ಮಕ್ಕಳ ಕತೆ : ಏಳು ಮಕ್ಕಳು ಮತ್ತು ಮೆಣಸಿನಕಾಯಿ ಬಜ್ಜಿ

– ಮಾರಿಸನ್ ಮನೋಹರ್.

ಒಂದು ಊರಿನಲ್ಲಿ ಗಂಡ ಹೆಂಡತಿ ಇರುತ್ತಿದ್ದರು. ಅವರಿಗೆ ಒಟ್ಟು ಏಳು ಮಂದಿ ಮಕ್ಕಳು. ಮನೆಗೆ ಗಂಡ ಆಗಾಗ ಹಣ್ಣು ಹಂಪಲು, ಕರಿದ ತಿಂಡಿಗಳನ್ನೂ ತರುತ್ತಾ ಇದ್ದ. ಆದರೆ ಏಳೂ ಮಕ್ಕಳು ಗಬಕ್ಕನೆ ಎಲ್ಲ ಹಣ್ಣು ತಿಂಡಿಗಳ ಮೇಲೆ ಮುಗಿಬಿದ್ದು, ನನಗೆ ಬೇಕು, ನನಗೆ ಕೊಡು, ನಿನಗೆ ಕೊಡಲ್ಲ ಅಂತ ಜಗಳ ಆಡುತ್ತಾ ತಿಂದು ಬಿಡುತ್ತಿದ್ದವು. ಆ ಗಂಡ ಹೆಂಡತಿಗೆ ಪಾಪ ಒಂದು ತುಣುಕು ತಿಂಡಿಯೂ ಸಿಗುತ್ತಿರಲಿಲ್ಲ. ನಮ್ಮ ಮಕ್ಕಳೇ ತಿಂದವಲ್ಲಾ ಅಂತ ಇಬ್ಬರೂ ಗಂಡ ಹೆಂಡತಿ ಮನಸಿಗೆ ಸಮಾದಾನ ಹೇಳಿಕೊಳ್ಳುತ್ತಿದ್ದರು.

ಒಂದು ದಿನ ಪಕ್ಕದ ಮನೆಯ ಒಬ್ಬ ಹೆಣ್ಣುಮಗಳು ಮನೆಯಲ್ಲಿ ಚಕ್ಕುಲಿ ಮಾಡಿದ್ದಳು. ಕರಿದ ತಿಂಡಿ ಎಲ್ಲ ತಾನೇ ತಿಂದರೆ ದಿಟ್ಟಿಯಾದೀತೆಂದು ಚಕ್ಕುಲಿಗಳಲ್ಲಿ ಕೆಲವನ್ನು ಬಾಳೆ ಎಲೆಯಲ್ಲಿ ಸುತ್ತಿಕೊಂಡು, ಇವರ ಮನೆಗೆ ತಂದು ಕೊಟ್ಟಳು. ಆ ಹೆಂಗಸು ತನ್ನ ಮನೆಗೆ ಹೋಗುವದನ್ನೇ ಮಕ್ಕಳು ಕಾಯುತ್ತಾ ಕೂತಿದ್ದವು. ಅವಳು ಹೋದೊಡನೆ ತೋಳಗಳು ಬೇಟೆಯ ಮೇಲೆ ಎರಗುವ ಹಾಗೆ ಮಕ್ಕಳು ಚಕ್ಕುಲಿಗಳ ಮೇಲೆ ಎರಗಿದರು. ಅಲ್ಲಿಗೆ ಚಕ್ಕುಲಿಗಳ ಕತೆ ಮುಗಿದು ಹೋಯಿತು. ಎಲ್ಲ ಚಕ್ಕುಲಿಗಳಲ್ಲಿ ಒಂದನ್ನೂ ಬಿಡದೆ ಕರಂಕರಂ ಅಂತ ಮಕ್ಕಳು ತಿಂದು ಬಿಟ್ಟರು. ಜಳಕ ಮಾಡಲು ಹೋಗಿದ್ದ ತಾಯಿ,  ಜಳಕ ಮುಗಿಸಿ ಬಂದು ಬಾಳೆ ಎಲೆಯ ಕಡೆಯ ಕಡೆ ನೋಡಿದಾಗ ಅದು ಬರಿದಾಗಿತ್ತು. ತಾಯಿಗೆ ಬೇಜಾರಾಯಿತು. ತನ್ನ ಮಕ್ಕಳಿಗೆ ಎಶ್ಟು ಮಾಡಿ ಹಾಕಿದರೂ ತ್ರುಪ್ತಿಯೇ ಇಲ್ಲವಲ್ಲಾ ಅಂತ ಚಿಂತಿಸಿದಳು. ಅವಳಿಗೂ ಚಕ್ಕುಲಿ ತಿನ್ನಬೇಕೆಂಬ ಆಸೆಯಿತ್ತು. ಆದರೆ ಮಕ್ಕಳು ಎಲ್ಲ ತಿಂದು ಬಿಟ್ಟಿದ್ದವು. ಅವಳು ಒಂದು ಉಪಾಯ ಮಾಡಿದಳು. ಗಂಡ ಮದ್ಯಾಹ್ನದ ಹೊತ್ತಿಗೆ ಮನೆಗೆ ಊಟಕ್ಕೆ ಬಂದಿದ್ದಾಗ, ಅವನಿಗೆ ಗುಟ್ಟಾಗಿ “ಯಾರಿಗೂ ಗೊತ್ತಾಗದ ಹಾಗೆ, ಯಾರಿಗೂ ಹೇಳದೆ ಕಡಲೆ ಹಿಟ್ಟು, ಹಸಿ ಮೆಣಸಿನಕಾಯಿ ಮತ್ತು ಅಜವಾನ ತೆಗೆದುಕೊಂಡು ಬಾ” ಅಂತ ಹೇಳಿದಳು. ಗಂಡ ಸಂತಸದಿಂದ ಆಯ್ತು ಅಂದ.

ಸಂಜೆ ಮಕ್ಕಳಿಗೆ ಬೇಗನೇ ಊಟ ಹಾಕಿದಳು. ಎಲ್ಲ ಮಕ್ಕಳು ಸಂಜೆಯಾಗಿ ಕತ್ತಲಾಗುತ್ತಲೇ ಒಂದೊಂದಾಗಿ ಮಲಗತೊಡಗಿದವು. ಎಲ್ಲಕ್ಕಿಂತ ಚಿಕ್ಕ ಮಗು ತುಂಬಾ ತುಂಟಾಟ ಮಾಡಿ ಮಾಡಿ ಕೊನೆಗೂ ಮಲಗಿಕೊಂಡಿತು. ಇರುಳು, ಬಜ್ಜಿ ಮಾಡಲು ಹೆಂಡತಿ ಹೇಳಿದ್ದ ಎಲ್ಲದನ್ನೂ ತೆಗೆದುಕೊಂಡು ಗಂಡ ಮನೆಗೆ ಬಂದ. ಹೆಂಡತಿ ಅವನ್ನೆಲ್ಲ ಒಂದು ಕಡೆ ಮುಚ್ಚಿ ಇಟ್ಟಳು. ನಡುರಾತ್ರಿ ಆದಾಗ ತನ್ನ ಗಂಡನನ್ನು ಕರೆದುಕೊಂಡು ಅಡುಗೆ ಮನೆಗೆ ಬಂದಳು. ಹೆಂಡತಿಯು ಒಲೆ ಉರಿಸಿ ಅದರ ಮೇಲೆ ಕಬ್ಬಿಣದ ಕಡಾಯಿ ಇಟ್ಟಳು. ಕಡಾಯಿಯಲ್ಲಿ ಎಣ್ಣೆ ಸುರಿದಳು, ಕೆಳಗೆ ಒಲೆ ಉರಿಯನ್ನು ಹೆಚ್ಚಿಗೆ ಮಾಡಿದಳು. ತನ್ನ ಗಂಡನಿಗೆ “ನೀನು ಏನೇ ಹೊರಗಿನಿಂದ ತಿಂಡಿ ತಂದರೂ ಅವುಗಳನ್ನ‌ ಮಕ್ಕಳೇ ತಿಂದು ಬಿಡುತ್ತವೆ, ನಾನು ಮನೆಯಲ್ಲಿ ಏನೇ ತಿಂಡಿ ತಿನಿಸು ಮಾಡಿದರೂ ಅವುಗಳನ್ನೂ ಮಕ್ಕಳು ಗಬಗಬನೆ ತಿಂದು ಚೂರಾದರೂ ಉಳಿಸದೆ ತಿಂದು ಹಾಕುತ್ತವೆ. ಅದಕ್ಕೆ ಇವತ್ತು ನಮಗಾಗಿ, ನಮ್ಮ ಇಬ್ಬರ ಸಲುವಾಗಿಯೇ ಮೆಣಸಿನಕಾಯಿ ಬಜ್ಜಿ ಮಾಡಿ ತಿನ್ನೋಣ, ಅಂತ ಈಗ ಅಡುಗೆ ಮನೆಗೆ ಬಂದೆ” ಅಂದಳು. ಇದನ್ನು ಕೇಳಿ ಗಂಡನಿಗೆ ತುಂಬಾ ಆನಂದವಾಯ್ತು.

ಅವಳು ಕಡಲೆ ಹಿಟ್ಟು, ನೀರು ಕಲಸಿದಳು‌. ಅದರಲ್ಲಿ ಅಜವಾನ ಹಾಕಿದಳು. ಒಂದು ಮೆಣಸಿನಕಾಯಿ ಹಿಟ್ಟಿನಲ್ಲಿ ಅದ್ದಿ ಸಳಸಳನೇ ಕಾಯುತ್ತಿದ್ದ ಎಣ್ಣೆಗೆ ಹಾಕಿದಳು. ಈ ಕರಿಯುವ ಸದ್ದಿಗೆ ಕೊನೆ ಮಗು ಎದ್ದು ಅಳುತ್ತಾ, ತನ್ನ ತಾಯಿ ತಂದೆಯನ್ನು ಹುಡುಕುತ್ತಾ ಅಡುಗೆ ಮನೆಗೆ ಬಂತು. ಗಂಡ ಹೆಂಡತಿ ಇಬ್ಬರೂ ತಮ್ಮ ಕೊನೆ ಮಗುವನ್ನ ನೋಡಿ ದಂಗಾದರು. ಆದರೂ ದೈರ‍್ಯ ತಂದು ಕೊಂಡು ಪಾಪ ಎಲ್ಲಕ್ಕಿಂತ ಚಿಕ್ಕ ಮಗು, ಇದಾದರೂ ಎಶ್ಟು ತಿನ್ನುತ್ತದೆ ಅಂತ ಅಂದು ಕೊಂಡರು. ಮಗು ಅಳುತ್ತಾ ಬಂದು ತಾಯಿಯ ಹತ್ತಿರ ಕುಳಿತುಕೊಂಡಿತು. ಕರಿದ ಮೊದಲ ಮೆಣಸಿನಕಾಯಿ ಬಜ್ಜಿ ಮಗುವಿಗೆ ತಿನ್ನಲು ಕೊಟ್ಟಳು. ಪಾಪ ಮಗು, ತಿಳಿಯದೆ ಕಾರದ ಮೆಣಸಿನಕಾಯಿ ಕಚ್ಚಿಬಿಟ್ಟಿತು. ಮಗುವಿನ ಎಳೆ ನಾಲಿಗೆ ಕಾರ ತಾಳಲಿಲ್ಲ. ಮಗು ಚೀರಿ ಚೀರಿ ಅಳತೊಡಗಿತು. ಈ ಮಗುವಿನ ಸದ್ದಿಗೆ ಎರಡನೇ ಮಗು ಎದ್ದಿತು. ಆ ಹುಡುಗ ಕೂಡ ತನ್ನ ತಂದೆ ತಾಯಿಗಳನ್ನು ಹುಡುಕಿಕೊಂಡು ಅಡುಗೆ ಮನೆಗೆ ಬಂದ. ತಾಯಿ ಕರಿದ ತಿಂಡಿ ಮಾಡುವದು ನೋಡಿ ತನ್ನ ತಂದೆಯ ಬಳಿ ಕೂತುಕೊಂಡ. ತಾಯಿ ಎರಡನೇ ಬಜ್ಜಿ ಕರಿದು ತಟ್ಟೆಗೆ ಹಾಕಿದಳು. ತಂದೆ ಇನ್ನೇನು ಕೈಹಾಕಿ ಅದನ್ನು ಎತ್ತಿಕೊಂಡು ಬಾಯಲ್ಲಿ ಇಡಬೇಕು ಅನ್ನುವಾಗ ಎರಡನೇ ಮಗ ಅದನ್ನು ಒಡನೇ ಎತ್ತಿಕೊಂಡು ತಿನ್ನತೊಡಗಿದ.

ಎರಡನೇ ಮಗ ಬಜ್ಜಿ ತಿನ್ನುತ್ತಾ ತಿನ್ನುತ್ತಾ ಕಣ್ಣು ಒರೆಸಿಕೊಂಡ. ಮೆಣಸಿನಕಾಯಿ ಕಾರ ಕೈಯಿಂದ ಕಣ್ಣಿಗೆ ತಾಕಿತು. ಹುಡುಗನ ಕಣ್ಣು ಉರಿಯ ತೊಡಗಿತು. ಅವನೂ ಅಳಲಿಕ್ಕೆ ಹತ್ತಿದ. ಇನ್ನೂ ಮೊದಲ ಮಗುವಿನ ಅಳು ಮುಗಿದೇ ಇರಲಿಲ್ಲ ಎರಡನೇ ಮಗುವಿನ ಅಳು ಶುರುವಾಯ್ತು. ಇವರಿಬ್ಬರ ಅಳುವಿಕೆಯ ಸದ್ದಿಗೆ ಉಳಿದ ಐದೂ ಮಕ್ಕಳು ಎದ್ದವು. ಅವರೂ ಅಡುಗೆ ಮನೆ ಹೊಕ್ಕರು. ತಮ್ಮ ತಂದೆ ತಾಯಿಗಳ ಸುತ್ತಲೂ ಕೂತುಕೊಂಡರು. ತಾಯಿ ಬಜ್ಜಿಗಳನ್ನು ಕರಿಯುತ್ತಲೇ ಹೋದಳು, ಮಕ್ಕಳು “ನನಗೆ, ನನಗೆ” ಅಂತ ತಟ್ಟೆಯಿಂದ ಕಸಿದುಕೊಂಡರು. ಒಬ್ಬರ ಬಳಿಯಿಂದ ಮತ್ತೊಬ್ಬರು ಕಸಿದುಕೊಂಡು ತಿನ್ನುತ್ತಲೇ ಹೋದರು. ಗಂಡ ತಂದಿದ್ದ ಕಡಲೆ ಹಿಟ್ಟು ಕಾಲಿಯಾಯ್ತು, ತಟ್ಟೆಯಲ್ಲಿದ್ದ ಬಜ್ಜಿಗಳೂ ಕಾಲಿಯಾದವು.

ಹಿಟ್ಟು ಮುಗಿದು ಹೋದದ್ದನ್ನು ನೋಡಿದ ಮಕ್ಕಳು ಒಬ್ಬೊಬ್ಬರಾಗಿ ಆಕಳಿಸುತ್ತಾ ಅಡುಗೆ ಮನೆಯಿಂದ ಎದ್ದರು. ತಾವು ಮಲಗುವ ಜಾಗಕ್ಕೆ ಹೋದರು. ಗಂಡ ಹೆಂಡತಿ ಇಬ್ಬರೂ ಒಬ್ಬರ ಮುಕವನ್ನು ಒಬ್ಬರು ನೋಡಿಕೊಂಡರು. ಅವರಿಗೆ ಒಂದೇ ಒಂದು ಮೆಣಸಿನಕಾಯಿ ಬಜ್ಜಿಯೂ ಸಿಗಲಿಲ್ಲ. ಹೆಂಡತಿ ಒಲೆಯಿಂದ ಕಟ್ಟಿಗೆ ಹೊರಗೆ ಎಳೆದಳು. ನಿಗಿನಿಗಿ ಕೆಂಡಗಳನ್ನು ಹರಡಿಸಿ ಅವುಗಳ ಮೇಲೆ ನೀರು ಸಿಂಪಡಿಸಿ ಕರಕ (ಇದ್ದಿಲು) ಮಾಡಿದಳು. ಎಲ್ಲ ಪಾತ್ರೆಗಳನ್ನು ತೊಳೆದು ಒಂದು ಕಡೆ ಬೋರಲು ಹಾಕಿ ಇಟ್ಟಳು. ತನ್ನ ಗಂಡನಿಗೆ “ಹಬ್ಬ ಮುಗಿಯಿತು, ನಡಿ ಹೋಗೋಣ” ಅಂದಳು. ಗಂಡ ಎದ್ದು ಹೊರಗೆ ಬಂದ. ಹೊರಗೆ ಬಂದು ನೋಡಿದಾಗ ಬಾನಿನಲ್ಲಿ ಚಂದಿರ ಸೊಗಸಾಗಿ ಮೋಡಗಳ ಜೊತೆ ಕಣ್ಣು ಮುಚ್ಚಾಲೆ ಆಡುತ್ತಿದ್ದ. ಹುಣ್ಣಿಮೆ ಆಗಿದ್ದರಿಂದ ಎಲ್ಲ ಕಡೆ ಹಾಲು ಬೆಳದಿಂಗಳು ಚೆಲ್ಲಿತ್ತು. ತಂಗಾಳಿ ಬೀಸುತ್ತಾ ಇತ್ತು. ಮಕ್ಕಳೆಲ್ಲ ಶಾಂತವಾಗಿ ಕುರಿಮರಿಗಳ ಹಾಗೆ ಮಲಗಿಕೊಂಡಿದ್ದವು. ಗಂಡ ಹೆಂಡತಿ ಇಬ್ಬರೂ ಬೆಳದಿಂಗಳನ್ನು ನೋಡುತ್ತಾ ಸಂತೋಶದಿಂದ ಮಲಗಿಕೊಂಡರು.

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: