ಟಿರದೇ ಸ್ವಲ್ಪ ಚಿಂತೆಯಲ್ಲಿ ಮುಳುಗಿದ್ದ. ಅದೇ ಚಿಂತೆಯಲ್ಲಿ ಅಪ್ಪ ಕೊರಗಿ ಸತ್ತಾಗ ಯಮಲೋಕದಲ್ಲಿ ಯಮ ಅಪ್ಪನ ಚಿಂತೆಗೆ ಕಾರಣವನ್ನು ಕೇಳಿದ. ಅಪ್ಪ ತನ್ನ ಮಕ್ಕಳು ತನ್ನ ಜೊತೆಯಲ್ಲಿ ಬದುಕಲಿಲ್ಲವಲ್ಲ ಎಂದು ಕೊರಗಿದ. ಆಗ ಯಮ “ಮೂರ‍್ಕ, ನೀನು ನಿನ್ನ ಮನೆಯ ಮುಂದೆ ಬೆಳೆಸಿದ ಗಿಡಗಳ ನೋಡು . ಅವುಗಳನ್ನು ನೀನು ಮಕ್ಕಳಂತೆ ಬೆಳೆಸಿದೆ. ನೀನು ಈಗ ಅವುಗಳನ್ನು ಬಿಟ್ಟು ಬಂದಿರುವೆ. ಅವು ನಿನ್ನ ಮಕ್ಕಳಲ್ಲವೇ? ನಿನಗಾದ ನೋವು ಅವುಗಳಿಗೂ ಆಗುವುದಿಲ್ಲವೇ?” ಎಂದಾಗ ಅಪ್ಪನ ಎಂದು ಚಿಂತೆ ದೂರಾಯಿತು.

(2) ಮೆರವಣಿಗೆ

ವಯಸ್ಸಾಯಿತು, ಅಪ್ಪ ತನ್ನ ವ್ರುತ್ತಿಯಿಂದ ನಿವ್ರುತ್ತಿಯಾಗಬೇಕಾಯಿತು. ಸದಾ ಕೆಲಸಗಳ ಜೊತೆಯಲ್ಲಿದ್ದ ಜೀವಕ್ಕೆ ನಿವ್ರುತ್ತಿಯಾದ ಮೇಲೆ ಏನೋ ಕಳೆದುಕೊಂಡಂತೆ ಬಾಸವಾಗುತ್ತಿತ್ತು. ಸುಮ್ಮನೆ ಕಾಲಹರಣ ಮಾಡುವ ಮನಸ್ಸು ಅಪ್ಪನಿಗಿಲ್ಲ. ಇರುವಶ್ಟು ದಿನಗಳ ಕಾಲ ಜಗತ್ತಿಗೆ ಬೆಳಕಾಗುವಂತಹ ಕೆಲಸ ಮಾಡಬೇಕೆನಿಸಿತು. ತನ್ನಂತಹ ನಿವ್ರುತ್ತರ ಸಂಗ ಕಟ್ಟಿಕೊಂಡು ರಸ್ತೆಯ ಅಕ್ಕ ಪಕ್ಕದಲ್ಲಿ, ಕಾಲಿ ಜಾಗಗಳಲ್ಲಿ, ಮರಗಿಡಗಳನ್ನು ಬೆಳೆಸುವ ಕೆಲಸ ಹಮ್ಮಿಕೊಂಡನು. ಆತ ಸತ್ತು ಮೆರವಣಿಗೆ ಹೊರಟಾಗ ಅಪ್ಪ ಬೆಳೆಸಿದ ಮರಗಳು ನೆರಳು ಹಾಸಿದವು. ತಂಪಾದ ಗಾಳಿ ಬೀಸಿದವು. ಆ ಮರಗಳು ಕಂಬನಿಯನ್ನು ಇಬ್ಬನಿಯಲ್ಲಿ ಹರಿಸಿದವು.

(3) ಮಹಾದಾಸೆ

ಆ ಮರದ ಟೊಂಗೆಗಳಲ್ಲಿ ಹಕ್ಕಿ ಪಕ್ಶಿಗಳು ಗೂಡು ಕಟ್ಟಿಕೊಂಡು ಸುಕವಾಗಿದ್ದವು. ಗೂಡುಗಳಲ್ಲಿ ಹಕ್ಕಿಗಳು ಹಾಯಾಗಿ ಮಲಗಿದ್ದವು. ಮರದ ಕಟ್ಟೆಯ ಮೇಲೆ ಹೊಲಗದ್ದೆಗಳಲ್ಲಿ ರೈತರು ದುಡಿದು ಬಂದು ಸುಕವಾಗಿ ನಿದ್ರೆ ಮಾಡುತ್ತಿದ್ದರು. ಆ ದಿನ ಅಪ್ಪ ಆ ಮರವನ್ನು ಉಳಿಸದಿದ್ದರೆ ಮಗ ಅದನ್ನು ಕಡಿದು ಮಾರಾಟ ಮಾಡುತ್ತಿದ್ದ. ಮರವನ್ನು ಉಳಿಸಿ ಬೆಳೆಸುವುದು ಅಪ್ಪನ ಮಹದಾಸೆಯಾಗಿತ್ತು. ಆ ಮರವನ್ನು ತುಂಬಾ ಪ್ರೀತಿಸುತ್ತದ್ದ ಅಪ್ಪ ಆ ಮರದ ಮಡಿಲಲ್ಲಿ ಈಗಲೂ ಚಿರ ನಿದ್ರೆಯಲ್ಲಿ ಇದ್ದಾನೆ.

(4) ಕೊಡುಗೆ

ಆತ ಅಪ್ಪನಾದಾಗ ತನ್ನ ಹೊಲದ ಬದುವಿನಲ್ಲಿ ಒಂದು ಗಿಡ ನೆಟ್ಟು ತನ್ನ ಪ್ರೀತಿಯ ಮಗನನ್ನು ಪ್ರೀತಿಸುವಂತೆ ಅದನ್ನು ಪೋಶಿಸತೊಡಗಿದ. ಮಗನ ಪ್ರತಿ ಜನ್ಮದಿನದಂದು ಒಂದು ಮರವನ್ನು ನೆಟ್ಟು ಬೆಳೆಸತೊಡಗಿದ. ಅಪ್ಪನ ಪೋಶಣೆಯಲ್ಲಿ ಈಗ ಮಗ ದೊಡ್ಡವನಾಗಿದ್ದಾನೆ. ಮರಗಳೂ ಬೆಳೆದು ಸಾಕಶ್ಟು ಪಲ ನೀಡುತ್ತಿವೆ. ಆದರೆ ಈಗ ಅಪ್ಪ ಇಲ್ಲ . ಮಗನ ಜೀವನ ನಿರ‍್ವಹಣೆಯ ಕೆಲಸವನ್ನು ಈಗ ಮರಗಳು ಮಾಡುತ್ತಿವೆ.

(5) ನಂಟು

ಆಲದ ಮರಕ್ಕೂ ಮಣ್ಣಿಗೂ ಅದೇನೋ ನಂಟು. ಆಲದಮರ ಬಿಳಲುಗಳು ಮಣ್ಣಿನ ಕಡೆಗೆ ದಾವಿಸಿ ಮಣ್ಣನ್ನು ಅಪ್ಪಿಕೊಂಡಿದ್ದವು. ಮಾನವನಿಗೆ ಆಲದ ಮರವನ್ನು ಕಡಿಯುವ ಆಸೆಯಾಯಿತು. ಆ ಜಾಗದಲ್ಲಿ ಮನೆಯನ್ನು ಕಟ್ಟಿದ. ಆಲದ ಮರವಿದ್ದ ಆ ಜಾಗದಲ್ಲಿ ಆಲದಮರ ಇಲ್ಲದಿದ್ದರೂ ಮಣ್ಣು ತನ್ನಲ್ಲಿ ಅಡಗಿಸಿಕೊಂಡಿದ್ದ ಬಿಳಲುಗಳಿಗೆ ಚೈತನ್ಯ ತುಂಬಿತು. ಈಗ ಆ ಮನೆಯ ಸುತ್ತಲೂ ಆಲದಮರಗಳೇ ತುಂಬಿವೆ.

(ಚಿತ್ರ ಸೆಲೆ: pexels)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಚೆಂದದ ಅಭಿವ್ಯಕ್ತಿ. ಸೊಗಸಾದ ನ್ಯಾನೋ ಕಥೆಗಳು

K.V Shashidhara ಗೆ ಅನಿಸಿಕೆ ನೀಡಿ Cancel reply

Enable Notifications OK No thanks