ದಡಾರ್… ಒಂದು ಸಣ್ಣಕತೆ

– ಕೆ.ವಿ. ಶಶಿದರ.

Car, Road,  
ಪ್ಲೈಟ್ ಇದ್ದದ್ದು ಬೆಳಿಗ್ಗೆ ಐದು ಗಂಟೆಗೆ. ಕನಿಶ್ಟ ಒಂದು ಗಂಟೆ ಮುಂಚಿತವಾಗಿ ಚೆಕ್ ಇನ್ ಗಾಗಿ ಅಲ್ಲಿರುವುದು ಅವಶ್ಯಕ. ಸಿದ್ದವಾಗಲು ಕನಿಶ್ಟ ಅರ‍್ದ ಗಂಟೆ ಬೇಕು. ಇಲ್ಲಿಂದ ಏರ್ ಪೋರ‍್ಟ್ ತಲುಪಲು, ಎಶ್ಟೇ ವೇಗವಾಗಿ ಹೋದರೂ ಐವತ್ತು ನಿಮಿಶ ಬೇಕು. ರಸ್ತೆಯಲ್ಲಿ ಟ್ರಾಪಿಕ್ ಇದ್ದರೆ ಇನ್ನೂ ಹತ್ತು ನಿಮಿಶ ಹೆಚ್ಚಿಗೆ ಬೇಕಾಗಬಹುದು. ಎಲ್ಲವನ್ನೂ ಲೆಕ್ಕ ಹಾಕಿದ ಅಜಿಂತ್ಯ ಎರಡು ಗಂಟೆಗೆ ಅಲಾರಾಂ ಸೆಟ್ ಮಾಡಿದ. ತನ್ನ ಕೈ ಗಡಿಯಾರ ನೋಡಿಕೊಂಡ. ಆಗಲೇ ಹನ್ನೊಂದು ಗಂಟೆ. ತಾನೊಬ್ಬ ನಿದ್ದೆಯ ದಾಸ. ಎಶ್ಟು ಕಾಲ ನಿದ್ದೆ ಮಾಡಿದರೂ ಸಾಲದು. ನಿದ್ದೆ ಒಂದಿದ್ದರೆ ಸ್ನಾನ ಊಟ ತಿಂಡಿ ಸಹ ಬೇಡ ಅವನಿಗೆ. ಮಲಗಿದರೆ ಕುಂಬಕರ‍್ಣ.
ಯಾವುದಕ್ಕೂ ಇರಲಿ ಎಂದು ಎರಡನೇ ಅಲಾರಾಂ ಅನ್ನು ಎರಡು ಗಂಟೆ ಮೂವತ್ತು ನಿಮಿಶಕ್ಕೆ ಸೆಟ್ ಮಾಡಿ, ನೆಮ್ಮದಿಯಿಂದ ಮಲಗಿದ. ಮಲಗಿದ ಕೂಡಲೇ ನಿದ್ರಾದೇವಿ ಆವರಿಸಿಕೊಂಡಳು. ಸುಕ ನಿದ್ರೆಗೆ ಜಾರಿದ.
ಎರಡು ಗಂಟೆಗೆ ಅಲಾರಾಂ ಹೊಡೆದಾಗ, ಎಚ್ಚರವಾದರೂ, ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿದ. ಎಲ್ಲಾ ಸಿದ್ದ ಮಾಡಿ ಇಟ್ಟಾಗಿದೆ. ಮುಕ ತೊಳೆದು ಹೊರಡಲು ಅರ‍್ದ ಗಂಟೆ ಸಾಕು ಎನ್ನುತ್ತಾ ಮಗ್ಗಲು ಬದಲಿಸಿದ.
ಮಗ್ಗಲು ಬದಲಿಸುತ್ತಿದ್ದಂತೆ ಮತ್ತೆ ಅಲಾರಾಂ ಹೊಡೆದುಕೊಂಡಿತು. ಚೇ… ಸಿಹಿ ನಿದ್ದೆಗೂ ಕಲ್ಲು ಬಿತ್ತು ಎಂದು ಬೇಸರಿಸಿಕೊಂಡೇ ಎದ್ದ. ಮೈ ಕೈ ಮುರಿದು ಎದ್ದು ಮುಕ ತೊಳೆದು ಹೊರ ಬರುವಶ್ಟರಲ್ಲಿ ಮೂರು ಗಂಟೆಯ ಹತ್ತಿರಕ್ಕೆ ಬಂದಿತ್ತು ಮುಳ್ಳು. ಲಗುಬಗನೆ ತಯಾರಾಗಿ ಹೊರಡಲು ಅನುವಾದ.
ಬಾಗಿಲಿಗೆ ಬೀಗ ಹಾಕಿ, ಕಾರನ್ನು ಹೊರ ತೆಗೆದು, ಏರ್ ಪೋರ‍್ಟ್ ಕಡೆ ಮುಕ ಮಾಡಿದ. ಹತ್ತು ನಿಮಿಶ ಡ್ರೈವ್ ಮಾಡಿದ ಮೇಲೆ ಅವನಿಗೆ ಪ್ಲೈಟ್ ಟಿಕೆಟ್ ಟೀಪಾಯ್ ಮೇಲೆ ಇಟ್ಟಿದ್ದು ನೆನಪಾಯಿತು. ಕೂಡಲೇ ಕಾರನ್ನು ನಿಲ್ಲಿಸಿದ. ಹಿಂದಕ್ಕೆ ಹೋಗಿ ಪ್ಲೈಟ್ ಟಿಕೆಟ್ ತೆಗೆದುಕೊಂಡು ಬರಲು ಕನಿಶ್ಟ ಇಪ್ಪತ್ತೈದು ನಿಮಿಶ ಹಾಳಾಗುತ್ತೆ. ಏನು ಮಾಡಲಿ? ಎಂಬ ಚಿಂತೆಗೆ ಒಳಗಾದ. ಹೇಗಾದರೂ ಆಗಲಿ ಬೇಗ ಹೋಗಿ ಪ್ಲೈಟ್ ಟಿಕೆಟ್ ತೆಗೆದುಕೊಂಡು, ಸ್ವಲ್ಪ ವೇಗವಾಗಿ ಕಾರನ್ನು ಓಡಿಸಿದರೆ ಸಮಯಕ್ಕೆ ಸರಿಯಾಗಿ ಹೋಗಬಹುದು, ಎಂದುಕೊಳ್ಳುತ್ತಾ ಕಾರನ್ನು ಹಿಂದಕ್ಕೆ ತಿರುಗಿಸಿದ.
ಮನೆಗೆ ಬಂದು ಪ್ಲೈಟ್ ಟಿಕೆಟ್ ತೆಗೆದುಕೊಂಡು ಮತ್ತೆ ಕಾರಿನ ಬಳಿ ಬಂದಾಗ ಸಮಯ ಮೂರು ಇಪ್ಪತ್ತೈದು ದಾಟಿತ್ತು. ಬಲಗಾಲನ್ನು ಉದ್ದ ಮಾಡಿದ. ಕಾರು ವೇಗವಾಗಿ ಚಲಿಸತೊಡಗಿತು. ಮಾರ‍್ಗ ಮದ್ಯೆ ಎಂದಿನಂತೆ ಟ್ರಾಪಿಕ್ ಜಾಮ್. ಅಜಿಂತ್ಯನಿಗೆ ಹತಾಶೆ ಪ್ರಾರಂಬವಾಯಿತು. ಸಂದಿಗೊಂದಿಗಳಲ್ಲಿ ನುಗ್ಗುತ್ತಾ ಹೋದ. ಕೊಂಚ ಕಾಲಿ ರಸ್ತೆ ಕಂಡ ಕೂಡಲೆ ಬಲಗಾಲನ್ನು ಬಲವಾಗಿ ಅದುಮಿದ. ಬರ‍್ರನೆ ಓಡಿತು ಕಾರು. ಇದ್ದಕ್ಕಿದ್ದಂತೆ ‘ದಡಾರ್’ ಶಬ್ದ ಬಂತು. ನೋಡಿದ. ಮುಂದಿನ ರಸ್ತೆ ಕಾಲಿ ಕಾಲಿ. ಬಯಂಕರ ವೇಗದಲ್ಲಿ ಕಾರನ್ನು ಓಡಿಸಿದ. ಅವನಿಗೆ ಅತ್ಯಾಶ್ಚರ‍್ಯವಾಯಿತು. ಎಂದೂ ಈ ರೀತಿಯ ಅನುಬವ ಅವನಿಗೆ ಆಗಿರಲಿಲ್ಲ. ರಸ್ತೆಯ ಆ ಕಡೆ ರಸ್ತೆ ಜಾಮ್. ಈ ಕಡೆ ಪೂರ‍್ಣ ಕಾಲಿ. ಆದಶ್ಟೂ ವೇಗವಾಗಿ ಕಾರನ್ನು ಓಡಿಸಿ ಏರ್ ಪೋರ‍್ಟ್ ತಲುಪಿದ.
ಏರ್ ಪೋರ‍್ಟ್ ಕಾರ್ ಪಾರ್‍ಕಿಂಗ್ ನಲ್ಲಿ ಕಾರನ್ನು ನಿಲ್ಲಿಸಿ, ಚೆಕ್ ಇನ್ ಮಾಡಿಸಲು ದಾವಿಸಿದ. ಕೌಂಟರ್ ಸಹ ಕಾಲಿಯಿತ್ತು. ಆಶ್ಚರ‍್ಯದ ಮೇಲೆ ಆಶ್ಚರ‍್ಯ ಅಜಿಂತ್ಯನಿಗೆ.
ಆಗಲೇ ಅವನಿಗೆ ತಿಳಿದಿದ್ದು, ತಾನು ಹೋಗಬೇಕಿರುವ ಪ್ಲೈಟ್ ಎರಡು ತಾಸು ತಡ ಎಂದು. ಹವಾಮಾನದ ಏರುಪೇರಿನಿಂದ ತಡವಾಗಿರುವುದಾಗಿ ಹೊರ ಹೋಗುವ, ಒಳ ಬರುವ ಪ್ಲೈಟ್ ವಿವರದಲ್ಲಿ ಕಂಡಿತು.
ಲಾಬಿಯಲ್ಲಿ ಕುಳಿತ ಅಜಿಂತ್ಯ ತನ್ನ ಗಡಿಯಾರದತ್ತ ನೋಡಿದ. ಗಡಿಯಾರ ಮೂರು ನಲವತ್ತಕ್ಕೆ ನಿಂತು ಹೋಗಿತ್ತು. ಮೊಬೈಲ್ ತೆಗೆದ. ಅದೂ ಆಪ್ ಆಗಿತ್ತು. ಸುತ್ತಲೂ ವೇಳೆಗಾಗಿ ಗಡಿಯಾರ ಹುಡುಕಿದ. ದೊಡ್ಡ ಗೋಡೆ ಗಡಿಯಾರದಲ್ಲಿ ಐದು ಗಂಟೆ ಇಪ್ಪತ್ತು ನಿಮಿಶವಾಗಿದ್ದು ಕಂಡಿತು. ಕೊಂಚ ನಿರಾಳವಾಯಿತು.
ಅಲ್ಲೇ ಇದ್ದ ಟಿವಿ ನೋಡುತ್ತಾ ಕುಳಿತ. ಬ್ರೇಕಿಂಗ್ ನ್ಯೂಸ್ ಬರುತ್ತಿರುವುದು ಕಂಡಿತು. ಕುತೂಹಲದಿಂದ ಗಮನಿಸಿದ.
‘ಇಂದು ರಾತ್ರಿ ಮೂರು ಗಂಟೆ ನಲವತ್ತು ನಿಮಿಶದ ಸಮಯದಲ್ಲಿ, ಏರ್ ಪೋರ‍್ಟ್ ರಸ್ತೆಯಲ್ಲಿ ಬೀಕರ ಅಪಗಾತವಾಗಿದ್ದು, ಒಂದು ಗಂಟೆಗೂ ಹೆಚ್ಚು ಕಾಲದಿಂದ ಟ್ರಾಪಿಕ್ ಜಾಮ್ ಆಗಿದ್ದು, ಏರ್ ಪೋರ‍್ಟ್ ಹೋಗುವ ವಾಹನಗಳು ಮೈಲಿಗಟ್ಟಲೆ ಸಾಲು ಸಾಲಾಗಿ ನಿಂತಿವೆ. ಪೊಲೀಸ್ ಅದಿಕಾರಿಗಳು, ಆಂಬ್ಯುಲೆನ್ಸ್ ಗಳು ಅಪಗಾತ ಸ್ತಳಕ್ಕೆ ಹೋಗಲು ಹರ ಸಾಹಸ ಮಾಡುತ್ತಿವೆ
*
*
*
‘ಇದೀಗ ಬಂದ ಸುದ್ದಿ. ಪೊಲೀಸರು ನೀಡಿರುವ ಮಾಹಿತಿಯಂತೆ, ಅಪಗಾತವಾದ ಕಾರಿನಲ್ಲಿದ್ದ, ಮೂವತ್ತು ವರ‍್ಶ ವಯಸ್ಸಿನ ಹುಡುಗ ಮರಣ ಹೊಂದಿದ್ದು, ಅಲ್ಲಿ ಸಿಕ್ಕ ಕಾಗದ ಪತ್ರಗಳಿಂದ ಆತನನ್ನು ಅಜಿಂತ್ಯ ಎಂದು ಗುರುತಿಸಲಾಗಿದೆ…’
(ಚಿತ್ರ ಸೆಲೆ: pixabay.com)

2 ಅನಿಸಿಕೆಗಳು

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: