ನಮ್ಮ ನೊಗವನ್ನು ನಾವೇ ಹೊರಬೇಕು

– ಪ್ರಕಾಶ್‌ ಮಲೆಬೆಟ್ಟು.

ಟ್ರೆಕ್ಕಿಂಗ್‌, trek
ಅಮ್ಮನ ಒಡಲಿನ ಬೆಚ್ಚನೆಯ ರಕ್ಶಣೆಯ ಪರಿದಿಯಲ್ಲಿರುವ ಮಗು ಬೂಮಿಗೆ ಬಂದೊಡನೆ ಅಳುವುದಕ್ಕೆ ಶುರು ಹಚ್ಚುತ್ತೆ . ಇಶ್ಟು ದಿನ ಸಂಪೂರ‍್ಣವಾಗಿ ಅಮ್ಮನನ್ನು ಅವಲಂಬಿಸಿದ್ದ, ಅಮ್ಮನ ಜೊತೆಯನ್ನು ಎಂದು ಬಿಟ್ಟಿರದ ಮಗುವಿನ ಒಂಟಿತನ ಇಲ್ಲಿಂದ ಆರಂಬವಾಗುತ್ತದೆ. ಮಗುವಿನಿಂದ ಆರಂಬವಾಗಿ ಜೀವನ ಮುಗಿಸುವ ತನಕ ಅನೇಕರು ನಮಗೆ ಜೊತೆ ನೀಡಿದರೂ ಯಾರು ಕೂಡ ಶಾಶ್ವತವಾಗಿ ಕಡೆಯತನಕ ನಮ್ಮೊಂದಿಗೆ ಇರುತ್ತಾರೆ ಎಂದು ಹೇಳಲು ಬರುವುದಿಲ್ಲ. ಜೀವನದಲ್ಲಿ ಪರಾವಲಂಬನೆ ಕಮ್ಮಿಯಾದಶ್ಟು ಬದುಕನ್ನು ಎದುರಿಸುವ ದೈರ‍್ಯ ನಮ್ಮಲ್ಲಿ ಹೆಚ್ಚುತ್ತದೆ. ಮಕ್ಕಳನ್ನು ಪರಾವಲಂಬಿಯನ್ನಾಗಿಸದೆ ಬೆಳೆಸುವ ಕರ‍್ತವ್ಯ ಪೋಶಕರದ್ದು. ಮಕ್ಕಳಿಗೆ ಅನೇಕ ವಿಶಯಗಳ ಬಗ್ಗೆ ಬಾಲ್ಯದಿಂದಲೇ ತಿಳುವಳಿಕೆ ಕೊಡುವುದು ಉತ್ತಮ. ನಮ್ಮ ಮಕ್ಕಳು ಎಂದು ಅತಿ ಮುದ್ದು ಮಾಡಿ ಮುಂದೆ ಬದುಕನ್ನು ಎದುರಿಸಲಾಗದೆ ಸೋತು ಹೋಗುವಂತೆ ಅವರನ್ನು ಬೆಳೆಸುವುದರಲ್ಲಿ ಯಾವ ಅರ‍್ತವೂ ಇಲ್ಲ. ಬದುಕಿನ ದಿನ ನಿತ್ಯದ ಸವಾಲುಗಳನ್ನು ಎದುರಿಸಲು ಅವರಿಗೆ ಸಹಾಯ ಮಾಡಬೇಕು ಆದರೆ ಅವರ ಸವಾಲನ್ನು ನಾವೇ ಎದುರಿಸುವುದಲ್ಲ. ಉದಾಹರಣೆ ಅನೇಕ ಕೊಡಬಹುದು. ಮನೆಯಲ್ಲೇ ತೆಗೆದುಕೊಳ್ಳಿ , ಅಡುಗೆ ಕೆಲಸ, ಮನೆ ಸ್ವಚ್ಚಮಾಡುವುದು ಹೀಗೆ ಅನೇಕ ಕೆಲಸಕಾರ‍್ಯಗಳನ್ನು ಪಾಲಕರು ತಮ್ಮ ಮಕ್ಕಳಿಗೆ ಕಲಿಸುವುದಿಲ್ಲ. ನೀನು ಓದಿಕೋ ನಾವು ಇದನೆಲ್ಲ ಮಾಡುತ್ತೇವೆ ಎನ್ನುತ್ತಾರೆ. ಆದರೆ ಕಂಡಿತವಾಗಿಯೂ ಇದು ತಪ್ಪು. ಎಶ್ಟೋ ಜನರಿಗೆ ಒಂದು ಟೀ ಮಾಡಿ ಕುಡಿಯಲು ಕೂಡ ಗೊತ್ತಿರುವುದಿಲ್ಲ. ಮುಂದೆ ಓದಲೋ , ಇಲ್ಲವೇ ಕೆಲಸಕ್ಕೋ ಹೊರಗೆ ಹೋಗುವಾಗ ಹೊಟೇಲನ್ನೂ ಇಲ್ಲವೇ ಹಾಸ್ಟೆಲಿನ ಅಡುಗೆ ಬಟ್ಟರನ್ನು ಇವರು ಅವಲಂಬಿಸಬೇಕಾಗುತ್ತದೆ. ಕೆಲವು ತಂದೆ ತಾಯಿಗಳು ಮಕ್ಕಳಿಗೆ ತಮ್ಮ ಊಟದ ತಟ್ಟೆಯನ್ನು ಕೂಡ ತೊಳೆಯಲು ಕಲಿಸುವುದಿಲ್ಲ. ಇಂತಹ ಮಕ್ಕಳು ಮುಂದೆ ಬದುಕನ್ನು ಹೇಗೆ ಎದುರಿಸಬಲ್ಲರು? ಅಶ್ಟಕ್ಕೂ ನಿಮ್ಮ ಮಕ್ಕಳ ಕೆಲಸವನ್ನು ಎಲ್ಲಿಯ ತನಕ ನೀವು ಮಾಡಬಲ್ಲಿರಾ? ಕೈ ಕಾಲು ಗಟ್ಟಿಯಾಗಿರುವಶ್ಟು ಕಾಲ ಮಾತ್ರ ಅಲ್ಲವೇ. ಹೀಗೆ ಮಕ್ಕಳನ್ನು ಸುಕದ ಸುಪ್ಪತ್ತಿಗೆಯಲ್ಲಿ ಬೆಳೆಸಿದರೆ ಮುಂದೆ ಅದೇ ಮಕ್ಕಳು ನಿಮ್ಮನ್ನು ಕಾಲ ಕಸಕ್ಕಿಂತ ಕೀಳು ಮಾಡಿಬಿಡುತ್ತಾರೆ. ಎಶ್ಟೋ ಶ್ರೀಮಂತ ಕುಟುಂಬಗಳನ್ನು ನಾವು ನೋಡುತ್ತೇವೆ, ಅಪ್ಪ ಕಶ್ಟ ಪಟ್ಟು ಗುಡ್ಡೆ ಹಾಕಿದ್ದನ್ನು ಜವಾಬ್ದಾರಿ ಇಲ್ಲದೇ ಬೆಳೆದ ಮಕ್ಕಳು ಹಾಳುಗೆಡವುದನ್ನು. ಅದಕ್ಕೆ ಹಿರಿಯರು ಹೇಳಿರುವುದು ಮಕ್ಕಳಿಗೆ ಅಸ್ತಿಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು. ಇಶ್ಟಕ್ಕೂ ಅವರ ನೊಗವನ್ನು ಶಾಶ್ವತವಾಗಿ ಹೊರಲು ನಿಮ್ಮಿಂದ ಸಾದ್ಯವೇ?

ಮಕ್ಕಳಿಗೆ ಬದುಕಿನ ಬಗ್ಗೆ ಬಾಲ್ಯದಲ್ಲಿಯೇ ಸ್ಪಶ್ಟವಾದ ಅರಿವನ್ನು ಮೂಡಿಸಬೇಕು. ಕಡಿಮೆ ಪಕ್ಶ ತಮ್ಮ ಸ್ವಂತದ ಕೆಲವನ್ನು, ಇತರರ ಬಳಿ ಮಾಡಿಸಿಕೊಳ್ಳದೆ ತಾವೇ ಮಾಡಿಕೊಳ್ಳಲು ಅವರಿಗೆ ಕಲಿಸಿಕೊಡಬೇಕು. ಅಪರೂಪಕ್ಕಾದರೂ ಮನೆಯ ದಿನಸಿ ವಸ್ತುಗಳನ್ನು ಮಾರುಕಟ್ಟೆಗೆ ಹೋಗಿ ಕರೀದಿ ಮಾಡಿ ತರಲು ಹೇಳಬೇಕು. ಇಂತಹ ಕೆಲಸಗಳಿಂದ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವ್ಯಾವಹಾರಿಕ ಜಗತ್ತಿನ ಅರಿವು ಮೂಡುತ್ತದೆ.

ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವ ಮಕ್ಕಳಿಗೆ ಪ್ರಬುದ್ದತೆ ಕೂಡ ಬೇಗನೆ ಬರುತ್ತದೆ. ಸಣ್ಣವರಿರುವಾಗಲೇ ಅನಿರೀಕ್ಶಿತ ವಿಶಯಗಳನ್ನು ಹೇಗೆ ನಿಬಾಯಿಸುವುದು ಎಂದು ಕಲಿಯುವ ಮಕ್ಕಳು ಮುಂದೆ ಜೀವನದಲ್ಲಿ ಯಾವುದೇ ಸನ್ನಿವೇಶ ಬರಲಿ ಅದನ್ನು ಸುಲಬವಾಗಿ ನಿಬಾಯಿಸಬಲ್ಲರು. ಬದುಕಿನಲ್ಲಿ ನಮಗೆ ಅನೇಕ ಕಾಲಗಟ್ಟಗಳಲ್ಲಿ ತುಂಬಾ ವಿಬಿನ್ನ ಬಗೆಯ ಸವಾಲುಗಳು ಎದುರಾಗುತ್ತವೆ. ಆ ಸವಾಲುಗಳನ್ನು ಎದಿರಿಸುವಲ್ಲಿ ಕಂಡಿತವಾಗಲೂ ನಮ್ಮ ಪಾಲಕರು, ಸ್ನೇಹಿತರು, ಕುಟುಂಬವರ‍್ಗದವರು, ಇಲ್ಲವೇ ನಮ್ಮ ಸಂಗಾತಿ ಕಂಡಿತವಾಗಿಯೂ ಸಹಾಯ ಮಾಡುತ್ತಾರೆ. ಆದರೆ ಬೇರೆಯವರು ಸಹಾಯಮಾಡುತಾರೆ ಎಂದು ನಾವು ಸುಮ್ಮನೆ ಕುಳಿತುಕೊಂಡ್ರೆ ಅದು ನಮ್ಮ ದೌರ‍್ಬಲ್ಯದ ಸಂಕೇತ. ಕೆಲವೊಮ್ಮೆ ಸನ್ನಿವೇಶಗಳು ಹೇಗಿರುತ್ತವೆಯೆಂದ್ರೆ ನಿಮ್ಮ ಕಣ್ಣೀರನ್ನು ಒರೆಸಲು ಕೂಡ ಯಾರು ಇರೋದಿಲ್ಲ. ಆದರೆ ಬಾಲ್ಯದಿಂದಲೇ ನಮ್ಮ ನೊಗವನ್ನು ನಾವೇ ಹೊರಲು ಕಲಿತಿದ್ದಿದ್ರೆ ಯಾವುದೇ ಸನ್ನಿವೇಶ ಬರಲಿ, ನಮ್ಮೊಡನೆ ಯಾರು ಇರಲಿ ಇಲ್ಲ ಬಿಡಲಿ ನಾವು ಕಂಡಿತವಾಗಿಯೂ ಸವಾಲನ್ನು ಎದುರಿಸಬಲ್ಲೆವು. ಯಾರು ಜೊತೆಗಿದ್ರು ನಮ್ಮ ಮನಸು ಯಾವತ್ತಿಗೂ ಒಂಟಿ. ಒಂಟಿ ಮನಸು ತುಂಬಾ ಅಪಾಯಕಾರಿ. ಆ ಒಂಟಿ ಮನಸು ಗಟ್ಟಿಯಾಗಬೇಕಿದ್ರೆ ಅವಲಂಬನೆ ಕಮ್ಮಿಯಾಗಬೇಕು.

ಮೊನ್ನೆ ಮಗಳು ಯಾವುದಕ್ಕೋ ಅಳ್ತಾ ಇದ್ದಳು. ಅವಳಿಗೆ ಸಮಾದಾನ ಪಡಿಸುವಾಗ ಹೇಳಿದೆ ಮಗಳೇ ಜೀವನದಲ್ಲಿ ಯಾವತ್ತೂ ಬಲವಾಗಿರಬೇಕು ನೀನು. ನಿನ್ನ ಕಣ್ಣೀರನ್ನು ಒರೆಸಲು ನಾವು ಯಾವಾಗಲು ಇರುತ್ತೇವೆ ಎಂದು ಹೇಳಲು ಸಾದ್ಯವಿಲ್ಲ. ನನ್ನೇ ನೋಡು ನಿನ್ನ ಕಣ್ಣೀರನ್ನು ನಾನು ಒರೆಸುತಿದ್ದೀನಿ. ಆದರೆ ನನ್ನ ಕಣ್ಣೀರನ್ನು ಒರೆಸಲು ನನ್ನ ಅಪ್ಪ ನನ್ನ ಬಳಿ ಇಲ್ಲ! ಹೌದು ನಮ್ಮ ಕಣ್ಣೀರನ್ನು ನಾವೇ ಒರೆಸಿಕೊಳ್ಳಬೇಕು. ಆದರೆ ಕಣ್ಣೀರೇ ಬರಬಾರದು ಎಂದಿದ್ದರೆ ಸ್ವಾವಲಂಬಿಯಾಗಿ ನಾವು ಬಲಿಶ್ಟರಾಗಬೇಕು.
ಕಶ್ಟವನ್ನು ಎದುರಿಸುವ ಚಾತಿಯನ್ನು ಮಕ್ಕಳಲ್ಲಿ ಬೆಳೆಸುವುದು ಪೋಶಕರ ಹೊಣೆ. ಹಾಗಾಗಿ ಮಕ್ಕಳನ್ನು ಪ್ರೀತಿಸಿ ಆದರೆ ಎಲ್ಲವನ್ನು ಸುಲಬದಲ್ಲಿ ಕೈಗೆಟುಕುವಂತೆ ಮಾಡಬೇಡಿ. ಮಕ್ಕಳ ಆಸೆಗಳನ್ನು ಪೂರೈಸುವಾಗಲೂ ಶರತ್ತುಗಳಿರಲಿ. ಮಕ್ಕಳೊಂದಿಗೆ ಸ್ನೇಹಿತರಾಗಿರಬೇಕೆಂಬ ಆದುನಿಕ ಜಗತ್ತಿನ ನಿಯಮ ಪಾಲಿಸಲು ಹೋಗಿ ಎಡವಿ ಬೀಳಬಾರದು. ಮಕ್ಕಳಿಗೆ ಮುಂದೆ ಬದುಕನ್ನು ಎದುರಿಸುವಲ್ಲಿ ನಮ್ಮ ಸ್ನೇಹಕ್ಕಿಂತ ಹೆಚ್ಚಾಗಿ ನಾವು ಅವರನ್ನು ರೂಪಿಸುವಲ್ಲಿ ಜಾರಿಗೆ ತಂದ ನೀತಿ ನಿಯಮಗಳು ಮಹತ್ವದ ಪಾತ್ರ ವಹಿಸುತ್ತದೆವೆಂಬುವುದನ್ನು ಮರೆಯುವುದು ಬೇಡ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sunil says:

    Tumba olleya lekhana sir. olleya sandeshavide illi. Aadare jana idanna anusarisalu , tamma jeevanadalli aLavadisikondare uttama.

    Abhinandanegalu haagu dhanyavaadagalu.

ಅನಿಸಿಕೆ ಬರೆಯಿರಿ: